ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡೊ ಸಂತ್ರಸ್ತರ ಪರ ವಿಧಾನಸಭೆಯಲ್ಲಿ ಧ್ವನಿ

ಬೆಳ್ತಂಗಡಿ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ– ರಾಜಕೀಯಕ್ಕೆ ಬರಲು ಯುವಕರಿಗೆ ಆಹ್ವಾನ
Last Updated 6 ಜೂನ್ 2018, 7:19 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿರುವ ತಾಲ್ಲೂಕು ಬೆಳ್ತಂಗಡಿ. 81 ಗ್ರಾಮಗಳನ್ನು ಒಳಗೊಂಡ ಈ ತಾಲ್ಲೂಕಿನಲ್ಲಿ ನೂರಾರು ಸವಾಲುಗಳಿವೆ. 5 ಬಾರಿ ಶಾಸಕರಾಗಿದ್ದ ಕೆ. ವಸಂತ ಬಂಗೇರ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್‌ ಪೂಂಜ ಅವರು ಚೊಚ್ಚಲ ಸ್ಪರ್ಧೆಯಲ್ಲಿಯೇ ಮಣಿಸಿ, ಕ್ಷೇತ್ರದಲ್ಲಿ 5ನೇ ಬಾರಿ ‘ಕಮಲ’ ಅರಳುವಂತೆ ಮಾಡಿದ್ದಾರೆ. ಜಿಲ್ಲೆಯಲ್ಲಿಯೇ ಅತ್ಯಂತ ಕಿರಿಯ ಶಾಸಕನಾಗಿರುವ 36ರ ಹರೆಯದ ಹರೀಶ್‌ ಪೂಂಜ ಅವರ ಕನಸಿನ ‘ನವ ಬೆಳ್ತಂಗಡಿ’ಯ ಕುರಿತು ಮಾತುಕತೆ ಇಲ್ಲಿದೆ.

* ನಿಮ್ಮ ಗೆಲುವು ಯಾರಿಗೆ ಅರ್ಪಣೆ?

ಯಾವುದೇ ಫಲಾಪೇಕ್ಷೆಯಿಲ್ಲದೆ, ವಿಶ್ರಾಂತಿಯಿಲ್ಲದೆ ಹಗಲಿರುಳು ಶ್ರಮಿಸಿದ ಬಿಜೆಪಿಯ ಹಿರಿಯ, ಕಿರಿಯ ಕಾರ್ಯಕರ್ತರಿಗೆ ಈ ಗೆಲುವನ್ನು ಅರ್ಪಿಸುತ್ತೇನೆ. ಶಿಸ್ತಿನ ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು. ನಾನು ಕೂಡ ಪಕ್ಷದ ಸಾಮಾನ್ಯ ಕಾರ್ಯಕರ್ತ. ನನ್ನಂಥವನಿಗೆ ಇಂತಹ ಸುವರ್ಣಾವಕಾಶ ಮತ್ತು ಜವಾಬ್ದಾರಿ ಬಿಜೆಪಿಯಲ್ಲಿ ಮಾತ್ರ ಸಿಗಲು ಸಾಧ್ಯ.

* ನಿಮ್ಮ ಗೆಲುವಿಗೆ ಪೂರಕವಾದ ಅಂಶಗಳು ಯಾವುದು?

ನಾನು ಸ್ವಯಂಸೇವಕ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ ಬಾಲ್ಯದಿಂದಲೇ ತೊಡಗಿಸಿಕೊಂಡಿದ್ದೆ. ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿ ಕೆಲಸ ಮಾಡುವ ಅವಕಾಶ ದೊರಕಿತು. ಆ ಮೂಲಕ ಪಕ್ಷವನ್ನು ಸಂಘಟಿಸಲು ಸಕ್ರಿಯವಾಗಿ ತೊಡಗಿಸಿಕೊಂಡೆ. ಅದರ ಜತೆಜತೆಯಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜಯ ಗಳಿಸುವ ಯೋಜನೆಯನ್ನು ರೂಪಿಸಿದ್ದರು. ಅದರ ಪ್ರಕಾರ ಕ್ಷೇತ್ರದ ಪ್ರತಿ ಬೂತಿನಲ್ಲಿ ಶೇ 70ರಿಂದ 80ರಷ್ಟು ಮತದಾರರನ್ನು ಬಿಜೆಪಿಯತ್ತ ಆಕರ್ಷಿಸುವುದು ಮತ್ತು ಈ ನಿಟ್ಟಿನಲ್ಲಿ ಕಾರ್ಯಕರ್ತರನ್ನು ತಯಾರಿ ಮಾಡುವುದು ಗುರಿಯಾಗಿತ್ತು. ನಾವೆಲ್ಲರೂ ಸಂಘಟನಾತ್ಮಕವಾಗಿ ಈ ಪ್ರಯತ್ನ ಮಾಡಿದೆವು. ಹೀಗಾಗಿ, ಚುನಾವಣೆ ಘೋಷಣೆಗೂ ಮುನ್ನವೇ ಪ್ರತಿ ಬೂತ್‌ಗಳಲ್ಲಿ ಬಿಜೆಪಿ ಸದೃಢವಾಯಿತು.

* ಈಗ ನಿಮ್ಮ ಮುಂದಿರುವ ಸವಾಲುಗಳೇನು?

ಸರ್ಕಾರಿ ವ್ಯವಸ್ಥೆಯೊಳಗೆ ಇದೇ ಮೊದಲ ಬಾರಿ ಪ್ರವೇಶ ಮಾಡಿರುವುದರಿಂದ ಕೆಲವೊಂದನ್ನು ನಾನು ಇನ್ನಷ್ಟೇ ತಿಳಿಯಬೇಕಿದೆ. ಎಲ್ಲ ರೀತಿಯ ಕೆಲಸ ಕಾರ್ಯಗಳನ್ನು ಮಾಡಲು ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಅದನ್ನೆಲ್ಲ ಶೀಘ್ರದಲ್ಲಿ ಪರಿಣಾಮಕಾರಿಯಾಗಿ ಕಲಿತು, ಜನಸೇವೆಗೆ ಬದ್ಧನಿದ್ದೇನೆ. ಅಗತ್ಯ ಬಿದ್ದರೆ ಮಾಜಿ ಶಾಸಕರುಗಳಿಂದ ಸಲಹೆ ಪಡೆಯುತ್ತೇನೆ. ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ನನ್ನ ಗುರಿ.

* ಅಭಿವೃದ್ಧಿಯಲ್ಲಿ ಯಾವುದಕ್ಕೆ ನಿಮ್ಮ ಮೊದಲ ಆದ್ಯತೆ?

ನೀರು, ರಸ್ತೆ, ವಿದ್ಯುತ್‌, ವಸತಿ, ಶಿಕ್ಷಣ, ಆರೋಗ್ಯ ಮುಂತಾದ ಮೂಲಸೌಕರ್ಯಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಇತರೆಡೆಗೆ ಹೋಲಿಸಿದರೆ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಕಡಿಮೆ. ಆದರೂ ಎಲ್ಲರಿಗೂ ಶುದ್ಧ ನೀರು ಸಿಗುವಂತಾಗಬೇಕು. ತಾಲ್ಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಹಂತಹಂತವಾಗಿ ಅವುಗಳ ಅಭಿವೃದ್ಧಿಗೆ ಯೋಜನೆ ರೂಪಿಸುತ್ತೇನೆ. ವಿವಿಧ ಇಲಾಖಾ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಅವುಗಳ ಭರ್ತಿಗೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು.

* ನವ ಬೆಳ್ತಂಗಡಿ ನಿರ್ಮಾಣಕ್ಕೆ ನಿಮ್ಮ ಕಲ್ಪನೆಯೇನು?

ಅಭಿವೃದ್ಧಿಯ ಪರವಾದ ಮತದಾನದಿಂದ ನಾನು ಗೆಲುವು ಸಾಧಿಸಿದ್ದೇನೆ. ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಯೇ ನನ್ನ ಮುಂದಿನ ಗುರಿ.

* ಮೈತ್ರಿ ಸರ್ಕಾರದಿಂದ ತಾಲ್ಲೂಕಿನ ಅಭಿವೃದ್ಧಿಗೆ ಹಿನ್ನಡೆಯಾಗಲಿದೆಯೇ?

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದರೆ ತಾಲ್ಲೂಕಿಗೆ ಹೆಚ್ಚಿನ ಅನುದಾನ ತರಲು ಸಾಧ್ಯವಾಗುತ್ತಿತ್ತು. ಆದರೂ, ಪ್ರತಿಪಕ್ಷದ ಸ್ಥಾನದಲ್ಲಿದ್ದು, ನಮ್ಮ ಹಕ್ಕಿನ ಅನುದಾನವನ್ನು ಖಂಡಿತ ತರಲು ಪ್ರಯತ್ನಿಸುತ್ತೇನೆ.

* ಎಂಡೋಸಲ್ಫಾನ್‌ ಸಂತ್ರಸ್ಥರಿಗೆ ಇನ್ನಾದರೂ ನ್ಯಾಯ ಸಿಗಬಹುದೇ?

ಎಂಡೋಸಲ್ಫಾನ್ ಕಾರಣದಿಂದ ತಾಲ್ಲೂಕಿನಲ್ಲಿ ಒಂದಷ್ಟು ಜನರು ನೋವನ್ನು ಅನುಭವಿಸಿದ್ದಾರೆ. ಈಗಾಗಲೇ ನೋವು ನಿವಾರಿಸಲು ಪ್ರಯತ್ನಿಸಿದ್ದೇನೆ. ಹೀಗಾಗಿ, ಅವರು ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದ್ದಾರೆ. ಅದನ್ನು ಎಂದಿಗೂ ಮರೆಯುವುದಿಲ್ಲ. ಎಂಡೊ ಸಂತ್ರಸ್ತರ ಪರ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇನೆ. ಕೇರಳ ಮಾದರಿಯಲ್ಲಿ ಅವರಿಗೆ ಶಾಶ್ವತ ಪರಿಹಾರ ದೊರೆಯುವಂತೆ ಪ್ರಯತ್ನಿಸುತ್ತೇನೆ.

* ರಾಜಕೀಯಕ್ಕೆ ಬರುವ ಯುವಕರಿಗೆ ಸಲಹೆ?

ರಾಜಕೀಯ ಎಂಬುದು ಸುಂದರವಾದ ಮತ್ತು ಉತ್ತಮ ಕ್ಷೇತ್ರ. ಅದಕ್ಕೆ ಹೋಗುವ ಮುನ್ನ ನಾವು ಸ್ವಚ್ಛ ಇರಬೇಕು. ನಮಗೆ ಜನ ಸೇವೆ ಮಾಡುವ ಆಸಕ್ತಿ, ಶ್ರದ್ಧೆ, ವಿಶ್ವಾಸ, ಗುರಿ, ಸಂಕಲ್ಪ ಇರಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ಜನರೊಂದಿಗೆ ಇರುತ್ತೇನೆ ಎಂಬ ಮಾನಸಿಕತೆ ಇದ್ದರೆ ಖಂಡಿತವಾಗಿ ರಾಜಕೀಯಕ್ಕೆ ಯುವಕರು ಬನ್ನಿ. ರಾಜಕೀಯಕ್ಕೂ ಯುವಕರು ಬೇಕಾದ ಕಾಲಘಟ್ಟ ಇದು. ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವ ಜತೆಗೆ ಜನಸೇವೆಗೆ ಉತ್ತಮ ಅವಕಾಶ ಇಲ್ಲಿದೆ. ಸಮಾಜದಲ್ಲಿ ಅನೇಕ ರೀತಿಯ ಬದಲಾವಣೆಯನ್ನು ತರಲು ರಾಜಕೀಯ ಕ್ಷೇತ್ರಕ್ಕೆ ಯುವಕರ ಪ್ರವೇಶ ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT