ಲೆಬನಾನ್‌ ಸಲಾಡ್‌ ವೈಭವ

7

ಲೆಬನಾನ್‌ ಸಲಾಡ್‌ ವೈಭವ

Published:
Updated:
ಲೆಬನಾನ್‌ ಸಲಾಡ್‌ ವೈಭವ

ಮಳೆಗಾಲ ಶುರುವಾಗಿದೆ. ಸಂಜೆಯಾಗುತ್ತಿದ್ದಂತೆ ಏನೋ ಹೊಸಬಗೆಯ ಖಾದ್ಯ ತಿನ್ನಬೇಕು ಅನಿಸುವುದು ಸಹಜ. ಊಟದ ಸಮಯದಲ್ಲಿ ವಸಂತನಗರದ ಶಾಂಗ್ರಿ–ಲಾ ಹೋಟೆಲ್‌ಗೆ ಹೋದರೆ ಲೆಬನಾನಿನ ವಿಶೇಷ ಖಾದ್ಯಗಳನ್ನು ಸವಿಯುವ ಅವಕಾಶ ಸಿಗಲಿದೆ. ಶಾಂಗ್ರಿ–ಲಾದಲ್ಲಿ ಲೆಬನಾನಿನ ಆಹಾರೋತ್ಸವ ಶುರುವಾಗಿದೆ. ಜೂನ್‌ 15ರವರೆಗೆ ಈ ಉತ್ಸವ ಮುಂದುವರಿಯಲಿದೆ.

ಪಂಚತಾರಾ ಹೋಟೆಲ್‌ ಶಾಂಗ್ರಿ–ಲಾದ ಒಳಗೆ ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುವ ತೆರೆದ ಅಡುಗೆಮನೆಯ ಸುತ್ತಲೂ ಕುಳಿತು ಲೆಬನಾನಿನ ಆಹಾರ ಸವಿಯುತ್ತ, ಸಾಂಪ್ರದಾಯಿಕ ಅಡುಗೆ ಮನೆ ಪರಿಕರಗಳು, ಬಳಸುವ ಸಾಂಬಾರ ಪದಾರ್ಥಗಳನ್ನು ಖುದ್ದು ನೋಡಬಹುದಾಗಿದೆ. ಹಲವು ವರ್ಷಗಳಿಂದ ದೇಶದ ಪ್ರಮುಖ ಹೋಟೆಲುಗಳಲ್ಲಿ ಬಾಣಸಿಗರಾಗಿ ಕೆಲಸ ಮಾಡಿರುವ ಲೆಬನಾನಿನ ಅನುಭವಿ ಶೆಫ್‌ ಅಹಮದ್‌ ಅಮೌರಿ ಅವರು ಲೆಬನಾನಿನ ಆಹಾರ ಕ್ರಮವನ್ನು ಪರಿಚಯಿಸುತ್ತಿದ್ದಾರೆ.

(ಪೀನಟ್‌, ದಾಳಿಂಬೆ ಬಳಸಿದ ಡಿಪ್‌)

ಲೆಬನಾನ್‌ನ ಆಹಾರ ಪದ್ಧತಿಯಲ್ಲಿ ಮೊದಲ ಸ್ಥಾನದಲ್ಲಿರುವುದು ವಿವಿಧ ಬಗೆಯ ಸಲಾಡ್‌ಗಳು. ಇದರಲ್ಲಿ ತರಕಾರಿ, ಮಾಂಸ, ಶೇಂಗಾ, ಹಣ್ಣುಗಳನ್ನು ಬಳಸಿ ಸಲಾಡ್‌ ತಯಾರಿಸಲಾಗುತ್ತದೆ. ಸಲಾಡ್‌ಗೆ ಬಳಸುವ ಎಲ್ಲ ಸಾಮಗ್ರಿಗಳನ್ನು ತೀರಾ ಚಿಕ್ಕದಾಗಿ ಹೆಚ್ಚುವುದು ವಿಶೇಷ. ಇದು ಭಾರತೀಯ ಶೈಲಿಯ ಸಲಾಡ್‌ಗಳಂಥಲ್ಲ. ಇಲ್ಲಿ ಹತ್ತಾರು ಬಗೆಯ ಸಲಾಡ್‌ಗಳನ್ನು ಸವಿಯಬಹುದು.

ಬ್ರೆಡ್‌ಗೆ ಹಚ್ಚಿ ತಿನ್ನುವ ವಿವಿಧ ಬಗೆಯ ಡಿಪ್‌ಗಳು ಇವರ ಮತ್ತೊಂದು ವಿಶೇಷ. ಗಟ್ಟಿ ಮೊಸರಿನ ಡಿಪ್‌, ಪೀನಟ್‌ ಡಿಪ್, ಮಿಕ್ಸ್ಡ್‌ನಟ್‌ ಡಿಪ್‌ಗಳು ರುಚಿಕರವೂ ಅಷ್ಟೇ ಆರೋಗ್ಯಕರವೂ. ಪೀಟಾ ಬ್ರೆಡ್‌ ಜೊತೆ ಹಚ್ಚಿಕೊಂಡು ಸವಿಯುವುದೇ ರುಚಿಕರ ಅನುಭವ.

ಲೆಬನಾನಿನ ಆಹಾರ ಪದ್ಧತಿಗೆ ರೋಮನ್‌, ಟರ್ಕಿ ಮತ್ತು ಫ್ರಾನ್ಸ್‌ ದೇಶಗಳ ಪ್ರಭಾವ ಕಾಣುತ್ತದೆ. ಸಲಾಡ್‌ಗಳು ರೋಮನ್‌ ಶೈಲಿಯನ್ನು ಅನುಸರಿಸಿದರೆ, ಡೆಸರ್ಟ್‌ಗಳು ಫ್ರೆಂಚ್‌ ಶೈಲಿಯನ್ನು ಹೋಲುತ್ತವೆ. ಮಾಂಸಾಹಾರ ಖಾದ್ಯಗಳಲ್ಲಿ ಟರ್ಕಿಯ ಪ್ರಭಾವ ಕಾಣುತ್ತದೆ. ಲೆಬನಾನ್‌ ಆಹಾರದಲ್ಲಿ ಹೆಚ್ಚು ಮಸಾಲೆ ಪದಾರ್ಥ ಬಳಸುವುದಿಲ್ಲ. ಆಲಿವ್‌ ಆಯಿಲ್‌, ಬೆಳ್ಳುಳ್ಳಿ ಬಹಳ ಮುಖ್ಯ ಪದಾರ್ಥಗಳು. ಎಲ್ಲಾ ಮಾಂಸ, ತರಕಾರಿಗಳನ್ನು ಸಲಾಡ್‌ ರೂಪದಲ್ಲಿ ಸೇವಿಸುವುದು ಇಲ್ಲಿನ ವಿಶೇಷ. ಪೀನಟ್‌, ವಾಲ್‌ನಟ್‌ ಮುಂತಾದ ಬೀಜಗಳನ್ನು ಬಳಸಿ ತಯಾರಿಸಿದ ಡಿಪ್ ಕೂಡಾ ಲೆಬನಾನಿನ ವಿಶೇಷಗಳಲ್ಲಿ ಸೇರಿವೆ.

(ಬೀಫ್‌ ಸಲಾಡ್‌)

ಸಲಾಡ್‌ ವಿಶೇಷ: ಕುರಿ ಮಾಂಸ–ಬಟಾಣಿ –ಮಸಾಲೆಯ ಸಲಾಡ್‌ ‘ಬಝೆಲ್ಲಾ’, ವೆಜ್‌ ಸಲಾಡ್‌ ‘ಫ್ಯಾಟೌಷ್‌’, ಬೆಂದ ಚಿಕನ್‌– ತರಕಾರಿ ಮತ್ತು ಲೆಬನಾನ್‌ ಮಸಾಲೆ ಸಲಾಡ್‌ ‘ದಜಾಜ್ ಮೆಸ್ವಿ’, ಆಲು ಮತ್ತು ಕೊತ್ತಂಬರಿ ಸೊಪ್ಪಿನ ಸಲಾಡ್‌ ‘ಬಟಾಟೆ ಹರ್ರಾ’, 

ವಾಲ್‌ನಟ್‌, ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ, ಪೆಪ್ಪರ್‌, ಜೀರಿಗೆ ಸೇರಿಸಿದ ಸಲಾಡ್‌ ‘ರಹೆಬ್‌’, ಬೆಂದ ಫಿಲ್ಲೆಟ್‌ ಫಿಷ್‌– ಕೊತ್ತಂಬರಿ ಸಾಸ್‌– ತರಕಾರಿ ಮತ್ತು ವಾಲ್‌ನಟ್‌ ಬಳಸಿದ ‘ಸಮಕೆ ಹರ್ರಾ’ ತಿನ್ನುವುದೇ ಖುಷಿ. ಇವೆಲ್ಲವೂ ಸಲಾಡ್‌ ಆದರೂ ಗೊಜ್ಜಿನ ರೀತಿಯಲ್ಲಿಯೇ ಬಳಸಬಹುದಾಗಿದೆ.

ಪೀಟಾ ಬ್ರೆಡ್‌: ಪೀಟಾ ಬ್ರೆಡ್‌ (ಪಾಕೆಟ್‌ ಬ್ರೆಡ್‌) ಲೆಬನಾನ್‌ನ ಆಹಾರಗಳಲ್ಲಿ ಮುಖ್ಯ ವಸ್ತು. ಪಾಶ್ಚಿಮಾತ್ಯ ದೇಶಗಳಲ್ಲಿ ಬ್ರೆಡ್‌ ಬಳಸಿದಂತೆ ಪೀಟಾ ಬ್ರೆಡ್‌ ಅನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಮೈದಾ, ಈಸ್ಟ್‌, ಉಪ್ಪು ಮತ್ತು ನೀರು ಬಳಸಿ ಗಟ್ಟಿಯಾಗಿ

ನಾದಿ ಅಂಗೈ ಅಗಲ ತಟ್ಟಿ ಕಲ್ಲಿನ ಅವನ್‌ನಲ್ಲಿ ಬೇಯಿಸಲಾಗುತ್ತದೆ. ಎಣ್ಣೆ ಬಳಸುವುದಿಲ್ಲ. ನೋಡಲು ಪಿಜ್ಜಾ ಬೇಸ್‌ ತರ ಇರುತ್ತದೆ. ಮಧ್ಯದಲ್ಲಿ ಟೊಳ್ಳಾಗಿರುತ್ತದೆ. ಇದರ ಒಳಗೆ ಗ್ರಿಲ್ಡ್‌ ಚಿಕನ್‌ ಇಟ್ಟು ತಿನ್ನಬಹುದು. ಸಲಾಡ್‌ಗಳನ್ನು ತುಂಬಿ ಸವಿಯಬಹುದು. ಪೀಟಾ ಬ್ರೆಡ್‌ನ ಅಂಚನ್ನು ಸ್ವಲ್ಪವೇ ಕತ್ತರಿಸಿ ಅದರ ಒಳಗೆ ಶವರ್ಮ ತುಂಬಿ ಕೊಡುವ ‘ಲೆಬನಾನ್‌ ಶವರ್ಮ’ ರುಚಿಕರವೂ ಆಗಿರುತ್ತದೆ. ಚೆಲ್ಲದೆ ತಿನ್ನುವುದಕ್ಕೂ ಸುಲಭ.

ಬೀಫ್‌ ಶವರ್ಮ, ಲೆಬನಾನಿನ ವಿಶೇಷ ಮುಲುಖಿಯ ಎಲೆ ಮತ್ತು ಮಸಾಲೆ ಬಳಸಿದ ಚಿಕನ್‌ ತಯಾರಿಸಿದ ‘ಮುಲುಖಿಯೆ ಚಿಕನ್’, ಲೆಬನಾನಿನ ವಿಶೇಷ ಮಸಾಲೆ ಪದಾರ್ಥದಲ್ಲಿ ಮ್ಯಾರಿನೇಟ್‌ ಮಾಡಿ ಗ್ರಿಲ್‌ನಲ್ಲಿ ಬೇಯಿಸಿದ ‘ಲ್ಯಾಂಬ್ ಚಾಪ್ಸ್‌’ ಮತ್ತು ಮೌಸಕಾ, ಲೆಬನಾನಿನ ಸಿಗ್ನೇಚರ್‌ ಡಿಷ್‌ಗಳು. ಆದರೆ, ಯಾವ ಆಹಾರವೂ ಗಟ್ಟಿ ಆಹಾರ ಅನಿಸುವುದೇ ಇಲ್ಲ. ಹೆಚ್ಚು ಮಸಾಲೆ, ಎಣ್ಣೆ ಬಳಸದ ಲೆಬನಾನಿ ಖಾದ್ಯ ಎಲ್ಲರಿಗೂ ಇಷ್ಟವಾಗುವಂತಿದೆ.

ಸ್ಥಳ: ಬಿ ಕೆಫೆ, ಶಾಂಗ್ರಿ–ಲಾ, ಮೌಂಟ್ ಕಾರ್ಮೆಲ್‌ ಕಾಲೇಜು ಬಳಿ, ವಸಂತನಗರ

ಸಮಯ: ಮಧ್ಯಾಹ್ನ 12ರಿಂದ, ಸಂಜೆ 7ರಿಂದ.

ಲೆಬನಾನಿ ಆಹಾರ ಭಾರತೀಯ ಶೈಲಿ

ಶಾಂಗ್ರಿ–ಲಾದ ಮುಖ್ಯ ಬಾಣಸಿದ ಅಹಮದ್‌ ಅಮ್ಮೋರಿ ಎಲ್ಲಾ ಖಂಡಗಳ ವಿಶೇಷ ಆಹಾರ ತಯಾರಿಸುವ ನಿಪುಣ ಬಾಣಸಿಗ. ಬೆಂಗಳೂರಿನ ತಾಜ್ ವೆಸ್ಟೆಂಡ್‌, ಚೆನ್ನೈ, ಮುಂಬೈ, ಹೈದರಾಬಾದ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಲೆಬನಾನಿನ ಈ ಬಾಣಸಿಗನಿಗೆ ಮಾತ್ರ ಭಾರತೀಯ ಅಡುಗೆಗಳೆಂದರೆ ಅಚ್ಚುಮೆಚ್ಚು.

‘ಆಯಾ ಪ್ರದೇಶದ ಆಹಾರವನ್ನು ಆಯಾ ದೇಶದಲ್ಲಿಯೇ ಸವಿಯಬೇಕು. ಇಲ್ಲಿನ ನಾನು ಲೆಬನಾನ್‌ ಆಹಾರ ತಯಾರಿಸಿದರೂ ಅಲ್ಲಿನ ರುಚಿ ಬರುವುದಿಲ್ಲ. ಇಲ್ಲಿ ಸಿಗುವ ತರಕಾರಿಯ ರುಚಿ ಭಿನ್ನವಾಗಿರುತ್ತದೆ. ಬಳಸುವ ಪದಾರ್ಥ, ಪರಿಕರಗಳು ಬೇರೆಯಾಗಿರುತ್ತದೆ.

ಲೆಬನಾನ್‌ನಲ್ಲಿ ಹೊಟೇಲು ಊಟ ಬಹಳ ದುಬಾರಿ. ಲೆಬನಾನ್‌ಗೆ ಹೋಲಿಸಿದರೆ ಭಾರತದಲ್ಲಿ ಕೋಳಿ, ಮೀನು ಸೇರಿದಂತೆ ಎಲ್ಲ ವಸ್ತುಗಳ ಬೆಲೆ  ಕಡಿಮೆ ಇದೆ. ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಭಾರತದ ಆಹಾರ ಪದ್ಧತಿ ವೈವಿದ್ಯಮಯವಾಗಿದೆ. ಲೆಬನಾನಿನ ಖಾದ್ಯಗಳನ್ನು ಭಾರತೀಯ ಶೈಲಿಯಲ್ಲಿ ತಯಾರಿಸುವುದು ನಂಗಿಷ್ಟ’.

   –ಅಹಮದ್‌ ಅಮೌರಿ, ಲೆಬನಾಣಿ ಬಾಣಸಿಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry