ಪರಿಸರ ಕಾಳಜಿ ಚಿಗುರಿಸುವ ಸಂಭ್ರಮ

7
‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ಹೆರಾಲ್ಡ್‌’ನಿಂದ ಸಸಿ ನೆಡುವ ಕಾರ್ಯಕ್ರಮ

ಪರಿಸರ ಕಾಳಜಿ ಚಿಗುರಿಸುವ ಸಂಭ್ರಮ

Published:
Updated:
ಪರಿಸರ ಕಾಳಜಿ ಚಿಗುರಿಸುವ ಸಂಭ್ರಮ

ಬೆಂಗಳೂರು: ‘ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ ರಂಜಿಸುತ್ತಿದೆ, ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ’ ಕುವೆಂಪು ಅವರ ಸಾಲುಗಳನ್ನು ನೆನಪಿಸುವ ಮುಂಜಾವಿನಲ್ಲಿ, ಎಲೆಗಳ ನಡುವಿನಿಂದ ಇಣುಕುತ್ತಿದ್ದ ಎಳೆಬಿಸಿಲ ಮುದಕ್ಕೆ ಮೈಯೊಡ್ಡಿ ಬಿರುಸಿನ ಹೆಜ್ಜೆಗಳನ್ನು ಇಡುತ್ತಿದ್ದವರಲ್ಲಿ ಹಸಿರಿನ ಕಾಳಜಿಯನ್ನು ಗಟ್ಟಿ ಮಾಡುವ ಪ್ರಯತ್ನಕ್ಕೆ ನಗರದ ಉದ್ಯಾನಗಳು ಸಾಕ್ಷಿಯಾದವು.

ಮರಗಳ ಬಗೆಗೆ ಜನರಲ್ಲಿ ಕರಗುತ್ತಿರುವ ಕಾಳಜಿಯನ್ನು ಮತ್ತೆ ಚಿಗುರಿಸುವ ಹಂಬಲದಿಂದ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವಿಶ್ವ ಪರಿಸರ ದಿನವಾದ ಮಂಗಳವಾರ ಸಸಿಗಳನ್ನು ನೆಡುವ ಹಾಗೂ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಬೀದಿ ದೀಪಗಳು ಆರುವ ಮುನ್ನವೇ ಉದ್ಯಾನವನ್ನು ಹೊಕ್ಕಿದ್ದವರೆಲ್ಲ ತಮ್ಮ ಶಿಸ್ತಿನ ಓಟ, ವ್ಯಾಯಾಮವನ್ನು ಮುಗಿಸಿ ಹೊರ ಹೋಗುವ ಮುನ್ನ ಗಿಡಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯುತ್ತಿರಲಿಲ್ಲ.

ಮಬ್ಬು ಬೆಳಕಿನಲ್ಲಿ ವಿರಳವಾಗಿದ್ದ ಜನಸಂಖ್ಯೆ ಸೂರ್ಯ ಮೇಲೇರುತ್ತಿದ್ದಂತೆ ಹೆಚ್ಚಾಗುತ್ತಿತ್ತು. ಮೋಡಗಳು ಕೊಂಚ ಬಿಡುವು ಕೊಟ್ಟಿದ್ದರಿಂದ ನಗುಮೊಗದಲ್ಲಿಯೇ ಜನ ಉದ್ಯಾನಕ್ಕೆ ಹೋಗುತ್ತಿದ್ದರು. ನಡಿಗೆಯ ಯಾವ ಸ್ಪರ್ಧೆ ಇಲ್ಲದಿದ್ದರೂ ಒಬ್ಬರನ್ನು ಒಬ್ಬರು ಮೀರಿಸುವಂತೆ ಕಾಲಿಗೆ ವೇಗ ಕೊಟ್ಟಿದ್ದರು. ಸುತ್ತಲು ಆವರಿಸಿಕೊಂಡಿದ್ದ ಹಸಿರಿನ ಮಾಯೆಯೊಳಗೆ ದೇಹ ದಂಡಿಸುವವರು ಒಂದಿಷ್ಟು ಮಂದಿಯಾದರೆ, ಮಾನಸಿಕ ನೆಮ್ಮದಿಗಾಗಿ ನಗೆಕೂಟ ಸೇರಿದ್ದವರೂ ಹಲವರು.

ಅಡ್ಡಡ್ಡ ಉದ್ದುದ್ದ ಕೈ ಬೀಸುತ್ತಾ, ನಡಿಗೆಯಲ್ಲಿಯೇ ಸಣ್ಣದೊಂದು ವ್ಯಾಯಾಮ ಮಾಡುತ್ತಾ ಸಾಗುತ್ತಿದ್ದರು ಗಿಡಗಳನ್ನು ವಿತರಿಸುವ ಕಡೆ ಬಂದು ಅವುಗಳ ಹೆಸರು, ಹೂವಿನ ಗಿಡವಾ, ತುಳಸಿ ಇದೆಯಾ.. ಹೀಗೆ ತರಹೇವಾರಿ ಪ್ರಶ್ನೆಗಳನ್ನು ಕೇಳುತ್ತಲೇ ತಮಗೆ ತೋಚಿದಷ್ಟು ಮಾಹಿತಿಯನ್ನೂ ನೀಡಿ ಹೋಗುತ್ತಿದ್ದರು. ‘ಒಳ್ಳೆಯ ಪ್ರಯತ್ನ, ಮತ್ತೆ ಹಮ್ಮಿಕೊಳ್ಳಿ, ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಿ’ ಎಂಬೆಲ್ಲ ಸಲಹೆಗಳನ್ನು ನೀಡಿ ಹೋಗುತ್ತಿದ್ದರು.

ನಳನಳಿಸುತ್ತಿದ್ದ ಹಸಿರು ಉದ್ಯಾನಗಳಲ್ಲಿ ಹಿರಿಯ ಜೀವಗಳ ಜೀವನೋತ್ಸಾಹ ಯುವ ಮನಸ್ಸುಗಳಿಗೆ ಪ್ರೇರಣೆ ನೀಡುತ್ತಿತ್ತು. ‘ರಸ್ತೆಗಾಗಿ, ಚರಂಡಿಗಾಗಿ, ಫುಟ್‌ಪಾತ್‌ಗಾಗಿ... ಹೀಗೆ ನಾನಾ ಕಾರಣಗಳಿಗಾಗಿ ಮನೆಗಳೆದುರು ಇದ್ದ ಮರಗಳು ಹಾಗೆಯೇ ಕಣ್ಮರೆಯಾಗುತ್ತಿವೆ. ಅವರು ಕಡಿಯುವುದಕ್ಕಿಂತ ಹೆಚ್ಚು ಬಾರಿ ನಾವು ಗಿಡಗಳನ್ನು ನೆಡಬೇಕು’ ಎಂಬುದು ನಡಿಗೆಯ ಮಧ್ಯೆ ವಿರಾಮ ಪಡೆದಿದ್ದ ಸುಮಂಗಲ ಅವರ ಒತ್ತಾಸೆ.

‘ಗಿಡಗಳು ಎಂದರೆ ಯಾರಿಗಾದರೂ ಪಡೆಯುವ ಮನಸ್ಸಾಗುತ್ತದೆ. ಮನೆಗಳಲ್ಲಿ ಪುಟ್ಟ ಗಿಡವಿದ್ದರೆ ಚೆಂದ ಯೋಚಿಸಿ ಸಾಕಷ್ಟು ಮಂದಿ ಇಲ್ಲಿಂದ ಗಿಡ ಪಡೆದುಕೊಂಡು ಹೋಗಿರುತ್ತಾರೆ. ಆದರೆ, ಅವರಲ್ಲಿ ಕೆಲವರಷ್ಟೇ ಅವುಗಳನ್ನು ಪೋಷಿಸುತ್ತಾರೆ. ಈ ಪ್ರವೃತ್ತಿ ಬದಲಾಗಬೇಕು’ ಎಂದು ಗಂಗಾಧರ್‌ ಅಭಿಪ್ರಾಯ ಹಂಚಿಕೊಂಡರು.

*

2000 ಗಿಡಗಳ ವಿತರಣೆ

ಇಂದಿರಾನಗರದ ವುಡ್ಸ್‌ ಉದ್ಯಾನವನದಲ್ಲಿ ನಟಿ ವೈಷ್ಣ‌ವಿ ಚಂದ್ರನ್‌ ಮೆನನ್, ಜಯನಗರದ ಲಕ್ಷ್ಮಣರಾವ್‌ ಉದ್ಯಾನದಲ್ಲಿ ನಟಿ ಸೋನು ಗೌಡ, ಮತ್ತೀಕೆರೆಯಲ್ಲಿನ ಜೆ.ಪಿ. ಉದ್ಯಾನದಲ್ಲಿ ನಟಿ ಸುಷ್ಮಾ ಗಿಡ ವಿತರಿಸಿದರು. ಜತೆಗೆ, ಮಲ್ಲೇಶ್ವರದ ಸ್ಯಾಂಕಿ ಕೆರೆ ಅಂಗಳದಲ್ಲಿ ಗಿಡಗಳನ್ನು ನೆಡಲಾಯಿತು. ನಾಲ್ಕು ಉದ್ಯಾನಗಳಲ್ಲಿ ನಡಿಗೆದಾರರಿಗೆ ಒಟ್ಟು 2,000 ಹೂವಿನ ಗಿಡಗಳನ್ನು ವಿತರಿಸಲಾಯಿತು.

**

‘ಬೆಳೆಸುವವರಿಗೆ ಗಿಡ ನೀಡಿ’

ವಿಶ್ವ ಪರಿಸರದ ದಿನ ಗಿಡಗಳನ್ನು ಹಂಚುವುದು ಒಳ್ಳೆಯ ಕೆಲಸವೇ. ಆದರೆ, ಆ ಗಿಡಗಳನ್ನು ಬೆಳೆಸುವ ಮನಸ್ಸಿರುವವರಿಗೆ ಮಾತ್ರ ಗಿಡಗಳನ್ನು ನೀಡಿ. ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕಿದೆ.     

ಸಂಪತ್‌

‘ಹಸಿರು ಕಾಳಜಿ ಮೂಡಲಿ’

ನನಗೆ ಗಿಡಗಳೆಂದರೇ ಬಹಳ ಅಚ್ಚುಮೆಚ್ಚು. ಸಾಕಷ್ಟು ಗಿಡಗಳನ್ನು ಬೆಳೆಸಿದ್ದೇನೆ. ಗಿಡ ವಿತರಣೆಯೊಂದಿಗೆ ಜಾಗೃತಿ ಮೂಡಿಸುವ ಕೆಲಸವೂ ಪ್ರತಿ ವ್ಯಕ್ತಿಯಿಂದ ಆಗಬೇಕೆಂದು ಬಯಸುತ್ತೇನೆ. ಹಸಿರು ಕಾಳಜಿಯ ಪ್ರಜ್ಞೆ ಜನರಲ್ಲಿ ಮೂಡಬೇಕು.

  – ಎನ್‌.ಎಚ್‌.ವೆಂಕಟೇಶ್‌

‘ಒಂದು ದಿನಕ್ಕೆ ಮೀಸಲಾಗದಿರಲಿ’

ಇದು ಒಂದು ದಿನದ ಸಂಭ್ರಮ ಆಗಬಾರದು. ಪ್ರತಿ ಬಾರಿ ಪರಿಸರ ದಿನ ಬಂದಾಗಲೂ ಗಿಡಗಳನ್ನು ಹಂಚುವುದು ಸಾಮಾನ್ಯವಾಗಿದೆ. ಬೆಳೆಸುವವರ ಸಂಖ್ಯೆ ಕಡಿಮೆ ಇದೆ ಹಾಗೂ ಅದನ್ನು ಹೆಚ್ಚಿಸುವ ಬಗ್ಗೆ ಆಲೋಚಿಸಬೇಕು.

– ರಾಜೇಶ್ವರಿ ಸಂಪತ್‌

 

‘ಮರಗಳ ನಾಶ ನಿಲ್ಲಲ್ಲಿ’

ಬೀದಿಗಳಲ್ಲಿ ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಒಂದಲ್ಲ ಒಂದು ಕೆಲಸಕ್ಕಾಗಿ ಮರಗಳನ್ನು ಕತ್ತರಿಸಲಾಗುತ್ತಿದೆ. ಅದನ್ನು ತಡೆಯುವ ಮನಸ್ಸು ಎಲ್ಲರಲ್ಲಿಯೂ ಬರಬೇಕು. ಇಲ್ಲವಾದರೆ ಗಿಡಗಳನ್ನಾದರೂ ನೆಡುವ ಅಭ್ಯಾಸ ಮಾಡಿಕೊಳ್ಳಬೇಕು.

 –ಎಂ.ಪಿ.ವಿ.ಗೌಡ

‘ಸಂಭ್ರಮಿಸುವಂತಾಗಬೇಕು’

ಪರಿಸರ ದಿನ ಎನ್ನುವುದು ಪ್ರತಿದಿನ ಆಚರಿಸುವಂತದ್ದು. ವರ್ಷವಿಡೀ ಪರಿಸರ ದಿನವನ್ನು ಆಚರಿಸಿ, ಇಂದು ಅದನ್ನು ಸಂಭ್ರಮಿಸುವಂತಾಗಬೇಕು.

 –ಶ್ರುತಿ

‘ಕಟ್ಟುನಿಟ್ಟಿನ ಯೋಜನೆ ಬರಲಿ’

ಸಸಿಗಳ ವಿತರಣೆ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ವಿದೇಶಗಳಲ್ಲಿ ಪರಿಸರ ಸಂರಕ್ಷಣೆಗಾಗಿ ಕೈಗೊಳ್ಳುತ್ತಿರುವ ಯೋಜನೆಗಳನ್ನು ನಮ್ಮ ದೇಶದಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

–ಕುಸುಮಾ

 

‘ಕಾನೂನಿನ ಅರಿವಿರಲಿ’

ಸುಶಿಕ್ಷಿತರಿಂದಲೇ ಪರಿಸರ ಹಾನಿಯಾಗುತ್ತಿದೆ. ಸಿಕ್ಕ ಸಿಕ್ಕಲೆಲ್ಲ ಧೂಮಪಾನ, ಮೂತ್ರ ವಿಸರ್ಜನೆ, ಕಸ ಎಸೆಯುತ್ತಿದ್ದಾರೆ. ಅಧಿಕಾರಿಗಳು, ಸಿರಿವಂತರೂ ಇದಕ್ಕೆ ಹೊರತಾಗಿಲ್ಲ. ಕಾನೂನು ಮುರಿಯುವುದರಲ್ಲೇ ನಮ್ಮ ಜನರದ್ದು ಎತ್ತಿದ ಕೈ.

   –ಶಾರದಾ ಪಾಟೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry