ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ರೈಲ್ವೆ ಗೇಟ್‌ಗೆ ಮೇಲ್ಸೇತುವೆ

ಸಂಸದ ಸುರೇಶ ಅಂಗಡಿ ಸಭೆ: ಜುಲೈ 15ರಿಂದ ಕಾಮಗಾರಿ ಆರಂಭಿಸಲು ಸೂಚನೆ
Last Updated 6 ಜೂನ್ 2018, 6:13 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಖಾನಾಪುರ ರಸ್ತೆಯ 3ನೇ ರೈಲ್ವೆ ಗೇಟ್‌ ಬಳಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಜುಲೈ 15ರಿಂದ ಆರಂಭಿಸಬೇಕು ಎಂದು ಸಂಸದ ಸುರೇಶ ಅಂಗಡಿ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಕಾಡಾ ಕಚೇರಿಯಲ್ಲಿ ಮಂಗಳವಾರ ನಡೆದ ರೈಲ್ವೆ, ಮಹಾನಗರ ಪಾಲಿಕೆ ಹಾಗೂ ಹೆಸ್ಕಾಂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಕಾಮಗಾರಿಗೆ ಈಗಾಗಲೇ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಿವೆ. ಅಧಿಕಾರಿಗಳು ಕೆಲಸ ಆರಂಭಿಸಬೇಕಷ್ಟೆ. 20 ದಿನಗಳೊಳಗೆ ಟೆಂಡರ್‌ ಕರೆದು ಕೆಲಸ ಆರಂಭಿಸಿ’ ಎಂದರು.

1ನೇ ಹಾಗೂ 2ನೇ ಗೇಟ್‌: ‘ಇದೇ ರಸ್ತೆಯ 1ನೇ ಹಾಗೂ 2ನೇ ರೈಲ್ವೆ ಗೇಟ್‌ನಲ್ಲಿಯೂ ಮೇಲ್ಸೇತುವೆ ನಿರ್ಮಿಸಬೇಕಾಗಿದೆ. 3ನೇ ಗೇಟ್‌ನ ಕಾಮಗಾರಿ ಪೂರ್ಣಗೊಂಡ ನಂತರ ಈ ಕಾಮಗಾರಿಗಳನ್ನು ಆರಂಭಿಸಲಾಗುವುದು’ ಎಂದು ಹೇಳಿದರು.

ಬಾಕಿ ಕಾಮಗಾರಿ: ‘ಇಲ್ಲಿನ ಹಳೇ ಪಿ.ಬಿ. ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆಯ ಬಾಕಿ ಕಾಮಗಾರಿಯನ್ನು ಸೆಪ್ಟೆಂಬರ್‌ 30ರವರೆಗೆ ಪೂರ್ಣಗೊಳಿಸಿ ಕೊಡಬೇಕು; ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸುರೇಶ ಅಂಗಡಿ ಸೂಚಿಸಿದರು.

‘ಮೇಲ್ಸೇತುವೆ ನಿರ್ಮಿಸುವ ಕೆಲಸ ಪೂರ್ಣಗೊಂಡಿದೆ. ಆದರೆ, ಇದಕ್ಕೆ ಹೊಂದಿಕೊಂಡಂತೆ ಸರ್ವೀಸ್‌ ರಸ್ತೆ, ಒಳಚರಂಡಿ, ಫುಟ್‌ಪಾತ್‌, ಬೀದಿದೀಪಗಳ ಅಳವಡಿಕೆ ಸೇರಿದಂತೆ ಇತರೆ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಇದರಿಂದಾಗಿ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಬಳಸುವವರಿಗೂ ತೊಂದರೆಯಾಗುತ್ತಿದೆ’ ಎಂದು ವಿವರಿಸಿದರು.

‘ಮೇಲ್ಸೇತುವೆ ಕಾಮಗಾರಿಯನ್ನು ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರದ ಶೇ 50; 50 ಪಾಲುದಾರಿಕೆಯಲ್ಲಿ ನಿರ್ಮಿಸಲಾಗುತ್ತಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಣದ ಕೊರತೆ ಉಂಟಾದರೆ ಮಹಾನಗರ ಪಾಲಿಕೆಯವರು ಹೊಂದಿಸಬೇಕು. ಅಂದರೆ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಹಣ ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದರು.

ಸಮನ್ವಯತೆ ಕೊರತೆ: ‘ರೈಲ್ವೆ, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಹೆಸ್ಕಾಂ ಸೇರಿದಂತೆ ಎಲ್ಲ ಇಲಾಖೆಯವರು ಜೊತೆಗೂಡಿ ಏಜೆನ್ಸಿ ಮೂಲಕ ಕಾಮಗಾರಿ ಮಾಡಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈಗ ಈ ಇಲಾಖೆಗಳ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹಾಕುತ್ತಿದ್ದಾರೆ. ಸಮನ್ವಯದ ಕೊರತೆ ಕಾಣುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೆ ಮುಂದಕ್ಕೆ: ‘ರೈಲ್ವೆ ನಿಲ್ದಾಣದ ಬಳಿಯಿರುವ ಗೋಗಟೆ ವೃತ್ತದ ಹತ್ತಿರ ಇರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ನಿಧಾನವಾಗಿ ನಡೆಯುತ್ತಿದೆ. ಇದಕ್ಕೆ ನೀಡಲಾಗಿದ್ದ ಗಡುವನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ’ ಎಂದು ತಿಳಿಸಿದರು.

ಟಿಕೆಟ್‌ ವಿತರಣೆಗೆ ವ್ಯವಸ್ಥೆ: ‘ಟಿಳಕವಾಡಿ, ಅನಗೋಳ, ವಡಗಾಂವ, ಖಾಸಬಾಗ, ಹಿಂದವಾಡಿ ಭಾಗದ ಜನರು ಗೋಗಟೆ ಮೇಲ್ಸೇತುವೆಯನ್ನು ಸುತ್ತುಹಾಕಿಕೊಂಡು ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸಬೇಕಾಗಿದೆ. ಇದನ್ನು ತಪ್ಪಿಸಲು ಗೂಡ್‌ಶೆಡ್‌ ರೋಡ್‌ ಬಳಿಯೂ ಟಿಕೆಟ್‌ ಕೌಂಟರ್‌ ಹಾಗೂ ಪ್ರವೇಶ ದ್ವಾರವನ್ನು ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ರೈಲ್ವೆ ನಿಲ್ದಾಣವನ್ನು ಇನ್ನಷ್ಟು ಆಧುನೀಕರಣಗೊಳಿಸಬೇಕು. ಹಣದ ಕೊರತೆಯ ನೆಪ ಹೇಳದೇ, ಪ್ರಯಾಣಿಕರಿಗೆ ಅವಶ್ಯಕವಾಗಿರುವ ಎಲ್ಲ ಸೌಕರ್ಯಗಳನ್ನು ಒದಗಿಸಬೇಕು’ ಎಂದು ತಾಕೀತು ಮಾಡಿದರು.

ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಗೌಡ ತಾಯಣ್ಣವರ, ಎಂಜಿನಿಯರ್‌ಗಳಾದ ಆರ್‌.ಎಸ್‌. ನಾಯಕ, ಲಕ್ಷ್ಮಿ ನಿಪ್ಪಾಣಿಕರ, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT