ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ಪ್ರೀತಿಯ ಅಕ್ರಂ ಪಾಷ!

Last Updated 1 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಅದು ಎಚ್.ಡಿ.ಕೋಟೆ ಸಮೀಪದ ಹಾಡಿಯಲ್ಲಿ ಹುಲಿ ಹಿಡಿಯುವ ಕಾರ್ಯಾಚರಣೆ. ಮಹಿಳೆಯೊಬ್ಬರನ್ನು ಕೊಂದ ಹುಲಿ ಪೊದೆಯಲ್ಲಿ ಅವಿತಿತ್ತು. ಮಾವುತ ವಸಂತನೊಂದಿಗೆ ಅಭಿಮನ್ಯುವಿನ(ಆನೆ) ಬೆನ್ನೇರಿ, ಪೊದೆ ಬಳಿ ಹೋಗುತ್ತಿದ್ದಂತೆ, ಹುಲಿ ಘರ್ಜಿಸುತ್ತಾ ನಮ್ಮತ್ತ ಎರಗಿತು. ತಕ್ಷಣ ಕೈಯಲ್ಲಿದ್ದ ಗನ್ ನಿಂದ ಹುಲಿಯತ್ತ ಅರವಳಿಕೆ ಹಾರಿಸಿದೆ. ಆದರೆ ಗುರಿ ತಪ್ಪಿತು. ಹುಲಿ ಪೊದೆ ಹೊಕ್ಕಿತು. ನಮ್ಮ ಸಿಬ್ಬಂದಿ ಪೊದೆಯತ್ತ ಬೆಚ್ಚು ಗುಂಡು ಹಾರಿಸಿದರು. ಹುಲಿ ಪೊದೆಯಿಂದ ಹೊರಬಂತು. ಈ ಬಾರಿ ಅರವಳಿಕೆ ಗುರಿ ತಪ್ಪದೇ, ಹುಲಿಗೆ ನಾಟಿತು. ಚುಚ್ಚುಮದ್ದಿನೊಂದಿಗೇ ಅದು ಒಂದಷ್ಟು ದೂರ ಓಡಿ ಪ್ರಜ್ಞೆ ತಪ್ಪಿ ನೆಲಕ್ಕೆ ಒರಗಿತು. ಸದ್ಯ ಯಾರಿಗೂ ಅಪಾಯವಾಗದಂತೆ ಕಾರ್ಯಾಚರಣೆ ಯಶಸ್ವಿಯಾಯಿತು...!

ಹುಲಿ ರಕ್ಷಣಾ ಕಾರ್ಯಾಚರಣೆಯೊಂದನ್ನು ಹೀಗೆ ವಿವರಿಸುತ್ತಿದ್ದಾಗ ಅಕ್ರಂ ಕಣ್ಣುಗಳಲ್ಲಿ ಪ್ರಾಣಿರಕ್ಷಿಸಿದ ಧನ್ಯತಾ
ಭಾವ ಕಾಣುತ್ತಿತ್ತು. ಹೀಗೆ ಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿರುವ ಅವರ ಜೋಳಿಗೆಯಲ್ಲಿ ಇಂಥ ನೂರಾರು ಕಥೆಗಳಿವೆ.

ಅಕ್ರಂ ಪಾಷ ಅರಣ್ಯ ಇಲಾಖೆಯ ‘ಡಿ’ ಗ್ರೂಪ್ ನೌಕರ. ಅದೇ ಇಲಾಖೆಯ ಪಶುವೈದ್ಯರಿಗೆ ಸಹಾಯಕರಾಗಿದ್ದಾರೆ. ಕಾರ್ಯಾಚರಣೆ ವೇಳೆ ‌ಪ್ರಾಣಿಗಳಿಗೆ ಅರಿವಳಿಕೆ ಸಿಡಿಸುವುದರಲ್ಲಿ (ಡಾರ್ಟ್‌) ಪರಿಣತಿ ಪಡೆದಿದ್ದಾರೆ. ಈವರಗೆ 100 ಕ್ಕೂ ಹೆಚ್ಚು ಆನೆಗಳನ್ನು ಸೆರೆ ಹಿಡಿಯುವ, 8 ಹುಲಿಗಳು ಹಾಗೂ 30 ಕ್ಕೂ ಅಧಿಕ ಚಿರತೆಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಕ್ಷೇತ್ರದಲ್ಲಿನ ಎರಡು ದಶಕಗಳ ಅನುಭವ. ಅವರ ಈ ಕಾರ್ಯಕ್ಷಮತೆ ಅರಣ್ಯ ಇಲಾಖೆಯ ಹೆಗ್ಗಳಿಕೆ.

ಮಾಸ್ತಿಗುಡಿಯ ಹುಡುಗ

ಖೆಡ್ಡಾ ಖ್ಯಾತಿಯ ಮಾಸ್ತಿಗುಡಿಯಲ್ಲಿ ಜನಿಸಿದ ಅಕ್ರಂಗೆ ಬಾಲ್ಯದಿಂದಲೇ ಕಾಡಿನ ನಂಟು. ಇವರ ತಂದೆ ‘ಕವಿತಾ’ ಎಂಬ ಆನೆಯ ಮಾವುತರಾಗಿದ್ದರು. ಹೀಗಾಗಿ ಆನೆಗಳ ಜೀವನ ನೋಡುತ್ತಲೇ ಬಾಲ್ಯ ಕಳೆದವರು. ಅವರಿಗೆ ಸಹಜವಾಗಿ ಕಾಡುಪ್ರಾಣಿಗಳ ಮೇಲೆ ಪ್ರೀತಿ, ಕಾಳಜಿ. ಇದೇ ಕಾರಣಕ್ಕೆ ಅವುಗಳು ಎಲ್ಲೇ ಸಂಕಷ್ಟದಲ್ಲಿದ್ದರೂ ರಕ್ಷಣೆಗೆ ಧಾವಿಸುವ ಮನಸ್ಸು ಇವರದ್ದು. ಅಪ್ಪನ ಕಾಯಕ, ಮಗನಿಗೂ ಅನುಭವ ನೀಡಿದೆ.

ಆನೆ, ಚಿರತೆ, ಹುಲಿಗಳನ್ನು ಅರಿವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿಸಿ ಹಿಡಿಯಬೇಕು. ಅದಕ್ಕೆ ಧೈರ್ಯ, ಅನುಭವ ಎರಡೂ ಬೇಕು. ‘ಹುಲಿ ಹಿಡಿಯುವಾಗ ಐದಾರು ಗಂಟೆ ಆನೆ ಮೇಲೋ, ಮರ ಏರಿಯೋ ಅರಿವಳಿಕೆ ಚುಚ್ಚು ಮದ್ದಿನ ಗನ್ ಹಿಡಿದು ಕಾಯಬೇಕು. ಅರಿವಳಿಕೆ ಕೊಟ್ಟ ನಂತರವೂ ಆ ಪವರ್ ಇಳಿಯುವುದರೊಳಗೆ ಕಾರ್ಯಾಚರಣೆ ಮುಗಿಸಬೇಕು. ಇಂಥ ವೇಳೆ ಅಪಾಯ ಹೆಚ್ಚು’ ಎಂದು ಕಾರ್ಯಾಚರಣೆ ಕ್ರಮವನ್ನು ವಿವರಿಸುತ್ತಾರೆ ಅಕ್ರಂ.

ಮನ ಕರಗಿಸುವ ಘಟನೆ

ಒಮ್ಮೆ ಹೀಗಾಯ್ತು; ಮೈಸೂರಿನ ಬಿಇಎಂಎಲ್ ಕಾರ್ಖಾನೆಯ ಆವರಣದ ಕಾಪೌಂಡ್ ಕಂಬಿಗೆ ಚಿರತೆ ಸಿಕ್ಕಿ ಹಾಕಿಕೊಂಡಿತ್ತು. ಅದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಕಬ್ಬಿಣದ ಕಂಬಿಯ ಚೂಪು ದೇಹವನ್ನು ಚುಚುತ್ತಾ ಒಳಗೆ ಇಳಿಯುತ್ತಿತ್ತು. ವಿಷಯ ತಿಳಿದ ಅಕ್ರಂ ತಂಡ ಸ್ಥಳಕ್ಕೆ ಧಾವಿಸಿ, ಅದಕ್ಕೆ ಅರಿವಳಿಕೆ ಚುಚ್ಚು ಮದ್ದು ಸಿಡಿಸಿ, ಸರಳುಗಳಿಂದ ಬಿಡಿಸಿ, ಚಿಕಿತ್ಸೆ ನೀಡಿತು. ‘ಚಿರತೆ ಪರಿಸ್ಥಿತಿ ನೋಡಿ ತುಂಬಾ ಸಂಕಟವಾಯಿತು. ಚಿರತೆ ಗುಣಮುಖವಾಗುವರೆಗೂ ನನಗೆ ನಿದ್ದೆಬರಲಿಲ್ಲ. ಊಟ ಸೇರಲಿಲ್ಲ. ದೇವರ ದಯೆ ಅದು ಬದುಕಿತು’ ಎಂದು ಹೇಳುವಾಗ ಅಕ್ರಂ ದನಿಯಲ್ಲಿ ಪ್ರಾಣಿಗಳ ಬಗೆಗಿನ ಕಾಳಜಿ ಎದ್ದು ಕಾಣುತ್ತಿತ್ತು.

ಹುಲಿ, ಚಿರತೆಯಷ್ಟೇ ಅಲ್ಲ. ಸಲಗ, ಹಿಂಡಾನೆಗಳನ್ನು ಹಿಡಿಯುವಲ್ಲೂ ಅಕ್ರಂ ನಿಸ್ಸೀಮರು. ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಎಲ್ಲ ಆನೆ ರಕ್ಷಣಾ ಕಾರ್ಯಾಚರಣೆಗಳಲ್ಲೂ ಇವರು ಭಾಗವಹಿಸಿದ್ದಾರೆ. ರಾಜ್ಯದಲ್ಲಿ ಅಲ್ಲದೇ ಕೇರಳ, ತಮಿಳುನಾಡು, ಮಧ್ಯಪ್ರದೇಶಗಳಲ್ಲೂ ನಡೆದ ಆನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸವಾಲುಗಳು

ಹುಲಿ, ಚಿರತೆಗಳನ್ನು ಹಿಡಿಯುವುದಕ್ಕಿಂತ ಆನೆಗಳ ಕಾರ್ಯಾಚರಣೆ ವಿಭಿನ್ನ ಹಾಗೂ ಸವಾಲಿನದ್ದು. ಆನೆಗಳ ಕಾರ್ಯಾಚರಣೆ
ಯಲ್ಲಿ ಆರರಿಂದ ಎಂಟು ಸಾಕಾನೆಗಳಿರುತ್ತವೆ. ದಟ್ಟ ಕಾಡಿನಲ್ಲೋ, ಪೊದೆಗಳಲ್ಲೋ ಸದ್ದಿಲ್ಲದೆ ನಿಲ್ಲುವ ಕಾಡಾನೆಗಳನ್ನು ಪತ್ತೆ ಮಾಡು
ವುದು ಹರಸಾಹಸ. ‘ಮೊದಲು ಕಾಡಾನೆ ಚಲನವಲನ ಅಂದಾಜು ಮಾಡಿ, ಅದೇ ದಿಕ್ಕಿನಲ್ಲಿ ಅರಿವಳಿಕೆ ಸಿರಿಂಜ್ ಸಿಡಿಸಬೇಕು. ಅದು ನಾಟಿದೊಡನೆ ಆನೆಗಳು ಓಡತೊಡಗುತ್ತವೆ. ಕೆಲವು ನಮ್ಮ ಕಡೆಗೇ ನುಗ್ಗುತ್ತವೆ. ಕುಮ್ಕಿ(ಪುಂಡ ಆನೆ) ಆನೆಗಳು ಧೃತಿಗೆಟ್ಟರೆ ತುಂಬಾ ಕಷ್ಟ’ ಎನ್ನುತ್ತಾರೆ ಅವರು.

‌‘ಒಮ್ಮೆ ಆಲೂರಿನ ಕಾಡಿನಲ್ಲಿ ಆನೆಗೆ ಚುಚ್ಚುಮದ್ದು ನಾಟಿಸಿ ಅದರ ಹಿಂದೆ ಓಡುತ್ತಿದ್ದೆ. ಅದು ಗುಂಡಿಯೊಂದರಲ್ಲಿ ಬಿತ್ತು. ಅದು ಪ್ರಜ್ಞೆ ತಪ್ಪಿದೆಯೆಂದು ಹತ್ತಿರ ಹೋದೆ. ಆದರೆ, ಸರಕ್ಕನೆ ಎದ್ದು ಅಟ್ಟಿಸಿಕೊಂಡು ಬಂತು. ನನ್ನ ಕಥೆ ಮುಗಿಯಿತು ಅಂದುಕೊಂಡೆ. ಆದರೆ ಕೊಟ್ಟ ಔಷಧಿ ನಿಧಾನವಾಗಿ ಕೆಲಸ ಮಾಡುತ್ತಿತ್ತೋ ಏನೋ, ಆನೆಯ ಶಕ್ತಿ ಕುಂದತೊಡಗಿತ್ತು. ನಾನು ಬಚಾವ್ ಆದೆ’ ಎನ್ನುತ್ತಾ ಆನೆಯಿಂದ ತಪ್ಪಿಸಿಕೊಂಡು ಸಾವು ಗೆದ್ದು ಬಂದ ಸಾಹಸ ಕಥೆಯನ್ನು ಅಕ್ರಂ ವಿವರಿಸುತ್ತಾರೆ. ಈವರಗೆ ಸುಮಾರು 80 ಆನೆಗಳಿಗೆ ಅರಿವಳಿಕೆ ಚುಚ್ಚುಮದ್ದು ಸಿಡಿಸಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.

‘ನನಗೆ ಅರಿವಳಿಕೆ ಬಂದೂಕು ನೀಡಿ ಕೆಲಸ ಕಲಿಸಿದವರೇ ಚಿಟ್ಟಿಯಪ್ಪ ಡಾಕ್ಟರು. ಖಾದ್ರಿ, ನಾಗರಾಜ್ ಡಾಕ್ಟರು, ರಂಗರಾಜು, ಹಾಸನ ವಿಭಾಗದ ವೆಂಕಟೇಶಣ್ಣ. ಇವರ ಮಾರ್ಗದರ್ಶನದಿಂದ ಕಾಡುಪ್ರಾಣಿಗಳ ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದೇನೆ’ ಎಂದು ಅಕ್ರಂ ಸ್ಮರಿಸುತ್ತಾರೆ. ಅವರ ಚುರುಕಿನ ಕೆಲಸ, ಪ್ರಾಣಿ ಬಗೆಗಿನ ಪ್ರೀತಿಯಿಂದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗೆ ಅಚ್ಚುಮೆಚ್ಚು.

‘ಅಕ್ರಂ ಇದ್ದರೆ ಧೈರ್ಯ’

‘ಅಕ್ರಂ ಸುಮಾರು ಹನ್ನೊಂದು ವರ್ಷಗಳ ಕಾಲ ನನ್ನ ಸಹಾಯಕನಾಗಿ ಕೆಲಸ ಮಾಡಿದ್ದಾರೆ. ಕಾಡುಪ್ರಾಣಿಗಳ ಸೆರೆ ಸಾಮಾನ್ಯ ಕೆಲಸ
ವಲ್ಲ. ಪ್ರತಿಕ್ಷಣವೂ ಅಪಾಯದ ನಿರೀಕ್ಷೆಯಲ್ಲಿ ಕೆಲಸ ಮಾಡಬೇಕು. ಇಂಥ ಕಾರ್ಯಾಚರಣೆಯಲ್ಲಿ ಮುನ್ನುಗ್ಗುವ ಪ್ರವೃತ್ತಿ ಇವರದ್ದು. ಧೈರ್ಯ, ಸಮಯ ಪ್ರಜ್ಞೆ ಇರುವವರಿಗೆ ಮಾತ್ರ ಯಶಸ್ಸು ದೊರಕುತ್ತದೆ. ಹಾಗೆಯೇ ಅಕ್ರಂ ನಮ್ಮ ಜತೆ ಇದ್ದರೆ, ನಮಗೂ ಧೈರ್ಯ. ಕೆಲಸವನ್ನೂ ನಿಶ್ಚಿಂತೆಯಿಂದ ಮಾಡಬಹುದು. ನನ್ನೊಂದಿಗೆ ಈತ 65 ಆನೆ, 8 ಹುಲಿ, ಲೆಕ್ಕವಿಲ್ಲದಷ್ಟು ಚಿರತೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾನೆ’ ಎಂದು ಪ್ರಶಂಸಿಸುತ್ತಾರೆ ಡಾ.ನಾಗರಾಜ್.

ವೈದ್ಯರು ಮಾತಿನಂತೆ ಅಕ್ರಂ ಎಲ್ಲ ಕಾರ್ಯಚರಣೆಯಲ್ಲೂ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುತ್ತಾರೆ. ಪ್ರಾಣಿಗಳಿಗೆ ಚುಚ್ಚುಮದ್ದು ಹಾಕುವುದು ಪ್ರಮುಖ ಕೆಲಸವಲ್ಲ. ಆದರೂ ಕಾರ್ಯಾಚರಣೆಯ ಎಲ್ಲಾ ಹಂತಗಳಲ್ಲೂ ಸ್ವಯಂ ಸ್ಪೂರ್ತಿಯಿಂದ ಕೈ ಜೋಡಿಸುತ್ತಾರೆ. ಅದು ಅವರೊಳಗಿನ ಧೈರ್ಯ ಮತ್ತು ಪ್ರಾಣಿಗಳ ಬಗ್ಗೆ ಅವರಿಗಿರುವ ಕಾಳಜಿ, ಅಷ್ಟೇ.

‘ಇಂಥ ಕಾರ್ಯಾಚರಣೆಗಳಲ್ಲಿ ನಿಮಗೆ ಇಷ್ಟವಾದ ಕೆಲಸ ಯಾವುದು’ ಎಂದು ಅಕ್ರಂರನ್ನು ಕೇಳಿದರೆ, ‘ಸೆರೆ ಹಿಡಿದ ಪ್ರಾಣಿಗಳನ್ನು ಕಾಡಿಗೆ ಬಿಡುವಾಗ ಬೋನಿನ ಬಾಗಿಲು ತೆಗೆಯುತ್ತೀನಲ್ಲಾ, ಅದೇ ಇಷ್ಟವಾದ ಕೆಲಸ’ ಎನ್ನುತ್ತಾರೆ. ‘ತನ್ನ ನೆಲೆಯಿಂದ ಬೇರೆಯಾದ ಪ್ರಾಣಿಯನ್ನು ಚಿಕಿತ್ಸೆ ನೀಡಿ, ಉಪಚರಿಸಿ ಅದರ ಸ್ವಸ್ಥಾನಕ್ಕೆ ಸೇರಿಸುವಾಗ, ಅವು ಚಂಗನೆ ನೆಗೆದು ಓಡುತ್ತಾ ಕಾಡಲ್ಲಿ ಮರೆಯಾಗುವ ನೋಟ ಬಹಳ ಹಿತವಾಗಿರುತ್ತದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT