ಕೆರೆಗಳ ಸಂರಕ್ಷಣೆಗೆ ವಿವಿಧ ಸಂಘಟನೆಗಳ ಆಗ್ರಹ

7

ಕೆರೆಗಳ ಸಂರಕ್ಷಣೆಗೆ ವಿವಿಧ ಸಂಘಟನೆಗಳ ಆಗ್ರಹ

Published:
Updated:

ಶಿವಮೊಗ್ಗ: ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಆಗ್ರಹಿಸಿ ವಿವಿಧ ಪರಿಸರ ಆಸಕ್ತ ಸಂಘಟನೆಗಳ ಸದಸ್ಯರು ನಗರದ ಶಿವಪ್ಪನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ಪ್ರತಿಭಟನಾ ಜಾಥಾ ನಡೆಸಿದರು.

ನಾಗರಿಕ ಹಿತರಕ್ಷಣಾ ವೇದಿಕೆ, ಅಣ್ಣಾ ಹಜಾರೆ ಹೋರಾಟ ಸಮಿತಿ, ಶಿವಮೊಗ್ಗ ರೋಟರಿ ಕ್ಲಬ್‌ಗಳು, ಜೆ.ಸಿ ಸಂಸ್ಥೆಗಳು, ಉತ್ತಿಷ್ಟ ಭಾರತ, ಪರೋಪಕಾರಂ, ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ ಸೇರಿ ಹಲವು ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ ಇರುವ ಕೆರೆಗಳನ್ನು ಸಂರಕ್ಷಿಸುವುದರ ಜತೆಗೆ ಅವುಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದವು.

ಶಿವಮೊಗ್ಗ ಕೆರೆಗಳ ಬಗ್ಗೆ ತಿಂಗಳ ಒಳಗೆ ಶ್ವೇತಪತ್ರ ಹೊರಡಿಸಬೇಕು. ನಗರದ ಸುತ್ತಮುತ್ತಲಿರುವ ಎಲ್ಲ ಕೆರೆಗಳ ಮಾಹಿತಿ, ಒತ್ತುವರಿ, ಒತ್ತುವರಿ ಮಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿರುವ ಬಗ್ಗೆ, ರಾಷ್ಟ್ರೀಯ ಹಸಿರು ಪೀಠ ಆದೇಶ ಅನುಷ್ಠಾನಕ್ಕೆ ತೆಗೆದುಕೊಂಡ ಕ್ರಮ, ಕೆರೆಗಳ ಅಭಿವೃದ್ಧಿಗೆ ಇಲ್ಲಿಯವರೆಗೂ ತೆಗೆದುಕೊಂಡ ಕ್ರಮ ಹಾಗೂ ಸಮಿತಿ ನಡೆಸಿರುವ ಸಭೆ ಮುಂತಾದ ವಿಷಯಗಳ ಕುರಿತು ಸಮಗ್ರ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.

ಅಲ್ಲದೇ ನವುಲೆ ಕೆರೆ, ಪುರಲೆ ಕೆರೆ, ಚೆನ್ನಾಂಬಪುರ ಕೆರೆ ಸೇರಿದಂತೆ ಸುತ್ತಮುತ್ತಲಿನ ಕೆರೆಗಳ ಸರ್ವೆ ಕಾರ್ಯ ನಡೆಸಿ ಗಡಿ ಗುರುತಿಸಬೇಕು. ಒತ್ತುವರಿ ತೆರವುಗೊಳಿಸಬೇಕು. ನವುಲೆ ಕೆರೆ ಹೂಳನ್ನು ತೆಗೆದು ಸ್ವಚ್ಛಗೊಳಿಸಬೇಕು, ಕೆರೆಯ ತೂಬನ್ನು ಮುಚ್ಚಿಸಿ ನೀರು ನಿಲ್ಲಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ನಗರ ಪ್ರದೇಶದಲ್ಲಿರುವ ಎಲ್ಲ ಕೆರೆಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ದಂಡೆ ನಿರ್ಮಿಸಿ, ದಡದಲ್ಲಿ ವಾಕಿಂಗ್ ಪಾಥ್‌ ನಿರ್ಮಿಸಿ ಸುತ್ತಲೂ ಗಿಡ ಬೆಳೆಸಬೇಕು ಎಂದು ಮನವಿ ಮಾಡಿದರು.

ವಿಶ್ರಾಂತಿಗಾಗಿ ಆಸನಗಳ ವ್ಯವಸ್ಥೆ ಕಲ್ಪಿಸಬೇಕು, ಕೆರೆ ಒತ್ತುವರಿ ಮಾಡಿದವರ ವಿರುದ್ಧ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಅಧಿನಿಯಮ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದರು.

ರಾಷ್ಟ್ರೀಯ ಹಸಿರು ಪೀಠದ ಆದೇಶದಂತೆ ಕೆರೆಗಳ ಸುತ್ತು 75 ಮೀಟರ್ ಬಫರ್ ಜೋನ್ ಗುರುತಿಸಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ಸೋಮಿನಕೊಪ್ಪದ ಒಂದೇ ಕೆರೆ ಅಭಿವೃದ್ಧಿಗಾಗಿ ₹10 ಕೋಟಿ ವಿನಿಯೋಗಿಸದೇ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸುತ್ತಮುತ್ತಲಿನ ಹಲವು ಕೆರೆಗಳ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಕೆ.ವಿ.ವಸಂತ್ ಕುಮಾರ್, ಧರಣೇಂದ್ರ ದಿನಕರ್, ಪದ್ಮನಾಭ್‌, ಕೆ.ಜಿ.ವೆಂಕಟೇಶ್‌, ಎಸ್.ಬಿ.ಅಶೋಕ್ ಕುಮಾರ್, ಜನಾರ್ಧನ ಪೈ, ಪರಿಸರ ನಾಗರಾಜ್, ಬಾಲಸುಬ್ರಮಣ್ಯ, ಚಂದ್ರಯ್ಯ, ನಾಗಭೂಷಣ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry