ಜಯದ ನಿರೀಕ್ಷೆಯಲ್ಲಿ ಶ್ರೀಲಂಕಾ

7

ಜಯದ ನಿರೀಕ್ಷೆಯಲ್ಲಿ ಶ್ರೀಲಂಕಾ

Published:
Updated:
ಜಯದ ನಿರೀಕ್ಷೆಯಲ್ಲಿ ಶ್ರೀಲಂಕಾ

ಪೋರ್ಟ್‌ ಆಫ್‌ ಸ್ಪೇನ್‌: ಶ್ರೀಲಂಕಾ ತಂಡದವರು ಬುಧವಾರದಿಂದ ನಡೆಯುವ ವೆಸ್ಟ್‌ ಇಂಡೀಸ್‌ ಎದುರಿನ ಟೆಸ್ಟ್‌ ಕ್ರಿಕೆಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಜಯಿಸುವ ಗುರಿ ಹೊಂದಿದ್ದಾರೆ.

ಈ ಪಂದ್ಯ ಟ್ರಿನಿಡಾಡ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ. ಈ ಹಿಂದೆ ಲಂಕಾ ತಂಡ ವಿಂಡೀಸ್‌ ಪ್ರವಾಸ ಕೈಗೊಂಡಾಗ ಸರಣಿ ಗೆದ್ದು ದಾಖಲೆ ಬರೆದಿತ್ತು. ಆಗ ಮಾಹೇಲ ಜಯವರ್ಧನೆ ನಾಯಕರಾಗಿದ್ದರು.

ಇತ್ತೀಚೆಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ಶ್ರೀಲಂಕಾ ತಂಡ 2–0ರಿಂದ ‍ಪಾಕಿಸ್ತಾನವನ್ನು ಮಣಿಸಿತ್ತು. ಫೆಬ್ರುವರಿಯಲ್ಲಿ ಜರುಗಿದ್ದ ಬಾಂಗ್ಲಾದೇಶ ಎದುರಿನ ಸರಣಿಯಲ್ಲೂ ಪ್ರಶಸ್ತಿ ಜಯಿಸಿತ್ತು. ಇದು ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ಆರಂಭಿಕ ಬ್ಯಾಟ್ಸ್‌ಮನ್‌ ದಿಮುತ್‌ ಕರುಣಾರತ್ನೆ, ವೇಗದ ಬೌಲರ್‌ಗಳಾದ ದುಷ್ಮಂತ ಚಾಮೀರಾ ಮತ್ತು ನುವಾನ್‌ ಪ್ರದೀಪ ಅವರು ಗಾಯದಿಂದಾಗಿ ಈ ಸರಣಿಯಲ್ಲಿ ಆಡುತ್ತಿಲ್ಲ. ಕರುಣಾರತ್ನೆ ಅನುಪಸ್ಥಿತಿಯಲ್ಲಿ ಅಖಿಲ ಧನಂಜಯ ಮತ್ತು ಧನಂಜಯ ಡಿ ಸಿಲ್ವ ಅವರು ಇನಿಂಗ್ಸ್‌ ಆರಂಭಿಸುವ ನಿರೀಕ್ಷೆ ಇದೆ.

ನಾಯಕ ದಿನೇಶ್‌ ಚಾಂಡಿಮಲ್‌, ನಿರೋಷನ್‌ ಡಿಕ್ವೆಲ್ಲಾ, ಕುಶಾಲ್‌ ಮೆಂಡಿಸ್‌ ಮತ್ತು ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್‌ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರ ಸ್ತಂಭಗಳಾಗಿದ್ದಾರೆ.

ಅಶಿತಾ ಫರ್ನಾಂಡೊ, ಲಾಹಿರು ಗಾಮಗೆ, ಜೆಫ್ರಿ ವಾಂಡರ್ಸ್‌ ಮತ್ತು ರಂಗನಾ ಹೆರಾತ್‌ ಅವರು ಬೌಲಿಂಗ್‌ನಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ.

ತವರಿನ ಅಭಿಮಾನಿಗಳ ಎದುರು ಆಡುತ್ತಿರುವ ವಿಂಡೀಸ್‌ ಕೂಡ ಗೆಲುವಿನ ಹುಮ್ಮಸ್ಸಿನಲ್ಲಿದೆ. ಶ್ರೀಲಂಕಾ ಎದುರಿನ ಹಿಂದಿನ ಐದು ಪಂದ್ಯಗಳಲ್ಲಿ ಈ ತಂಡ ಮೂರರಲ್ಲಿ ಡ್ರಾ ಮಾಡಿಕೊಂಡಿದ್ದು ಎರಡರಲ್ಲಿ ಸೋತಿದೆ.

ಡೆವೊನ್‌ ಸ್ಮಿತ್‌, ಕ್ರೆಗ್‌ ಬ್ರಾಥ್‌ವೇಟ್‌, ಕೀರನ್‌ ಪೊವೆಲ್‌, ಜಹಮರ್‌ ಹ್ಯಾಮಿಲ್ಟನ್‌, ಶಾಯ್‌ ಹೋಪ್‌ ಮತ್ತು ಶಿಮ್ರನ್‌ ಹೆಟ್‌ಮೈರ್‌ ಅವರು ಶ್ರೀಲಂಕಾ ಬೌಲರ್‌ಗಳನ್ನು ಕಾಡುವ ಸಾಮರ್ಥ್ಯ ಹೊಂದಿದ್ದಾರೆ.

ನಾಯಕ ಜೇಸನ್‌ ಹೋಲ್ಡರ್‌, ರಾಸ್ಟನ್‌ ಚೇಸ್‌, ದೇವೇಂದ್ರ ಬಿಷೂ, ಮಿಗುಯೆಲ್‌ ಕಮಿನ್ಸ್‌, ಕೆಮರ್‌ ರೋಚ್‌ ಮತ್ತು ಶಾನನ್‌ ಗೇಬ್ರಿಯಲ್‌ ಅವರು ಬೌಲಿಂಗ್‌ನಲ್ಲಿ ಮೋಡಿ ಮಾಡುವ ಉತ್ಸಾಹದಲ್ಲಿದ್ದಾರೆ. ಹೋಲ್ಡರ್‌ ಮತ್ತು ಚೇಸ್‌ ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲವರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry