ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ’

ವಿಶ್ವ ಪರಿಸರ ದಿನಾಚರಣೆಯಲ್ಲಿ ನ್ಯಾಯಾಧೀಶ ಅನಿಲ್ ಬಿ. ಕಟ್ಟಿ ಅಭಿಮತ
Last Updated 6 ಜೂನ್ 2018, 10:00 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಸಾಂಕ್ರಾಮಿಕ ರೋಗಗಳಿಗೆ ಕೊನೆ ಹಾಡಿ ಸುಖಕರ ಜೀವನ ಸಾಗಿಸಲು ನಿಸರ್ಗದ ರಕ್ಷಣೆ ಅವಶ್ಯಕವಾಗಿದೆ. ಪ್ರಕೃತಿ ಸಮತೋಲನ ಕಾಯ್ದುಕೊಳ್ಳಬೇಕಾದರೆ ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿಲ್ ಬಿ. ಕಟ್ಟಿ ಹೇಳಿದರು.

ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ನ್ಯಾಯಾಲಯ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು, ಕೃಷಿಕರು ಪ್ರಕೃತಿ ಬಗ್ಗೆ ಹೆಚ್ಚಿನ ಗಮನವುಳ್ಳರಾಗಿದ್ದಾರೆ. ಹೊಲ ತೋಟಗಳಲ್ಲಿ ಗಿಡ ಮರಗಳನ್ನು ನೆಡುವ ಕಾರ್ಯ ನಿರಂತರವಾಗಿ ನಡೆಸುತ್ತಿದ್ದಾರೆ. ಈಗ ಗಿಡ–ಮರಗಳ ರಕ್ಷಣೆಯ ಹೊಣೆ ಪಟ್ಟಣಗಳ ನಿವಾಸಿಗಳದ್ದೂ ಆಗಿದೆ. ಆ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ. ಜವಾಬ್ದಾರಿಯುತ ಸಂಘ ಸಂಸ್ಥೆಗಳು, ಶಿಕ್ಷಣ ಕ್ಷೇತ್ರಗಳು ಹಾಗೂ ಸುಶಿಕ್ಷಿತರು ಗಿಡ ಮರಗಳನ್ನು ನೆಟ್ಟು ಪರಿಸರ ರಕ್ಷಣೆ ಮಾಡಲು ವಿಶೇಷ ಕಾಳಜಿ ತೋರಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್ ಸುರಳಕರ್ ಮಾತನಾಡಿ, ‘ಪರಿಸರ ದಿನಾಚರಣೆ ಕಾಟಾಚಾರಕ್ಕೆ ಆಗಬಾರದು. ಆ ನಿಟ್ಟಿನಲ್ಲಿ ಖಾಲಿ ಸ್ಥಳವೇ ಇಲ್ಲ ಎಂಬುವಷ್ಟು ಮಟ್ಟಿಗೆ ಗಿಡ ಮರಗಳನ್ನು ನೆಟ್ಟು ದಾಖಲೆ ನಿರ್ಮಿಸೋಣ’ ಎಂದು ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಎಸ್.ರಘುನಾಥ ಮಾತನಾಡಿ, ’ಕೃಷಿ ಅರಣ್ಯ ಯೋಜನೆ (ಅಗ್ರೊ ಫಾರೆಸ್ಟ್) ಅಡಿಯಲ್ಲಿ ರೈತರಿಗೆ ತಮ್ಮ ಹೊಲಗಳಲ್ಲಿ ಗಿಡಮರಗಳನ್ನು ಬೆಳೆಸಲು ಅನುಮತಿ ದೊರಕಿಸಿ ಕೊಡುವ ಜೊತೆಗೆ ಬೆಳೆದು ನಿಂತ ಗಿಡ ಮರಗಳ ವೆಚ್ಚವನ್ನು ಇಲಾಖೆ ಭರಿಸಲಿದೆ ಎಂದರು. ಈಗಾಗಲೇ ಜಿಲ್ಲೆಯಲ್ಲಿ 250 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅರಣ್ಯ ಇಲಾಖೆಯಿಂದ ಐದು ಲಕ್ಷ ಸಸಿಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ‘ಭೂಮಿಯ ಮೇಲೆ ಪ್ರಾಣಿ, ಪಕ್ಷಿಗಳಂತೆ ಮನುಷ್ಯನು ಒಂದು ಜೀವಿ ಮಾತ್ರ. ಎಲ್ಲರೂ ಒಂದೇ ಎಂಬ ಭಾವನೆಯಿಂದ ಪ್ರಕೃತಿಯಲ್ಲಿ ದೊರೆಯಬಹುದಾದ ಸಂಪನ್ಮೂಲ ಬಳಸಿಕೊಂಡಲ್ಲಿ ಸುಖಿ
ಯಾಗಿರಲು ಸಾಧ್ಯವಿದೆ. 40 ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಡೈನೊಸಾರಸ್ ಎಂಬ ಪ್ರಾಣಿ ಭೂಮಿಯ ಮೇಲೆ ಅಟ್ಟಹಾಸ ಮೆರೆದು ಅಳಿದು ಹೋಗಿದೆ. ಈ ಭೂಮಿಯ ಮೇಲೆ ಯಾರೂ ಶಾಶ್ವತರಲ್ಲ ಎಂಬ ಆಧ್ಯಾತ್ಮಿಕ ಚಿಂತನೆ ಪ್ರತಿಯೊಬ್ಬರಿಗೂ ಬೇಕಾಗಿದೆ’ ಎಂದರು.

‘ಅರಣ್ಯ ಇಲಾಖೆಯವರು ಕಾಟಾಚಾರಕ್ಕೆ ಪರಿಸರ ದಿನಾಚರಣೆ ಆಚರಿಸದೇ ಕೇವಲ ಒಂದೇ ಬಗೆಯ ಸಸಿಯನ್ನು ವಿತರಿಸುವ ಬದಲು ದಟ್ಟ ಅರಣ್ಯ ಪ್ರದೇಶದಲ್ಲಿ ಮರ, ಬಳ್ಳಿಗಳಂತೆ ಎಲ್ಲ ತರಹದ ಸಸಿಗಳ ಉತ್ಪಾದನೆಗೆ ಹೆಚ್ಚು ಗಮನ ಕೊಡಬೇಕು’ ಎಂದರು.

ವಕೀಲರ ಸಂಘದ ಅಧ್ಯಕ್ಷ ಸಿ.ಬಿ.ಪಾಟೀಲ ಮಾತನಾಡಿದರು.ಕಕ್ಷಿದಾರರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಹುದ್ದಾರ, ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಿ ಮಣಿಯಾರ, ನ್ಯಾಯಾಧೀಶರಾದ ಎಂ.ಆರ್.ರವಿ, ವಿ.ಪ್ರಕಾಶ, ಎಂ.ಎ.ಎಚ್.ಮೊಗಲಾನಿ, ಪದ್ಮಾಕರ ವನಕುದ್ರೆ ಉಪಸ್ಥಿತರಿದ್ದರು. ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಜಾತಾ ಪಾಟೀಲ ಸ್ವಾಗತಿಸಿದರು.

ವಿಶ್ವ ಪರಿಸರ ದಿನಾಚರಣೆ

ಕೂಡಲಸಂಗಮ: ‘ಶಾಲಾ ಕಾಲೇಜುಗಳಲ್ಲಿ ಪರಿಸರ ಜಾಗೃತಿ ಹಾಗೂ ಸಸಿಗಳನು ನೆಡುವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು’ ಎಂದು ಬಸವ ಭಾರತಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್.ಭದ್ರಶೆಟ್ಟಿ ಹೇಳಿದರು.
ಬಸವ ಭಾರತಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಬಸವ ಭಾರತಿ ಪ್ರೌಢ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

‘ಪರಿಸರ ಸಮತೋಲನ ಕಾಪಾಡಲು ಸಸಿ ಬೆಳೆಸುವುದು ಅತ್ಯಂತ ಅವಶ್ಯ. ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಪರಿಸರ ಸಂರಕ್ಷಣೆ ಮಾಡಿ ಸಸಿಗಳನ್ನು ಬೆಳೆಸುವಂತಹ ಕಾರ್ಯವನ್ನು ಸರ್ಕಾರ ಮಾಡಬೇಕು’ ಎಂದು ಹೇಳಿದರು. ಮುಖ್ಯ ಶಿಕ್ಷಕ ಸಂಗಮೇಶ ಎಮ್ಮಿ ಮಾತನಾಡಿ,  ‘ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಪರಿಸರ ಜಾಗೃತಿ ಕಾರ್ಯ ಯೋಜನೆ ನಡೆಯುತ್ತಿವೆ’ ಎಂದು ಅವರು ಹೇಳಿದರು.

ಉಪನ್ಯಾಸಕರಾದ ಮಹಾಂತೇಶ ಎಮ್ಮಿ, ಎಸ್.ಸಿ.ಜಾಲಿಹಾಳ, ನವೀನ ಸಾರವಾಡ, ಎಸ್.ಎಚ್.ಕಡೇಮನಿ, ಅನಿಲ ಮಾನ್ವಿ, ಸಂತೋಷ ಕೈನೂರ, ಬಸವರಾಜ ಭಜಂತ್ರಿ, ಸಬೀಸಾ ಸುಗಂಧಿ ಸಮಾರಂಭದಲ್ಲಿ ಹಾಜರಿದ್ದರು.

‘ಪರಿಸರ ರಕ್ಷಣೆಗೆ ಸಾಂಘಿಕ ಪ್ರಯತ್ನ ಅಗತ್ಯ’

ಬೀಳಗಿ: ‘ಅರಣ್ಯ, ಭೂಮಿ ನಾಶ ಮತ್ತು ಜೀವ ಸಂಕುಲಗಳ ವಿನಾಶದಿಂದ ಪರಿಸರಕ್ಕೆ ಸಂಕಷ್ಟ ಬಂದೊದಗಿದೆ. ಇದರ ರಕ್ಷಣೆಗೆ ಸಾಂಘಿಕ ಪ್ರಯತ್ನ ಬೇಕು’ ಎಂದು ಮುಖಂಡ ಗಂಗಾಧರ ಎಂ. ನಾಯಿಕ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಿಸನಾಳದ ಸಮೀಪದ ನಾಯಿಕರ ತೋಟದಲ್ಲಿ ಏರ್ಪಡಿಸಿದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪರಿಸರ ಕಾಪಾಡುವ ಹೊಣೆ ಪ್ರತಿಯೊಬ್ಬರ ಮೇಲಿದೆ. ನಿಸರ್ಗದಲ್ಲಿ ಕಾಣುತ್ತಿದ್ದ ಅಮೂಲ್ಯ ಜೀವಿಗಳ ಪ್ರದೇಶ ನಾಶವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪರಿಸರದಲ್ಲಿ ಉಷ್ಣತೆ ಹೆಚ್ಚುತ್ತಿದೆ ಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಪ್ರತಿಯೊಬ್ಬರೂ ಗಿಡ ಮರ ಬೆಳೆಸಬೇಕು’ ಎಂದರು. ಪ್ರಮುಖರಾದ ಪ್ರಭಾಸಗೌಡ ಪಾಟೀಲ, ರಾಮಣ್ಣ ನಾಯಿಕ, ಮುದಕಪ್ಪ ಜೋಗೆಣ್ಣವರ, ಹನಮಂತ ಬುರ್ಲಿ, ರಾಮಣ್ಣ ಕೂಗಟಿ, ರಾಯಪ್ಪ ಧರಿಗೊಂಡ, ವಿಠ್ಠಲ ಹುದ್ದಾರ, ನರಸಪ್ಪ ಗುಬರಣ್ಣವರ, ರುದ್ರಪ್ಪ ಕಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT