ಜಿಲ್ಲೆಯಲ್ಲಿ 4.5 ಲಕ್ಷ ಸಸಿ ನೆಡುವ ಗುರಿ

7
ಅರಣ್ಯ ಇಲಾಖೆಯಿಂದ ಆಂದೋಲನ: ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಹೇಳಿಕೆ

ಜಿಲ್ಲೆಯಲ್ಲಿ 4.5 ಲಕ್ಷ ಸಸಿ ನೆಡುವ ಗುರಿ

Published:
Updated:

ಕಲಬುರ್ಗಿ: ‘ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಅರಣ್ಯ ಇಲಾಖೆ ವತಿಯಿಂದ ಆಂದೋಲನದ ಮಾದರಿಯಲ್ಲಿ 4.5 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತರಿಗೆ ಸಹಾಯಧನದಲ್ಲಿ 3.5 ಲಕ್ಷ ಸಸಿಗಳನ್ನು ವಿತರಿಸಲು ಕ್ರಮ ಜರುಗಿಸಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ಪಡೆಯಬೇಕು. ಸರ್ಕಾರಿ ಕಚೇರಿ, ಶಾಲಾ-ಕಾಲೇಜು ಆವರಣ ಹಾಗೂ ಸಂಘ– ಸಂಸ್ಥೆಗಳ ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಉಚಿತವಾಗಿ ಸಸಿ ನೆಡಲಾಗುವುದು’ ಎಂದರು.

‘ಪ್ಲಾಸ್ಟಿಕ್ ಮಾಲಿನ್ಯ ತಡೆ ಈ ವರ್ಷದ ಘೋಷಣೆಯಾಗಿದ್ದು, ಈ ನಿಟ್ಟಿನಲ್ಲಿ ಪರಿಸರ ಸಪ್ತಾಹ ಕಾರ್ಯಕ್ರಮದಲ್ಲಿ ಒಂದು ವಾರ ಪ್ಲಾಸ್ಟಿಕ್ ಮತ್ತು ಪಾಲಿಥಿನ್ ಬ್ಯಾಗ್‌ಗಳ ಬಳಕೆ ನಿಷೇಧ, ಪರಿಸರ ರಕ್ಷಣೆ, ಅರಣ್ಯ ಸಂರಕ್ಷಣೆಗಳಂತಹ ಪರಿಸರ ಕುರಿತ ಜಾಗೃತಿ ಮೂಡಿಸಲು ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಶ್ರಮದಾನದ ಮೂಲಕ ಪ್ರಮುಖ ಸ್ಥಳಗಳ ಸ್ವಚ್ಛತೆ ಕೈಗೊಳ್ಳಲಾಗುವುದು. ಎಲ್ಲ ಶಾಲಾ-ಕಾಲೇಜುಗಳಲ್ಲಿ ಪರಿಸರ ಕುರಿತು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು ಪರಿಸರ ಸಪ್ತಾಹದ ಕೊನೆಯಲ್ಲಿ ವಿಜೇತರನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಗೀತಾಂಜಲಿ, ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬಿ.ಜೆ.ಲೋಕೇಶ್, ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸವಿತಾ ಹೂಗಾರ, ಹೋಮ್‌ಗಾರ್ಡ್‌ ಕಮಾಂಡೆಂಟ್ ಸಂತೋಷ ಪಾಟೀಲ, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ ಇದ್ದರು.

ವಿವಿಧ ಶಾಲೆ ಮಕ್ಕಳು ಹಾಗೂ ಪೊಲೀಸ್ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳಿಗೆ ಪರಿಸರ ಸಂರಕ್ಷಿಸುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಬಳಿಕ ಜಗತ್ ವೃತ್ತದಲ್ಲಿ ಅಧಿಕಾರಿಗಳಿಂದ ಸಹಿ ಸಂಗ್ರಹಿಸಲಾಯಿತು. ನಂತರ ಶರಣಬಸವೇಶ್ವರ ಕೆರೆ ದಂಡೆಯಲ್ಲಿ

ರುವ ಘನತ್ಯಾಜ್ಯವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.

**

ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಅಧಿಕಾರಿಗಳು ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸುವರು

ಆರ್.ವೆಂಕಟೇಶಕುಮಾರ್‌, ಜಿಲ್ಲಾಧಿಕಾರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry