ನಾಳೆಯಿಂದ ‘ಗಣಿತೋತ್ಸವ’

7

ನಾಳೆಯಿಂದ ‘ಗಣಿತೋತ್ಸವ’

Published:
Updated:
ನಾಳೆಯಿಂದ ‘ಗಣಿತೋತ್ಸವ’

ಗಣಿತ ಕಬ್ಬಿಣದ ಕಡಲೆ ಅಲ್ಲ. ದೈನಂದಿನ ಜೀವನಕ್ಕೆ ಲೆಕ್ಕ ಅತ್ಯಗತ್ಯ. ಅದರ ಕಲಿಕೆ ಸುಲಭ ಮತ್ತು ಸರಳ. ಆಟವಾಡಿಕೊಂಡೇ ಗಣಿತ ಕಲಿಯಬಹುದು ಎಂಬ ಧ್ಯೇಯದೊಂದಿಗೆ ನಗರದಲ್ಲಿ ಶುಕ್ರವಾರದಿಂದ ಮೂರು ದಿನ ‘ಗಣಿತೋತ್ಸವ’ ಜರುಗಲಿದೆ.

ಮಿದುಳಿಗೆ ಕಚಗುಳಿಕೊಡುವ, ಬುದ್ಧಿಶಕ್ತಿ ಪರೀಕ್ಷಿಸಿ‌ ಓರೆಗೆ ಹಚ್ಚುವ ಪ್ರಯತ್ನ ಇಲ್ಲಿ ನಡೆಯಲಿದೆ. ಮೋಜಿನ ಗಣಿತ, ಟ್ಯಾಂಗ್ರಾಮ್‌ ಶೇಪ್‌ (ಒಗಟಿನ ಚೌಕ), ಪಜಲ್ಸ್‌, ಆಟದ ಮೂಲಕ ಮಕ್ಕಳನ್ನು ಗಣಿತದತ್ತ ಸೆಳೆಯುವ ಪ್ರಯತ್ನ ಇದು.

ಬೆಂಗಳೂರಿನ ಮಾನಸ ಪ್ರತಿಷ್ಠಾನ, ಧಾರವಾಡದ ಕರ್ಷಜ್ಞಾನ ಪ್ರತಿಷ್ಠಾನವು, ‘ವೇದಿಕ್‌ ಮ್ಯಾತ್ಸ್‌’ಗೆ ಪೂರಕವಾಗಿ ಈ ಉತ್ಸವ ಆಯೋಜಿಸಿವೆ.

‘ಮಕ್ಕಳು ದೊಡ್ಡವರಾಗುತ್ತಿದ್ದಂತೆ ಶಾಲೆಯಲ್ಲಿ ಗಣಿತ ಭೂತದಂತೆ ಕಾಡಲಾರಂಭಿಸುತ್ತದೆ. ಹಾಗಾಗಿ ಅವರು ಗಣಿತದಿಂದ ಓಡಲು ಮುಂದಾಗುತ್ತಾರೆ. 10ನೇ ತರಗತಿಯ ನಂತರ ಹಲವರು ಗಣಿತದ ಸಹವಾಸವೇ ಬೇಡ ಎಂದು ಅದರಿಂದ ಮುಕ್ತಿ ಪಡೆದು ಬಿಡುತ್ತಾರೆ. ಆದರೆ ದೈನಂದಿನ ಜೀವನದಲ್ಲಿ ಗಣಿತದಿಂದ ಮುಕ್ತಿಪಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೆ ಗಣಿತದ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನದ ಭಾಗ

ವಾಗಿ ಗಣಿತೋತ್ಸವ ಹಮ್ಮಿಕೊಂಡಿದ್ದೇವೆ. ಇದೊಂದು ರೀತಿ ಗಣಿತದ ಜಾತ್ರೆ’ ಎನ್ನುತ್ತಾರೆ ಆಯೋಜಕರು.

‘ಮಕ್ಕಳಿಗೆ ಸುಲಭವಾಗಿ ಗಣಿತ ಕಲಿಸುವ ಹಲವು ವಿಧಾನಗಳಿವೆ. ಅವುಗಳಲ್ಲಿ ವೇದಿಕ್‌ ಮ್ಯಾತ್ಸ್‌ ಕೂಡ ಒಂದು. ಇದನ್ನೇ ಆಧಾರವಾಗಿಟ್ಟುಕೊಂಡು ನಮ್ಮಲ್ಲಿ 150ಕ್ಕೂ ಹೆಚ್ಚು ಪಜಲ್‌ಗಳಿವೆ. ಅವುಗಳಲ್ಲಿ ಮೂರು ದಿನದ ಗಣಿತ ಮೇಳಕ್ಕೆ 25 ಪಜಲ್‌ಗಳನ್ನು ಮಕ್ಕಳಿಗೆ ಕೊಡುತ್ತೇವೆ. ಇಲ್ಲಿಗೆ ಬರುವವರು ಆಟವಾಡುತ್ತಲೇ ಪಜಲ್‌ಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು. ಇದನ್ನು ಪರಿಹರಿಸುತ್ತಲೇ ಹಲವರು ಗಣಿತದತ್ತ ತಾನಾಗಿಯೇ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಒಂದು ವೇಳೆ ಪೂರ್ಣವಾಗಿ ಪರಿಹರಿಸಲು ಆಗದಿದ್ದರೆ ಅದನ್ನು ಪರಿಹರಿಸುವ ವಿಧಾನವನ್ನು ನಾವು ಹೇಳಿಕೊಡುತ್ತೇವೆ’ ಎನ್ನುತ್ತಾರೆ ಆಯೋಜಕರಾದ ಶ್ಯಾಮ್‌ ಪ್ರಕಾಶ್‌ ಮನಂ.

‘ಗಣಿತವನ್ನು ಇಷ್ಟಪಟ್ಟು, ಖುಷಿಯಿಂದ ಕಲಿಯುವಂತಾಗಬೇಕು. ಹೀಗಾದರೆ 10ನೇ ತರಗತಿ ನಂತರವೂ ಮಕ್ಕಳು ಗಣಿತದ ಮೇಲಿನ ಆಸಕ್ತಿ ಬೆಳೆಸಿಕೊಳ್ಳುತ್ತಾರೆ’ ಎನ್ನುತ್ತಾರೆ ಅವರು. ‘ಉತ್ಸವದಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕವಿಲ್ಲ. ಮಕ್ಕಳು, ಗೃಹಿಣಿಯರು, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳೂ ಉತ್ಸವಕ್ಕೆ ಬಂದು ಗಣಿತಕ್ಕೆ ಸಂಬಂಧಿಸಿದಂತೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು’ ಎಂದು ವಿವರಿಸುತ್ತಾರೆ.

ಸ್ಥಳ: ಶ್ರೀ ಸರಸ್ವತಿ ಮಂದಿರ, 3ನೇ ಮುಖ್ಯ ರಸ್ತೆ, ಎಸ್‌.ಜೆ.ಆರ್‌. ಶಾಲೆ ಬಳಿ, ಕೆಂಗೇರಿ ಉಪನಗರ. ಮೇಳದ ಸಮಯ: ಬೆಳಿಗ್ಗೆ 9ರಿಂದ ರಾತ್ರಿ 8 ಗಂಟೆ.

ಸಂಪರ್ಕ ಸಂಖ್ಯೆ: 94820 19362

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry