4

ಎಫ್‌ಎಸ್‌ಎಲ್ ವರದಿಗೆ ಮೊದಲೇ ಕೊಲೆ ಪ್ರಕರಣ ದಾಖಲು, ಆಕ್ರೋಶ

Published:
Updated:
ಎಫ್‌ಎಸ್‌ಎಲ್ ವರದಿಗೆ ಮೊದಲೇ ಕೊಲೆ ಪ್ರಕರಣ ದಾಖಲು, ಆಕ್ರೋಶ

ಉಡುಪಿ: ದನದ ವ್ಯಾಪಾರಿ ಹುಸೇನಬ್ಬ ಮರಣೋತ್ತರ ಪರೀಕ್ಷೆ ವರದಿ ಬಾರದಿದ್ದರೂ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿರುವುದು ಏಕೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಹಿಂದೂ ಕಾರ್ಯಕರ್ತರ ದಮನ ನೀತಿ ಹಾಗೂ ಅಮಾಯಕ ಕಾರ್ಯಕರ್ತರ ಬಂಧನ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

‘ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹುಸೇನಬ್ಬ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಕ್ಕೆ ಭಯಗೊಂಡು ಹೃದಯಾಘಾತವಾಗಿ ಮೃತಪಟ್ಟಿರಬಹುದು. ಪೊಲೀಸರು ಎಫ್‌ಎಸ್‌ಎಲ್‌ ವರದಿ ಬರುವವರೆಗೆ ಕಾಯಬೇಕಿತ್ತು. ಒತ್ತಡಕ್ಕೆ ಮಣಿದು ಕೊಲೆ ಪ್ರಕರಣ ದಾಖಲಿಸಿರುವುದು ಖಂಡನಾರ್ಹ’ ಎಂದರು.

‘ರಾಜ್ಯ ಸರ್ಕಾರ ಹಿಂದೂಗಳನ್ನು ಗುರಿಯಾಗಿಸುತ್ತಿದೆ. . ಎಫ್‌ಎಸ್‌ಎಲ್‌ ವರದಿ ಬರುವವರೆಗೂ ಕಾಯುತ್ತೇವೆ. ಹುಸೇನಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದು ದೃಢಪಟ್ಟರೆ, ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು’ ಎಂದು ಅವರು ಒತ್ತಾಯಿಸಿದರು.

‘ಹುಸೇನಬ್ಬ ಪ್ರಕರಣದಲ್ಲಿ ಪ್ರಾಮಾಣಿಕ ತನಿಖೆಯಾಗಬೇಕು. ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಸ್ವಜನ ಪಕ್ಷಪಾತ, ಒಂದು ವರ್ಗ, ಕೋಮಿನ ಪರ ಕೆಲಸ ಮಾಡುವ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್‌, ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾ ಘಟಕದ ಮಟ್ಟಾರು ರತ್ನಾಕರ ಹೆಗ್ಡೆ, ಬಜರಂಗದಳ, ವಿಎಚ್‌ಪಿ ಮುಖಂಡರು ಪ್ರತಿಭಟನೆಯಲ್ಲಿ ಇದ್ದರು

ಹೆಡ್‌ಕಾನ್‌ಸ್ಟೆಬಲ್‌ ಜಾಮೀನು ಅರ್ಜಿ ತಿರಸ್ಕೃತ

ಉಡುಪಿ: ದನದ ವ್ಯಾಪಾರಿ ಹುಸೇನಬ್ಬ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿರಿಯಡಕ ಠಾಣೆ ಹೆಡ್ ಕಾನ್‌ಸ್ಟೆಬಲ್‌ ಮೋಹನ್‌ ಕೊತ್ವಾಲ್ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ. ಮೋಹನ್ ಕೊತ್ವಾಲ್‌ ಈಚೆಗೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು.

ಶಾಂತಿ ಕದಡಿದರೆ ಕ್ರಮ: ಸಿ.ಎಂ

ಬೆಂಗಳೂರು: ಬಿಜೆಪಿ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸಿದರೆ, ಅಂತಹ ಪ್ರಯತ್ನವನ್ನು ಬಗ್ಗು ಬಡಿಯುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಉಡುಪಿ ಜಿಲ್ಲೆ ಪೆರ್ಡೂರಿನಲ್ಲಿ ಇತ್ತೀಚೆಗೆ ನಡೆದ ದನದ ವ್ಯಾಪಾರಿ ಹುಸೇನಬ್ಬ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಕಾರಣಕ್ಕೂ  ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿಗೆ ಅವಕಾಶ ನೀಡುವುದಿಲ್ಲ’ ಎಂದರು.

‘ಬಿಜೆಪಿಯು ಕಲುಷಿತ ವಾತಾವರಣ ಸೃಷ್ಟಿಸಲು ಮುಂದಾದರೆ, ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳ ಬಗ್ಗೆ ಮಾಹಿತಿಯನ್ನು ತರಿಸಿಕೊಳ್ಳುತ್ತಿದ್ದೇನೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry