ಹಾಲುಣಿಸಿದ ಕಾನ್‌ಸ್ಟೆಬಲ್‌ಗೆ ಸಲಾಂ

7
ದೊಡ್ಡತೊಗೂರಿನ ತೊಟ್ಟಿ ಬಳಿ ಬಿದ್ದಿದ್ದ ಅನಾಥ ಶಿಶು

ಹಾಲುಣಿಸಿದ ಕಾನ್‌ಸ್ಟೆಬಲ್‌ಗೆ ಸಲಾಂ

Published:
Updated:
ಹಾಲುಣಿಸಿದ ಕಾನ್‌ಸ್ಟೆಬಲ್‌ಗೆ ಸಲಾಂ

ಬೆಂಗಳೂರು: ಅನಾಥ ಶಿಶುವಿಗೆ ಎದೆ ಹಾಲುಣಿಸಿ, ಅದರ ಜೀವ ಉಳಿಸಿದ ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಮಹಿಳಾ ಕಾನ್‌ಸ್ಟೆಬಲ್ ಅರ್ಚನಾ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ದೊಡ್ಡತೊಗೂರಿನ ತೊಟ್ಟಿಯೊಂದರ ಬಳಿ ಬಿದ್ದಿದ್ದ ಶಿಶುವನ್ನು ರಕ್ಷಿಸಲು ಹೋಗಿದ್ದ ಅರ್ಚನಾ, ಅದನ್ನು ತಮ್ಮ ಮಡಿಲ ಮೇಲೆ ಮಲಗಿಸಿಕೊಂಡು ಹಾಲು ಕುಡಿಸಿದ್ದರು. ನಂತರ, ಶಿಶುವನ್ನು ವಿಲ್ಸನ್‌ ಗಾರ್ಡನ್‌ ಶಿಶುಮಂದಿರಕ್ಕೆ ಸೇರಿಸಿದ್ದರು. ಸದ್ಯ ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಅನಾಥ ಶಿಶುವಿಗೆ ಹಾಲುಣಿಸಿದ ಮಹಿಳಾ ಕಾನ್‌ಸ್ಟೆಬಲ್’ ಶೀರ್ಷಿಕೆಯಲ್ಲಿ ಮಂಗಳವಾರ ಪ್ರಕಟಗೊಂಡ ಸುದ್ದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಎಡಿಜಿಪಿ ಭಾಸ್ಕರ್ ರಾವ್, ‘ಮಹಿಳಾ ಕಾನ್‌ಸ್ಟೆಬಲ್ ಅವರ ಒಳಗಿರುವ ತಾಯಿ ಗುಣಕ್ಕೆ ನನ್ನ ಸೆಲ್ಯೂಟ್’ ಎಂದಿದ್ದಾರೆ.

ಬೆಂಗಳೂರು ಸಿಟಿ ಪೊಲೀಸರು, ‘ನಾವು ಪೊಲೀಸರಷ್ಟೇ ಅಲ್ಲ. ತಾಯಿ– ತಂದೆ, ಸಹೋದರ– ಸಹೋದರಿ ಹಾಗೂ ಎಲ್ಲವೂ’ ಎಂದಿದ್ದಾರೆ.

ಅರ್ಚನಾ ಅವರ ಕೆಲಸಕ್ಕೆ ನೂರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಎಲ್ಲ ತಾಯಂದಿರಿಗೆ ನೀವು (ಅರ್ಚನಾ) ಮಾದರಿ’ ಎಂದು ಗೌತಮ ಸೂರ್ಯ ಟ್ವೀಟ್ ಮಾಡಿದ್ದಾರೆ.

ವೇಣುಗೋಪಾಲ್, ‘ಅರ್ಚನಾ ಅವರು ಕಾನ್‌ಸ್ಟೆಬಲ್ ಕೆಲಸವನ್ನಷ್ಟೇ ಮಾಡದೆ, ತಾಯಿಯಾಗಿ ಶಿಶುವನ್ನು ಕಂಡಿದ್ದಾರೆ. ಅವರಿಗೆ ನನ್ನ ಸೆಲ್ಯೂಟ್’ ಎಂದಿದ್ದಾರೆ.

ನಿಹಾರಿಕಾ, ‘ಇದು ಮಾನವೀಯತೆಯ ಮತ್ತೊಂದು ರೂಪ’ ಎಂದು ಬರೆದುಕೊಂಡಿದ್ದಾರೆ. ಭಾಗ್ಯ ರಾಮಚಂದ್ರ, ‘ಮಾತೃ ಸ್ವರೂಪಿ. ಕರುಣಾಮೂರ್ತಿ ಈ ತಾಯಿ’ ಎಂದು ಹೊಗಳಿದ್ದಾರೆ.

ಕರುಳಬಳ್ಳಿಗೆ ದಾರ: ‘ಹುಟ್ಟಿದ ಕೂಡಲೇ ಶಿಶುವನ್ನು ತೊಟ್ಟಿಗೆ ತಂದು ಎಸೆಯಲಾಗಿದೆ. ಶಿಶುವಿನ ಕರುಳಬಳ್ಳಿಗೆ ದಾರ ಕಟ್ಟಲಾಗಿತ್ತು. ದುರ್ವಾಸನೆ ಬರುತ್ತಿತ್ತು. ಅದನ್ನೆಲ್ಲ ಸ್ವಚ್ಛಗೊಳಿಸಿದ್ದೇವೆ. ಸದ್ಯ ಶಿಶು ಆರೋಗ್ಯವಾಗಿದೆ’ ಎಂದು ಶಿಶುಮಂದಿರದ ವೈದ್ಯರು ತಿಳಿಸಿದರು.

*

‘ಕುಮಾರಸ್ವಾಮಿ’ ಹೆಸರು?

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅಭಿಮಾನಿಯೊಬ್ಬ, ತೊಟ್ಟಿಯಲ್ಲಿದ್ದ ಮಗುವನ್ನು ಮೊದಲು ನೋಡಿದ್ದರು. ಅಲ್ಲಿಯೇ ‘ಮರಿ ಕುಮಾರಸ್ವಾಮಿ’ ಎಂದು ಶಿಶುವಿಗೆ ಹೆಸರು ಕೂಗಿದ್ದ. ಸ್ಥಳೀಯರೆಲ್ಲರೂ ಅದೇ ಹೆಸರಿನಿಂದ ಕೂಗಲಾರಂಭಿಸಿದ್ದರು. ಶಿಶುಮಂದಿರದಲ್ಲೂ ಶಿಶುವಿಗೆ ‘ಕುಮಾರಸ್ವಾಮಿ’ ಹೆಸರು ನಾಮಕರಣ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ಎಲೆಕ್ಟ್ರಾನಿಕ್ ಪೊಲೀಸರು, ‘ಶಿಶುವಿಗೆ ಈಗಲೇ ನಾಮಕರಣ ಮಾಡಲು ಆಗದು. ಅದು ಯಾರದ್ದು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ. ತನಿಖೆ ಮುಗಿದ ಬಳಿಕ ಶಿಶುಮಂದಿರಕ್ಕೆ ಮಾಹಿತಿ ನೀಡುತ್ತೇವೆ. ಬಳಿಕ ಅವರೇ ನಾಮಕರಣ ಮಾಡಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry