ಫಲವಿಲ್ಲದ ಕೊಡುಗೆ

7

ಫಲವಿಲ್ಲದ ಕೊಡುಗೆ

Published:
Updated:
ಫಲವಿಲ್ಲದ ಕೊಡುಗೆ

ಮಕ್ಕಳಿಗಾಗಿ ಸರಳ ಭಾಷೆಯಲ್ಲಿ ಮಹಾಭಾರತವನ್ನು ಬರೆದಿದ್ದೆ. ಮಕ್ಕಳ ಮಾಸಪತ್ರಿಕೆಯೊಂದರಲ್ಲಿ ಅದು ಐವತ್ತೆರಡು ಕಂತುಗಳಲ್ಲಿ ಸುಮಾರು ಐದು ವರ್ಷ ಪ್ರಕಟವಾಯಿತು. ಬಳಿಕ ಪ್ರಕಾಶಕರೊಬ್ಬರು ಮುಂದೆ ಬಂದು ಪುಸ್ತಕ ರೂಪದಲ್ಲಿ ಪ್ರಕಟಿಸುವುದಾಗಿ ಹೇಳಿದರು. ರವಿವರ್ಮನ ಚಿತ್ರಗಳೊಂದಿಗೆ ಅದನ್ನು ಆಕರ್ಷಕವಾಗಿ ಪ್ರಕಟಿಸಿ ನನಗೆ ಗೌರವ ಪ್ರತಿಗಳೆಂದು ಹತ್ತು ಪುಸ್ತಕಗಳನ್ನು ಕಳುಹಿಸಿಕೊಟ್ಟರು. ಅದರಲ್ಲಿ ಒಂಭತ್ತು ಪ್ರತಿಗಳನ್ನು ಇಷ್ಟಮಿತ್ರರಿಗೆಲ್ಲ ಕೊಟ್ಟು ಒಂದು ಪ್ರತಿಯನ್ನು ನಾನಿರಿಸಿಕೊಂಡೆ.

ಹೀಗೆ ನಾನು ಪುಸ್ತಕ ನೀಡಿದ ಮಿತ್ರರೊಬ್ಬರ ತಾಯಿ ವಯಸ್ಸು ಎಂಭತ್ತಾಗಿದ್ದರೂ ಕನ್ನಡಕವಿಲ್ಲದೆ ಪುಸ್ತಕಗಳನ್ನು ಆಸ್ಥೆಯಿಂದ ಓದುತ್ತಿದ್ದರು. ಹಾಡು, ಹಸೆ, ಚಟ್ನಿ, ಉಪ್ಪಿನಕಾಯಿ ಇದರಲ್ಲೆಲ್ಲ ಅವರದು ಎತ್ತಿದ ಕೈ. ಹೀಗಿದ್ದಾಗ ಆ ಮಹಾತಾಯಿ ತೀರಿಕೊಂಡರು. ಅವರ ವೈಕುಂಠ ಸಮಾರಾಧನೆಗೆ ನನಗೂ ಕರೆ ಇತ್ತು. ಹೋಗಿದ್ದೆ. ಊಟಕ್ಕೆ ಮೊದಲು ಬಂದವರಿಗೆ ಫಲಗಳು, ಧಾನ್ಯಗಳು, ಸುವರ್ಣ ಮೊದಲಾದ ದಾನಗಳನ್ನು ಕೊಡುತ್ತ ಬಂದರು. ಕಡೆಗೆ ನನ್ನ ಪಕ್ಕದಲ್ಲಿ ಕುಳಿತವರಿಗೆ ಒಂದು ಪುಸ್ತಕವನ್ನು ಜೊತೆಗೆ ನೂರು ರೂಪಾಯಿ ನೋಟು ಇರಿಸಿ ದಾನವಾಗಿ ತಂದುಕೊಟ್ಟರು.

ದಾನ ಸ್ವೀಕರಿಸಿದವರು ನೋಟನ್ನು ಕಿಸೆಗೆ ಸೇರಿಸಿ ಪುಸ್ತಕವನ್ನು ತಟಕ್ಕನೆ ಕೆಳಗೆ ಹಾಕಿದರು. ನೋಡಿದರೆ ನಾನು ಬರೆದ ಮಹಾಭಾರತ ಪುಸ್ತಕ! ಓದಲಿ, ಗ್ರಂಥಾಲಯದಲ್ಲಿಡಲಿ ಎಂಬ ಭಾವದಿಂದ ಕೊಟ್ಟ ಪುಸ್ತಕದ ಹಿಂದಿರುವ ಆಶಯವನ್ನು ಅರ್ಥ ಮಾಡಿಕೊಳ್ಳದೆ ಪೀಡೆ ತೊಲಗಲಿ ಎಂಬಂತೆ ದಾನವಾಗಿ ಕೊಟ್ಟಿದ್ದರು. ದಾನ ಸ್ವೀಕರಿಸಿದವರಿಗೆ ಅದನ್ನು ಬರೆದವನು ನಾನು ಎಂಬುದು ಗೊತ್ತಿರಲಿಲ್ಲ. ಅವರು ನನ್ನೊಂದಿಗೆ, ‘ಒಂದು ಹಣ್ಣನ್ನೋ ಧಾನ್ಯವನ್ನೋ ಕೊಡುತ್ತಿದ್ದರೆ ತಿಂದು ಸಂತೋಷಪಡಬಹುದಿತ್ತು. ಆದರೆ ಪುಸ್ತಕ ಕೊಟ್ಟಿದ್ದಾರೆ. ಈಗಿನ ಕಾಲದಲ್ಲಿ ಪುಸ್ತಕ ಯಾರಿಗೆ ಬೇಕು ಹೇಳಿ?’ ಎಂದರು.

‘ಯಾಕೆ ನಿಮಗೆ ಮಕ್ಕಳಿಲ್ಲವೆ? ಮಕ್ಕಳ ಕತೆ ತಾನೆ? ಸಂತೋಷದಿಂದ ಓದಿಕೊಳ್ತಾರೆ, ಅವರಿಗೆ ಕೊಡಿ’ ಎಂದೆ. ಅವರು ನನ್ನನ್ನು ಕೆಕ್ಕರಿಸಿ ನೋಡಿದರು. ‘ಒಳ್ಳೆ ಮಾತು ಹೇಳಿದಿರಿ ಬಿಡಿ. ನನ್ನ ಮಕ್ಕಳು ಇಂಗ್ಲಿಷ್ ಮೀಡಿಯಮ್ ಶಾಲೆಗೆ ಹೋಗುವುದು. ಅದರ ಫೀಸು, ಡೋನೇಷನ್ ಎಷ್ಟಾಗ್ತದೆ ನೀವೇ ಹೇಳಿ. ಪಠ್ಯ ಪುಸ್ತಕ ಹೊರತು ಬೇರೆ ಯಾವುದನ್ನೂ ಓದಲು ನನ್ನ ಹೆಂಡತಿ ಬಿಡುವುದಿಲ್ಲ. ಒಂದು ಪತ್ರಿಕೆ ಓದಲೂ ನಮ್ಮಲ್ಲಿ ಅವಕಾಶವಿಲ್ಲ. ಇಷ್ಟು ಹಣ ಸುರಿದು ಅವರು ಈ ಪುಸ್ತಕಗಳನ್ನು ಓದಿ ಮಾರ್ಕ್ಸ್‌ ತೆಗೆಯದೆ ಢುಮ್ಕಿ ಹೊಡೆದರೆ ನಮ್ಮ ಕಥೆ ಗೋವಿಂದ’ ಎಂದರು.

‘ಹೌದು, ನಿಮ್ಮ ಮಾತು ನಿಜ’ ಎಂದೆ. ಅವರು ಪಿಸು ದನಿಯಿಂದ, ‘ಈ ಪುಸ್ತಕ ನಿಮಗೆ ಬೇಕೆ? ಏನಾದರೂ ಕೊಂಚ ಹಣ ಕೊಡಿ. ಧರ್ಮಕ್ಕೆ ಕೊಟ್ಟದ್ದು ಅಂತ ಬೇಡ. ನಿಮಗೆ ಕೊಡುತ್ತೇನೆ’ ಎಂದರು. ನನ್ನ ಪುಸ್ತಕವನ್ನು ನನಗೇ ಮಾರುತ್ತಿರುವ ಅವರ ವರ್ತನೆ ನೋಡಿ ತುಂಬ ಸಂಕಟವಾಯಿತು. ಅರ್ಹರಲ್ಲದವರಿಗೆ ಪುಸ್ತಕಗಳನ್ನು ಕೊಟ್ಟು ನಮ್ಮ ಹಿರಿಮೆಯನ್ನು ತೋರಿಸಿಕೊಳ್ಳುವ ಆತುರ ತೋರಿಸಿದರೆ ಅದರಿಂದ ಸಿಗುವ ಫಲ ಏನೆಂಬುದು ಅರ್ಥವಾಗಿ ವಿಷಾದದ ನಿಟ್ಟುಸಿರು ಚೆಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry