ನೆನಪಾಯ್ತು ‘ಮಾರ್ಜಾಲ ನ್ಯಾಯ’

7

ನೆನಪಾಯ್ತು ‘ಮಾರ್ಜಾಲ ನ್ಯಾಯ’

Published:
Updated:

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ..... ಎಂದು ಕೆ.ಎಸ್‌.ಎನ್‌ ಅವರ ಪದ್ಯ ಗುನುಗುತ್ತಾ ಮಧ್ಯಾಹ್ನದ ಬಿರುಬೇಸಗೆಯ ಧಗೆ ನಿವಾರಿಸಲು ತಣ್ಣನೆಯ ನಿಂಬೆಪಾನಕ ಹೀರುತ್ತಾ ಕಿಟಕಿಯ ಆಚೆಗೆ ಕಣ್ಣು ಹಾಯಿಸಿದೆ. ಒಳಗೆ ಧಗೆಯಾದರೂ ಕಣ್ಣಿಗೆ ತಂಪೆರೆಯುತಿತ್ತು ಹೊರಗಿನ ಹಚ್ಚಹಸುರಿನ ಮರಗಿಡಗಳ ಸಾಲು. ಸಪೋಟ, ಮಾವು, ಹಲಸು, ದಾಳಿಂಬೆ, ಗಸಗಸೆ, ನುಗ್ಗೆ ಮರಗಳು ಹೂಕಾಯಿಗಳನ್ನು ಬಿಟ್ಟು ನಳನಳಿಸುತ್ತಿದ್ದವು. ಆ ಮರಗಳ ತುಂಬಾ ಹಕ್ಕಿಗಳ ಕಲರವ. ಅವುಗಳಲ್ಲಿ ನನ್ನ ಗಮನ ಸೆಳೆದದ್ದು ಸೂರಕ್ಕಿಯ ಜೋಡಿ.

ಸೂರಕ್ಕಿ ಜೋಡಿ ನುಗ್ಗೆ ಮರದ ಮಕರಂದ ಹೀರುತ್ತಾ, ತಮ್ಮ ವಿಶಿಷ್ಟ ಕಂಠದಿಂದ ದನಿ ಮಾಡುತ್ತಾ ಟೊಂಗೆ

ಯಿಂದ ಟೊಂಗೆಗೆ ಹಾರುವುದನ್ನು ನೋಡುವುದೇ ಒಂದು ಸೊಗಸು. ಇಷ್ಟೇ ಆಗಿದ್ದರೆ ಅದು ನಿತ್ಯದ ದೃಶ್ಯವಾಗುತ್ತಿತ್ತು. ಆದರೆ ಹಾಗಿರದೇ ಸೂರಕ್ಕಿ ಜೋಡಿಯಲ್ಲದೇ ಮತ್ತೊಂದು ಹಕ್ಕಿಯ ಒಂದೇ ರೀತಿಯ ದನಿ ಕೇಳಿಬಂದು ಆ ಹಕ್ಕಿಗಾಗಿ ನನ್ನ ಕಣ್ಣುಗಳು ಹುಡುಕಾಡ ತೊಡಗಿದವು. ಹಸಿರು ಹುಲ್ಲು, ಕುರುಚಲು ಗಿಡಗಳ ನಡುವಿನಿಂದ ಹೊಮ್ಮುತಿದ್ದ ಆ ದನಿ ನನ್ನ ಕುತೂಹಲವನ್ನು ಕ್ಷಣಕ್ಷಣಕ್ಕೂ ಹೆಚ್ಚಿಸುತ್ತಾ ಹೋಯಿತು. ಅಷ್ಟರಲ್ಲಿ ಸೂರಕ್ಕಿಯೊಂದು ಮಕರಂದವನ್ನು ಹೀರಿ ನೆಲದ ಹುಲ್ಲುಹಾಸಿನತ್ತ ಪದೇ ಪದೇ ಧಾವಿಸುತ್ತಿತ್ತು.

ನುಗ್ಗೆ ಹೂವಿನ ಮಕರಂದ ಹೀರಿದ ತಾಯಿ ಸೂರಕ್ಕಿ ಹಸಿರು ಹಾಸಿನ ಮೇಲೆ ಕಂಡೂ ಕಾಣದಂತಿದ್ದ ಮರಿಹಕ್ಕಿಯ ಬಳಿಗೆ ತೆರಳಿ ತಾನು ಹೀರಿದ ಮಕರಂದವನ್ನು ಮರಿಗೆ ಉಣಿಸಿ ಕ್ಷಣಮಾತ್ರದಲ್ಲಿ ಪುರ‍್ರನೆ ಮತ್ತೆ ನುಗ್ಗೆ ಹೂವಿನತ್ತ ಹಾರಿತು. ಈ ಮಧ್ಯೆ ತಂದೆ ಸೂರಕ್ಕಿ ಮರಿಸೂರಕ್ಕಿಗೆ ಮಕರಂದ ಉಣಿಸಲು ಧಾವಿಸಿತು. ಅಪ್ಪ ಅಮ್ಮನ ಈ ಅಕ್ಕರೆಯ ಆರೈಕೆಯ ನಡುವೆಯೂ ಆಹಾರಕ್ಕಾಗಿ ಪ್ರಲಾಪಿಸುತಿತ್ತು ಮರಿಸೂರಕ್ಕಿ. ಮನುಷ್ಯ ವಾತ್ಸಲ್ಯಕ್ಕೂ ಮಿಗಿಲಾಗಿ ಆ ಸೂರಕ್ಕಿ ಜೋಡಿ ತಮ್ಮ ಮರಿಯನ್ನು ಜೋಪಾನ ಮಾಡುವುದು ನೋಡಿ ಮನಸ್ಸು ತುಂಬಿ ಬಂತು. ಮೊಗದಲ್ಲಿ ಮುಗುಳ್ನಗೆಯೊಂದು ಮೂಡಿತು. ಆ ತಂದೆತಾಯಿ ಹಕ್ಕಿಗಳೆರಡೂ ಒಂದು ಕ್ಷಣವನ್ನೂ ವ್ಯರ್ಥ ಮಾಡದೇ ಮರಿಹಕ್ಕಿಯ ಹಸಿವನಿಂಗಿಸಲು ಪ್ರಯತ್ನಿಸುತ್ತಿದ್ದವು.

ಮರಿಹಕ್ಕಿ ನೆಲದ ಮೇಲೇಕೆ ಇದೆ ?

ಹೀಗೊಂದು ಪ್ರಶ್ನೆ ನನ್ನ ಮನದಲ್ಲಿ ಮೂಡಿತು. ‘ಬಹುಶಃ ಮರದಲ್ಲಿ ಗೂಡು ಇದ್ದು, ಆ ಗೂಡಿನಿಂದ ಈ ಮರಿಹಕ್ಕಿ ನೆಲಕ್ಕುರುಳಿರಬಹುದೇ’ ಎಂಬ ಅನುಮಾನದಿಂದ ಮರಗಳನ್ನೆಲ್ಲಾ ಒಮ್ಮೆ ನನ್ನ ಕಣ್ಣುಗಳಿಂದ ಜಾಲಾಡಿದೆ. ಯಾವ ಗೂಡೂ ಕಣ್ಣಿಗೆ ಬೀಳಲಿಲ್ಲ. ಮರಿಹಕ್ಕಿ ನೆಲದ ಮೇಲಿದ್ದರೆ ಅದರ ಜೀವಕ್ಕೆ ಅಪಾಯ ಎಂದು ಒಳಗೊಳಗೇ ಆತಂಕ ಶುರುವಾಯಿತು. ಆದರೆ ಪ್ರಕೃತಿಯ ಆಗುಹೋಗುಗಳಲ್ಲಿ ಮನುಷ್ಯ ತಲೆಹಾಕುವುದು ಪ್ರಕೃತಿಗೇ ಮಾರಕವೆಂದು ಅರಿತಿದ್ದರಿಂದ ಆ ಕ್ಷಣವನ್ನು ಆಸ್ವಾದಿಸುವುದಕ್ಕಷ್ಟೇ ನನ್ನ ಆಲೋಚನೆಯನ್ನು ಸೀಮಿತಗೊಳಿಸಿದೆ. ಹೀಗೆ ಸುಮಾರು ಗಂಟೆಗಳು ಉರುಳಿದವು.

ಸಂಜೆಯಾಗುತ್ತಾ ಬಂತು. ಸೂರಪ್ಪ ಬಾನಿಗೆಲ್ಲಾ ಕೆಂಬಣ್ಣವನ್ನು ಸಿಂಪಡಿಸಿ ಹೊರಡಲನುವಾದ. ಆದರೆ ಈ ಹಕ್ಕಿಗಳು ಮಾತ್ರ ತಮ್ಮ ಕಾಯಕ ನಿಲ್ಲಿಸುವಂತೆ ತೋರಲಿಲ್ಲ. ಅಷ್ಟರಲ್ಲಿ ಅದೆಲ್ಲಿ ಕಾದು ಕುಳಿತಿತ್ತೋ ಗಡವ ಬೆಕ್ಕು, ಒಂದೇ ನೆಗೆತಕ್ಕೆ ಹಾರಿ ಆ ಪುಟ್ಟ ಮರಿಯನ್ನು ಗಬಕ್ಕನೆ ಬಾಯಲ್ಲಿ ಕಚ್ಚಿಹಿಡಿಯಿತು. ನಾನು ಹೌಹಾರಿ ಕಿರುಚಿದೆ. ಕೂಡಲೇ ಆ ಬೆಕ್ಕು ಮರಿ ಹಕ್ಕಿಯನ್ನು ಬಾಯಲ್ಲಿ ಕಚ್ಚಿ ಹಿಡಿದೇ ಬಾಳೆಗಿಡಗಳ ನಡುವೆ ನುಸುಳಿತು. ಸೂರಕ್ಕಿ ಜೋಡಿಗಳ ಆಕ್ರಂದನ ಮುಗಿಲುಮುಟ್ಟಿತ್ತು. ಆ ಹಕ್ಕಿಗಳೂ ಬೆಕ್ಕು ಓಡಿದ ದಿಕ್ಕಿಗೇ ಹಾರಿದವು. ಹಕ್ಕಿಗಳ ಆರ್ತನಾದಕ್ಕೆ ಮೂಕಪ್ರೇಕ್ಷಕಳಾದೆ. ಐದಾರು ನಿಮಿಷಗಳ ಬಳಿಕ ಮರಿಹಕ್ಕಿಯನ್ನು ತಿಂದ ಬೆಕ್ಕು ಮೂತಿಯನ್ನು ನೆಕ್ಕಿಕೊಳ್ಳುತ್ತಾ ‘ಮಿಯಾಂವ್ ಮಿಯಾಂವ್’ ಎನ್ನುತ್ತಾ, ನನ್ನ ಕಾಲುಗಳಿಗೆ ತನ್ನ ಮೈಯ್ಯನ್ನು ತೀಡಿ ತಾನೊಂದು ಮುಗ್ಧತೆಯ ಮೂರ್ತಿಯೋ ಎಂಬಂತೆ ವರ್ತಿಸತೊಡಗಿತು. ಪ್ರೈಮರಿ ಶಾಲೆಯಲ್ಲಿ ಓದಿದ ‘ಮಾರ್ಜಾಲ ನ್ಯಾಯ’ ನೆನಪಿಗೆ ಬಂದು ನಿಟ್ಟುಸಿರಿಡುವುದು ನನ್ನ ಸರದಿಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry