ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಕದಡಿದರೆ ಸುಮ್ಮನಿರಲ್ಲ: ಪ್ರಧಾನಿ ಮೋದಿ ಎಚ್ಚರಿಕೆ

Last Updated 30 ಸೆಪ್ಟೆಂಬರ್ 2018, 19:57 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿನ ಶಾಂತಿ ಮತ್ತು ಪ್ರಗತಿಯ ವಾತಾವರಣವನ್ನು ಹಾಳು ಮಾಡಲು ಯಾರೇ ಯತ್ನಿಸಿದರೂ ಅವರಿಗೆ ನಮ್ಮ ಸೈನಿಕರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.

ಶಾಂತಿಯಲ್ಲಿ ನಮ್ಮ ನಂಬಿಕೆ ಬಲವಾಗಿದೆ. ಅದನ್ನು ಇನ್ನಷ್ಟು ಮುಂದಕ್ಕೆ ಒಯ್ಯುವ ಬದ್ಧತೆಯೂ ಇದೆ. ಆದರೆ ದೇಶದ ಆತ್ಮಗೌರವ ಮತ್ತು ಸಾರ್ವಭೌಮತೆಯಲ್ಲಿ ಯಾವ ರಾಜಿಯೂ ಇಲ್ಲ ಎಂದು ‘ಮನದ ಮಾತು’ ಬಾನುಲಿ ಭಾಷಣದಲ್ಲಿ ಪ್ರಧಾನಿ ಸ್ಪಷ್ಟವಾಗಿ ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರ ಜತೆಗೆ ನಿಗದಿಯಾಗಿದ್ದ ಸಭೆ ರದ್ದಾದ ಬಳಿಕ ಪ್ರಧಾನಿ ಈ ಕಟು ಎಚ್ಚರಿಕೆ ನೀಡಿದ್ದಾರೆ. ಭಾರತ–ಪಾಕಿಸ್ತಾನ ಗಡಿಯಲ್ಲಿ ಭಾರತದ ಸೈನಿಕರ ಕ್ರೂರ ಹತ್ಯೆಗೆ ಪ್ರತಿಭಟನೆಯಾಗಿ ಮಾತುಕತೆಯನ್ನು ಭಾರತ ರದ್ದುಪಡಿಸಿತ್ತು. ಭಯೋತ್ಪಾದನೆ ಮತ್ತು ಮಾತುಕತೆ ಜತೆಯಾಗಿ ಸಾಗದು ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ಭಾರತ ನೀಡಿದೆ.

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ತಾಣಗಳ ಮೇಲೆ 2016ರ ಸೆಪ್ಟೆಂಬರ್‌ 29ರಂದು ಭಾರತದ ಯೋಧರು ನಡೆಸಿದ ನಿರ್ದಿಷ್ಟ ದಾಳಿಯ ವರ್ಷಾಚರಣೆಯನ್ನು ‘ಪ‍ರಾಕ್ರಮ ದಿನ’ ಎಂದು ಆಚರಿಸಿದ ಮರುದಿನವೇ ಪ್ರಧಾನಿ ಮಾತನಾಡಿದ್ದಾರೆ. ‘125 ಕೋಟಿ ಭಾರತೀಯರು ಪರಾಕ್ರಮ ಪರ್ವವನ್ನು ಶನಿವಾರ ಆಚರಿಸಿದ್ದಾರೆ. ಭಯೋತ್ಪಾದನೆಯ ವೇಷದಲ್ಲಿ ನಡೆಯುತ್ತಿರುವ ಪರೋಕ್ಷ ಯುದ್ಧಕ್ಕೆ 2016ರ ನಿರ್ದಿಷ್ಟ ದಾಳಿಯ ಮೂಲಕ ನಮ್ಮ ಯೋಧರು ಪ್ರತ್ಯುತ್ತರ ನೀಡಿದ್ದಾರೆ. ನಮ್ಮ ಯೋಧರ ಶೌರ್ಯವನ್ನು ನಾವು ಸಂಭ್ರಮಿಸಿದ್ದೇವೆ’ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT