ಸಂಪನ್ಮೂಲಗಳ ಬಳಕೆ ಇತಿಮಿತಿಯಲ್ಲಿ ಇರಲಿ

7
ಪರಿಸರ ದಿನಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಲಹೆ

ಸಂಪನ್ಮೂಲಗಳ ಬಳಕೆ ಇತಿಮಿತಿಯಲ್ಲಿ ಇರಲಿ

Published:
Updated:

ಉಡುಪಿ: ಪರಿಸರದ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯದಿದ್ದರೆ ಭವಿಷ್ಯದಲ್ಲಿ ಕೆಟ್ಟ ದಿನಗಳನ್ನು ನೋಡಬೇಕಾಗುತ್ತದೆ. ಸಂಪನ್ಮೂಲಗಳ ಬಳಕೆ ಇತಿಮಿತಿಯಲ್ಲಿ ಇರಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಕಿವಿಮಾತು ಹೇಳಿದರು.

ಅರಣ್ಯ ಇಲಾಖೆ ಹಾಗೂ ನಗರಸಭೆ ಸಹಭಾಗಿತ್ವದಲ್ಲಿ ಮಂಗಳವಾರ ಮಣಿಪಾಲದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅತಿಯಾದ ಕೈಗಾರೀಕರಣ, ಮಿತಿಮೀರಿದ ಸಂಪನ್ಮೂಲಗಳ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಇದನ್ನು ತಡೆಯಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದರು. ಪ್ಲಾಸ್ಟಿಕ್‌ ಬಳಕೆ ಬಗ್ಗೆ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಅನುಷ್ಠಾನವಾಗುತ್ತಿಲ್ಲ. ‘ಅವಶ್ಯಕತೆ ಇದ್ದಷ್ಟು ಬಳಸು, ಮುಂದಿನ ಸಂತತಿಗೆ ಉಳಿಸು’ ಎಂಬ ಗಾಂಧೀಜಿ ತತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.

ಪ್ರಾಕೃತಿಕ ಸಂಪನ್ಮೂಲಗಳ ಬಳಕೆ ವಿಚಾರದಲ್ಲಿ ಇಸ್ರೇಲ್‌ ಜಗತ್ತಿಗೆ ಮಾದರಿ. ನೈಸರ್ಗಿಕವಾಗಿ ಸಿಗುವ ಅಲ್ಪ ಸಂಪನ್ಮೂಲವನ್ನೂ ವ್ಯರ್ಥಮಾಡದೆ ಮರುಬಳಕೆ ಮಾಡುವ ಮೂಲಕ ಪರಿಸರ ಕಾಳಜಿ ಮೆರೆಯುತ್ತಿದೆ. ಪರಿಸರ ಕಾಳಜಿ ನಮ್ಮ ಮನಸ್ಸಿನಿಂದಲೇ ಮೊದಲು ಆರಂಭವಾಗಬೇಕು ಎಂದರು.

ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಮಾತನಾಡಿ, ‘ಸೈನಿಕರು ದೇಶದ ಗಡಿ ಕಾಯುತ್ತಿದ್ದರೆ, ಅರಣ್ಯ ಅಧಿಕಾರಿಗಳು ದೇಶದ ಪ್ರಾಕೃತಿಕ ಸಂಪತ್ತನ್ನು ಕಾಯುತ್ತಾರೆ. ದೇಶದ ಒಟ್ಟು ಭೂಭಾಗದ ಶೇ 33ರಷ್ಟು ಅರಣ್ಯ ಇದ್ದರೆ ಮಾತ್ರ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ’ ಎಂದರು.

ರಾಜ್ಯದಲ್ಲಿ 1.91 ಲಕ್ಷ ಹೆಕ್ಟೇರ್ ಭೂಭಾಗವಿದ್ದು, 43 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇದರ ವ್ಯಾಪ್ತಿ ಹೆಚ್ಚಾಗಬೇಕು. ಪ್ರತಿಯೊಬ್ಬರೂ ಸ್ವಪ್ರೇರಣೆಯಿಂದ ಮನೆ ಮುಂದೆ ಅಥವಾ ರಸ್ತೆಬದಿಗಳಲ್ಲಿ ಗಿಡಗಳನ್ನು ನೆಡಬೇಕು ಎಂದು ಕಿವಿಮಾತು ಹೇಳಿದರು.

ಈ ವರ್ಷ ಭಾರತವು ಆತಿಥೇಯ ರಾಷ್ಟ್ರವಾಗಿ ಪರಿಸರ ದಿನಾಚರಣೆ ಆಚರಿಸುತ್ತಿದೆ. ಈ ವರ್ಷದ ‘ಬೀಟ್ ಪ್ಲಾಸ್ಟಿಕ್‌ ಪೊಲ್ಯುಷನ್‌’ ಘೋಷವಾಕ್ಯದಡಿ ದೇಶದೆಲ್ಲೆಡೆ ಪರಿಸರ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ಜಿಲ್ಲೆಯಲ್ಲಿ ಅರಣ್ಯ ಇಲಾಖೆ 8.20 ಲಕ್ಷ ಸಸಿಗಳನ್ನು ಬೆಳೆಸಿದ್ದು, ಒಂದೂವರೆ ಲಕ್ಷ ಸಸಿಗಳನ್ನು ಸಾರ್ವಜನಿಕರಿಗೆ ಸಸಿಯೊಂದಕ್ಕೆ ₹1ರಂತೆ ವಿತರಿಸಿದೆ. ಗಿಡಗಳನ್ನು ಬೆಳೆಸುವಂತೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ರೋಹಿಣಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್‌ ಪ್ರಸಾದ್ ಪಾಂಡೇಲ್‌, ಕಾರ್ಯದರ್ಶಿ ಸಂತೋಷ್‌ ಸರಳೆಬೆಟ್ಟು, ಕೋಶಾಧಿಕಾರಿ ದಿವಾಕರ ಹಿರಿಯಡ್ಕ, ಜಂಟಿ ಕಾರ್ಯದರ್ಶಿ ಮೈಕಲ್ ರಾಡ್ರಿಗಸ್‌ ಇದ್ದರು.

ಕಿರಣ್ ಮಂಜನಬೈಲು ಸ್ವಾಗತಿಸಿದರೆ, ನಾಗರಾಜ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಹಸಂಚಾಲಕ ಸುಭಾಷ್ ಚಂದ್ರ ವಾಗ್ಲೆ ವಂದಿಸಿದರು.

‘ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್‌’

ವಿಶ್ವದಲ್ಲಿ ಪ್ರತಿದಿನ 80 ಲಕ್ಷ ಟನ್‌ ಪ್ಲಾಸ್ಟಿಕ್‌ ಸಮುದ್ರ ಸೇರುತ್ತಿದೆ. ಹಿಂದಿನ 100 ವರ್ಷಗಳಲ್ಲಿ ಬಳಸಿದಷ್ಟು ಪ್ಲಾಸ್ಟಿಕ್‌ ಪ್ರಮಾಣವನ್ನು, ಕಳೆದ 10 ವರ್ಷಗಳಲ್ಲಿ ಬಳಕೆ ಮಾಡಿದ್ದೇವೆ. ಮಳೆಗಾಲದ ನೀರನ್ನು ಹಿಡಿದಿಟ್ಟುಕೊಳ್ಳಲು ಅರಣ್ಯದಿಂದ ಮಾತ್ರ ಸಾಧ್ಯ. ಮಾಲಿನ್ಯರಹಿತ ಪರಿಸರಕ್ಕೂ ಅರಣ್ಯೀಕರಣವೇ ಪರಿಹಾರ. ಸಂಪನ್ಮೂಲಗಳ ಬಳಕೆಯಲ್ಲಿ ಮಿತಿ ಇರಲಿ ಎಂದು ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಹೇಳಿದರು.

**

ಭೂತ, ಭವಿಷ್ಯ ಹಾಗೂ ವರ್ತಮಾನದ ಲಕ್ಷ್ಯವನ್ನು ಇಟ್ಟುಕೊಂಡು ಪರಿಸರದ ಬಗ್ಗೆ ಕಾಳಜಿ ವಹಿಸಬೇಕಿದೆ

– ಲಕ್ಷ್ಮಣ ನಿಂಬರಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry