ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಅಣಕಿಸಿದ ಸೆಂಟ್ರಲ್‌ ಮಾರ್ಕೆಟ್

Last Updated 6 ಜೂನ್ 2018, 7:09 IST
ಅಕ್ಷರ ಗಾತ್ರ

ಮಂಗಳೂರು: ಮಂಗಳವಾರ ವಿಶ್ವದೆಲ್ಲೆಡೆ ಪರಿಸರ ದಿನ ಆಚರಿಸಲಾಯಿತು. ಆದರೆ ನಗರದ ಸೆಂಟ್ರಲ್ ಮಾರ್ಕೆಟ್‌ ಬಳಿಯ ಸಣ್ಣ ಸಣ್ಣ ಗಲ್ಲಿಗಳು ಸ್ವಚ್ಛತಾ ಅಭಿಯಾನವನ್ನೇ ಅಣಕಿಸಿಬಿಟ್ಟವು.

ಎಲ್ಲೆಡೆ ಪರಿಸರ ಸಂರಕ್ಷಣೆಯ ಘೋಷಣೆ ಮೊಳಗುತ್ತಿರುವಾಗ ಸೆಂಟ್ರಲ್‌ ಮಾರುಕಟ್ಟೆ ಭಾಗದಲ್ಲಿ ಏನಾಗುತ್ತಿದೆ ನೋಡೋಣ ಎಂದು ‘ಪ್ರಜಾವಾಣಿ’ ಅಲ್ಲಿಗೆ ತೆರಳಿದಾಗ, ಇಲ್ಲಿನ ಪ್ರತಿ ಗಲ್ಲಿಯ ಲ್ಲಿಯೂ ಕಸ, ಕೊಳಚೆ ನೀರು ತುಂಬಿ ದುರ್ನಾತ ಬೀರುತ್ತಿರುವುದು ಕಾಣಿಸಿತು.

‘ಇಂದು ಕಾಂಕ್ರಿಟೀಕರಣ ಜಾಸ್ತಿಯಾಗಿದೆ. ಎಲ್ಲಿ ನೋಡಿದರೂ ಕಾಮಗಾರಿಗಳು ನಡೆಯುತ್ತಿರುತ್ತವೆ. ಪಾಲಿಕೆಯ ಸಿಬ್ಬಂದಿ ಬಂದು ರಸ್ತೆ ಸ್ವಚ್ಧ ಮಾಡಿ ಹೋಗುತ್ತಾರೆ. ಜನಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ. ಜನರಿಗೆ ಈ ಕುರಿತು ಶಿಕ್ಷಣ ನೀಡಬೇಕು. ಪಾಲಿಕೆಯವರು ಹೇಳುವ ಬುದ್ಧಿವಾದ ಜನರ ಕಿವಿಗೆ ಬೀಳುತ್ತಲೇ ಇಲ್ಲ’ ಎಂದು ಇಲ್ಲಿನ ಭಾರತ್ ಮೆಡಿಕಲ್ಸ್ ನ ಬಿ.ಆರ್. ಶೆಟ್ಟಿ ಹೇಳಿದರು.

ರಿಕ್ಷಾ ಸ್ಟಾಂಡ್ ಬಳಿಯ ಒಳ ರಸ್ತೆಯಲ್ಲಿರುವ ಅಂಗಡಿಗಳು ಕಸ ವಿಲೇವಾರಿ ತೊಂದರೆಯಿಂದ ಬಳಲುತ್ತಿವೆ. ಅಂಗಡಿಗಳ ಎದುರು ಗಡೆ ಇರುವ ಖಾಲಿ ಜಾಗದಲ್ಲಿ ಕೊಳೆತ ತರಕಾರಿ, ಪ್ಲಾಸ್ಟಿಕ್ ರಾಶಿ ಹಾಕಲಾ ಗುತ್ತಿದೆ. ಇಲ್ಲೇ ಕೊಳಚೆ ನೀರೂ ತುಂಬಿ ನಿಂತಿದೆ. ಮಳೆಯಿಂದಾಗಿ ಇಲ್ಲಿನ ಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ.

‘ಮಾರ್ಕೆಟ್‌ನ ಕಸವನ್ನೆಲ್ಲಾ ಇಲ್ಲಿ ತಂದು ಹಾಕುತ್ತಾರೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಕಸ ವಿಲೇವಾರಿ ಮಾಡಲು ಅನುಕೂಲವಿದೆ. ಆದರೂ ಇಲ್ಲಿಯೇ ಕಸ ಹಾಕುತ್ತಾರೆ. ಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಚರಂಡಿಯ ನೀರು ರಸ್ತೆಗಿಳಿದು ಬರುತ್ತದೆ. ನಾವೂ ಮಾಸ್ಕ್ ಹಾಕಿ ವ್ಯಾಪಾರ ಮಾಡಬೇಕಾಗಿದೆ. ಇಲ್ಲಿನ ಇಬ್ಬರಿಗೆ ಈಗಾಗಲೇ ಮಲೇರಿಯಾ ಸೊಂಕು ಹಿಡಿದಿದೆ. ಉಳಿದವರು ಅಲರ್ಜಿ, ಕೆಮ್ಮಿನಿಂದ ಬಳಲುತ್ತಿದ್ದಾರೆ’’ ಎಂದು ಸ್ಥಳೀಯ ವ್ಯಾಪಾರಿಗಳಾದ ದೇವಯಾನಿ ಹಾಗೂ ಅಬ್ದುಲ್ ಸಾದಿಕ್ ಹೇಳಿದರು.

ಮಾರುಕಟ್ಟೆ ಎಂದಿನಂತೆ ಗಿಜಿಗಿ ಡುತ್ತಿತ್ತು. ದೂರದಲ್ಲಿ ಪರಿಸರ ಸಂರಕ್ಷಣೆಯ ನೀತಿ ಪಾಠ ಹೇಳುವ ಫಲಕ ರಾರಾಜಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT