ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ಕೋರೆಗಾಂವ್‌ ಪ್ರಕರಣ: ಐವರ ಸೆರೆ

Last Updated 6 ಜೂನ್ 2018, 19:30 IST
ಅಕ್ಷರ ಗಾತ್ರ

ಪುಣೆ: ಜನವರಿ 1ರಂದು ಭೀಮಾ ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ದಲಿತ ಹೋರಾಟಗಾರ ಸುಧೀರ್‌ ಧಾವಲೆ ಅವರನ್ನು ಮುಂಬೈನ ನಿವಾಸದಿಂದ ಬಂಧಿಸಲಾಗಿದೆ. ವಕೀಲ ಸುರೇಂದ್ರ ಗಾಡ್ಲಿಂಗ್‌, ದಲಿತ ಹೋರಾಟಗಾರ ಮಹೇಶ್‌ ರಾವತ್‌ ಮತ್ತು ಶೋಮಾ ಸೇನ್‌ ಅವರನ್ನು ನಾಗ್ಪುರದಿಂದ ಬಂಧಿಸಲಾಗಿದೆ. ರೋನಾ ವಿಲ್ಸನ್‌ ಅವರನ್ನು ದೆಹಲಿಯ ಅವರ ಫ್ಲ್ಯಾಟ್‌ನಿಂದ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಎಲ್ಲರಿಗೂ ನಕ್ಸಲರ ಜತೆ ಸಂಪರ್ಕ ಇದೆ ಎಂದು ಶಂಕಿಸಲಾಗಿದೆ.

ಭೀಮಾ– ಕೋರೆಗಾಂವ್‌ ಸಂಘರ್ಷದ 200ನೇ ವರ್ಷಾಚರಣೆಯನ್ನು ಸಂಘಟಿಸಿದವರಲ್ಲಿ ಧಾವಲೆ ಅವರೂ ಒಬ್ಬರು. ಕಳೆದ ಡಿಸೆಂಬರ್‌ 31ರಂದು ಶನಿವಾರವಾಡಾದಲ್ಲಿ ಈ ಕಾರ್ಯಕ್ರಮ ನಡೆದಿತ್ತು.

ಕಬೀರ್ ಕಲಾ ಮಂಚ್‌ ಕಾರ್ಯಕರ್ತರು ಈ ಸಮಾರಂಭದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಅದರ ಪರಿಣಾಮವಾಗಿ ಭೀಮಾ– ಕೋರೆಗಾಂವ್‌ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದೆ ಎಂದು ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಇನ್ನಷ್ಟು ಆರೋಪಿಗಳ ಬಂಧನ ಸಾಧ್ಯತೆ ಇದೆ. ಪ್ರಕರಣದ ವಿವರವಾದ ಅಧ್ಯಯನ ನಡೆಸಿದ ಬಳಿಕ ಈ ಐವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಾತ್‌ ಶಾಸಕ ಜಿಗ್ನೇಶ್‌ ಮೆವಾನಿ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡ ಉಮರ್‌ ಖಾಲಿದ್‌, ರೋಹಿತ್‌ ಮೇಮುಲ ತಾಯಿ ರಾಧಿಕಾ ವೇಮುಲ, ಭಾರಿಪ್‌ ಬಹುಜನ ಮಹಾಸಂಘದ ಅಧ್ಯಕ್ಷ ಪ್ರಕಾಶ್‌ ಅಂಬೇಡ್ಕರ್‌ ಮುಂತಾದವರು ಭೀಮಾ ಕೋರೆಗಾಂವ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಿಂದುತ್ವವಾದಿ ಗುಂಪಿನ ಮುಖಂಡ ಮಿಲಿಂದ್‌ ಏಕಬೋಟೆ ಮತ್ತು ಸಂಭಾಜಿ ಭಿಡೆ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇವರು ಹಿಂಸಾಚಾರದ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಏಕಬೋಟೆಯನ್ನು ಈಗಾಗಲೇ ಬಂಧಿಸಲಾಗಿದೆ.

ಹೊಸ ವರ್ಷದ ದಿನ ಹಿಂಸೆ

ತುಷಾರ್‌ ದಾಂಗುಡೆ ಎಂಬವರು ಕಬೀರ್‌ ಕಲಾ ಮಂಚ್‌ನ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದರು. ಪ್ರಚೋದನಾಕಾರಿ ಭಾಷಣಗಳೇ ಹಿಂಸಾಚಾರಕ್ಕೆ ಕಾರಣ ಎಂದು ಅವರು ಆರೋಪಿಸಿದ್ದರು.

ಭೀಮಾ ಕೋರೆಗಾಂವ್‌ ಸಮೀಪದ ಸನಸ್‌ವಾಡಿಯಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿತ್ತು. ಅದರಲ್ಲಿ ಒಬ್ಬರು ಬಲಿಯಾಗಿದ್ದರು. ಹಿಂಸಾಚಾರದ ಬಳಿಕ ಮಹಾರಾಷ್ಟ್ರದಾದ್ಯಂತ ದಲಿತರು ಪ್ರತಿಭಟನೆ ನಡೆಸಿದ್ದರು.

ಹೊಸ ವರ್ಷದ ಮೊದಲ ದಿನವೇ ಪ್ರತಿಭಟನಕಾರರು ಹಲವು ವಾಹನಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು. ಹಲವು ಮನೆಗಳನ್ನು ಧ್ವಂಸ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT