ಬೀಜದುಂಡೆ ಬಿತ್ತಿ ಬೀಗಿದ ವಿದ್ಯಾರ್ಥಿಗಳು

7
ಚಿಕ್ಕಮಣ್ಣುಗುಡ್ಡೆಯ ಕೆಂಗಲ್ ಹನುಮಂತಯ್ಯ ಸಸ್ಯೋದ್ಯಾನದಲ್ಲಿ ಪರಿಸರ ದಿನಾಚರಣೆ

ಬೀಜದುಂಡೆ ಬಿತ್ತಿ ಬೀಗಿದ ವಿದ್ಯಾರ್ಥಿಗಳು

Published:
Updated:

ರಾಮನಗರ: ಚಿಕ್ಕಮಣ್ಣುಗುಡ್ಡೆಯ ಕೆಂಗಲ್ ಹನುಮಂತಯ್ಯ ಸಸ್ಯೋದ್ಯಾನದಲ್ಲಿ ಮಂಗಳವಾರ ವಿದ್ಯಾರ್ಥಿಗಳ ದಂಡು ನೆರೆದಿತ್ತು. ನೆಲಕ್ಕೆ ಬೀಜದುಂಡೆ ಬಿತ್ತಿ ಉತ್ತಮ ಫಲದ ನಿರೀಕ್ಷೆಯೊಂದಿಗೆ ಭವಿಷ್ಯದ ಪ್ರಜೆಗಳು ಸಂಭ್ರಮಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಅರಣ್ಯಕ್ಕಾಗಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಸ್ಯೋದ್ಯಾನದಲ್ಲಿ ವನಮಹೋತ್ಸವ ಹಾಗೂ ಬೀಜದುಂಡೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳೊಂದಿಗೆ ನ್ಯಾಯಾಧೀಶರು, ಜಿಲ್ಲಾಧಿಕಾರಿ ಸಹಿತ ಹಿರಿಯ–ಕಿರಿಯ ಅಧಿಕಾರಿಗಳು ಹಾಗೂ ಶಿಕ್ಷಕರು ಜತೆಗೂಡಿದರು. ಸುಮಾರು 5 ಸಾವಿರದಷ್ಟು ಉಂಡೆಗಳನ್ನು ಮಣ್ಣಿನಲ್ಲಿ ಬಿತ್ತಲಾಯಿತು. ರಾಮನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ, ಐಜೂರು ಹಾಗೂ ಹನುಮಂತನಗರದ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಈ ಅಭಿಯಾನದಲ್ಲಿ ಪಾಲ್ಗೊಂಡರು.

ಚಾಲನೆ: ಜಿಲ್ಲಾ ನ್ಯಾಯಾಧೀಶ ಪ್ರಕಾಶ್ ನಾಡಿಗೇರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‘ಇಂದು ಅಭಿವೃದ್ಧಿ ಹೆಸರಿನಲ್ಲಿ ಗಿಡಮರಗಳನ್ನು ಕಡಿದು ಹಾಕಲಾಗುತ್ತಿದೆ. ಒಂದು ಮರವನ್ನು ಕಡಿದರೆ ಪರ್ಯಾಯವಾಗಿ ಹತ್ತು ಗಿಡಗಳನ್ನು ನೆಡಬೇಕು, ಆಗ ಪರಿಸರ ಸಮತೋಲಿತವಾಗುತ್ತದೆ’ ಎಂದು ಅವರು ಕಿವಿಮಾತು ಹೇಳಿದರು.

‘ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕೆ ನಾವು ಬಿಟ್ಟು ಹೋಗುವ ಉತ್ತಮ ಪರಿಸರವು ಕಾರಣವಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನಡೆಬೇಕೆನ್ನುವ ಸಂಕಲ್ಪ ಮಾಡಬೇಕು. ಈ ವಯಸ್ಸಿನಲ್ಲಿಯೇ ಗಿಡ ಮರಗಳನ್ನು ಕಡಿಯುವುದನ್ನು ಪ್ರತಿರೋಧಿಸಬೇಕು’ ಎಂದು ಹೇಳಿದರು.

‘ಉತ್ತಮ ಪರಿಸರಕ್ಕೆ ಪ್ಲಾಸ್ಟಿಕ್ ಕೂಡ ಅಡಚಣೆಯಾಗಿದೆ. ಅದನ್ನು ಮುಕ್ತಗೊಳಿಸಬೇಕು. ಅದರ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿ ಅದರ ಉತ್ಪಾದನೆ ಹಾಗೂ ಪ್ರಸರಣವನ್ನು ತಡೆಗಟ್ಟಬೇಕು’ ಎಂದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ಮಾತನಾಡಿ ‘ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ, ಶಾಲೆಗಳಲ್ಲಿ ಗಿಡಗಳನ್ನು ನೆಡಬೇಕು, ಅದಕ್ಕಾಗಿ ಅರಣ್ಯ ಇಲಾಖೆಯಿಂದ ಸಸಿಗಳನ್ನು ಪೂರೈಸಲಾಗುವುದು, ಪ್ಲಾಸ್ಟಿಕ್ ಅನ್ನು ಬಳಸಬಾರದು, ಅದರ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಜಿ.ಪಂ.ಸಿಇಒ ಎಂ.ಪಿ. ಮುಲ್ಲೈ ಮುಹಿಲನ್ ಮಾತನಾಡಿ, ಸುಸ್ಥಿರ ಅಭಿವೃದ್ಧಿ ಇಂದಿಗೆ ಅಗತ್ಯವಾಗಿದ್ದು, ಪರಿಸರವನ್ನು ಸಂರಕ್ಷಿಸುವುದರೊಂದಿಗೆ ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿನ್ಯಾ. ಬಿ.ಎಸ್. ಹೊನ್ನಸ್ವಾಮಿ,ಉಪವಿಭಾಗಾಧಿಕಾರಿ ಡಾ. ನಾಗರಾಜ್, ತಹಶೀಲ್ದಾರ್ ಮಾರುತಿ ಪ್ರಸನ್ನ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಮಹೇಂದ್ರ ಕುಮಾರ್ ಇದ್ದರು. ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಸ್ವಾಗತಿಸಿದರು. ಸಾಮಾಜಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ವಂದಿಸಿದರು.

**

ಹೆದ್ದಾರಿಗಳ ವಿಸ್ತರಣೆ ವೇಳೆ ಬೃಹತ್ ಮರಗಳನ್ನೇ ಕಡಿದು ಹಾಕಲಾಗುತ್ತದೆ. ಆದರೆ ರಸ್ತೆ ನಿರ್ಮಾಣವಾದ ನಂತರ ಅಕ್ಕಪಕ್ಕ ಗಿಡ ನೆಡುವುದನ್ನು ಮರೆತಿರುವುದು ಸರಿಯಲ್ಲ

ಪ್ರಕಾಶ್‌ ನಾಡಿಗೇರ್, ಜಿಲ್ಲಾ ನ್ಯಾಯಾಧೀಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry