ಕಾಡು ಇದ್ದರೆ ಉಳಿಯುವುದು ನಾಡು

7
ವಿಶ್ವ ಪರಿಸರ ದಿನಾಚರಣೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್‌. ಹೊಸಗೌಡರ್‌

ಕಾಡು ಇದ್ದರೆ ಉಳಿಯುವುದು ನಾಡು

Published:
Updated:
ಕಾಡು ಇದ್ದರೆ ಉಳಿಯುವುದು ನಾಡು

ದಾವಣಗೆರೆ: ‘ಕಾಡು ಉಳಿಸಿದರೆ ಮಾತ್ರ ನಾಡು ಉಳಿಯುತ್ತದೆ; ನಾವೂ ಉಳಿಯುತ್ತೇವೆ. ಅದಕ್ಕಾಗಿ ಪರಿಸರವನ್ನು ಸಂರಕ್ಷಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್‌. ಹೊಸಗೌಡರ್‌ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಾಗನೂರು ಬಸಪ್ಪ ಪಬ್ಲಿಕ್‌ ಟ್ರಸ್ಟ್‌, ಜಿಲ್ಲಾ ವಕೀಲರ ಸಂಘ, ಪರಿಸರ ಸಂರಕ್ಷಣಾ ವೇದಿಕೆ, ಮಾನವ ಹಕ್ಕುಗಳ ವೇದಿಕೆ ಸಹಯೋಗದಲ್ಲಿ ಮಾಗನೂರು ಬಸಪ್ಪ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಸರವನ್ನು ಉಳಿಸುವುದು ಹೇಗೆ ಎಂಬುದನ್ನು ನಾವು ತಿಳಿದುಕೊಂಡು ಉಳಿದವರಿಗೂ ಜಾಗೃತಿ ಮೂಡಿಸಬೇಕು. ಗಿಡ ನೆಡುವ ಜತೆಗೆ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೂಡಾ ನಮ್ಮ ಜವಾಬ್ದಾರಿ. ಅದು ಸರ್ಕಾರದ ಕೆಲಸ ಎಂದು ಸುಮ್ಮನಿರುವಂತಿಲ್ಲ’ ಎಂದು ಹೇಳಿದರು.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಟಿ.ಜಿ. ಶಿವಶಂಕರೇಗೌಡ ಮಾತನಾಡಿ, ‘ಪರಿಸರ ನಾಶ ಅಂದರೆ ಕಾಡು ಕಡಿಯುವುದಷ್ಟೇ ಅಲ್ಲ. ಪ್ಲಾಸ್ಟಿಕ್‌ ಬಳಕೆ, ಮೊಬೈಲ್‌ ಫೋನ್‌ ಬಳಕೆ ಕೂಡಾ ನಾಶಕ್ಕೆ ಕಾರಣವಾಗುತ್ತದೆ. ಮೊಬೈಲ್‌ ಫೋನ್‌ ಶೇ 20ಕ್ಕಿಂತ ಕಡಿಮೆ ಚಾರ್ಜ್‌ ಆಗಿದ್ದರೆ ಆಗ ರೇಡಿಯೇಶನ್‌ ಜಾಸ್ತಿ ಇರುತ್ತದೆ. ರೇಡಿಯೇಶನ್‌ ಜಾಸ್ತಿ ಇದ್ದಷ್ಟು ಪರಿಸರಕ್ಕೆ ತೊಂದರೆಯೂ ಹೆಚ್ಚು. ಹೀಗಾಗಿ ಚಾರ್ಜ್‌ ಕಡಿಮೆ ಇರುವಾಗ ಮೊಬೈಲ್‌ ಬಳಸಬೇಡಿ’ ಎಂದು ಕಿವಿ ಮಾತು ಹೇಳಿದರು.

ಒಂದು ಮೊಬೈಲ್‌ ಟವರ್‌ ಇದ್ದರೆ ಅದರ ಸುತ್ತ 150 ಮೀಟರ್‌ ದೂರದವರೆಗೆ ವಾಸಿಸುವವರಿಗೆ ಆರೋಗ್ಯ ತೊಂದರೆ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಅಲ್ಲಿ ಹೆಣ್ಣುಮಕ್ಕಳಿಗೆ ಕ್ಯಾನ್ಸರ್‌ ಬರುವ ಸಂಭವ ಹೆಚ್ಚಿರುತ್ತದೆ. ಇದನ್ನು ವಿದ್ಯಾರ್ಥಿಗಳು ತಿಳಿದುಕೊಂಡು ನೆರೆಹೊರೆಯವರಿಗೂ ತಿಳಿಸಬೇಕು ಎಂದು ಹೇಳಿದರು.

ರಷ್ಯಾದ ಚರ್ನೋಬಿಲ್‌ ಅಣು ಸ್ಥಾವರ ದುರಂತವನ್ನು ಕೇಳಿರಬಹುದು. ರೇಡಿಯೇಶನ್‌ನಿಂದ ಉಂಟಾದ ದುರಂತ ಅದು. ಮೊಬೈಲ್‌ಗಳ ಬಳಕೆಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಬರುತ್ತಿದೆ. ಇದರ ರೇಡಿಯೇಶನ್‌ ಉಂಟು ಮಾಡುವ ಅಪಾಯ ಇನ್ನೆಷ್ಟಿರಬಹುದು ಎಂಬುದನ್ನು ಯೋಚಿಸಬೇಕು ಎಂದು ಎಚ್ಚರಿಸಿದರು.

‘ಪ್ಲಾಸ್ಟಿಕ್‌ ಮಾಲಿನ್ಯ ಜೀವಕ್ಕೆ ಮಾರಕ’ ಕುರಿತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣ್‌ ಕುಮಾರ್‌ ಉಪನ್ಯಾಸ ನೀಡಿದರು.

ಮಾಗನೂರು ಬಸಪ್ಪ ಪಬ್ಲಿಕ್‌ ಟ್ರಸ್ಟ್‌ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್‌ ನ್ಯಾಯಾಧೀಶ ಕೆಂಗಬಾಲಯ್ಯ, ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ, ಸಾಲುಮರದ ವೀರಾಚಾರಿ, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ದೇವರಮನಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಮೇಘನಾ ಸ್ವಾಗತಿಸಿದರು. ಭರಣಿ ಬಿ.ಸಿ. ಪರಿಸರದ ದಿನದ ಇತಿಹಾಸ ತಿಳಿಸಿದರು. ಬಿ. ನಂದಿತಾ ಪರಿಸರ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಮಹಾಲಕ್ಷ್ಮೀ ಪರಿಸರ ಸಂರಕ್ಷಣೆಯ ಘೋಷವಾಕ್ಯಗಳನ್ನು ವಿವರಿಸಿದರು. ಕಾವ್ಯ ವಂದಿಸಿದರು. ಸಿ.ಎಂ. ಲಾವಣ್ಯ, ಎ.ಎನ್‌. ನಮ್ರತಾ ನಿರೂಪಿಸಿದರು. ಇದಕ್ಕೂ ಮೊದಲು ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

‘ಮರವನ್ನೇ ದೇವರೆಂದೆ’

‘ಡಾ. ರಾಜಕುಮಾರ್‌ ಅವರು ಅಭಿಮಾನಿಗಳನ್ನೇ ದೇವರೆಂದರು. ನಾನು ಮರವನ್ನೇ ದೇವರೆಂದೆ. ಮರದಿಂದಲೇ ಮುಂದೆ ಬಂದೆ. ನಾನು 4ನೇ ತರಗತಿಯಷ್ಟೇ ಓದಿದ್ದೇನೆ. ನೀವೆಲ್ಲ ಅಕ್ಷರದ ಬೆಲೆ ತಿಳಿದವರು. ಇದರ ಜತೆಗೆ ಮರಗಳ ಬೆಲೆಯನ್ನೂ ತಿಳಿಯಿರಿ’ ಎಂದು ಪರಿಸರಪ್ರೇಮಿ ಸಾಲುಮರದ ವೀರಾಚಾರಿ ಸಲಹೆ ನೀಡಿದರು.

‘ಭೂಮಿ ನಮ್ಮನ್ನು ಹೆತ್ತಿದೆ, ಹೊತ್ತಿದೆ, ಸಾಕಿದೆ, ಸಲಹಿದೆ. ಅನ್ನ, ನೀರು, ಗಾಳಿ ಎಲ್ಲವನ್ನೂ ಕೊಟ್ಟಿದೆ. ಅದರ ಋಣ ತೀರಿಸಲು ಒಬ್ಬೊಬ್ಬರು ಕನಿಷ್ಠ ಒಂದೊಂದು ಗಿಡವನ್ನು ನೆಟ್ಟು ಬೆಳೆಸಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry