ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಮಾವು ಸಂಭ್ರಮ

7
ನೂರು ಬಗೆಯ ಮಾವಿನ ತಳಿ ಪ್ರದರ್ಶನ, ರೈತರಿಂದ ನೇರ ಮಾರಾಟಕ್ಕೆ ಅವಕಾಶ

ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಮಾವು ಸಂಭ್ರಮ

Published:
Updated:
ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಮಾವು ಸಂಭ್ರಮ

ದಾವಣಗೆರೆ: ಬಾಯ್‌ ರುಚಿ ತಣಿಸಲು ರಸಭರಿತ ಹಣ್ಣು, ಮಾಹಿತಿಗೆ ಮಾವು ಪ್ರದರ್ಶನ; ಅಷ್ಟೇ ಅಲ್ಲ, ಬಗೆಬಗೆಯ ಮಾವಿನ ಸಸಿಗಳೂ ನಾಗರಿಕರಿಗೆ ಲಭ್ಯ. ಇಲ್ಲಿನ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ ಆರಂಭಗೊಂಡ ಮೂರು ದಿನಗಳ ಮಾವು ಮೇಳ ಮತ್ತು ಸಸ್ಯ ಸಂತೆಯ ವಿಶೇಷವಿದು.

ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವಿನ ಸಾಮ್ರಾಜ್ಯವೇ ಅನಾವರಣಗೊಂಡಿದೆ. ರಸಪೂರಿ, ಬಾದಾಮಿ, ಮಲಗೋವ, ಸಿಂಧೂರ, ತೋತಾಪುರಿ ಹಣ್ಣುಗಳು ಮಾವುಪ್ರಿಯರ ರುಚಿ ತಣಿಸುತ್ತಿವೆ.

ತೋಟಗಾರಿಕೆ ಇಲಾಖೆಯು ದೇಶದ ಮೂಲೆ ಮೂಲೆಗಳಿಂದ ಹುಡುಕಿ ತಂದಿರುವ ನೂರು ಬಗೆಯ ಮಾವಿನ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಣ್ಣುಗಳ ವೈಶಿಷ್ಟ್ಯವನ್ನೂ ಪರಿಚಯಿಸಲಾಗುತ್ತಿದೆ.

ಸರದಾರ, ಜಾಹಂಗೀರ, ಮಂಜೀರಾ, ಪಂಚಮಿ, ನೀಲೇಶ್ವರಿ, ಕಾಲಾಪಾಡ, ಚಾಸಾ, ನೀಲುದ್ದೀನ್, ಬಾಳಮಾವು, ನಿರಂಜನ, ಅಂಬಿಕಾ, ಖಾದರ, ಚಂದ್ರಮ, ಜಾಹ್ನವಿ, ತ್ರಿಶೂಲ್, ರಶ್ಮಿ... ಹೀಗೆ ವಿಶಿಷ್ಟ ತಳಿಯ ಹಣ್ಣುಗಳು ಮಾವು ಪ್ರಿಯರನ್ನು ಸೆಳೆದವು.

ಅಡಿಕೆ ಮಾವು, ಕೇಸರ, ಕಲುಮಿ, ಸಣ್ಣೆಲೆ, ದೂದ್‌ಪೇಡ, ಕಿಂಗ್‌ಸ್ಟಾರ್, ಬಾಂಬೆ, ಮಾಲ್ಡ, ಕೊಬ್ಬರಿ, ಲಾಲ್‌ಪುರಿ, ಬಾಂಬೆಗ್ರೀನ್ ತಳಿಗಳ ವಿಶಿಷ್ಟ ಸ್ವಾದ ಫಲ ಪ್ರಿಯರ ನಾಲಿಗೆ ಚಪ್ಪರಿಸುವಂತೆ ಮಾಡಿತು.

ತೋಟಗಾರಿಕೆ ಇಲಾಖೆಯು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದ್ದು, ಜೂನ್‌ 7ರವರೆಗೆ ನಡೆಯಲಿದೆ. ಚನ್ನಗಿರಿ, ದಾವಣಗೆರೆ, ರಾಣೆಬೆನ್ನೂರು, ಹಾವೇರಿ ತಾಲ್ಲೂಕುಗಳ 15 ರೈತರು ಮೇಳದಲ್ಲಿ ಭಾಗವಹಿಸಿದ್ದಾರೆ.

ರೈತರಿಗೂ, ಜನರಿಗೂ ಅನುಕೂಲ:

ಪ್ರಪಂಚದ ಶೇ 50ರಷ್ಟು ಮಾವನ್ನು ಭಾರತದಲ್ಲೇ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 4,400 ಹೆಕ್ಟೇರ್‌ ಪ್ರದೇಶದಲ್ಲಿ ವರ್ಷಕ್ಕೆ ಅಂದಾಜು 34,000 ಟನ್‌ಗಳಷ್ಟು ಮಾವು ಬೆಳೆಯಲಾಗುತ್ತದೆ. ಆದರೂ ಸ್ಥಳೀಯರಿಗೆ ಉತ್ತಮ ಮಾವು ಸಿಗುತ್ತಿಲ್ಲ. ಮಾರುಕಟ್ಟೆ ಹುಡುಕಿಕೊಂಡು ರೈತರು ಹೊರ ರಾಜ್ಯಗಳಿಗೂ ಹೋಗುತ್ತಾರೆ. ಹೀಗಾಗಿ, ಇಂಥ ಮೇಳಗಳನ್ನು ಆಯೋಜಿಸುವ ಅಗತ್ಯವಿದೆ. ಮೇಳಗಳಿಂದ ರೈತರಿಗೂ, ಜನರಿಗೂ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದರು.

ಮಾವು ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ, ‘ಶೀಘ್ರದಲ್ಲೇ ಗಾಜಿನ ಮನೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಇನ್ನು ಮುಂದೆ ಇಂಥ ಮೇಳಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿಯೇ ಆಯೋಜಿಸಲಾಗುವುದು’ ಎಂದರು.

ಹಣ್ಣು ಮಾಗಿಸುವ ಘಟಕಕ್ಕೆ ಶೇ 60 ಸಬ್ಸಿಡಿ

ಕಾರ್ಬೈಡ್‌ ರಾಸಾಯನಿಕ ಬಳಸಿ ಹಣ್ಣು ಮಾಗಿಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುತ್ತದೆ. ಹೀಗಾಗಿ, ನೈಸರ್ಗಿಕವಾಗಿ ಹಣ್ಣು ಮಾಗಿಸುವ ಘಟಕ ಸ್ಥಾಪಿಸಲು ಸರ್ಕಾರ ಶೇ 60ರಷ್ಟು ಸಹಾಯಧನ ನೀಡುತ್ತದೆ. ಈ ಯೋಜನೆಯನ್ನು ರೈತರು, ಹಣ್ಣು ವ್ಯಾಪಾರಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಮನವಿ ಮಾಡಿದರು.

ಒಂದು ಟನ್ ಸಾಮರ್ಥ್ಯದ ಹಣ್ಣು ಮಾಗಿಸುವ ಘಟಕ ಸ್ಥಾಪಿಸಲು ₹ 1 ಲಕ್ಷ ವೆಚ್ಚವಾಗುತ್ತದೆ. ಮಾವು ಮಂಡಳಿ ಶೇ 35 ಮತ್ತು ತೋಟಗಾರಿಕಾ ಇಲಾಖೆ ಶೇ 25 ಸೇರಿ ಒಟ್ಟು ಶೇ 60 ಸಹಾಯಧನ ಸಿಗುತ್ತದೆ. ಈ ಘಟಕದಲ್ಲಿ ಮಾವು ಮತ್ತು ಬಾಳೆಯಂತಹ ಹಣ್ಣುಗಳನ್ನು ಮಾಗಿಸಬಹುದು ಎಂದರು.

ಪ್ರಸ್ತುತ ಎಪಿಎಂಸಿ ಆವರಣದಲ್ಲಿ ಹಣ್ಣು ಮಾಗಿಸುವ ಒಂದು ಘಟಕ ಸ್ಥಾಪಿಸಲಾಗಿದೆ. ಈ ಘಟಕದಲ್ಲಿಯೇ ಈಥೆಲಿನ್ ಗ್ಯಾಸ್ ಬಳಸಿ ಮಾಗಿಸಿದ ಹಣ್ಣುಗಳನ್ನು ಹಾಪ್‌ಕಾಮ್ಸ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಹಣ್ಣು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಮಾಹಿತಿ ನೀಡಿದರು.

ಮಳೆ ಕೊರತೆ, ಬೆಲೆ ಕುಸಿತದಿಂದ ನಷ್ಟವಾಗಿದೆ. ಮೇಳಕ್ಕೆ ಅಲ್ಪ ಪ್ರಮಾಣದ ಮಾವು ತಂದಿದ್ದೇನೆ. ಉತ್ತಮ ಬೆಲೆಯಲ್ಲಿ ಎಲ್ಲಾ ಹಣ್ಣು ವ್ಯಾಪಾರವಾಗುವ ನಿರೀಕ್ಷೆಯಿದೆ

ನಿಜಾಂ ಖಾನ್, ರೈತ, ದೊಡ್ಡಬ್ಬಿಗೆರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry