6

‘ಇಲ್ಲಿ ಹುಡುಗರು ಮರಡೋನಾ ಅವರಂತಾಗಬೇಕು’

Published:
Updated:
‘ಇಲ್ಲಿ ಹುಡುಗರು ಮರಡೋನಾ ಅವರಂತಾಗಬೇಕು’

ರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿರುವ ಬೊಕಾ ಜೂನಿಯರ್ಸ್ ಜಗತ್ತಿನ ಪ್ರತಿಷ್ಠಿತ ವೃತ್ತಿಪರ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಒಂದು. ಡೀಗೊ ಮರಡೋನಾ, ನಿಕೋಲಾಸ್ ಬರ್ಡಿಸ್ಸೊ, ಕಾರ್ಲೋಸ್ ತೆವೆಜ್ ಅವರಂಥ ಫುಟ್‌ಬಾಲ್ ಮಾಂತ್ರಿಕರು ತರಬೇತಿ ಪಡೆದದ್ದು ಇದೇ ಕ್ಲಬ್‌ನಲ್ಲಿ.

ಫುಟ್‌ಬಾಲ್ ಉತ್ತೇಜನಕ್ಕಾಗಿ ಬೊಕಾ ಜೂನಿಯರ್ಸ್ ಸಂಸ್ಥೆಯು ಮುಂಬೈ ಹಾಗೂ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಅಕಾಡೆಮಿಗಳನ್ನು ಸ್ಥಾಪಿಸಿದೆ. ಈ ಅಕಾಡೆಮಿಯ ಉದ್ದೇಶ, ಕಲಿಕಾ ಕ್ರಮಗಳು ಹಾಗೂ ಇನ್ನೂ ಮುಂತಾದ ವಿಷಯಗಳ ಕುರಿತು ಇದರ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸುನಂದ್ ದಾಸ್ ಅವರು ‘ಮೆಟ್ರೊ’ದೊಂದಿಗೆ ಮಾತನಾಡಿದ್ದಾರೆ...

(ಸುನಂದ್ ದಾಸ್)

ಬೊಕಾ ಜೂನಿಯರ್ಸ್ ಅಂತರರಾಷ್ಟ್ರೀಯ ಶಾಲೆ ಬಗ್ಗೆ ಹೇಳಿ....

ಎಲ್ಲರಿಗೂ ಗೊತ್ತಿರುವಂತೆ ಫುಟ್‌ಬಾಲ್ ಕಲಿಕೆಗೆ ಭಾರತದಲ್ಲಿ ಅವಕಾಶಗಳು ಕಡಿಮೆ. ಇದೇ ಕಾರಣದಿಂದ ಬೇರುಮಟ್ಟದಿಂದ ಫುಟ್‌ಬಾಲ್ ಕ್ರೀಡೆಗೆ ಉತ್ತೇಜನ ಸಿಗಬೇಕು ಎಂಬುದು ಬೊಕಾ ಜೂನಿಯರ್ಸ್ ಕ್ಲಬ್‌ನ ಆಶಯ. ಅದನ್ನು ಸಾಕಾರಗೊಳಿಸಲು ಭಾರತವು ಸೇರಿದಂತೆ 9 ದೇಶಗಳಲ್ಲಿ ಕ್ಲಬ್ ತನ್ನ ಶಾಲೆಗಳನ್ನು ಆರಂಭಿಸಿದೆ. ಈ ಕ್ರೀಡೆಗೆ ಸಂಬಂಧಪಟ್ಟಂತೆ ಎಲ್ಲ ರೀತಿಯ ಕಲಿಕಾ ಸೌಲಭ್ಯಗಳನ್ನು ಒದಗಿಸುವ ವೃತ್ತಿಪರ ಅಕಾಡೆಮಿ ಆಗಿರುವ ಈ ಶಾಲೆಯೂ ಭಾರತದಲ್ಲಿ ಮುಂಬೈ ಹಾಗೂ ಬೆಂಗಳೂರಿನಲ್ಲಿ ಮಾತ್ರ ಇದೆ. ಜೊತೆಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ನ ಮಾನ್ಯತೆ

(ಎಐಎಫ್ ಎಫ್ ) ಇದಕ್ಕಿದೆ. ಬೆಂಗಳೂರಿನಲ್ಲಿ ಒಟ್ಟು ಎಂಟು ಕೇಂದ್ರಗಳಲ್ಲಿ ಈ ಅಕಾಡೆಮಿಯು ಕಾರ್ಯ ನಿರ್ವಹಿಸುತ್ತಿದೆ. 6 ವರ್ಷದಿಂದ 18 ವರ್ಷದೊಳಗಿನ ಸುಮಾರು 500 ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಈ ಅಕಾಡೆಮಿಯು ಯಾವ ರೀತಿಯ ಕಲಿಕಾ ಕ್ರಮಗಳನ್ನು ಅಳವಡಿಸಿಕೊಂಡಿದೆ?

ಬೊಕಾ ಜೂನಿಯರ್ಸ್ ಕ್ಲಬ್‌ ತನ್ನದೇ ಆದ ಸಾಂಪ್ರದಾಯಿಕ ಕಲಿಕಾ ಪದ್ದತಿಯನ್ನು ಅನುಸರಿಸುತ್ತದೆ. ಕೇವಲ ಗೆಲ್ಲುವ ಅಥವಾ ಸೋಲುವ ಬಗ್ಗೆ ಇಲ್ಲಿ ಹೇಳಿಕೊಡುವುದಿಲ್ಲ. ಬದಲಿಗೆ ಒಬ್ಬ ಫುಟ್‌ಬಾಲ್ ಆಟಗಾರನಿಗೆ ಅಗತ್ಯವಾಗಿ ಬೇಕಿರುವ ಪಾದಗಳ ಸಮರ್ಪಕ ಚಲನೆ, ಶಾರ್ಟ್ ಪಾಸ್, ಲಾಂಗ್ ಪಾಸ್, ಮಾನಸಿಕ ಹಾಗೂ ದೈಹಿಕ ಸದೃಢತೆ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಎಲ್ಲ ಹಂತದಲ್ಲೂ ಒಬ್ಬ ಆಟಗಾರ ಪರಿಪೂರ್ಣವಾಗಿ ಬೆಳೆಯಬೇಕು ಎಂಬುದು ಅಕಾಡೆಮಿಯ ಉದ್ದೇಶ. ಬೇರು ಗಟ್ಟಿಯಾಗಿದ್ದರೆ ಮಾತ್ರ ಅಂಗಳದಲ್ಲಿ ಮಿಂಚಲು ಸಾಧ್ಯ. ಹಾಗಾಗಿ ಕ್ರೀಡೆಯ ಮೂಲ ಅಂಶಗಳನ್ನು ವಿದ್ಯಾರ್ಥಿಗಳಲ್ಲಿ ಕರಗತ ಮಾಡಿಸಲಾಗುತ್ತದೆ.

ನೀವು ಹೊಸದಾಗಿ ಆರಂಭಿಸಿರುವ ಎಕ್ಸ್‌ಲೆನ್ಸಿ ಕಲಿಕಾ ಕಾರ್ಯಕ್ರಮದ ಬಗ್ಗೆ ತಿಳಿಸಿ...

ಇದು ಒಂದು ವರ್ಷದ ಕಾರ್ಯಕ್ರಮ. ಇದರಲ್ಲಿ 13 ಮತ್ತು 15 ವರ್ಷದೊಳಗಿನವರಿಗೆ ಮಾತ್ರ ಕಲಿಯಲು ಅವಕಾಶವಿದೆ. ಇದಕ್ಕಾಗಿ ಪ್ರತಿಭಾನ್ವೇಷಣೆ ನಡೆಸಲಾಗುತ್ತದೆ. ಆಯ್ಕೆಯಾದವರಿಗೆ ವಾರದಲ್ಲಿ ನಾಲ್ಕು ದಿನ ಯಲಹಂಕದಲ್ಲಿರುವ ಅತ್ಯಾಧುನಿಕ ಕ್ರೀಡಾ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. ವೃತ್ತಿಪರ ವಿದೇಶಿ ಕೋಚ್‌ಗಳು ಹಾಗೂ ಭಾರತದ ಪ್ರಮುಖ ಫುಟ್‌ಬಾಲ್ ಕೋಚ್‌ಗಳ ಸಮನ್ವಯದಲ್ಲಿ ಈ ತರಬೇತಿ ನಡೆಯುತ್ತದೆ. ಪ್ರತಿವಾರದ ಕೊನೆಯ ದಿನ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ಬಾಲಕರು ತಮ್ಮ ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಜೊತೆಗೆ ಫುಟ್‌ಬಾಲ್‌ ಲೀಗ್‌ ಟೂರ್ನಿಯನ್ನೂ ಆಯೋಜಿಸುತ್ತೇವೆ. ಚೆನ್ನೈ, ಗೋವಾ, ಹೈದರಾಬಾದ್‌ ಹಾಗೂ ಮುಂತಾದ ಪ್ರಮುಖ ನಗರಗಳಿಂದ ಬರುವ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತವೆ.

ಎಕ್ಸ್‌ಲೆನ್ಸಿ ಕಾರ್ಯಕ್ರಮದಲ್ಲಿ ಉತ್ತಮ ಸಾಮರ್ಥ್ಯ ತೋರಿದವರನ್ನು ಯುರೋಪ್, ಅರ್ಜೆಂಟೀನಾ ಅಥವಾ ಇನ್ನಿತರ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಹೆಚ್ಚಿನ ತರಬೇತಿಗಾಗಿ ಕಳಿಸಿಕೊಡಲಾಗುತ್ತದೆ. ಅವರ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಹೋದ ವರ್ಷ ಈ ಕಾರ್ಯಕ್ರಮವನ್ನು ಪೂರ್ಣಗೊಳಿಸಿ ಅಮೋಘ ಸಾಮರ್ಥ್ಯ ಮೆರೆದ, 15 ವರ್ಷದೊಳಗಿನ ಮೂವರು ಬಾಲಕರನ್ನು ಈ ವರ್ಷ ಸ್ಪೇನ್‌ಗೆ ಕಳಿಸಿ ಕೊಡುತ್ತಿದ್ದೇವೆ. ಪ್ರತಿಭಾನ್ವಿತ ಆಟಗಾರರು ಹಿನ್ನೆಲೆಗೆ ಸರಿಯಬಾರದು ಎಂಬುದು ನಮ್ಮ ಮುಖ್ಯ ಉದ್ದೇಶ. ನಮ್ಮಲ್ಲೂ ಮರಡೋನಾ ಅವರಂತಹ ಶ್ರೇಷ್ಠ ಆಟಗಾರರು ಬರಬೇಕು. ಪ್ರತಿಭೆಗೇನೂ ನಮ್ಮಲ್ಲಿ ಬರವಿಲ್ಲ. ಆದರೆ ಸೂಕ್ತ ಸಮಯದಲ್ಲಿ ಸರಿಯಾದ ಅವಕಾಶಗಳು ಸಿಗಬೇಕು ಅಷ್ಟೇ.

ಭಾರತದಲ್ಲಿ ಈ ಕ್ರೀಡೆಯ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ?

ರಾಷ್ಟ್ರದಲ್ಲಿ ದಿನಗಳೆದಂತೆ ಫುಟ್‌ಬಾಲ್ ಹೆಚ್ಚು ಜನಪ್ರಿಯವಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಈ ಕ್ರೀಡೆಯತ್ತ ಆಕರ್ಷಿತರಾಗುತ್ತಿರುವುದು ಆಶಾದಾಯಕ ಮುನ್ಸೂಚನೆ. ಪಾಲಕರು ತಮ್ಮ ಮಕ್ಕಳ ಪ್ರತಿಭೆ ಹಾಗೂ ಆಸಕ್ತಿಗೆ ನೀರೆರೆಯುತ್ತಿರುವುದು ಸಂತಸದ ಸಂಗತಿ. ಇನ್ನೊಂದು ಹತ್ತು ವರ್ಷಗಳಲ್ಲಿ ಭಾರತದ ಫುಟ್‌ಬಾಲ್ ಜಗತ್ತು ಅನೇಕ ಸ್ತರಗಳಲ್ಲಿ ಶ್ರೀಮಂತಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry