ತಕ್ಷಣ ಪರಿಹಾರ ಒದಗಿಸಿ; ಚಕ್ರವರ್ತಿ ಮೋಹನ್

7
ಮಳೆ ಹಾನಿಯ ಬಗ್ಗೆ ಎರಡು ದಿನಗಳ ಒಳಗೆ ಸಮಗ್ರ ವರದಿ ಸಲ್ಲಿಸಲು ಸೂಚನೆ

ತಕ್ಷಣ ಪರಿಹಾರ ಒದಗಿಸಿ; ಚಕ್ರವರ್ತಿ ಮೋಹನ್

Published:
Updated:

ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯಿಂದಾಗಿ ಪ್ರಾಣ ಹಾನಿ ತಪ್ಪಿಸಲು ಎಲ್ಲಾ ಮುಂಜಾಗ್ರತಾ ಕ್ರಮ ಹಾಗೂ ಹಾನಿ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ನೀಡಬೇಕು ಎಂದು ಜಿಲ್ಲಾ ನೋಡಲ್ ಕಾರ್ಯದರ್ಶಿ ಚಕ್ರವರ್ತಿ ಮೋಹನ್  ಅಧಿಕಾರಿಗಳಿಗೆ ಸೂಚಿಸಿದರು.                     

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮಳೆ ಹಾನಿ ಪರಿಶೀಲನೆ ಹಾಗೂ ವಿವಿಧ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನಗರ ಪ್ರದೇಶಗಳಲ್ಲಿ ಮಳೆ ನೀರು ತುಂಬಿ ಕೃತಕ ನೆರೆ ಉಂಟಾಗುವ ಪ್ರದೇಶಗಳನ್ನು ಗುರುತಿಸಿ ಅಂತಹ ಕಡೆಗಳಲ್ಲಿ  ಚರಂಡಿ ಸ್ವಚ್ಛತಾ ಕಾರ್ಯ ಆಗದಿದ್ದರೆ ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಯಾವುದೇ ತುರ್ತು ಪರಿಸ್ಥಿತಿಯನ್ನು ತಕ್ಷಣ ಎದುರಿಸಲು ಸಿಬ್ಬಂದಿ ಹಾಗೂ ಅಗತ್ಯ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಬೇಕು. ಮೇಲಧಿಕಾರಿಗಳ ಅಪ್ಪಣೆ ಇಲ್ಲದೆ ಯಾರೂ ಕೇಂದ್ರ ಸ್ಥಾನವನ್ನು ಬಿಡಬಾರದು ಎಂದು ಸೂಚಿಸಿದರು.

ಮುರಿದು ಬಿದ್ದ ವಿದ್ಯುತ್‌ಲೈನ್‌ನಿಂದ ವಿದ್ಯುತ್ ಹರಿದು ಸಾವಿಗೀಡಾಗುವ ಪ್ರಕರಣ ನಡೆಯಲೇಬಾರದು. ಅಂತಹ ನಿರ್ಲಕ್ಷ್ಯದಿಂದ ಪ್ರಾಣ ಹಾನಿ ಉಂಟಾಗುವ ಪ್ರಕರಣಗಳಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಳೆಯಿಂದ ಮರ, ವಿದ್ಯುತ್ ಕಂಬಗಳು ಬಿದ್ದ ತಕ್ಷಣ ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಳೆಗಾಲದ ಸಂದರ್ಭದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಔಷಧಿಗಳು ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದರು.

ಮಳೆ ಹಾನಿ ವರದಿ ಸಲ್ಲಿಸಿ: ಈಚೆಗೆ ಸಿಡಿಲು ಮಳೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 8 ಜಾನುವಾರು ಸಾವಿಗೀಡಾಗಿವೆ. ಹಲವು ತಾಲ್ಲೂಕುಗಳಲ್ಲಿ ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದ್ದು, ಸೊರಬದಲ್ಲಿ 104, ಭದ್ರಾವತಿ 41, ಸಾಗರದಲ್ಲಿ 14 ಮತ್ತು ಶಿಕಾರಿಪುರದಲ್ಲಿ 3ಮನೆಗಳಿಗೆ ಹಾನಿ ಉಂಟಾಗಿದೆ. ಮನೆ ಹಾನಿ ಪ್ರಕರಣಗಳಲ್ಲಿ ಎರಡು ದಿನಗಳ ಒಳಗಾಗಿ ಪರಿಹಾರವನ್ನು ಒದಗಿಸಬೇಕು. ಮಳೆಯಿಂದ ನಷ್ಟ ಸಂಭವಿಸಿದ ಸ್ಥಳಕ್ಕೆ ತಹಶೀಲ್ದಾರ್ ತಕ್ಷಣ ಭೇಟಿ ನೀಡಿ ಪರಿಹಾರದ ವ್ಯವಸ್ಥೆಯನ್ನು ಕಲ್ಪಿಸಬೇಕು. ಜಿಲ್ಲೆಯಲ್ಲಿ ಮಳೆಯಿಂದ ಈವರೆಗೆ ಉಂಟಾಗಿರುವ ಹಾನಿಯ ಬಗ್ಗೆ ಎರಡು ದಿನಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಬಿತ್ತನೆ ಬೀಜ ಕೊರತೆ ಇಲ್ಲ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿರುವುದರಿಂದ ಬಿತ್ತನೆ ಕಾರ್ಯ ಈಗಾಗಲೇ ಆರಂಭವಾಗಿದೆ. 1,02,593 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ 1,700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ. ಬಿತ್ತನೆ ಬೀಜ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದ್ದು, ಎಪಿಎಂಸಿ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ಅವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎಂ.ಲೋಕೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry