ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರ ಸಹಭಾಗಿತ್ವ ಇದ್ದರೆ ಪರಿಸರ ಉಳಿವು’

ವಿವಿಧೆಡೆ ಸಸಿ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಚಾಲನೆ
Last Updated 6 ಜೂನ್ 2018, 9:13 IST
ಅಕ್ಷರ ಗಾತ್ರ

ಯಾದಗಿರಿ: ‘ಪರಿಸರ ಅಭಿವೃದ್ಧಿ ಮತ್ತು ಪೋಷಣೆ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ. ಸಾರ್ವಜನಿಕರ ಸಹಭಾಗಿತ್ವ ಇದ್ದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ’ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಿಭಾಗ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಎರಡು ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಶೇ 5ರಷ್ಟು ಮಾತ್ರ ಅರಣ್ಯ ಪ್ರದೇಶ ಇದೆ. ಇದರಿಂದ ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುತ್ತದೆ. ಒಬ್ಬ ಮನುಷ್ಯನಿಗೆ ಪ್ರತಿ ವರ್ಷ ಸರಾಸರಿ 8 ರಿಂದ 9 ಮರಗಳು ಉತ್ಪಾದಿಸುವಷ್ಟು ಆಮ್ಲಜನಕ ಬೇಕು. ಆದ್ದರಿಂದ ಜನಸಂಖ್ಯೆಗೆ ಅನುಗುಣವಾಗಿ ಮರಗಳು ಇರುವುದು ಅಗತ್ಯ. ಪ್ರತಿಯೊಬ್ಬರು ಸಸಿ ನೆಡುವುದರ ಜೊತೆಗೆ ಅವುಗಳ ಪೋಷಣೆ ಮಾಡುವ ಸಂಕಲ್ಪ ಮಾಡಿದರೆ ಮಾತ್ರ ಮುಂದಿನ ಪೀಳಿಗೆ ಸುಖವಾಗಿ ಜೀವನ ನಡೆಸಲು ಸಾಧ್ಯ’ ಎಂದು ಅವರು ತಿಳಿಸಿದರು.

‘ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳಾಗುತ್ತದೆ. ಅಲ್ಲದೇ, ದನ-ಕರುಗಳು ಅವುಗಳನ್ನು ಸೇವಿಸುವುದರಿಂದ ಪ್ರಾಣಹಾನಿ ಸಂಭವಿಸಬಹುದು. ಖಾಲಿ ಜಾಗ, ಮನೆ ಸುತ್ತಮುತ್ತ ಹಾಗೂ ಚರಂಡಿಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ಕಸ-ಕಡ್ಡಿ ಎಸೆಯಬಾರದು. ಸ್ವಚ್ಛ ಪರಿಸರ ಕಾಪಾಡುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ’ ಎಂದರು.

8.7ಲಕ್ಷ ಸಸಿ ಪೋಷಣೆ:

‘ಅರಣ್ಯ ಇಲಾಖೆಯು 8.7 ಲಕ್ಷ ಸಸಿಗಳನ್ನು ಬೆಳೆಸಿದೆ. ಮಳೆಗಾಲ ಆರಂಭವಾಗಿರುವುದರಿಂದ ನಗರದಾದ್ಯಂತ ಐದು ಸಾವಿರ ಸಸಿಗಳನ್ನು ನೆಡಲಾಗುವುದು. ಸರ್ಕಾರಿ ನೌಕರರ ವಸತಿಗೃಹಗಳ ಸುತ್ತ, ಜಿಲ್ಲೆಯ 21 ವಸತಿ ಶಾಲೆಗಳ ಆವರಣ, ಎಂ.ಹೊಸಳ್ಳಿಯ ಟ್ರೀ ಪಾರ್ಕ್, ಅಂಗನವಾಡಿ ಕೇಂದ್ರಗಳ ಎದುರು ಗಿಡಗಳನ್ನು ನೆಡಲಾಗುವುದು. ಜಿಲ್ಲೆಯಲ್ಲಿ ಒಟ್ಟಾರೆ ಜೂನ್ ತಿಂಗಳಲ್ಲಿ ಒಂದು ಲಕ್ಷ ಸಸಿಗಳನ್ನು, ವರ್ಷದಲ್ಲಿ 10 ಲಕ್ಷ ಸಸಿಗಳನ್ನು ನೆಡುವ ಯೋಜನೆ ಇದೆ’ ಎಂದರು.

ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ರವಿಶಂಕರ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಗಿಡಗಳು ಲಭ್ಯವಿದ್ದು, ವರ್ಷಪೂರ್ತಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಗಿಡಗಳನ್ನು ನೆಡಬೇಕು. ಜತೆಗೆ ಪೋಷಣೆ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಮಾತನಾಡಿ, ‘ಮರಗಿಡಗಳನ್ನು ಮಕ್ಕಳಂತೆ ಪೋಷಿಸಬೇಕು. ಮಕ್ಕಳು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸಾರ್ವಜನಿಕರು ಮನೆ ಮತ್ತು ಮನೆಯ ಹೊರಗಡೆ ಪ್ಲಾಸ್ಟಿಕ್ ಬಿಸಾಡದಿದ್ದರೆ ಯಾದಗಿರಿಯು ಮುಂದೊಂದು ದಿನ ಸುಂದರ ನಗರವಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಭಾವಿಕಟ್ಟಿ, ಮುತ್ತಣ್ಣ ಟಿ.ಡೆಂಗಿ ಇದ್ದರು.

ವಿವಿಧೆಡೆ ಕಾರ್ಯಕ್ರಮ: ನಗರದ ಸುಭಾಷ್‌ಚಂದ್ರ ಬೋಸ್ ವೃತ್ತ ಸಮೀಪದ ರಸ್ತೆ ವಿಭಜಕಗಳಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಸ್ತೆಯ ಸುತ್ತಮುತ್ತಲಿನ ಅಂಗಡಿಗಳ ಮಾಲೀಕರನ್ನು ಕರೆಯಿಸಿ ಅವರ ಮೂಲಕವೇ ಸಸಿಗಳನ್ನು ನೆಟ್ಟರು. ಈ ಗಿಡಗಳ ಪಾಲನೆ, ಪೋಷಣೆ ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ. ಎಲ್ಲರೂ ಗಿಡಗಳನ್ನು ಸಂರಕ್ಷಣೆ ಮಾಡಿದರೆ ಅವುಗಳು ಹೆಮ್ಮರವಾಗಿ ಬೆಳೆಯುತ್ತವೆ’ ಎಂದರು.

ನಂತರ ಗಂಜ್ ಏರಿಯಾದಲ್ಲಿರುವ ಇಂದಿರಾ ಕ್ಯಾಂಟೀನ್ ಆವರಣ ಹಾಗೂ ಲುಂಬಿನಿ ವನದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಜನಿಕಾಂತ ಹಾಗೂ ನಿರ್ಮಿತಿ ಕೇಂದ್ರದ ಎಂಜಿನಿಯರ್ ವಿಶ್ವನಾಥ್ ಇದ್ದರು.

28 ಸಾವಿರ ಕಸದ ಬುಟ್ಟಿ ವಿತರಣೆ

ಯಾದಗಿರಿ: ನಗರಸಭೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮಾಡಲು 28 ಸಾವಿರ ಕಸದ ಬುಟ್ಟಿಗಳನ್ನು ಸಾರ್ವಜನಿಕರ ಮನೆ-ಮನೆಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಚಾಲನೆ ನೀಡಿದರು.

ನಂತರ ಮನೆ-ಮನೆಗೆ ತೆರಳಿ ಹಸಿರು ಮತ್ತು ನೀಲಿ ಬಣ್ಣದ ಬುಟ್ಟಿಗಳನ್ನು ಸಾರ್ವಜನಿಕರಿಗೆ ವಿತರಿಸಿದರು. ಸರ್ಕಾದ ವತಿಯಿಂದ ನಗರದ ಜನತೆಗೆ 14 ಸಾವಿರ ಹಸಿ ಕಸ ಮತ್ತು 14 ಸಾವಿರ ಒಣ ಕಸದ ಬುಟ್ಟಿಗಳನ್ನು ವಿತರಿಸಲಾಗುತ್ತಿದೆ. ಸಾರ್ವಜನಿಕರು ಅವುಗಳ ಸದುಪಯೋಗ ಪಡೆದು ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮಾಡಿ ಇಡಬೇಕು. ನಗರಸಭೆಯ ಕಸ ಸಂಗ್ರಹಿಸುವ ವಾಹನಗಳು ಬಂದಾಗ ಕಸವನ್ನು ಹಾಕಬೇಕು. ಈ ಕಸದ ಬುಟ್ಟಿಗಳನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಂತರ ನಗರಸಭೆ ಕಾರ್ಯಾಲಯದ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಸಸಿ ನೆಡುವ ಹಾಗೂ ಪ್ಲಾಸ್ಟಿಕ್ ನಿಷೇಧ ಕುರಿತು ನಗರದಲ್ಲಿ ಜಾಗೃತಿ ಮೂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT