ಸ್ವಚ್ಛ ಸೈನಿಕರ ‘ಜೇನು’ ಪಡೆ

7

ಸ್ವಚ್ಛ ಸೈನಿಕರ ‘ಜೇನು’ ಪಡೆ

Published:
Updated:
ಸ್ವಚ್ಛ ಸೈನಿಕರ ‘ಜೇನು’ ಪಡೆ

ಮರದ ರೆಂಬೆ, ಕಾಂಕ್ರೀಟ್ ಇಮಾರತಿನ ಮೂಲೆಯಲ್ಲಿ ಜೋತಾಡುವ ಜೇನುಗೂಡಿಗೆ ಒಗ್ಗಟ್ಟೇ ಆಧಾರ. ಗಾಳಿ ಬಂದರೆ ತೊನೆದಾಡುವ ಗೂಡಿನಲ್ಲಿ ಪರಸ್ಪರ ತಬ್ಬಿಕೊಂಡು ಪ್ರತಿಕ್ಷಣ ಬದುಕನ್ನು ಭದ್ರಗೊಳಿಸಿಕೊಳ್ಳುವ ಜೇನು ಹುಳುಗಳು, ವಿಮಾನದಂತೆ ಹಾರುತ್ತ ಕಣ್ಣರೆಪ್ಪೆ ಮಿಟುಕಿಸುವಷ್ಟರಲ್ಲಿ ಮಾಯವಾಗುತ್ತವೆ. ಕ್ಷಣ ಮಾತ್ರದಲ್ಲಿ ಬಾಯ್ತುಂಬ ಹೊತ್ತುತರುವ ಮಕರಂದವನ್ನು ಗೂಡಿನೊಳಗಿಟ್ಟು, ಪಟಪಟ ರೆಕ್ಕೆ ಬಡಿಯುತ್ತ ಮತ್ತೆ ಜೀಕುತ್ತವೆ ಹೂವಿನೆಡೆಗೆ.

ಈ ಶ್ರಮಜೀವಿಗಳ ಸಹಜೀವನವನ್ನು ಸೂಕ್ಷ್ಮವಾಗಿ ನೋಡುತ್ತಿದ್ದ ಯುವಕನೊಬ್ಬ, ನಾನ್ಯಾಕೆ ಜೇನಿನಂತಾಗಬಾರದು, ಬಲೆಯಂಥ ಗೂಡನ್ನು ಹೆಣೆದು, ಮಕರಂದ ತಂದು ಶೇಖರಿಸುವ ಸೇವಕ ಹುಳುಗಳಿಗೆ ಪ್ರತಿಫಲಾಪೇಕ್ಷೆಯಿಲ್ಲ, ಕಾಯಕದಲ್ಲಿ ಸಾರ್ಥಕತೆ ಕಾಣುವ ಅವುಗಳಂತೆ, ಸೇವಾ ಮನೋಭಾವದ ಯುವಕರ ತಂಡವೊಂದನ್ನು ಕಟ್ಟಬಾರದೆಂದು ಯೋಚಿಸಿದ. ಆ ಯುವಕನ ಕನಸೇ ಮೊಬೈಲ್‌ನಲ್ಲಿ ಮೊಳಕೆಯೊಡೆದ ‘ಜೇನುಗೂಡು’.

ಉತ್ತರ ಕನ್ನಡ ಜಿಲ್ಲೆಯ ಜನರಿಗೆ ‘ಜೇನುಗೂಡು’ ಎಂದು ಹೇಳಿದರೆ ನೆನಪಾಗುವುದು ಎರಡೇ. ಮನೆ ಹಿತ್ತಲಿನ ತೆಂಗಿನ ಮರದ ಕೆಳಗೆ ಇಟ್ಟಿರುವ ಜೇನು ಪೆಟ್ಟಿಗೆ, ಅದು ಬಿಟ್ಟರೆ ಅಂಕೋಲಾದ ಜೇನುಗೂಡು ವಾಟ್ಸ್‌ಆ್ಯಪ್ ಗ್ರೂಪ್. ಕೇಣಿಯಲ್ಲಿ ಮೊಬೈಲ್ ಅಂಗಡಿ ನಡೆಸುವ ಯುವಕ ವಿಶಾಲ್ ಬಂಟ ಅವರು, ಮೊಬೈಲ್‌ ಅಂಗಡಿಗೆ ಬರುವ ನೂರಾರು ಗ್ರಾಹಕರು, ಸ್ನೇಹಿತರ ಬಳಗವನ್ನು ಒಟ್ಟಿಗೆ ಸೇರಿಸುವ ಮಹದಾಸೆಯಿಂದ ಒಂದು ಸೃಜನಶೀಲ ತಂಡವನ್ನು ಕಟ್ಟಿದ್ದಾರೆ. ಈ ತಂಡದ ಸೃಜನಶೀಲತೆಗೆ ಕಾರಣವಾಗಿದ್ದು ವಾಟ್ಸ್‌ ಆ್ಯಪ್.

ಡಾಟಾ ಆನ್ ಮಾಡಿದರೆ ಸಾಕು, ‘..added you' ಎಂದು ನಮ್ಮ ಮೊಬೈಲ್‌ನಲ್ಲಿ ನಮ್ಮನ್ನೇ ಸ್ವಾಗತಿಸುವಂತೆ ಬಂದು ಕುಕ್ಕರಿಸುವ ಗ್ರೂಪ್‌ಗಳ ಹಾವಳಿ. ಸೈಲೆಂಟ್ ಮಾಡಿಟ್ಟರೂ, ಟಂಟಂ ಗಾಡಿಯಲ್ಲಿ ಕೂರುವ ಜನರಂತೆ, ಜಾಗವಿಲ್ಲವೆಂದರೂ ಮತ್ತೆ ನುಸುಳಿಕೊಂಡು ಬಂದು ಇನ್‌ಬಾಕ್ಸ್‌ನಲ್ಲಿ ಸೇರಿಕೊಳ್ಳುವ ಸಂದೇಶಗಳು. ಜೇನುಗೂಡು ಗ್ರೂಪ್, ಗೂಡು ಜೇನಿನಷ್ಟೇ ಶುದ್ಧವಾಗಿರಬೇಕೆಂದು ‘ಗುಡ್ ಮಾರ್ನಿಂಗ್, ಟೀ ಆಯ್ತಾ, ತಿಂಡಿ ಏನು, ಗುಡ್ ನೈಟ್’ ಇಂತಹ ಕಿರಿಕ್ ಮಾಡುವ ಸಂದೇಶಗಳನ್ನು ಕಡ್ಡಾಯವಾಗಿ ನಿಷೇಧಿಸಿದ್ದಾರೆ ವಿಶಾಲ್.

‘ಕ್ರಾಂತಿ ಮಾಡುವಷ್ಟು ದೊಡ್ಡ ಕನಸೇನೂ ಇರಲಿಲ್ಲ, ಆದರೆ, ಕಾಂತಿ ಮೂಡಿಸುವ ಹಂಬಲವಿತ್ತು. ಸಮಾಜಕ್ಕೆ ಕಿಂಚಿತ್ ಸೇವೆ ಸಲ್ಲಿಸುವ ತುಡಿತವಿತ್ತು. 2014, ಅಕ್ಟೋಬರ್ 1ರಂದು ‘ಜೇನುಗೂಡಿ’ನಲ್ಲಿ ನಾಳೆ ಎಲ್ಲರೂ ಕೇಣಿ ಶಾಲೆಯ ಬಳಿ ಸೇರುವುದು ಎಂಬ ಸಂದೇಶವನ್ನು ಪೋಸ್ಟ್ ಮಾಡಿದೆ. ಗಾಂಧಿ ಜಯಂತಿ ಆಚರಣೆಗೆ 10–15 ಗೆಳೆಯರು ಸೇರಿದರು. ಕೇಣಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಜೊತೆ, ನಾವೆಲ್ಲ ಸೇರಿ, ಗಿಡ–ಗಂಟಿ ಕಡಿದು ಎರಡು ತಾಸು ಚೊಕ್ಕ ಮಾಡಿದೆವು. ಮಕ್ಕಳ ಕೆಲಸವೂ ‘ಒಳ್ಳೆಯ ಕೆಲಸ’ದ ಪಟ್ಟಿಗೆ ಸೇರಿತು. ಶಾಲೆಯ ಪ್ರಮುಖರು, ಊರವರು ನಮ್ಮ ಬೆನ್ನುತಟ್ಟಿದರು’ ಎನ್ನುತ್ತ ವಿಶಾಲ್, ಸ್ವಚ್ಛತಾ ಅಭಿಯಾನದ ಶುರುವನ್ನು ನೆನಪಿಸಿಕೊಂಡರು.

ಜೇನುಗೂಡಿನಲ್ಲಿ ಈಗ ಸುಮಾರು 90 ಸದಸ್ಯರಿದ್ದಾರೆ. ಇಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಪದವಿಗಳೇ ಇಲ್ಲ. ಎಲ್ಲರೂ ನಾಯಕರಂತಿರುವ ಸೇವಕರು. ಒಂದಿಬ್ಬರು ಸ್ನೇಹಿತರೊಡಗೂಡಿ ಬುಧವಾರ, ಗುರುವಾರ ಸುತ್ತಮುತ್ತಲಿನ ಊರುಗಳಿಗೆ ಓಡಾಡುವ ಗ್ರೂಪ್ ಎಡ್ಮಿನ್ ವಿಶಾಲ್ ಅವರು, ಭಾನುವಾರ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳುವ ಸ್ಥಳದ ಆಯ್ಕೆ ಮಾಡಿ, ಶನಿವಾರ ಸಂಜೆ ಗ್ರೂಪ್‌ನಲ್ಲಿ ಇದನ್ನು ಪ್ರಕಟಿಸುತ್ತಾರೆ. ಈ ಮುನ್ಸೂಚನೆಯ ಮೇರೆಗೆ, ಭಾನುವಾರ ಬೆಳಿಗ್ಗೆ 7.30ಕ್ಕೆ ಎಲ್ಲರೂ ಹಾಜರಿ ಹಾಕುತ್ತಾರೆ. ಕೈಯಲ್ಲಿ ಕತ್ತಿ, ಗುದ್ದಲಿ ಹಿಡಿದು ಹೊರಟರೆ, ಜೇನುಗೂಡಿನ ಸ್ವಚ್ಛತಾ ಸೈನಿಕರು, ಪಕ್ಕಾ ಸೇವಕ ಹುಳುಗಳಂತೆಯೇ. ಇವರಿಬ್ಬರ ನಡುವೆ ವ್ಯತ್ಯಾಸವಿಷ್ಟೇ, ಸೇವಕ ಹುಳುಗಳು ಮಕರಂದ ಹೀರಿ ಬರುತ್ತವೆ, ಇವರು ಕಸವನ್ನು ಹೆಕ್ಕಿ ತಂದು ರಾಶಿ ಹಾಕುತ್ತಾರೆ!

‘ತೀರಾ ತುರ್ತು ಸಂದರ್ಭ ಬಿಟ್ಟರೆ, ನಾವು ಭಾನುವಾರವನ್ನು ಬೋರ್‌ ಆಗಿ ಕಳೆದಿದ್ದೇ ಇಲ್ಲ. ಇಲ್ಲಿಯವರೆಗೆ 125ಕ್ಕೂ ಹೆಚ್ಚು ವಾರ ಸ್ವಚ್ಛತಾ ಕಾರ್ಯಕ್ರಮಗಳು ನಡೆದಿವೆ. ನಮ್ಮ ಕಾಯಕ ಆರಂಭವಾದ ಕೆಲವು ತಿಂಗಳುಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ‘ಸ್ವಚ್ಛ ಭಾರತ ಅಭಿಯಾನ’ ಘೋಷಿಸಿದರು. ನಮ್ಮ ಖುಷಿ, ಉತ್ಸಾಹ ಇಮ್ಮಡಿಸಿತು. ಶಾಲೆ, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ ಇಂತಹ ಸಾರ್ವಜನಿಕ ಸ್ಥಳಗಳಿಗೇ ಮೊದಲ ಆದ್ಯತೆ ನಮ್ಮದು. ಬಡಾವಣೆಗಳಿಗೆ ಹೋದರೆ, ಅಲ್ಲಿನ ನಿವಾಸಿಗಳು ನಮ್ಮ ಜೊತೆ ಕೈಜೋಡಿಸುತ್ತಾರೆ. ಬೆಳಗಿನ ಉಪಾಹಾರ ಕೊಟ್ಟು, ನಮ್ಮ ಕೆಲಸಕ್ಕೆ ಶಹಭಾಸ್ ಎನ್ನುತ್ತಾರೆ. ಇಂತಹ ಪುಟ್ಟಪುಟ್ಟ ಝಲಕುಗಳೇ ನಮ್ಮೊಳಗಿನ ಆತ್ಮವಿಶ್ವಾಸವನ್ನು ಹಿಗ್ಗಿಸುತ್ತವೆ’ ಎನ್ನುವಾಗ ವಿಶಾಲ್ ಅವರಲ್ಲಿ ಸಾರ್ಥಕ ಭಾವವಿತ್ತು.

ಮಲ್ಲಿಗೆ ತೋಟದ ಬಿಳಿ ಹೂವಿನಂತೆ ಶಾಲೆಯ ಮೈದಾನದಲ್ಲಿ ಕಾಣುತ್ತಿದ್ದ ಈ ಸ್ವಚ್ಛತಾ ಸೈನಿಕರು, ಈಗ ಬಣ್ಣ ಬದಲಾಯಿಸಿದ್ದಾರೆ. ಬಿಳಿಯಂಗಿ ತೊಟ್ಟು ಕೆಲಸ ಮಾಡಿ, ಮನೆಗೆ ಹೋಗುವ ಹುಡುಗರು ಅಮ್ಮನ ಬಳಿ ಬೈಯಿಸಿಕೊಂಡ ಮೇಲೆ ಪಾಠ ಕಲಿತಿದ್ದಾರೆ. ಬಿಳಿ ಸಮವಸ್ತ್ರದಲ್ಲಿ ಬರುತ್ತಿದ್ದ ಹುಡುಗರು, ಈಗ ನೇರಳೆ ಟೀ– ಶರ್ಟ್‌ಧಾರಿಗಳಾಗಿದ್ದಾರೆ.

ಪ್ರತಿವಾರ ಸರಾಸರಿ 25–30 ಹುಡುಗರು ಬೈಕ್, ಸೈಕಲ್ ಹಿಡಿದು ಬಂದೇ ಬಿಡುತ್ತಾರೆ. ಪೇಟೆ ನಡುವೆ ಸ್ವಚ್ಛತಾ ಕಾರ್ಯಕ್ರಮವಿದ್ದರೆ, ರಂಜಿತಾ, ಸುಮಾ, ಪ್ರಜ್ಞಾ ಇನ್ನಿತರ ನಾಲ್ಕಾರು ಹುಡುಗಿಯರೂ ಬಂದು ಸೇರಿಕೊಳ್ಳುತ್ತಾರೆ. ಇವರಲ್ಲಿ ಹೆಚ್ಚಿನವರೆಲ್ಲ ಪದವಿ ಓದುವ ವಿದ್ಯಾರ್ಥಿಗಳು, ಪದವಿಪೂರ್ವ ಶಿಕ್ಷಣ ಪಡೆಯುತ್ತಿರುವ ಮಕ್ಕಳು. ಕೆಲವರು ಟ್ಯೂಷನ್ ಅವಧಿಯನ್ನು ಹೊಂದಾಣಿಕೆ ಮಾಡಿಕೊಂಡು ಶ್ರಮದಾನಕ್ಕೆ ಸಾಥಿಯಾಗುತ್ತಾರೆ.

‘ನಮ್ಮ ಕಾಯಕ ನೋಡಿ ಕೆಲವರು ನಕ್ಕರು, ಊರ ಉದ್ಧಾರ ಮಾಡುವವರು ಇವರೆಂದು ವ್ಯಂಗ್ಯವಾಡಿದರು. ಓಹೋ, ರಾಜಕೀಯ ಎಂಟ್ರಿಗೆ ಪೂರ್ವಸಿದ್ಧತೆಯೋ ಎಂದು ಮರೆಯಲ್ಲಿ ನಿಂತು ಮಾತನಾಡಿದರು. ಇವೆಲ್ಲ ಟೀಕೆಗಳು ನಮ್ಮೊಳಗಿನ ಛಲವನ್ನು ಇಮ್ಮಡಿಸಿದವು. ಸ್ವಚ್ಛತಾ ಅಭಿಯಾನದ ಜತೆಗೆ, ದಾನಿಗಳ ನೆರವು ಪಡೆದು ಶಾಲೆಗಳಲ್ಲಿ ತರಕಾರಿ ಬೀಜ ವಿತರಣೆ ಆರಂಭಿಸಿದ್ದು, ಯಶಸ್ಸಿನ ಇನ್ನೊಂದು ಮೆಟ್ಟಿಲು. ಬಡಮಕ್ಕಳಿಗೆ ಸಮವಸ್ತ್ರ ನೀಡುವಾಗಲೂ, ಕೊರತೆಯಾದ ಹಣಕ್ಕೆ ನಮ್ಮ ಪಾಲು ನೀಡಿದೆವು’ ಎಂದ ವಿಶಾಲ್, ‘ನಮ್ಮ ತಂಡದಲ್ಲಿ ರಾಜಕೀಯ ವ್ಯಕ್ತಿಗಳೂ ಇಲ್ಲ, ನಮಗೆ ರಾಜಕೀಯದ ಗುಂಗು ಸಹ ಇಲ್ಲ’ ಎಂದು ಸ್ಪಷ್ಟ ಮಾತಿನಲ್ಲಿ ಹೇಳಿದರು.

‘ಆರೆಂಟು ತಿಂಗಳುಗಳ ಹಿಂದೆ ಯಲ್ಲಾಪುರದ ಹುಡುಗನೊಬ್ಬ ಕಾಲ್ ಮಾಡಿ, ನಮ್ಮೂರಿಗೂ ಬನ್ನಿ, ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ ಎಂದ. ನಿಮ್ಮ ಊರಿನ ಹುಡುಗರನ್ನು ಸೇರಿಸಿ ತಂಡ ಕಟ್ಟಿಕೊಳ್ಳಲು ಸಲಹೆ ನೀಡಿದೆ. ಈ ಹುಡುಗನ ಉತ್ಸಾಹದಿಂದ ಯಲ್ಲಾಪುರದಲ್ಲೂ ‘ಜೇನುಗೂಡು’ ಮೈದಳೆದಿದೆ. 25 ವಾರಗಳ ಸ್ವಚ್ಛತಾ ಕಾರ್ಯವೂ ನಡೆದಿದೆ. ಭಟ್ಕಳದಲ್ಲೂ ಇಂತಹುದೇ ಪ್ರಯತ್ನ ನಡೆದಿದೆ. ನಮ್ಮ ಗ್ರೂಪ್‌ನಲ್ಲಿ ಹೊರ ಜಿಲ್ಲೆಯ ಕೆಲವು ಸದಸ್ಯರಿದ್ದಾರೆ. ಅವರು ತಮ್ಮ ಊರಿನಲ್ಲಿ ಕಾರ್ಯಕ್ರಮ ರೂಪಿಸಲು ಯೋಜನೆ ಹಾಕಿದ್ದಾರೆ. ಇವೆಲ್ಲ ಪ್ರಶಸ್ತಿ, ಪುರಸ್ಕಾರ ಮೀರಿದ ಸಮಾಧಾನಗಳು’ ಎಂದ ವಿಶಾಲ್ ಮಾತಿಗೆ ಪೂರ್ಣವಿರಾಮವಿಟ್ಟರು.

ಕೇಣಿ ತಂಗುದಾಣಕ್ಕೆ ಬಣ್ಣದ ಅಂಗಿ ತೊಡಿಸಿದ ಪಡೆ

ಭಾವಿಕೇರಿ ಪಂಚಾಯ್ತಿಯಲ್ಲಿರುವ ಕೇಣಿಯಲ್ಲಿ ಪುಟ್ಟದೊಂದು ಬಸ್ ತಂಗುದಾಣವಿದೆ. ಅದರ ಎದುರಿಗೊಂದು ಸರ್ಕಾರಿ ಪ್ರಾಥಮಿಕ ಶಾಲೆ, ಮಕ್ಕಳ ಹಾಸ್ಟೆಲ್ ಇದೆ. ಶಾಲೆ ಬಿಟ್ಟ ಮೇಲೆ ಮನೆಗೆ ಹೋಗಲು ಬಸ್‌ ಕಾಯುವ ಮಕ್ಕಳು, ಈ ತಂಗುದಾಣ ಕಂಡು ಮೂಗು ಮುರಿಯುತ್ತಿದ್ದರು. ಅದಕ್ಕೆ ಬೆನ್ನುಹಾಕಿ ನಿಲ್ಲುತ್ತಿದ್ದ ಮಕ್ಕಳಿಗೆ, ರಸ್ತೆ ಪಕ್ಕದಲ್ಲಿದ್ದ ಮರವೇ ನೆರಳಿನ ಆಶ್ರಯ ನೀಡುತ್ತಿತ್ತು. ಇದನ್ನು ಕಂಡ ‘ಜೇನು’ ಪಡೆಯವರಿಗೆ ಮಕ್ಕಳ ಸಂಕಟ ನೋಡಲಾಗಲಿಲ್ಲ. ಭಾನುವಾರಕ್ಕೆ ನಿಗದಿಯಾಗಿದ್ದ ಸ್ವಚ್ಛತಾ ಕಾರ್ಯವನ್ನು, ಒಂದು ದಿನ ಹಿಂದಕ್ಕೆ ಹಾಕಿಕೊಂಡರು. ಶನಿವಾರ, ಭಾನುವಾರವನ್ನು ಕೇಣಿಯ ಬಸ್‌ ನಿಲ್ದಾಣದ ಕೊಳೆತೊಳೆಯಲು ಮೀಸಲಿಟ್ಟರು.

ತಿಂಗಳ ಹಿಂದಿನವರೆಗೂ ಪಾಳುಬಿದ್ದ ಕಟ್ಟಡದಂತಿದ್ದ ಕೇಣಿ ಬಸ್ ತಂಗುದಾಣ, ಈಗ ಬಣ್ಣದ ಅಂಗಿ ತೊಟ್ಟುಕೊಂಡಿದೆ. ಗೋಡೆಗೆ ಅಂಟಿಕೊಂಡಿದ್ದ ಪಾಚಿ ಮಣ್ಣಿಗೆ ಸೇರಿದೆ. ವ್ಯಸನಿಗಳಿಗೆ ಕಸದತೊಟ್ಟಿಯಾಗಿದ್ದ ಕಟ್ಟೆ ಈಗ ಮಕ್ಕಳು, ಪಟ್ಟಣಕ್ಕೆ ಹೋಗುವವರಿಗೆ, ಬಸ್ ಬರುವ ತನಕ ಕುಳಿತು ಕಥೆ ಹೇಳುವ ಖುಷಿಯ ಸೆಲೆಯಾಗಿದೆ. ಕೇಣಿಯ ಜನರು ‘ನಮ್ಮೂರ ಹುಡುಗರನ್ನು ನೋಡಿ ಕಲಿಯಿರಿ’ ಎನ್ನುತ್ತ, ಹೆಮ್ಮೆಯಿಂದ ಬೀಗುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry