ವೇತನಕ್ಕಾಗಿ ವಸತಿ ನಿಲಯ ನೌಕರರ ಪರದಾಟ

7
ಸಮಾಜ ಕಲ್ಯಾಣ ಇಲಾಖೆ–ಗುತ್ತಿಗೆ ಸಂಸ್ಥೆ ನಿರ್ಲಕ್ಷ್ಯದಿಂದ ವೇತನ ವಿಳಂಬ: ಆರೋಪ

ವೇತನಕ್ಕಾಗಿ ವಸತಿ ನಿಲಯ ನೌಕರರ ಪರದಾಟ

Published:
Updated:
ವೇತನಕ್ಕಾಗಿ ವಸತಿ ನಿಲಯ ನೌಕರರ ಪರದಾಟ

ಲಿಂಗಸುಗೂರು: ಸಮಾಜಕಲ್ಯಾಣ ಇಲಾಖೆ ಹಾಗೂ ಗುತ್ತಿಗೆದಾರ ಎಆರ್‌ಸಿ ಸಂಸ್ಥೆಯ ನಡುವಿನ ಗೊಂದಲದಿಂದಾಗಿ ಕಳೆದ ಐದು ತಿಂಗಳಿಂದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ಆಧಾರಿತ ನೌಕರರ ವೇತನ ವಿಳಂಬವಾಗಿದ್ದು, ಇದರಿಂದ ನೌಕರರು ಪರದಾಡುವಂತಾಗಿದೆ.

ಮಂಗಳವಾರ ಸಮಾಜಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ರವಿಕುಮಾರ ಮತ್ತು ಎಆರ್‌ಸಿ ಖಾಸಗಿ ಸಂಸ್ಥೆ ಸಂಯೋಜಕ ಹನುಮಂತ ಅರಕೇರಿ ಅವರನ್ನು ಭೇಟಿ ಮಾಡಿದ್ದ ಕಾರ್ಮಿಕರು, ‘ಇಲಾಖೆಯಲ್ಲಿ 10 ರಿಂದ 16 ವರ್ಷಗಳಿಂದ ಕೆಲಸ ಮಾಡಿದ್ದ ನಮ್ಮನ್ನು ಜನವರಿ 2018ರಿಂದ ಹೊರ ಗುತ್ತಿಗೆ ನೌಕರರು  ರೆಂದು ಪರಿಗಣಿಸಿ ವೇತನವನ್ನು ನೀಡದೆ ಸತಾಯಿಸುತ್ತಿರುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದು ವಾಗ್ವಾದ ನಡೆಸಿದರು.

‘ವಸತಿ ನಿಲಯಗಳಲ್ಲಿ ಈ ಮುಂಚೆ ಕೇವಲ ₹ 2,000 ವೇತನಕ್ಕೆ ದುಡಿದ್ದೇವೆ. ನೌಕರಿ ಕಾಯಂ ಆಗುತ್ತದೆಂಬ ಕನಸು ಭಗ್ನವಾಗಿದೆ. ಬಹುತೇಕರು ಅನಕ್ಷರಸ್ಥರಾಗಿದ್ದರಿಂದ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಈಗ ಖಾಸಗಿ ಸಂಸ್ಥೆ ವತಿಯಿಂದ ವೇತನ ನೀಡುತ್ತೇವೆ ಎಂದು ಹೇಳುತ್ತಿದ್ದೀರಿ. ಇದ್ದ ಕೆಲ ನೌಕರರನ್ನು ತೆಗೆದುಹಾಕಿ ಮನಸೋ ಇಚ್ಛೆ ನಡೆದುಕೊಳ್ಳುತ್ತಿರುದರಿಂದ ಅನ್ಯಾಯ ಆಗುತ್ತಿದೆ’ ಎಂದು ಗೌರಮ್ಮ ಅಳಲು ತೋಡಿಕೊಂಡರು.

ಸೇವಾ ಅವಧಿ ಆಧರಿಸಿ ನಿರ್ದಿಷ್ಟ ನೌಕರರನ್ನು ಉಳಿಸಿಕೊಳ್ಳುವ ಭರವಸೆಯು ಹುಸಿಯಾಗುತ್ತಿದೆ. ಇಲಾಖೆಯ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಯ ಮುಖ್ಯಸ್ಥರ ಗೊಂದಲದ ಹೇಳಿಕೆಗಳು ನಮ್ಮನ್ನು ಬೀದಿಗೆ ತಂದಿವೆ. ಯಾರನ್ನು ನಂಬಿ ಬದುಕು ಕಟ್ಟಿಕೊಳ್ಳುವುದು ಎಂಬುದು ಸವಾಲಾಗಿ ಪರಿಣಮಿಸಿದೆ. ಇಲಾಖೆಯಿಂದ ಅಧಿಕೃತ ಮಾಹಿತಿ ಕಳುಹಿಸಿದ್ದರೂ ಗುತ್ತಿಗೆ ಸಂಸ್ಥೆ ನೌಕರರು ಮಾಹಿತಿ ಬಂದಿಲ್ಲ ಎಂದು ವಾದಿಸುತ್ತಿರುವ ಬಗ್ಗೆ ತಾಲ್ಲೂಕು ಅಧಿಕಾರಿ ರವಿಕುಮಾರ ಅವರ ಗಮನಕ್ಕೆ ತಂದರು.

‘ಜಿಲ್ಲೆಯ ಯಾವೊಂದು ತಾಲ್ಲೂಕುಗಳಿಂದ ನೌಕರರ ಅಧಿಕೃತ ಪಟ್ಟಿ ಬಂದಿಲ್ಲ. ಕೆಲ ಅಧಿಕಾರಿಗಳು ಹೆಚ್ಚಿನ ಪ್ರಮಾಣದ ನೌಕರರ ಹೆಸರು ನೀಡಿದ್ದರಿಂದ ಜಿಲ್ಲಾ ಅಧಿಕಾರಿ ಸರೋಜ ಅವರು ವೇತನ ಮಂಜೂರಾತಿಯನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಇಲಾಖೆ ಈ ಸಮಸ್ಯೆಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದು ಎಆರ್‌ಸಿ ಸಂಸ್ಥೆ ಸಂಯೋಜಕ ಹನುಮಂತಪ್ಪ ಅರಕೇರಿ ಹೇಳಿದರು.

ಸಮಾಜಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ರವಿಕುಮಾರ ಮಾತನಾಡಿ, ‘ಸಂಸ್ಥೆಯವರು ಕೇಳಿದ ಮಾಹಿತಿಯನ್ನು ಮಾರ್ಚ್‌ ತಿಂಗಳಲ್ಲಿಯೆ ನೀಡಲಾಗಿದೆ. ಅಧಿಕೃತ ಪಟ್ಟಿ ನೀಡಿದ ಮೇಲೆ ನೌಕರರ ವಿಳಂಬವಾಗುತ್ತಿರುವ ವೇತನ ನೀಡುವಂತೆ ಹಲವು ಬಾರಿ ಪತ್ರ ಬರೆದರು ಖಾಸಗಿ ಸಂಸ್ಥೆಯವರು ಸ್ಪಂದಿಸುತ್ತಿಲ್ಲ. ಹೀಗಾಗಿ ನೌಕರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಸಂಸ್ಥೆಯವರು ಕೂಡಲೇ ವೇತನ ನೀಡಬೇಕು’ ಎಂದು ಸ್ಪಷ್ಟಪಡಿಸಿದರು.

ಗುತ್ತಿಗೆ ನೌಕರರಾದ ಮೌಲಮ್ಮ, ಗೌರಮ್ಮ, ಹುಸೇನಮ್ಮ, ರೇಣುಕಾ, ಲಕ್ಷ್ಮಿ, ದೇವಮ್ಮ, ಮಾಬಮ್ಮ, ಯಮನಮ್ಮ, ಚಿನ್ನಪ್ಪ, ಖಾಜಾ, ಹೇಮಣ್ಣ, ದೇವಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry