ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಗ್ರಾಮೀಣ ಕುಟುಂಬ ಉತ್ಸವ

Last Updated 6 ಜೂನ್ 2018, 19:30 IST
ಅಕ್ಷರ ಗಾತ್ರ

ಈಗ ಸೊಪ್ಪು, ಧಾನ್ಯ, ಕಾಳುಗಳು ಎಲ್ಲವನ್ನೂ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಬೆಳೆಸುತ್ತಾರೆ. ಈ ಆಹಾರಗಳನ್ನು ಸೇವಿಸಿದಾಗ ಅದರಲ್ಲಿನ ವಿಷಯುಕ್ತ ಅಂಶಗಳು ದೇಹ ಸೇರುತ್ತವೆ. ಇದಕ್ಕೆ ನಮ್ಮ ಪರಂಪರಾಗತ ಆಹಾರ ಪದ್ಧತಿ ಸಿರಿಧಾನ್ಯ ಆಹಾರ ಸೇವನೆಯೇ ಪರಿಹಾರ. ಸಿರಿಧಾನ್ಯ ಸೇವನೆ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಶ್ರೀ ಗ್ರಾಮೀಣ ಕುಟುಂಬವು ‘ಭವಿಷ್ಯದ ಆಹಾರ ಸಿರಿಧಾನ್ಯ– ಗ್ರಾಮೀಣ ಕುಟುಂಬ ಉತ್ಸವ’ವನ್ನು ಆಯೋಜಿಸಿದೆ.

ಲಾಲ್‌ಬಾಗ್‌ನ ಡಾ.ಮರಿಗೌಡ ಸ್ಮಾರಕ ಭವನದಲ್ಲಿ ಜೂನ್‌ 8ರಿಂದ 10ರವರೆಗೆ ಸಿರಿಧಾನ್ಯ ಮೇಳ ನಡೆಯಲಿದೆ. ಆರು ವರ್ಷಗಳಿಂದ ಶ್ರೀ ಗ್ರಾಮೀಣ ಕುಟುಂಬ ಈ ಮೇಳವನ್ನು ಆಯೋಜಿಸುತ್ತಾ ಬರುತ್ತಿದೆ. ಜನರು ಇಲ್ಲಿ ಸಿರಿಧಾನ್ಯಗಳಾದ ನವಣೆ, ಸಾಮೆ, ಆರ್ಕಾ, ಊದಲು, ಕೊರಲು, ಬರಗು ಧಾನ್ಯಗಳ ಉಪಯೋಗ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಮೇಳ ಮೂರು ದಿನಗಳ ಕಾಲ ಬೆಳಿಗ್ಗೆ 8ರಿಂದ ಸಂಜೆ 7ರವರೆಗೆ ನಡೆಯಲಿದೆ.

‘ಮೇಳದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಪಾಲಿಶ್‌ ರಹಿತ ಸಿರಿಧಾನ್ಯ ಮಾರಾಟ ಮಾಡಲಾಗುವುದು. ನವಣೆ, ಸಾಮೆ, ಆರ್ಕಾ, ಊದಲು, ಕೊರಲು, ಬರಗುವನ್ನು ರಿಯಾಯಿತಿ ದರದಲ್ಲಿ 25 ಕೆ.ಜಿ ಖರೀದಿಸಬಹುದು. ಇಲ್ಲಿ 100ಕ್ಕೂ ಹೆಚ್ಚು ಮಳಿಗೆಗಳು ಇರಲಿದ್ದು, ಸಿರಿಧಾನ್ಯಗಳ ಅಡುಗೆಗಳ ಸವಿಯನ್ನೂ ಉಣ್ಣಬಹುದಾಗಿದೆ.

ಇದಲ್ಲದೇ ಸಿರಿಧಾನ್ಯಗಳ ಕಾಂಬೋ ಪ್ಯಾಕೇಜ್‌ ಲಭ್ಯವಿದ್ದು, ಇದರಲ್ಲಿ ಎಲ್ಲಾ ಬಗೆಯ ಸಿರಿಧಾನ್ಯ, ಸಿರಿಧಾನ್ಯ ಅಡುಗೆ ಪುಸ್ತಕ, ಹತ್ತಿ ಬ್ಯಾಗ್‌ನೊಂದಿಗೆ ಆಹಾರ ಮಳಿಗೆಯಲ್ಲಿ ಸಿರಿಧಾನ್ಯಗಳ ಆಹಾರಗಳನ್ನೂ ಸವಿಯಬಹುದು. ಈ ಕಾಂಬೋ ಬೆಲೆ ₹550. ಅರ್ಧ ಕೆ.ಜಿ ಸಿರಿಧಾನ್ಯಗಳ ಕಾಂಬೋ ಬೆಲೆ ₹300’ ಎನ್ನುತ್ತಾರೆ ಗ್ರಾಮೀಣ ಕುಟುಂಬ ಸಂಸ್ಥಾಪಕ ಎಂ.ಎಚ್‌. ಶ್ರೀಧರ ಮೂರ್ತಿ.

ಈ ಉತ್ಸವದಲ್ಲಿ ಜೂನ್‌ 8ರಂದು (ಶುಕ್ರವಾರ) ರಾಜ್ಯದ 10 ಸಿರಿಧಾನ್ಯ ರೈತರಿಗೆ ಸನ್ಮಾನಿಸಿ ಗೌರವಿಸಲಾಗುವುದು. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ಡಾ.ಜಗದೀಶ್‌, ಕೊಪ್ಪಳ ರೈತ  ಜಯಂತ್‌ನಾಥ್‌ ಬಿ.ಆರ್‌., ಕೊಳ್ಳೇಗಾಲದ ರೈತ ರೇಚಣ್ಣ, ಬಾಗಲಕೋಟೆಯ ದರೆಪ್ಪ ಪರೆಪ್ಪಾ ಕಿತ್ತೂರು, ಚಾಮರಾಜನಗರದ ಹೊನ್ನೂರು ಪ್ರಕಾಶ್‌, ಧಾರವಾಡದ ವೀರನಾರಾಯಣ ಕುಲಕರ್ಣಿ, ಹಾವೇರಿಯ ಮೀನಾಕ್ಷಮ್ಮ, ಗ್ರಾಮೀಣ ಕುಟುಂಬದ ಗಿರೀಶ್‌ ಕುಮಾರ್‌ ಎಂ.ಕೆ., ಹೊನ್ನಾವರದ ಸಾವಯವ ಕೃಷಿಕ ಸೀತಾರಾಮ ಹೆಗಡೆ ಅವರಿಗೆ ‘2018ರ ಗ್ರಾಮೀಣ ಕುಟುಂಬ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಇನ್ನು ಪಶ್ಚಿಮ ಘಟ್ಟ ಉಳಿವಿಗಾಗಿ ಹೋರಾಡಿದ ಪರಿಸರ ಪ್ರೇಮಿ ಡಾ.ಅ.ನ.ಯಲ್ಲಪ್ಪ ರೆಡ್ಡಿ ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ ಎಂದರು ಶ್ರೀಧರ ಮೂರ್ತಿ.

ಜೂನ್‌ 9ರಂದು (ಶನಿವಾರ) ಸಿರಿಧಾನ್ಯಗಳನ್ನು ಬೆಳೆಯುವ ಆಸಕ್ತರಿಗೆ ಪ್ರಾಚೀನ ಕೃಷಿ, ಪ್ರಕ್ರಿಯೆ, ಅದರ ಉಪಯುಕ್ತತೆ ಬಗ್ಗೆ ತಿಳಿಸಲು ತಜ್ಞರಿಂದ ತರಬೇತಿ ಕಾರ್ಯಾಗಾರ ನಡೆಯಲಿದೆ. ಮಲ್ಲಿಕಾರ್ಜುನ ಹೊಸಪಾಳ್ಯ, ಮಹೇಶ್‌ ಮೂರ್ತಿ, ನಾಗರಾಜು, ವೀರಸಂಗಣ್ಣ ಅವರು ತರಬೇತಿ ನಡೆಸಿಕೊಡಲಿದ್ದಾರೆ. ತರಬೇತಿ ಬಳಿಕ ಸಿರಿಧಾನ್ಯಗಳ ಬಿತ್ತನೆ ಬೀಜವೂ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದರು.

ಈ ಉತ್ಸವದಲ್ಲಿ ಆಕರ್ಷಣೆ ಸಿರಿಧಾನ್ಯ ಅಡುಗೆ ಹಾಗೂ ಅಡುಗೆ ತರಬೇತಿ. ಭೂಮಿಕಾ ಮಿಲೆಟ್‌ ತಂಡ ಆಸಕ್ತರಿಗೆ 8ರಿಂದ 10 ಬಗೆ ಸಿರಿಧಾನ್ಯ ಅಡುಗೆ ಪ್ರಾತ್ಯಕ್ಷಿಕೆ ಶನಿವಾರ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಇದಲ್ಲದೇ ಸಿರಿಧಾನ್ಯ ಅಡುಗೆ ಸ್ಪರ್ಧೆಗಳು ನಡೆಯಲಿವೆ. ಜೂನ್‌ 10 (ಭಾನುವಾರ) ಸಿರಿಧಾನ್ಯದ ಪ್ರಚಾರಕ, ಸಂಶೋಧಕ ಮೈಸೂರಿನ ಡಾ.ಖಾದರ್‌ ಅವರ ಜೊತೆ ಸಂವಾದ ಕಾರ್ಯಕ್ರಮ ಇರಲಿದೆ. ಇಲ್ಲಿ ಸಿರಿಧಾನ್ಯಗಳ ಕುರಿತಾದ ಸಂದೇಹ, ಪ್ರಶ್ನೆಗಳಿಗೆ ಅವರು ಉತ್ತರಿಸಲಿದ್ದಾರೆ. ಡಾ.ಖಾದರ್‌ ಅವರಿಗೆ ಪ್ರಶ್ನೆ ಕೇಳಲಿಚ್ಛಿಸುವವರು 99806 51786 ಮೊಬೈಲ್‌ ಸಂಖ್ಯೆಗೆ ಪ್ರಶ್ನೆಗಳನ್ನು ವಾಟ್ಸ್‌ಆ್ಯಪ್‌ ಮಾಡಬಹುದು.

ಉತ್ಸವದಲ್ಲಿ ಕಾಡು ಜೇನು, ಜೋನಿ ಬೆಲ್ಲ, ನಾಟಿ ತುಪ್ಪ, ಆಗಸೆ ಬೀಜ, ಸೂರ್ಯಕಾಂತಿ ಬೀಜ, ಕಾಲಜೀರಾ, ತುಳಸೀ ಬೀಜ, ಕಲ್ಲಂಗಡಿ ಬೀಜ, ಪಾಲಿಶ್‌ರಹಿತ ಕಾಳುಗಳು, ರಾಗಿ, ಜೋಳ, ಸಜ್ಜೆ, ಪಾಲಿಶ್‌ರಹಿತ ಅಕ್ಕಿ, ಉಪ್ಪಿನಕಾಯಿಗಳು, ಪಾನೀಯಗಳು, ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸಬಹುದು.

ಗ್ರಾಮೀಣ ಟೆರಕೋಟಾಗಳಾದ ಮಣ್ಣಿನ ಅಡುಗೆ ಪಾತ್ರೆ, ತಾಮ್ರದ ನಿರಿನ ಬಾಟಲಿಗಳು ಇಲ್ಲಿ ಲಭ್ಯ. ಕೈಮಗ್ಗ, ಖಾದಿ, ಕರಕುಶಲ ಉತ್ಪನ್ನಗಳ ಮಾರಾಟ ಮಳಿಗೆಗಳು ಇಲ್ಲಿವೆ.

*****

ಮನುಷ್ಯ ವಿಷಯುಕ್ತ ಆಹಾರ ಸೇವಿಸಿ, ಆಸ್ಪತ್ರೆಗೆ ಹೋಗುತ್ತಾನೆ. ಅಲ್ಲಿ ಸಿಗುವ ಔಷಧೋಪಚಾರಗಳು ಇಂತಹ ಆಹಾರ ಸೇವನೆಯನ್ನೇ ಪ್ರೋತ್ಸಾಹಿಸುತ್ತದೆ. ಹಾಗಾಗಿ ಒಬ್ಬ ವ್ಯಕ್ತಿ ತನ್ನ ಆರೋಗ್ಯದ ಬಗ್ಗೆ ತಾನೇ ವೈಯಕ್ತಿಕ ಕಾಳಜಿ ವಹಿಸಬೇಕು. ಸಿರಿಧಾನ್ಯಗಳಲ್ಲಿ ದೇಹದ ‍ಪ್ರತಿ ಅಂಗಗಳಿಗೆ ಬೇಕಾದ ಪೋಷಕಾಂಶ, ಖನಿಜಾಂಶಗಳು ಹೇರಳವಾಗಿವೆ

-ಎಂ.ಎಚ್‌.ಶ್ರೀಧರ ಮೂರ್ತಿ

ಸಂಸ್ಥಾಪಕ, ಶ್ರೀ ಗ್ರಾಮೀಣ ಕುಟುಂಬ

ಸ್ಥಳ: ಡಾ. ಮರಿಗೌಡ ಸ್ಮಾರಕ ಭವನ, ಲಾಲ್‌ಬಾಗ್‌

ಸಮಯ: ಜೂನ್‌ 8ರಿಂದ 10. ಬೆಳಿಗ್ಗೆ 8ರಿಂದ 7

ಸಂಪರ್ಕಕ್ಕೆ– 99806 51786

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT