ರೈಲು ಬಿಡಬೇಡಿ: ಉದ್ಯೋಗ ಕೊಡಿಸಿ

7
ಸಂಸದ ಪ್ರತಾಪಸಿಂಹ ಅವರಿಗೆ ಯುವಕರ ತರಾಟೆ

ರೈಲು ಬಿಡಬೇಡಿ: ಉದ್ಯೋಗ ಕೊಡಿಸಿ

Published:
Updated:
ರೈಲು ಬಿಡಬೇಡಿ: ಉದ್ಯೋಗ ಕೊಡಿಸಿ

ಮೈಸೂರು: ‘ರೈಲು ಬಿಡುವುದು‌ ಬೇಡ. ಇನ್ನಾದರೂ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸಿ’ ಎಂದು ಯುವಕರ ಗುಂಪೊಂದು ಇಲ್ಲಿ ಮಂಗಳವಾರ ನಡೆದ ಬಿಜೆಪಿಯ ಕೆ.ಆರ್.ಕ್ಷೇತ್ರದ ಕೃತಜ್ಞತಾ ಸಮಾವೇಶದಲ್ಲಿ ಸಂಸದ ಪ್ರತಾಪಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡಿತು.

ಮೊದಲಿಗೆ ಮಾತನಾಡಿದ ಪ್ರತಾಪಸಿಂಹ, ‘ಮೈಸೂರು–ಕುಶಾಲನಗರ ರೈಲು ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ಜಾಗ ಕೊಡಲಿಲ್ಲ. ಮುಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಮೊದಲು ಈ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು’ ಎಂದು ಹೇಳುತ್ತಿದ್ದಂತೆ ಕೆಲವು ಯುವಕರು ಘೋಷಣೆಗಳನ್ನು ಕೂಗತೊಡಗಿದರು.

‘ಕುಶಾಲನಗರ ಯೋಜನೆ ಎಂದು ರೈಲು ಬಿಡುವುದು ಬೇಡ. ರೈಲ್ವೆ ಇಲಾಖೆಯಲ್ಲಿ ಮಹಾರಾಷ್ಟ್ರದಲ್ಲಿ ಅಪ್ರೆಂಟೀಸ್ ಮಾಡಿದವರಿಗೆ ಉದ್ಯೋಗ ನೀಡಲಾಗುತ್ತಿದೆ. ಈ ರೀತಿ ಕನ್ನಡಿಗರಿಗೂ ಉದ್ಯೋಗ ಕೊಡಿಸಬೇಕು. ಇದರಿಂದ ರಾಜ್ಯದ 2,500 ಜನರಿಗೆ ಉದ್ಯೋಗ ಲಭಿಸುತ್ತದೆ’ ಎಂದು ಕೂಗುತ್ತಾ ಯುವಕರು ವೇದಿಕೆಯ ಮುಂಭಾಗಕ್ಕೆ ಧಾವಿಸಿದರು.

‘ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದಾಗಲೂ ಇದೇ ವಿಷಯ ಪ್ರಸ್ತಾಪಿಸಲಾಗಿತ್ತು. ಏನೂ ಪ್ರಯೋಜನವಾಗಿಲ್ಲ’

ಎಂದು ಯುವಕರು ಕಿಡಿಕಾರಿದರು. ಈ ವೇಳೆ ವೇದಿಕೆ ಹತ್ತಲು ಯತ್ನಿಸಿದ ಯುವಕರನ್ನು ಕಾರ್ಯಕರ್ತರು ತಡೆದರು.

ನಂತರ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶೀಘ್ರವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಯುವಕರ ಗುಂಪು ಶಾಂತವಾಯಿತು.

ಎಚ್‌ಡಿಕೆ ವಿರುದ್ಧ ಬಿಎಸ್‌ವೈ ಚಾಟಿ

ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ರಾಜ್ಯದ ಜನತೆಗೆ ಅಪಮಾನ ಮಾಡಿದ್ದಾರೆ ಎಂದು ಯಡಿಯೂರಪ್ಪ ಚಾಟಿ ಬೀಸಿದರು.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಅವರು ₹ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಮತ್ತೆ ಸಣ್ಣ ಮತ್ತು ಅತಿ ಸಣ್ಣ ರೈತರ ಸಾಲ ಮಾಡುತ್ತೇನೆ ಎಂದು ಬೂಟಾಟಿಕೆ ಹೇಳಿಕೆಗಳನ್ನು ಕುಮಾರಸ್ವಾಮಿ ನೀಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಳೆದ ಮೂರು ತಿಂಗಳಿನಿಂದ ಅಭಿವೃದ್ಧಿ ಸ್ಥಗಿತವಾಗಿದೆ. ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಇನ್ನೂ ನಡೆದಿಲ್ಲ. ಇದಕ್ಕಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ರಾಜ್ಯದ ಜನತೆ ಈ ದೊಂಬರಾಟ ನೋಡುವಂತಾಗಿದೆ ಎಂದು ವ್ಯಂಗ್ಯವಾಡಿದರು.

‘ಇನ್ನು 15 ದಿನಗಳ ಕಾಲ ಸುಮ್ಮನಿರುತ್ತೇನೆ. ಸರ್ಕಾರದ ನಡೆ ನೋಡಿ ಮುಂದಿನ ಹೋರಾಟದ ರೂಪರೇಷೆಗಳನ್ನು ನಿರ್ಧರಿಸಲಾಗುವುದು. ಕಾಂಗ್ರೆಸ್‌ನ ಆಶ್ರಯದಲ್ಲಿರುವ ಜೆಡಿಎಸ್ ಸರ್ಕಾರ ಕುರಿತು ಜಾಗ್ರತೆಯಿಂದಿರಬೇಕು’ ಎಂದರು.

ಕೆ.ಆರ್.ವಿಧಾನಸಭಾ ಕ್ಷೇತ್ರದಲ್ಲಿ ಅಧಿಕ ಮತಗಳನ್ನು ಬಿಜೆಪಿಗೆ ನೀಡುವಲ್ಲಿ ಯಶಸ್ಸು ಕಂಡ ಬೂತ್‌ಮಟ್ಟದ ಪಕ್ಷದ ಕಾರ್ಯಕರ್ತರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ನಂಜುಂಡಸ್ವಾಮಿ, ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಬಿ.ವಿ.ಮಂಜುನಾಥ್, ಮಹದೇವಮ್ಮ, ಮುಖಂಡರಾದ ರಾಜೇಂದ್ರ, ತೋಂಟದಾರ್ಯ, ನಿರಂಜನಮೂರ್ತಿ, ಎಚ್.ಆರ್.ಸುರೇಶ್‌ಬಾಬು, ರಮೇಶ್ ಹಾಜರಿದ್ದರು.

**

​ಮೂರೂವರೆ ಸಾವಿರಕ್ಕೂ ಅಧಿಕ ಮನೆಗಳನ್ನು ವಸತಿರಹಿತರಿಗೆ ನೀಡಲಾಗಿದೆ. ಇನ್ನು 24 ತಿಂಗಳಲ್ಲಿ ಬೆಂಗಳೂರು – ಮೈಸೂರು ಅಷ್ಟಪಥ ಹೆದ್ದಾರಿ ನಿರ್ಮಾಣವಾಗಲಿದೆ

- ಪ್ರತಾಪಸಿಂಹ, ಸಂಸದ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry