117 ನಿವೇಶನ ಮಾರಾಟ: ₹200 ಕೋಟಿ ಅಕ್ರಮ?

7
ನಿವೇಶನ ನೋಂದಣಿ ಸ್ಥಗಿತಕ್ಕೆ ಬಿಡಿಎ ಆಯುಕ್ತ ನಿರ್ದೇಶನ

117 ನಿವೇಶನ ಮಾರಾಟ: ₹200 ಕೋಟಿ ಅಕ್ರಮ?

Published:
Updated:
117 ನಿವೇಶನ ಮಾರಾಟ: ₹200 ಕೋಟಿ ಅಕ್ರಮ?

ಬೆಂಗಳೂರು: ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದಾಗಲೇ ‘ಬಿನ್ನಿಪೇಟೆ ನಿವಾಸಿಗಳ ಸೇವಾಸಂಘ’ಕ್ಕೆ 2 ಎಕರೆ 22 ಗುಂಟೆ ಜಮೀನು ಹಾಗೂ 117 ನಿವೇಶನಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನೋಂದಣಿ ಮಾಡಿಕೊಟ್ಟಿದೆ.

ಒಟ್ಟು 5 ಎಕರೆ ಜಮೀನಿನ ಮಾರುಕಟ್ಟೆ ದರ ₹200 ಕೋಟಿ ಎಂದು ಅಂದಾಜಿಸಲಾಗಿದ್ದು, ನೋಂದಣಿಯಲ್ಲಿ ಅಕ್ರಮದ ಸುಳಿವು ಸಿಕ್ಕ ಕಾರಣಕ್ಕೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಅವರು ಪ್ರಾಧಿಕಾರದ ಉಪನೋಂದಣಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದಾರೆ.

ಸಾಮಾನ್ಯವಾಗಿ ಪ್ರಾಧಿಕಾರದ ಉಪ ಕಾರ್ಯದರ್ಶಿ–1 ಅವರು ಜಮೀನು ಹಾಗೂ ನಿವೇಶನದ ಸಗಟು ಹಂಚಿಕೆಯ ಕಡತವನ್ನು ನಿರ್ವಹಿಸುತ್ತಾರೆ. ಆದರೆ, ಈ ಪ್ರಕರಣದಲ್ಲಿ ಉಪ ಕಾರ್ಯದರ್ಶಿ–4 ಅವರ ವಿಭಾಗದಲ್ಲಿ ಅಕ್ರಮವಾಗಿ ಕಡತ ನಿರ್ವಹಣೆ ಮಾಡಲಾಗಿದೆ ಎಂಬ ಆರೋಪ ಇದೆ. ‘ಪ್ರಾಧಿಕಾರದ ನೌಕರರಿಗೆ ಹಾಗೂ ನಿವೃತ್ತ ನೌಕರರಿಗಾಗಿ ಮೀಸಲಿಟ್ಟ 2 ಎಕರೆ 22 ಗುಂಟೆಯನ್ನು ಸೇವಾ ಸಂಘಕ್ಕೆ ನೋಂದಣಿ ಮಾಡಿಕೊಟ್ಟಿರುವುದು ಕಾನೂನುಬಾಹಿರ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಪ್ರಾಧಿಕಾರದ ನಿವೃತ್ತ ನೌಕರರು ಒತ್ತಾಯಿಸಿದ್ದಾರೆ. ಈ ನಡುವೆ, 117 ನಿವೇಶನಗಳ ಪೈಕಿ 81 ಸೈಟ್‌ಗಳನ್ನು ಸೇವಾ ಸಂಘವು ‘ಕಣ್ಮಣಿ ಕನ್‌ಸ್ಟ್ರಕ್ಷನ್‌’ ಕಂಪನಿಗೆ ಮಾರಾಟ ಮಾಡಿದೆ.

ಏನಿದು ಪ್ರಕರಣ: ಬಿನ್ನಿ ಮಿಲ್‌ ನೌಕರರಿಗೆ ಹಾಗೂ ನಿವೃತ್ತ ನೌಕರರಿಗೆ ನಿವೇಶನಗಳನ್ನು ನೀಡುವ ಉದ್ದೇಶದಿಂದ ಬಡಾವಣೆ ನಿರ್ಮಿಸಲು ಪ್ರಾಧಿಕಾರದ 1988ರ ಜನವರಿ 23ರ ಸಭೆಯಲ್ಲಿ ನಿರ್ಧರಿಸಲಾಯಿತು. ‘ಬಿನ್ನಿ ಮಿಲ್‌ ಕ್ವಾಟ್ರಸ್ ಖಾಲಿ ಮಾಡಿರುವ ನಿವೃತ್ತ ನೌಕರರಿಗೆ ಕೋರ್ಟ್‌ ಆದೇಶದ ಅನುಸಾರ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಇಡಬ್ಲ್ಯೂಎಸ್ (ಆರ್ಥಿಕವಾಗಿ ಹಿಂದುಳಿದ ವರ್ಗದವರು) ವ್ಯಾಪ್ತಿಗೊಳಪಡುವ ನೌಕರರು ನಿವೇಶನದ ಮೌಲ್ಯ ಪಾವತಿ ಮಾಡಿದ ಬಳಿಕ ಸೈಟ್‌ ಹಂಚಬೇಕು’ ಎಂದು ಬಿಡಿಎ ಷರತ್ತು ವಿಧಿಸಿತು. ಇದರ ಬೆನ್ನಲ್ಲೇ, ಬಿನ್ನಿ ಲಿಮಿಟೆಡ್‌ ಪ್ರಾಧಿಕಾರಕ್ಕೆ ₹22 ಲಕ್ಷ ಪಾವತಿ ಮಾಡಿತ್ತು. ಸಂಘಕ್ಕೆ ವಲಗೇರಹಳ್ಳಿ ಜ್ಞಾನಭಾರತಿ ಬಡಾವಣೆಯ ಸರ್ವೆ ಸಂಖ್ಯೆ 113,18/2,18/3ರ 5 ಎಕರೆ 2 ಗುಂಟೆಯನ್ನು ಸಗಟು ಹಂಚಿಕೆ ಮಾಡಲು 1996ರ ಮಾ.ರ್ಚ್‌ 14ರಂದು ಪ್ರಾಧಿಕಾರ ನಿರ್ಧರಿಸಿತು.

1997ರ ಮೇ 2ರಂದು ಸಂಘಕ್ಕೆ ಸಗಟು ಹಂಚಿಕೆ ಪತ್ರ ನೀಡಲಾಯಿತು ಜಮೀನಿನ ಬಾಕಿ ಮೊತ್ತ ₹8.88 ಲಕ್ಷ ಸಂದಾಯ ಮಾಡುವಂತೆ ಬಿನ್ನಿ ಬಿಲ್‌ ಆಡಳಿತ ಮಂಡಳಿಗೆ ಬಿಡಿಎ ಸೂಚಿಸಿತು. 2003ರ ಜುಲೈ 15ರಂದು ಆಡಳಿತ ಮಂಡಳಿಯು ಡಿ.ಡಿ. ನೀಡಿತು. ಪ್ರಾಧಿಕಾರದ(ಜಮೀನಿನ ಸಗಟು ಹಂಚಿಕೆ) ನಿಯಮಾವಳಿ 1995ರ ನಿಯಮ 10 (ಎ) ಪ್ರಕಾರ ಹಂಚಿಕೆ ಪತ್ರ ತಲುಪಿದ 45 ದಿನಗಳೊಳಗೆ ಶೇ25 ಮೊತ್ತ ಹಾಗೂ ಉಳಿದ ಮೊತ್ತವನ್ನು 45 ದಿನಗಳಲ್ಲಿ ಪಾವತಿ ಮಾಡಬೇಕಿದೆ. ಬಾಕಿ ನಿಗದಿತ ಸಮಯದಲ್ಲಿ ಪಾವತಿಸಲು ವಿಫಲವಾದ ಕಾರಣಕ್ಕೆ ಸಗಟು ಹಂಚಿಕೆರದ್ದುಪಡಿಸಲು ಪ್ರಾಧಿಕಾರದ ಸಭೆಯಲ್ಲಿ (2004ರ ಅಕ್ಟೋಬರ್‌ 30)ನಿರ್ಧರಿಸಲಾಯಿತು.

ಈ ನಡುವೆ, ಪ್ರಾಧಿಕಾರದ ನೌಕರರು ಹಾಗೂ ನಿವೃತ್ತ ನೌಕರರಿಗೆ ನಿವೇಶನ ನೀಡಲು 45 ಎಕರೆ ಜಾಗ ನೀಡುವಂತೆ ‘ಬಿಡಿಎ ಎಂ‍ಪ್ಲಾಯಿಸ್‌ ವೆಲ್‌ಫೇರ್ ಅಸೋಸಿಯೇಷನ್‌’ ಆಯುಕ್ತರಿಗೆ ಮನವಿ ಸಲ್ಲಿಸಿತು. ನಿವೇಶನದ ಮೊತ್ತವನ್ನೂ ಪಾವತಿ ಮಾಡಿತು. ಅಸೋಸಿಯೇಷನ್‌ಗೆ ಬಿಡಿಎ 42 ಎಕರೆ ಮಂಜೂರು ಮಾಡಿತು. ವಸಂತಪುರ ಗ್ರಾಮದ ಸರ್ವೆ ಸಂಖ್ಯೆ 53/ಬಿ ಯ 1 ಎಕರೆ 35 ಗುಂಟೆ ಹಾಗೂ ಸರ್ವೆ ಸಂಖ್ಯೆ 53/1ಎ 1 ಎಕರೆಯನ್ನು ಷರತ್ತು ವಿಧಿಸಿ ಬಿಡಿಎ 2013ರ ಮೇ 31ರಂದು ಅಸೋಸಿಯೇಷನ್‌ಗೆ ಹಸ್ತಾಂತರಿಸಿತು.

‘ಹಂಚಿಕೆ ದರವು ಕ್ರಮಬದ್ಧವಾಗಿಲ್ಲ ಎಂಬ ದೂರು ಬಂದಿದೆ. ಅಲ್ಲದೆ, ಹಂಚಿಕೆಯನ್ನು ರದ್ದುಪಡಿಸುವಂತೆ ನೌಕರರ ಅಸೋಸಿಯೇಷನ್‌ನ ಅಧ್ಯಕ್ಷರು ಕೋರಿದ್ದಾರೆ. ಹೀಗಾಗಿ, ಹಂಚಿಕೆ ರದ್ದುಪಡಿಸಲಾಗಿದೆ’ ಎಂದು ಬಿಡಿಎ 2014ರಲ್ಲಿ ಪ್ರಕಟಿಸಿತು. ‘150 ನಿವೃತ್ತ ನೌಕರರು ಹಾಗೂ 25 ನೌಕರರಿಗೆ ಇನ್ನೂ ನಿವೇಶನ ಸಿಕ್ಕಿಲ್ಲ. ವಸಂತಪುರದ ನಿವೇಶನಗಳನ್ನು ಮಂಜೂರು ಮಾಡಬೇಕು’ ಎಂದು ನೌಕರರ ಅಸೋಸಿಯೇಷನ್‌ ಮತ್ತೆ ಮನವಿ ಸಲ್ಲಿಸಿತು. ಈ ಕಡತ ಈಗ ಉಪ ಕಾರ್ಯದರ್ಶಿ–1 ಅವರ ಕಚೇರಿಯಲ್ಲಿದ್ದು, ಮಂಜೂರಾತಿಯ ಹಂತದಲ್ಲಿದೆ ಎಂದು ನೌಕರರ ಸಂಘದ ಪದಾಧಿಕಾರಿಗಳು

ಹೇಳುತ್ತಾರೆ.

‘ಬಿನ್ನಿಪೇಟೆ ನಿವಾಸಿಗಳ ಸೇವಾ ಸಂಘವು 750 ನಿವೇಶನಗಳ ಮುಂಗಡ ಹಣವನ್ನು 1988ರಲ್ಲಿ ಪ್ರಾಧಿಕಾರಕ್ಕೆ ಪಾವತಿಸಿದ್ದು, ಕಾರಣಾಂತರಗಳಿಂದ ಸಂಘಕ್ಕೆ ಸೈಟ್‌ಗಳನ್ನು ನೀಡಲು ಸಾಧ್ಯವಾಗಿಲ್ಲ. ಹೀಗಾಗಿ, ಸಂಘದವರಿಗೆ ಸಗಟು ಜಮೀನನ್ನು ಮಂಜೂರು ಮಾಡಬೇಕು’ ಎಂದು ಪ್ರಾಧಿಕಾರದ ಸಭೆಯಲ್ಲಿ (2017ರ ನವೆಂಬರ್‌ 9) ತೀರ್ಮಾನಿಸಲಾಯಿತು. ಈ ಬಗ್ಗೆ 2018ರ ಮಾರ್ಚ್‌ 15ರಂದು ಆಯುಕ್ತರು ಕಾರ್ಯಾದೇಶ ನೀಡಿದರು. ವಸಂತಪುರದ 2 ಎಕರೆ 22 ಗುಂಟೆ ಹಾಗೂ 117 ನಿವೇಶನಗಳನ್ನು ಬಿನ್ನಿಪೇಟೆ ನಿವಾಸಿಗಳ ಸೇವಾ ಸಂಘದ ಅಧ್ಯಕ್ಷ ಜಿ.ದಯಾನಂದ ಸ್ವಾಮಿ ಹಾಗೂ ಕಾರ್ಯದರ್ಶಿ ಆರ್‌. ಹಿರಣ್ಣಯ್ಯ ಅವರ ಹೆಸರಿನಲ್ಲಿ ಏಪ್ರಿಲ್‌ 21ರಂದು ಬಿಡಿಎ ಕ್ರಯಪತ್ರ ಮಾಡಿಕೊಟ್ಟಿತು. ಅಕ್ರಮವಾಗಿ ಕ್ರಯಪತ್ರ ಮಾಡಿಕೊಡಲಾಗಿದೆ ಎಂದು ನಿವೃತ್ತ ನೌಕರರು ಆಯುಕ್ತರಿಗೆ ಮನವಿ ಸಲ್ಲಿಸಿದರು. ಮುಂದಿನ ಆದೇಶ ಹೊರಡಿಸುವ ತನಕ ಸಂಘದವರಿಗೆ ನಿವೇಶನ ಹಂಚಿಕೆ ಮಾಡಬಾರದು ಎಂದು ಆಯುಕ್ತರು ಏಪ್ರಿಲ್‌ 26ರಂದು ಆದೇಶ ಹೊರಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿನ್ನಿಪೇಟೆ ನಿವಾಸಿಗಳ ಸೇವಾಸಂಘದ ಪದಾಧಿಕಾರಿಗಳು ಲಭ್ಯರಾಗಲಿಲ್ಲ.

‘ಹೆಚ್ಚುವರಿ ದಾಖಲೆಗಳು ಸಿಕ್ಕಿವೆ’

‘ಈ ಪ್ರಕರಣದ ಬಗ್ಗೆ ಬಿಡಿಎ ನೌಕರರ ಸಂಘದ ಪದಾಧಿಕಾರಿಗಳು ಕೆಲ ದಾಖಲೆಗಳನ್ನು ನೀಡಿದ್ದರು. ಈ ದಾಖಲೆಗಳ ಆಧಾರದಲ್ಲಿ ಅಕ್ರಮ ಪತ್ತೆ ಹಚ್ಚುವುದು ಕಷ್ಟ. ಹೆಚ್ಚುವರಿ ದಾಖಲೆಗಳನ್ನು ನೀಡುವಂತೆ ತಿಳಿಸಿದ್ದೆ. ಈಗ ಹೆಚ್ಚುವರಿ ದಾಖಲೆಗಳನ್ನು ನೀಡಿದ್ದಾರೆ. ಇವುಗಳ ಪರಿಶೀಲನೆ ಬಳಿಕ ಖಚಿತ ತೀರ್ಮಾನಕ್ಕೆ ಬರಲು ಸಾಧ್ಯ. ತನಿಖೆ ಪೂರ್ಣಗೊಳಿಸಲು ಕೆಲವು ದಿನಗಳು ಬೇಕು’ ಎಂದು ಬಿಡಿಎ ಎಸ್ಪಿ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯವ್ಯಾಪ್ತಿ ಮೀರಿ ಆದೇಶ: ಆರೋಪ

‘ಉಪ ಕಾರ್ಯದರ್ಶಿ–4 ಮಂಗಳಾ ಅವರನ್ನು ಗೋವಿಂದರಾಜನಗರ ಕ್ಷೇತ್ರಕ್ಕೆ ಚುನಾವಣಾಧಿಕಾರಿಯಾಗಿ ನಿಯೋಜಿಸಲಾಗಿತ್ತು. ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯವನ್ನು ಬಿಟ್ಟು ಅನ್ಯ ಕಾರ್ಯಗಳನ್ನು ವಹಿಸಬಾರದು ಎಂದು ಚುನಾವಣಾ ಆಯೋಗ ಈ ವರ್ಷದ ಫೆಬ್ರುವರಿ 7ರಂದು ಆದೇಶಿಸಿತ್ತು. ನೀತಿಸಂಹಿತೆ ಜಾರಿಗೆ ಬಂದಿರುವ ಕಾರಣ ಕಡತಗಳನ್ನು ಹಿಂದಿರುಗಿಸಲಾಗಿದ್ದು, ನೀತಿಸಂಹಿತೆ ಮುಗಿದ ಬಳಿಕ ಕಡತಗಳನ್ನು ಮರುಮಂಡಿಸಬೇಕು ಎಂದು ರಾಕೇಶ್‌ ಸಿಂಗ್‌ ಮಾರ್ಚ್‌ 27ರಂದು ಸೂಚಿಸಿದ್ದರು.’

‘ಅಗತ್ಯವಿದ್ದಲ್ಲಿ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪ್ರಾಧಿಕಾರದ ಕಾರ್ಯವಿಧಾನಗಳ ಪತ್ರ ಬರೆದು ನಿತ್ಯದ ಕೆಲಸಗಳನ್ನು ಮಾಡಲು ಅನುಮತಿ ಕೋರಬೇಕು ಎಂದೂ ಹೇಳಿದ್ದರು. ಆದರೆ, ನೀತಿಸಂಹಿತೆ ಜಾರಿಯಲ್ಲಿದ್ದಾಗಲೇ ಉಪ ಕಾರ್ಯದರ್ಶಿ–4 ಕಚೇರಿಯಲ್ಲಿ ಕಡತ ವಿಲೇವಾರಿ ಮಾಡಲಾಗಿದೆ. ಇಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವ್ಯಾಪ್ತಿ ಮೀರಿ ಪ್ರಾಧಿಕಾರಕ್ಕೆ ಅಪಾರ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ’ ಎಂದು ಬಿಡಿಎ ನಿವೃತ್ತ ನೌಕರರು ದೂರಿದ್ದಾರೆ.

‘ಬಿಡಿಎ ನೌಕರರು ಹಾಗೂ ನಿವೃತ್ತ ನೌಕರರಿಗೆ ಮೀಸಲಿಟ್ಟ ಜಾಗವನ್ನು ಸೇವಾ ಸಂಘಕ್ಕೆ ನೀಡಿರುವುದು ಅಕ್ರಮ’ ಎಂದು ಅವರು ಆರೋಪಿಸಿದ್ದಾರೆ.

ಎಲ್ಲೆಲ್ಲಿ ಇವೆ ನಿವೇಶನಗಳು?

ಜೆ.‍‍‍ಪಿ.ನಗರ 8ನೇ ಹಂತ ಒಂದು ಹಾಗೂ ಎರಡನೇ ಬ್ಲಾಕ್‌, ಜೆ.ಪಿ.ನಗರ 9ನೇ ಹಂತ 7ನೇ ಬ್ಲಾಕ್‌, ನಂದಿನಿ ಬಡಾವಣೆ, ಸರ್‌.ಎಂ.ವಿ. 1ನೇ ಬ್ಲಾಕ್‌, ಬನಶಂಕರಿ 6ನೇ ಹಂತ ಎರಡು ಹಾಗೂ 3ನೇ ಬ್ಲಾಕ್‌.

‘ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪ್ರಾಧಿಕಾರದ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ’

– ರಾಕೇಶ್‌ ಸಿಂಗ್‌, ಬಿಡಿಎ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry