ಮತದಾರರ ಮನವೊಲಿಸಲು ಅಭ್ಯರ್ಥಿಗಳ ಕಸರತ್ತು

7
ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ: ಜಿಲ್ಲೆಯಲ್ಲಿ ಗರಿಗೆದರಿದ ರಾಜಕೀಯ

ಮತದಾರರ ಮನವೊಲಿಸಲು ಅಭ್ಯರ್ಥಿಗಳ ಕಸರತ್ತು

Published:
Updated:

ಚಿತ್ರದುರ್ಗ: ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದ್ದು, ಮತದಾರರ ಮನ ಗೆಲ್ಲಲು ಮೂರು ರಾಜಕೀಯ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಭಾರಿ ಕಸರತ್ತು ನಡೆಸುತ್ತಿದ್ದಾರೆ.

ರಮೇಶ್‌ ಬಾಬು ಅವರ ಅಧಿಕಾರಾ ವಧಿ ಇದೇ 21ಕ್ಕೆ ಕೊನೆಗೊಳ್ಳುತ್ತಿದ್ದು, ಈ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ವಿಧಾನಪರಿಷತ್ತಿಗೂ ಚುನಾವಣೆ ಘೋಷಣೆಯಾಗಿರುವುದು ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಗೂ ಎಡೆಮಾಡಿಕೊಟ್ಟಿದೆ.

ಜೆಡಿಎಸ್‌ ಅಭ್ಯರ್ಥಿಯಾಗಿ ರಮೇಶ್‌ ಬಾಬು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಂ. ರಾಮಪ್ಪ, ಬಿಜೆಪಿ ಅಭ್ಯರ್ಥಿಯಾಗಿ ವೈ.ಎ. ನಾರಾಯಣಸ್ವಾಮಿ ಸ್ಪರ್ಧಿಸಿದ್ದಾರೆ. ಪಕ್ಷೇತರರಲ್ಲಿ ಕೆ.ಜಿ. ತಿಮ್ಮಾರೆಡ್ಡಿ ಪ್ರಭಾವಶಾಲಿಯಾಗಿದ್ದು, 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 15 ತಿಂಗಳ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್‌, ಕ್ಷೇತ್ರ ಉಳಿಸಿ ಕೊಳ್ಳಲು ಪ್ರಯತ್ನಿಸುತ್ತಿದೆ. ಕೈತಪ್ಪಿದ ಕ್ಷೇತ್ರವನ್ನು ಮರಳಿ ಪಡೆಯಲು ಬಿಜೆಪಿ ಶತಾಯಗತಾಯ ಹೋರಾಡುತ್ತಿದೆ. ಗೆಲುವಿನ ಹಾದಿಗೆ ಮರಳಲು

ಕಾಂಗ್ರೆಸ್‌ ಹೆಣಗಾಡುತ್ತಿರುವುದು ಜಿಲ್ಲೆಯಲ್ಲಿ ಗೋಚರಿಸುತ್ತಿದೆ.

ದಾವಣಗೆರೆ, ಹರಿಹರ, ಜಗಳೂರು ಸೇರಿದಂತೆ ಅವಿಭಜಿತ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಈ ಮತ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಬಹುತೇಕ ಎಲ್ಲ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಸುತ್ತಾಟ ನಡೆಸಿ ಮತಯಾಚನೆಯಲ್ಲಿ ತಲ್ಲೀನರಾಗಿದ್ದಾರೆ.

ಪ್ರಭಾವಿ ಮುಖಂಡರನ್ನು ಕರೆತಂದು ಶಿಕ್ಷಕರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಮರು ಆಯ್ಕೆ ಬಯಸಿರುವ ರಮೇಶ್‌ ಬಾಬು ಅವರಿಗೆ ಜೆಡಿಎಸ್‌ ಜಿಲ್ಲಾ ಘಟಕ ಬೆನ್ನುಲುಬಾಗಿ ನಿಂತಿದೆ. ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗದೇ ಬೇಸರಗೊಂಡಿದ್ದ ನಾಯಕರು ಮೇಲ್ಮನೆಯ ಸ್ಥಾನ ಉಳಿಸಿಕೊಡುವ ಉಮೇದಿನಲ್ಲಿದ್ದಾರೆ. ಅಭ್ಯರ್ಥಿಯ ಅನುಪಸ್ಥಿತಿಯಲ್ಲಿಯೂ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಮತಯಾಚನೆ ಮಾಡುವಲ್ಲಿ ನಿರತರಾಗಿದ್ದಾರೆ. 15 ತಿಂಗಳ ಅವಧಿಯಲ್ಲಿ ರಮೇಶ್‌ ಬಾಬು ಮಾಡಿದ ಕೆಲಸ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿನ ಸಾಧನೆಗಳನ್ನು ಮತದಾರರ ಮುಂದಿಡುತ್ತಿದ್ದಾರೆ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ.

ಚಿತ್ರದುರ್ಗದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದ್ದು, ಕಳೆದ ಎರಡು ಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕಿರುವ ಗಣನೀಯ ಪ್ರಮಾಣದ ಮತಗಳು ಪಕ್ಷದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದಾರೆ. ‘ಎಲ್ಲ ರೀತಿಯಲ್ಲೂ ನೆರವಾಗುತ್ತೇವೆ’ ಎಂಬ ಭರವಸೆ ನೀಡುತ್ತ ಮತ ಕೇಳುತ್ತಿದ್ದಾರೆ.

10 ವರ್ಷ ಕ್ಷೇತ್ರ ಪ್ರತಿನಿಧಿಸಿದ್ದ ವೈ.ಎ. ನಾರಾಯಣಸ್ವಾಮಿ ಅವರನ್ನು ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಾಗಿದೆ. ಅಧಿಕೃತ ಅಭ್ಯರ್ಥಿಯಾಗಿದ್ದ ಹಾಲನೂರು ಲೇಪಾಕ್ಷಿ ಅವರಿಗೆ ಟಿಕೆಟ್‌ ಕೈತಪ್ಪಿದ್ದಕ್ಕೆ ಉಂಟಾದ ಅಸಮಾಧಾನ ಜಿಲ್ಲೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಕಾಂಗ್ರೆಸ್‌ ಮುಖಂಡರು ಸ್ಥಳೀಯ ಅಭ್ಯರ್ಥಿಯ ದಾಳ ಉರುಳಿಸುತ್ತಿದ್ದಾರೆ. ಚಳ್ಳಕೆರೆಯ ನೇರಲಗುಂಟೆಯವರಾದ ರಾಮಪ್ಪ ಮೈಸೂರಿನಲ್ಲಿ ಉದ್ಯಮಿ. ಆಗ್ನೇಯ ಶಿಕ್ಷಣ ಕ್ಷೇತ್ರ ಪ್ರತಿನಿಧಿಸುವ ಅವಕಾಶವನ್ನು ಜಿಲ್ಲೆಯ ಅಭ್ಯರ್ಥಿಗೆ ನೀಡುವಂತೆ ಕೋರುತ್ತಿದ್ದಾರೆ. ಹಲವು ತಿಂಗಳಿಂದ ಮತದಾರರ ಮನೆಬಾಗಿಲು ತಟ್ಟುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿಯೊಂದಿಗೆ ಸ್ಥಳೀಯ ಮುಖಂಡರು ಚಟುವಟಿಕೆಯಿಂದ ಓಡಾಡುತ್ತಿದ್ದಾರೆ.

ಹಿರಿಯೂರು ತಾಲ್ಲೂಕಿನ ಕುಂದಲಗುರ ಗ್ರಾಮದ ಕೆ.ಜಿ. ತಿಮ್ಮಾರೆಡ್ಡಿ ಕೂಡ ಸ್ಥಳೀಯ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ನಿವೃತ್ತಿ ಹೊಂದಿರುವ ಇವರು, ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಹೆಬ್ಬಾಳದಿಂದ ಸ್ಪರ್ಧಿಸಿ ಪರಾಭವಗೊಂಡಿರುವ ನಾರಾಯಣಸ್ವಾಮಿ, ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಮರಳಿ

ರುವುದನ್ನು ವಿರೋಧ ಪಕ್ಷಗಳು ಅಸ್ತ್ರವಾಗಿ ಬಳಸುತ್ತಿವೆ. ‘ನಾರಾಯಣಸ್ವಾಮಿ ಅವರಿಗೆ ಕ್ಷೇತ್ರದ ಬಗ್ಗೆ ಬದ್ಧತೆ ಇಲ್ಲ’ ಎಂಬ ಆರೋಪಗಳು ಕೇಳಿಬರುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry