ಗುರುವಾರ , ಮೇ 6, 2021
25 °C

ಶುಕ್ರವಾರ 7–6–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾವಿಗೆ ರಾಬರ್ಟ್ ಕೆನೆಡಿ ಸೋಲು ಸಾಹಸಿಯ ಬಾಳು ಅರ್ಧದಲ್ಲೇ ಅಂತ್ಯ

ಲಾಸ್‌ಏಂಜಲಿಸ್, ಜೂನ್ 6–
ಬುಧವಾರ ಮುಂಜಾನೆ ಹಂತಕನ ಗುಂಡೇಟಿಗೆ ಗುರಿಯಾದ ಅಮೆರಿಕದ ಅತ್ಯಂತ ಜನಪ್ರಿಯ ಸೆನೆಟರ್ ರಾಬರ್ಟ್ ಎಫ್. ಕೆನೆಡಿ 24 ಗಂಟೆ 29 ನಿಮಿಷಗಳ ಕಾಲ ಸಾವಿನೊಡನೆ ಅವಿಶ್ರಾಂತವಾಗಿ ಹೋರಾಡಿ ಸೋತು ಇಂದು ಮಧ್ಯಾಹ್ನ 2.14ರಲ್ಲಿ (ಭಾರತೀಯ ಕಾಲ) ಅದಕ್ಕೆ ಶರಣಾದರು.

ಮಹಾ ಉತ್ಸಾಹಶಾಲಿ ಎನಿಸಿದ, 42 ವರ್ಷ ವಯಸ್ಸಿನ ಕೆನೆಡಿ ಅವರಿಗೆ ಗುಂಡು ತಾಗಿದ ಕ್ಷಣದಿಂದ ನಡೆಸಲಾದ ಎಲ್ಲ ಬಗೆಯ ವೈದ್ಯೋಪಚಾರಗಳೂ ವಿಫಲವಾದವು.

ವಿಧಾನಸಭಾಧ್ಯಕ್ಷ ವೈಕುಂಠ ಬಾಳಿಗಾ ಅವರ ನಿಧನ

ಬೆಂಗಳೂರು, ಜೂನ್ 6–
ವಿಧಾನಸಭೆಯ ಅಧ್ಯಕ್ಷ ಶ್ರೀ ಬಂಟ್ವಾಳ ವೈಕುಂಠ ಬಾಳಿಗಾ ಅವರು ಇಂದು ಮದರಾಸಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೆಲವು ಕಾಲದಿಂದ ಅಸ್ವಸ್ಥರಾಗಿದ್ದ ಬಾಳಿಗಾರವರ ಅಂತ್ಯ ಮದರಾಸಿನ ಜನರಲ್ ಆಸ್ಪತ್ರೆಯಲ್ಲಿ ಸಂಜೆ 5 ಗಂಟೆಗೆ ಸಂಭವಿಸಿತು.

ಹಿಂಸೆಗೆ ಹರಿದ ಸೌಭಾಗ್ಯ

ನ್ಯೂಯಾರ್ಕ್, ಜೂನ್ 6–
ಕಳೆದ ಐದು ವರ್ಷಗಳಲ್ಲಿ ಹಂತಕರ ಗುಂಡು ಅಮೆರಿಕದ ಜನಜೀವನದಲ್ಲಿ ಒಂದು ಹೊಸ ರೀತಿಯ ಮಹಿಳೆಯನ್ನು ಸೃಷ್ಟಿಸಿದೆ. ಆ ಮಹಿಳೆ ಹಿಂಸಾಕೃತ್ಯದಿಂದ ಉದ್ಭವಿಸಿದ ವಿಧವೆ. ಈ ಮಹಿಳೆಯರ ಗುಂಪಿಗೆ ಹೊಸದಾಗಿ ಸೇರಿದವಳು ರಾಬರ್ಟ್ ಕೆನೆಡಿ ಅವರ ಪತ್ನಿ ಶ್ರೀಮತಿ ಎಥೆಲ್ ಕೆನೆಡಿ.

ಇಂದಿರಾ ಕಂಬನಿ

ನವದೆಹಲಿ, ಜೂನ್ 6–
ಉನ್ನತ ಧ್ಯೇಯ–ಆದರ್ಶಗಳನ್ನು ಹೊಂದಿದ್ದ ಅದ್ಭುತ ಮಾನವಶಕ್ತಿ ರಾಬರ್ಟ್ ಕೆನೆಡಿ ಅವರ ಸಾವಿನಿಂದ ಅಮೆರಿಕ ಮಾತ್ರವಲ್ಲ ಇಡೀ ವಿಶ್ವಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ರಾಬರ್ಟ್ ನಿಧನಕ್ಕೆ ಕಂಬಿನಿ ಮಿಡಿದಿದ್ದಾರೆ.

ಆಪಾದಿತನ ತಂದೆ–ತಾಯಿ ದಿಗ್ಭ್ರಮೆ

ಜೆರೂಸಲೆಂ, ಜೂನ್ 6–
ಸೆನೆಟರ್ ರಾಬರ್ಟ್ ಕೆನೆಡಿಯವರ ಮೇಲೆ ನಿನ್ನ ಗುಂಡು ಹಾರಿಸಿದನೆನ್ನಲಾದ ಸಿರ್ಹಾನ್ ತಂದೆ ಇಂದು ವರದಿಗಾರರಿಗೆ ಹೇಳಿದ್ದು ಹೀಗೆ;– ‘ನನ್ನ ಮಗನ ಕೃತ್ಯ ನನ್ನನ್ನು ದಿಗ್ಭ್ರಮೆಗೊಳಿಸಿದೆ’.

ಆಪಾದಿತನ ತಂದೆ 52 ವರ್ಷ ವಯಸ್ಸಿನ ಬಿಷಾರ ಸಲಾಮೆ ಸಿರ್ಹಾನ್ ಇಲ್ಲಿಗೆ ಸಮೀಪದ ಟಾಯ್‌ಯಿಬ ಎಂಬ ಸಣ್ಣ ಅರಬ್ ಗ್ರಾಮದಲ್ಲಿ ಅಮ್ಮಾನ್ ರೇಡಿಯೋ ತಿರುಗಿಸಿದಾಗ ಅವರಿಗೆ ಈ ಭೀಕರ ಸುದ್ದಿ ತಿಳಿಯಿತಂತೆ.

ಹಂತಕನ ಜೊತೆ ಇದ್ದ ಮಹಿಳೆಗಾಗಿ ಶೋಧ

ಲಾಸ್‌ಏಂಜಲಿಸ್, ಜೂನ್–
ರಾಬರ್ಟ್ ಕೆನೆಡಿ ಅವರು ಗುಂಡಿನೇಟಿನಿಂದ ಗಾಯಗೊಳ್ಳುವುದಕ್ಕೆ ಸ್ವಲ್ಪ ಮುಂಚೆ ಹಂತಕ ಸಿರ್ಹಾನ್‌ ಜೊತೆ ಕಾಣಿಸಿಕೊಂಡ 23 ರಿಂದ 27 ವರ್ಷ ವಯಸ್ಸಿನೊಳಗಿನ ಮಹಿಳೆಯನ್ನು ಹುಡುಕುತ್ತಿರುವುದಾಗಿ ಪೊಲೀಸರು ಇಂದು ಇಲ್ಲಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.