ರಸ್ತೆ ಮಧ್ಯದಲ್ಲೇ ಚರಂಡಿ ನಿರ್ಮಾಣ!

7
ಸಾಂತೇನಹಳ್ಳಿಗೆ ಸಂಚಾರ ಬಂದ್, ವಾರ ಕಳೆದರೂ ಅಧಿಕಾರಿಗಳು ಪತ್ತೆ ಇಲ್ಲ

ರಸ್ತೆ ಮಧ್ಯದಲ್ಲೇ ಚರಂಡಿ ನಿರ್ಮಾಣ!

Published:
Updated:
ರಸ್ತೆ ಮಧ್ಯದಲ್ಲೇ ಚರಂಡಿ ನಿರ್ಮಾಣ!

ಹೊಳಲ್ಕೆರೆ: ತಾಲ್ಲೂಕಿನ ತಿರುಮಲಾ ಪುರ (ಎಮ್ಮೆಹಟ್ಟಿ)ದಲ್ಲಿ ಮನೆಯೊಳಗೆ ಮಳೆ ನೀರು ನುಗ್ಗಿದ್ದರಿಂದ ರಸ್ತೆಯ ಮಧ್ಯದಲ್ಲಿಯೇ ಚರಂಡಿ ನಿರ್ಮಾಣವಾಗಿದೆ.

ಈಚೆಗೆ ಸುರಿದ ಮಳೆಯಿಂದ ಗ್ರಾಮದ ಪಕ್ಕದಲ್ಲಿರುವ ಗುಡ್ಡದಿಂದ ಹರಿಯುವ ನೀರು ಮನೆಗಳಿಗೆ ನುಗ್ಗಿದೆ. ರಾತ್ರಿ ವೇಳೆ ಮನೆಗಳಿಗೆ ನೀರು ನುಗ್ಗುತ್ತಿದ್ದಂತೆ ಕಂಗಾಲಾದ ಜನ ರಸ್ತೆಯನ್ನೇ ಅಗೆದು ಮತ್ತೊಂದು ಬದಿಗೆ ನೀರು ಹರಿಯುವಂತೆ ಮಾಡಿದ್ದಾರೆ.

‘ಮೊನ್ನೆ ರಾತ್ರಿ ಭಾರೀ ಮಳೆ ಸುರಿದಿದ್ದು, ಗುಡ್ಡದಿಂದ ಬರುವ ಮಳೆ ನೀರು ಇದ್ದಕ್ಕಿದ್ದಂತೆ ಮನೆಯೊಳಗೆ ನುಗ್ಗಿತು. ಏನು ಮಾಡಬೇಕೆಂದು ತೋಚದೆ ರಸ್ತೆ ಅಗೆದು ನೀರು ಆ ಕಡೆ ಹರಿಸಿದೆವು. ಇಲ್ಲವಾದರೆ ನಮ್ಮ ಮನೆಗಳು ಬಿದ್ದು ಹೋಗುತ್ತಿದ್ದವು’ ಎಂದು ಸ್ಥಳೀಯ ನಿವಾಸಿಗಳಾದ ಬಸವರಾಜು, ವೀರನಾಗಪ್ಪ, ಈರಪ್ಪ ತಿಳಿಸಿದರು.

‘ನೀರು ಸರಾಗವಾಗಿ ಹರಿಯಲು ಗ್ರಾಮದ ಪಕ್ಕದಲ್ಲಿ ಇನ್ನೂ ಎರಡು ಕಿರು ಸೇತುವೆಗಳನ್ನು ನಿರ್ಮಿಸಬೇಕಿತ್ತು. ಸೇತುವೆ ಇಲ್ಲದೆ ರಸ್ತೆ ಎತ್ತರ ಮಾಡಿದ್ದರಿಂದ ಗುಡ್ಡದಿಂದ ಬರುವ ನೀರು ಮನೆಗಳಿಗೆ ನುಗ್ಗುತ್ತಿದೆ. ಲೋಕದೊಳಲು ಕಡೆಯಿಂದ ಬರುವ ನೀರೂ ಇಲ್ಲಿಗೇ ಬರುತ್ತದೆ. ಇಲ್ಲಿ ಹೊಸ ಮನೆ ನಿರ್ಮಿಸಲು ಅಡಿಪಾಯಗಳನ್ನೂ ನಿರ್ಮಿಸುತ್ತಿದ್ದು, ಅವೂ ಕುಸಿಯುವ ಭೀತಿಯಿದೆ. ಶೀಘ್ರವೇ ಇಲ್ಲಿ ಸೇತುವೆ ನಿರ್ಮಿಸಬೇಕು ಎನ್ನುತ್ತಾರೆ’ ಇಲ್ಲಿನ ನಿವಾಸಿಗಳು.

ಸಾಂತೇನಹಳ್ಳಿ ನಿವಾಸಿಗಳ ಪರದಾಟ: ಗುಡ್ಡದ ಸಾಂತೇನಹಳ್ಳಿಯ ನಿವಾಸಿಗಳು ಇದೇ ರಸ್ತೆ ಮೂಲಕ ಮುಖ್ಯರಸ್ತೆ ತಲುಪಿ, ಹೊಳಲ್ಕೆರೆ, ಹೊಸದುರ್ಗದ ಕಡೆ ಹೋಗಬೇಕು. ‘ಈಗ ರಸ್ತೆ ಮಧ್ಯೆ ಗುಂಡಿ ತೋಡಿರುವುದರಿಂದ ಗ್ರಾಮಕ್ಕೆ ವಾಹನಗಳು ಬರಲು ಆಗುತ್ತಿಲ್ಲ. ಕಾನ್ವೆಂಟ್, ಶಾಲೆಯ ಬಸ್‌ಗಳು ಬಾರದೆ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲಾಗುತ್ತಿಲ್ಲ. ನ್ಯಾಯಬೆಲೆ ಅಂಗಡಿಗೆ ಪಡಿತರ, ಸೀಮೆಎಣ್ಣೆ ತರಿಸಲು ಆಗುತ್ತಿಲ್ಲ. ಅಂಗನವಾಡಿ,

ಶಾಲೆಗಳಿಗೆ ಬಿಸಿಯೂಟ ಪಡಿತರ ಸಾಗಿಸಲೂ ಅಡ್ಡಿಯಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಸಂಚಾರಕ್ಕೆ ಅಡಚಣೆ ಆಗಿ ಐದಾರು ದಿನ ಕಳೆದರೂ ಅಧಿಕಾರಿಗಳು ಸ್ಥಳಕ್ಕೆ ಬಂದು ನೋಡಿಲ್ಲ. ಚರಂಡಿ ನಿರ್ಮಿಸಿರುವ ಜಾಗದಲ್ಲಿ ತಕ್ಷಣವೇ ಸೇತುವೆ ನಿರ್ಮಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅವೈಜ್ಞಾನಿಕ ರಸ್ತೆ ನಿರ್ಮಾಣ:

ಎಮ್ಮೆಹಟ್ಟಿಯಿಂದ ಗುಡ್ಡದ ಸಾಂತೇನಹಳ್ಳಿಗೆ 2 ಕಿ.ಮೀ.ಅಂತರವಿದ್ದು, ಕಳೆದ ಐದಾರು ವರ್ಷಗಳಿಂದ ರಸ್ತೆ ಹದಗೆಟ್ಟಿತ್ತು. ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಇಲ್ಲಿ ಹೊಸ ರಸ್ತೆ ನಿರ್ಮಿಸಲಾಗಿದೆ.

‘ಎಮ್ಮೆಹಟ್ಟಿಯ ಎಮ್ಮೆ, ದನ, ಕುರಿ, ಮೇಕೆಗಳು ಇದೇ ಮಾರ್ಗವಾಗಿ ನಿತ್ಯ ಬೆಟ್ಟಕ್ಕೆ ಹೋಗುತ್ತವೆ. ರಸ್ತೆಯನ್ನು ಕಿರಿದಾಗಿ ಮಾಡಿದ್ದು, ಎರಡೂ ಕಡೆ ಚರಂಡಿ ಇರುವುದರಿಂದ ಜಾನುವಾರು ಹೋಗುವಾಗ ವಾಹನ ಸವಾರರು ಮುಂದೆ ಸಾಗಲು ಆಗುವುದಿಲ್ಲ. ಇದರಿಂದ ವಾಹನ ಸವಾರರು ಸುಮಾರು ಒಂದು ಕಿ.ಮೀ.ದೂರದವರೆಗೆ ಜಾನುವಾರು ಹಿಂದೆಯೇ ಗಂಟೆಗಟ್ಟಲೆ ಸಾಗುವ ಪರಿಸ್ಥಿತಿ ಇದೆ. ರಸ್ತೆ ಕಿರಿದಾಗಿರುವುದರಿಂದ ಎರಡು ವಾಹನಗಳು ಎದುರಾದರೆ ಸರಾಗವಾಗಿ ದಾಟಲು ಆಗುತ್ತಿಲ್ಲ’ ಎಂಬುದು ಇಲ್ಲಿನ ನಿವಾಸಿಗಳ ಅಳಲು.

ರಸ್ತೆ ಎತ್ತರ ಇರುವುದರಿಂದ ಗುಡ್ಡದಿಂದ ಹರಿದು ಬರುವ ಮಳೆ ನೀರು ಮನೆಯೊಳಗೆ ನುಗ್ಗುತ್ತದೆ. ಇಲ್ಲಿ ಸೇತುವೆ ನಿರ್ಮಿಸಿದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ.

ವೀರನಾಗಪ್ಪ, ಎಮ್ಮೆಹಟ್ಟಿ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry