ಪೆಟ್ರೋಲಿಂಗ್‌ಗೆ 770 ಸಿಬ್ಬಂದಿ ನೇಮಕ

7
ಮುಂಗಾರು ಮಳೆ ಎದುರಿಸಲು ಸಜ್ಜಾದ ಕೊಂಕಣ ರೈಲ್ವೆ

ಪೆಟ್ರೋಲಿಂಗ್‌ಗೆ 770 ಸಿಬ್ಬಂದಿ ನೇಮಕ

Published:
Updated:

ಮಂಗಳೂರು: ಮುಂಗಾರು ಮಳೆ ಆರಂಭವಾಗುವ ಮುನ್ನವೇ ಕೊಂಕಣ ರೈಲ್ವೆ ಭರದ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ರೈಲು ಮಾರ್ಗದುದ್ದಕ್ಕೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ.

ಮಧ್ಯ ರೈಲ್ವೆಯ ಕೋಲಾಡ್‌ನಿಂದ ಕೊಂಕಣ್‌ ರೈಲ್ವೆ ತೋಕೂರುವರೆಗೆ ಈಗಾಗಲೇ ಎಲ್ಲ ಸಿದ್ಧತಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ರೈಲು ಮಾರ್ಗಗಳ ಮೇಲೆ ಹರಿಯುವ ಮಳೆ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಾರ್ಗದ ಇಕ್ಕೆಲಗಳಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರಗಳ ರೆಂಬೆಗಳನ್ನು ಕತ್ತರಿಸಲಾಗಿದೆ. ಇದರ ಜತೆಗೆ ರೈಲು ಮಾರ್ಗದಲ್ಲಿ ಉಂಟಾಗಿರಬಹುದಾದ ತೊಂದರೆಗಳನ್ನು ಸರಿಪಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

ಕಳೆದ 10–12 ವರ್ಷಗಳಿಂದ ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಲೇ ಬರಲಾಗಿದ್ದು, ಹಳಿಗಳ ಮೇಲೆ ಮಣ್ಣು ಕುಸಿತದಂತಹ ಘಟನೆಗಳು ಗಣನೀಯವಾಗಿ ಕಡಿಮೆಯಾಗಿವೆ. ಐದು ವರ್ಷಗಳಿಂದ ಮಣ್ಣು ಕುಸಿತದಿಂದ ಪ್ರಮುಖ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡ ಘಟನೆಗಳು ಸಂಭವಿಸಿಲ್ಲ.

ಪೆಟ್ರೋಲಿಂಗ್: ಮುಂಗಾರಿನ ಸಂದರ್ಭದಲ್ಲಿ ಕೊಂಕಣ ರೈಲ್ವೆಯ ಮಾರ್ಗದುದ್ದಕ್ಕೂ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಪೆಟ್ರೋಲಿಂಗ್‌ ಆರಂಭಿಸಲಾಗಿದೆ.

ಸುಮಾರು 770 ಜನರನ್ನು ಪೆಟ್ರೋಲಿಂಗ್‌ಗೆ ನಿಯೋಜಿಸಲಾಗಿದ್ದು, ಅಪಾಯಕಾರಿ ಸ್ಥಳದಲ್ಲಿ 24 ಗಂಟೆಗಳ ನಿಗಾ ವಹಿಸಲಾಗುತ್ತಿದೆ. ವಾಚ್‌ಮನ್‌ಗಳನ್ನು ನೇಮಿಸಲಾಗಿದ್ದು, ಮಣ್ಣು ಕುಸಿತದ ಘಟನೆಗಳು ಸಂಭವಿಸಿದಲ್ಲಿ ಕೂಡಲೇ ಪರಿಹಾರ ಕಾರ್ಯ ಕೈಗೊಳ್ಳಲು ಯಂತ್ರೋಪಕರಣಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ.

ಧಾರಾಕಾರ ಮಳೆ ಸುರಿಯುವ ಸಂದರ್ಭದಲ್ಲಿ ರೈಲುಗಳ ವೇಗ ಮಿತಿಯನ್ನು 40 ಕಿ.ಮೀ. ಕಾಯ್ದುಕೊಳ್ಳುವಂತೆ ರೈಲು ಚಾಲಕರಿಗೆ ಸೂಚನೆ ನೀಡಲಾಗಿದೆ. ಅಪಘಾತದ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಸೇವೆ ಒದಗಿಸಲು ಶಸ್ತ್ರಚಿಕಿತ್ಸಾ ಕೊಠಡಿಯ ಸೌಲಭ್ಯವನ್ನು ಹೊಂದಿರುವ ವಾಹನಗಳನ್ನು ರತ್ನಗಿರಿ ಹಾಗೂ ವೆರ್ನಾ ನಿಲ್ದಾಣಗಳಲ್ಲಿ ಸಜ್ಜುಗೊಳಿಸಲಾಗಿದೆ.

ಎಲ್ಲ ರೈಲು ಚಾಲಕರು, ಸ್ಟೇಷನ್‌ ಮಾಸ್ಟರ್‌ಗಳು, ಕ್ಷೇತ್ರ ಅಧಿಕಾರಿಗಳು ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳಿಗೆ ಮೊಬೈಲ್ ಫೋನ್‌ಗಳನ್ನು ಒದಗಿಸಲಾಗಿದೆ. ರೈಲು ಚಾಲಕರು ಹಾಗೂ ಗಾರ್ಡ್‌ಗಳಿಗೆ ವಾಕಿ ಟಾಕಿ ಒದಗಿಸಲಾಗಿದ್ದು, ಸಮರ್ಪಕ ಸಂವಹನಕ್ಕಾಗಿ ಕೊಂಕಣ ರೈಲ್ವೆಯ ಪ್ರತಿ ನಿಲ್ದಾಣದಲ್ಲಿ 25 ವ್ಯಾಟ್‌ನ ವಿಎಚ್‌ಎಫ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ರೈಲು ಚಾಲಕರು, ಸ್ಟೇಷನ್‌ ಮಾಸ್ಟರ್‌ಗಳ ಜತೆಗೆ ಸಂಪರ್ಕ ಸಾಧಿಸುವುದು ಸಾಧ್ಯವಾಗಲಿದೆ.

ತುರ್ತು ಸಂವಹನಾ ಸಾಕೆಟ್‌ಗಳನ್ನು ಸರಾಸರಿ 1 ಕಿ.ಮೀ. ಅಂತರದಲ್ಲಿ ಅಳವಡಿಸಲಾಗಿದ್ದು, ಪೆಟ್ರೋಲಿಂಗ್ ಸಿಬ್ಬಂದಿ, ವಾಚ್‌ಮನ್‌, ರೈಲು ಚಾಲಕರು, ಗಾರ್ಡ್‌ಗಳು ಹಾಗೂ ಇತರ ಅಧಿಕಾರಿಗಳು ಸುಲಭವಾಗಿ ರೈಲು ನಿಲ್ದಾಣಗಳನ್ನು ಸಂಪರ್ಕಿಸಬಹುದಾಗಿದೆ. ಸ್ಯಾಟ್‌ಲೈಟ್‌ ಫೋನ್‌ ಸೌಕರ್ಯವನ್ನು ವೈದ್ಯಕೀಯ ವಾಹನಕ್ಕೆ ಒದಗಿಸಲಾಗಿದೆ.

ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ 2,344 ಸಿಗ್ನಲ್‌ ಲೈಟ್‌ಗಳನ್ನು ಎಲ್‌ಇಡಿಗೆ ಪರಿವರ್ತಿಸಲಾಗಿದ್ದು, ಇದರಿಂದ ಸಿಗ್ನಲ್‌ಗಳು ಸ್ಪಷ್ಟವಾಗಿ ಗೋಚರಿಸಲು ಅನುಕೂಲವಾಗಲಿದೆ.

ಕಂಟ್ರೋಲ್‌ ರೂಂ ಸ್ಥಾಪನೆ

ಬೆಲಾಪುರ, ರತ್ನಗಿರಿ, ಮಡಗಾಂ ನಿಲ್ದಾಣಗಳಲ್ಲಿ 24 ಗಂಟೆಗಳ ಕಂಟ್ರೋಲ್‌ ರೂಂ ಸ್ಥಾಪಿಸಲಾಗಿದ್ದು, ರೈಲುಗಳ ಸುರಕ್ಷಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಪ್ರಯಾಣಿಕರು ವೆಬ್‌ಸೈಟ್‌ www.konkanrailway.com ಅಥವಾ 139 ಗೆ ಕರೆ ಮಾಡಿ, ರೈಲಿನ ವೇಳಾಪಟ್ಟಿಯಲ್ಲಿ ಖಚಿತಪಡಿಸಿಕೊಳ್ಳಬಹುದಾಗಿದೆ.

ಮುಂಗಾರಿನ ಕೊಂಕಣ ರೈಲ್ವೆ ವೇಳಾಪಟ್ಟಿಯನ್ನು ಇದೇ 10 ರಿಂದ ಅಕ್ಟೋಬರ್ 31ರವರೆಗೆ ಪರಿಷ್ಕರಿಸಲಾಗುತ್ತಿದೆ. ಈ ಮೊದಲೇ ಮುಂಗಡ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರು, ಪರಿಷ್ಕೃತ ವೇಳಾಪಟ್ಟಿಯನ್ನು ಪರಿಶೀಲಿಸಿ, ತಮ್ಮ ರೈಲಿನ ಸಮಯವನ್ನು ಖಚಿತಪಡಿಸಿಕೊಳ್ಳಬೇಕು. ಗೂಗಲ್‌ ಪ್ಲೇ ಸ್ಟೋರ್‌ನಿಂದ ಕೆಆರ್‌ಸಿಎಲ್‌ (KRCL) ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಕೊಂಕಣ ರೈಲ್ವೆಯ ಪ್ರಕಟಣೆಗಳನ್ನು ವೀಕ್ಷಿಸಬಹುದಾಗಿದೆ.

**

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೊಂಕಣ ರೈಲ್ವೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಮುಂಗಾರಿನಲ್ಲಿ ಜನರ ಪ್ರಯಾಣ ಸುಖಕರವಾಗಿ ಇರಲಿದೆ

- ಎಲ್‌.ಕೆ. ವರ್ಮಾ , ಕೊಂಕಣ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry