ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಭರ್ತಿ ಘಟಕದಲ್ಲಿ ನಳನಳಿಸುತಿವೆ ಗಿಡಗಳು

ಬರಗಾಲ, ಒತ್ತುವರಿ, ಕೀಟಬಾಧೆ, ನೀರಿನ ಕೊರತೆ, ಕಳೆಬಾಧೆಯ ನಡುವೆಯೂ ಹಸಿರು ಉಳಿಸಿಕೊಂಡ ನಗರಸಭೆ
Last Updated 6 ಜೂನ್ 2018, 12:32 IST
ಅಕ್ಷರ ಗಾತ್ರ

ಹಾವೇರಿ: ನಗರ ಹೊರವಲಯದ ಗೌರಾಪುರದ ಭೂ ಭರ್ತಿ ಘಟಕದ ಬಳಿ ನಗರಸಭೆ ಕಳೆದ ವರ್ಷ 119 ಗಿಡಗಳನ್ನು ನಾಟಿ ಮಾಡಿದ್ದು, ತೀವ್ರ ಬರದ ಬಳಿಕವೂ ಹಸಿರಾಗಿದೆ.

ನಗರದ ತ್ಯಾಜ್ಯವನ್ನು ಸಂಸ್ಕರಣ ಹಾಗೂ ವಿಲೇವಾರಿ ಮಾಡುವ ಭೂ ಭರ್ತಿ ಘಟಕವು ಹಾವೇರಿ–ಹಾನಗಲ್ ರಾಜ್ಯ ಹೆದ್ದಾರಿ ಬದಿಯ ಗೌರಾಪುರದಲ್ಲಿದೆ. ಇಲ್ಲಿ ತ್ಯಾಜ್ಯ, ದುರ್ನಾತ, ಕೊಳಚೆ ಸಾಮಾನ್ಯ. ಇದರಿಂದ ಪರಿಸರವನ್ನು ಕಾಪಾಡಲು ಘಟಕದ ಹೊರಗಿನ ಸುಮಾರು ಮೂರು ಎಕರೆ ಖಾಲಿ ಭೂಮಿಯಲ್ಲಿ ಸಸಿ ನಾಟಿ ಮಾಡಲಾಗಿದೆ.

2017ರ ಆಗಸ್ಟ್ 2ರಂದು ಇಲ್ಲಿ ಪರಿಸರ ದಿನ ಆಚರಿಸುವ ಮೂಲಕ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು, ನ್ಯಾಯಾಂಗ ಇಲಾಖೆಯ ಪ್ರಮುಖರು, ನಗರಸಭೆ ಸಿಬ್ಬಂದಿ ಸಸಿಗಳನ್ನು ನಾಟಿ ಮಾಡಿದ್ದರು.

ಈ ಜಾಗವು ಘಟಕದ ಹೊರಗಿದ್ದು, ರಸ್ತೆ ಬದಿಯಲ್ಲಿರುವ ಕಾರಣ ಒತ್ತುವರಿ ಅಪಾಯ ಕಾಡಿತ್ತು. ಆದರೆ, ನಗರಸಭೆ ಹಸಿರು ಬೆಳೆಸುವ ಮೂಲಕ ಜಾಗವನ್ನೂ ಉಳಿಸಿಕೊಂಡಿದೆ. ತಪಸ್ಸಿ, ನೇರಳೆ, ಅರಳಿ, ಬೇವು, ಹುಲಗುಲಿ, ಗುಲ್ ಮೊಹರ್, ಅತ್ತಿ, ಹುಣಸೆ, ಅಲ ಮತ್ತಿತರ ಸಸಿಗಳನ್ನು ನಾಟಿ ಮಾಡಲಾಗಿದೆ.

ಕೈಕೊಟ್ಟ ಮಳೆ: ನವೆಂಬರ್ ಅಂತ್ಯದ ತನಕ ಲಭ್ಯವಿದ್ದ ನೀರನ್ನು ಬಳಸಿಕೊಂಡು ಸಸಿಗಳನ್ನು ಬೆಳೆಸಿದ್ದೆವು. ಆ ಬಳಿಕ ಬರದ ತೀವ್ರತೆ ಹೆಚ್ಚಿದ್ದು, ಘಟಕದ ಕೊಳವೆಬಾವಿಯೂ ಕೆಟ್ಟು ಹೋಗಿತ್ತು. ಅನಿವಾರ್ಯವಾಗಿ ಸಮೀಪದ ಕೆರೆ, ಹೊಂಡ, ಕೊಳವೆಬಾವಿಗಳಿಂದ ಟ್ಯಾಂಕರ್ ಮೂಲಕ ನೀರು ತಂದು ಹಾಕಿದ್ದೆವು ಎಂದು ಪರಿಸರ ಎಂಜಿನಿಯರ್ ಚಂದ್ರಕಾಂತ ಗುಡ್ನವರ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ನವೆಂಬರ್‌ನಿಂದ –ಏಪ್ರಿಲ್‌ ತನಕ ಸಸಿಗಳನ್ನು ಉಳಿಸಿಕೊಂಡಿರುವುದೇ ದೊಡ್ಡ ಸಾಹಸ. ಒಂದೆರಡು ಬಾರಿ, ಸಕ್ಕಿಂಗ್ ಯಂತ್ರದಲ್ಲೂ ನೀರು ತಂದು ಹಾಕಿದ್ದೇವೆ ಎನ್ನುತ್ತಾರೆ ಸಿಬ್ಬಂದಿ.

ತ್ಯಾಜ್ಯದಿಂದ ಗೊಬ್ಬರ: ಕೇವಲ ನೀರು ಮಾತ್ರವಲ್ಲ, ಗಿಡಕ್ಕೆ ಗೊಬ್ಬರದ ಅವಶ್ಯಕತೆ ಬಿದ್ದಿತ್ತು. ಅದಕ್ಕಾಗಿ, ತ್ಯಾಜ್ಯದಲ್ಲಿನ ಹಸಿ (ಕರಗಬಹುದಾದ ತ್ಯಾಜ್ಯ)ಯನ್ನು ಹಾಕಿ ಬೆಳೆಸಿದ್ದಾರೆ. ಸಕ್ಕಿಂಗ್‌ ಯಂತ್ರದ ಅಡಿಯಲ್ಲಿ ಉಳಿದ ಹೂಳನ್ನು ಘಟಕದಲ್ಲಿ ಹರಡಿ ಗೊಬ್ಬರವಾಗಿ ಮಾಡಿ, ಗಿಡಗಳಿಗೆ ಹಾಕಿದ್ದಾರೆ. ಘಟಕದಲ್ಲಿ ದೊರೆತ ವ್ಯರ್ಥ ಕಟ್ಟಿಗೆಗಳನ್ನು ಗಿಡಗಳಿಗೆ ಆಧಾರವಾಗಿ ಮಾಡಿ, ಬಿಸಿಲಿನಿಂದ ರಕ್ಷಣೆ ನೀಡಿದ್ದರು.

ಕೀಟ ನಾಶಕ: ಸುತ್ತಲ ಕಳೆಯಲ್ಲಿ ಹುಳ– ಹುಪ್ಪಡಿಗಳು ಬಂದು, ಕೀಟಬಾಧೆ ಹೆಚ್ಚಾಯಿತು. ಇದನ್ನು ನಿರ್ವಹಿಸಲು ಕೀಟನಾಶಕ ಬಳಸಬೇಕಾಯಿತು. ಅಪಾಯಕಾರಿ ಕಳೆ ನಾಶ ಮಾಡುವಂತೆ ಕೃಷಿ ಇಲಾಖಾಧಿಕಾರಿಗಳು ನೀಡಿದ ಸಲಹೆಯನ್ನು ಪಾಲಿಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿಯೂ ಅಗತ್ಯ ಸಲಹೆ ನೀಡಿ ನೆರವಾದರು ಎಂದರು.

ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಸುರಿದ ಬಳಿಕ ಗಿಡಗಳಲ್ಲಿ ಜೀವ ಕಳೆ ಮೂಡಿದ್ದು, ಹಚ್ಚ ಹಸಿರಾಗಿದೆ. ತೀವ್ರ ಬರದ ನಡುವೆಯೂ ಶೇ 100ರಷ್ಟು ಗಿಡಗಳನ್ನು ಉಳಿಸಿಕೊಂಡ ಸಿಬ್ಬಂದಿ, ಅಲ್ಲಲ್ಲಿ ಉಳಿದ ಜಾಗದಲ್ಲಿ ಈ ಬಾರಿ ಮತ್ತೆ ನಾಟಿ ಮಾಡಿದ್ದಾರೆ. ಪಕ್ಕದಲ್ಲೇ ಒಂದು ಹೊಂಡವಿದ್ದು, ಜಾಗದ ನೀರು ಹರಿದು ಹೋಗದೇ, ನಿಲ್ಲುವಂತೆ ಮಾಡಿದ್ದಾರೆ.

ಘಟಕದಲ್ಲಿ ಸಸಿ: ಭೂ ಭರ್ತಿ ಘಟಕವು ಸುಮಾರು 10 ಎಕರೆ ವ್ಯಾಪ್ತಿಯಿದ್ದು, ಆವರಣದಲ್ಲಿ 420 ಗಿಡಗಳನ್ನು ಹಲವು ವರ್ಷಗಳ ಹಿಂದೆಯೇ ನಾಟಿ ಮಾಡಲಾಗಿತ್ತು. ಆದರೆ, ವಿಸ್ತರಣಾ ಚಟುವಟಿಕೆ ಸಂದರ್ಭ ಕೆಲವನ್ನು ಅನಿವಾರ್ಯವಾಗಿ ತೆರವು ಮಾಡಲಾಗಿದೆ. ಇನ್ನಷ್ಟು ಗಿಡಗಳು ಇವೆ.

ಹಣ್ಣಿನ ಗಿಡಗಳಿಗೆ ನಿಷೇಧ

ಭೂ ಭರ್ತಿ ಘಟಕದ ಆವರಣದೊಳಗೆ ತ್ಯಾಜ್ಯ ಹಾಗೂ ಅದರ ಕಲುಷಿತ ನೀರಿನ ಕಾರಣ ಹಣ್ಣಿನ ಗಿಡಗಳನ್ನು ಬೆಳೆಸಬಾರದು ಎಂಬ ನಿರ್ದೇಶನವಿದೆ. ಹಣ್ಣುಗಳಲ್ಲಿ ರಾಸಾಯನಿಕ ಸೇರಿಕೊಂಡು, ಅದನ್ನು ಸೇವಿಸಿದ ಜೀವ ಸಂಕುಲಕ್ಕೆ ಹಾನಿಯಾಗುವ ಅಪಾಯವಿದೆ. ಆದರೆ, ಸುವಾಸನೆ ಬೀರುವ ಹೂವು, ಕಾಡು ಗಂಧ ಮತ್ತಿತರ ಸಸಿಗಳನ್ನು ಬೆಳೆಯಲು ಬಿಡಲಾಗಿದೆ ಎಂದು ಪರಿಸರ ಎಂಜಿನಿಯರ್ ಚಂದ್ರಕಾಂತ ಗುಡ್ನೆವರ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT