7

ಗ್ರಾಮಸ್ವರಾಜ್ಯವಿಲ್ಲದ ರಾಮರಾಜ್ಯ...!?

ಪ್ರಸನ್ನ
Published:
Updated:
ಗ್ರಾಮಸ್ವರಾಜ್ಯವಿಲ್ಲದ ರಾಮರಾಜ್ಯ...!?

ಮೋದಿವಾದ ಹುಟ್ಟಿಕೊಂಡದ್ದು, ನರೇಂದ್ರ ಮೋದಿ ಬ್ರಿಗೇಡ್ ಅಥವಾ ನಮೋ ಬ್ರಿಗೇಡ್‌ನಿಂದಾಗಿ. ಹೇಗೆ ಎಮರ್ಜೆನ್ಸಿ ಯುಗದ ಕಾಂಗ್ರೆಸ್ ಪಕ್ಷವು ಇಂದಿರಾ ಬ್ರಿಗೇಡನ್ನು ಒಪ್ಪಿಕೊಂಡಿತ್ತೋ ಹಾಗೆಯೇ ಭಾರತೀಯ ಜನತಾ ಪಕ್ಷ ಕೂಡಾ ನಮೋ ಬ್ರಿಗೇಡನ್ನು ಒಪ್ಪಿಕೊಂಡಿತ್ತು, ಅಧಿಕಾರಕ್ಕಾಗಿ ಹಾಗೆ ಮಾಡಿತು. ಇಂದಿರಾ ಬ್ರಿಗೇಡಿಗೆ ಮೂರ್ತಿರೂಪ ಕೊಟ್ಟಿದ್ದ ಹಾಗೂ ತುರ್ತು ಪರಿಸ್ಥಿತಿಯನ್ನು ಈ ದೇಶದ ಮೇಲೆ ಹೇರಿದ್ದ ಇಂದಿರಾ ಗಾಂಧಿಯವರು ವೈಯಕ್ತಿಕವಾಗಿ ಪ್ರಾಮಾಣಿಕ ವ್ಯಕ್ತಿಯೇ ಆಗಿದ್ದರು. ಜನಪರ ಕಾಳಜಿಯುಳ್ಳ ವ್ಯಕ್ತಿಯೇ ಆಗಿದ್ದರು. ಹಾಗೆಂದು ಕೇಳಿದ್ದೇನೆ ನಾನು. ಆದರೆ ತಮ್ಮ ಲಕ್ಷ್ಯ ಸಾಧನೆಗಾಗಿ ಅವರು ಬಳಸಿಕೊಂಡ ಮಾರ್ಗ ಸರಿಯಿರಲಿಲ್ಲವಾಗಿ ಅವರ ವಾದ ವಿವಾದಾಸ್ಪದವಾಯಿತು. ನರೇಂದ್ರ ಮೋದಿಯವರೂ ಹಾಗೆಯೇ, ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂದು ಕೇಳಿದ್ದೇನೆ. ಪರಂಪರೆಯ ಬಗ್ಗೆ ಕಾಳಜಿಯಿದೆ ಎಂದು ಕೇಳಿದ್ದೇನೆ. ಆದರೆ ಲಕ್ಷ್ಯ ಸಾಧನೆಗಾಗಿ ಅವರು ಬಳಸುತ್ತಿರುವ ಮಾರ್ಗ ಸರಿಯಿಲ್ಲ. ಅವರ ಆಳ್ವಿಕೆಯಲ್ಲಿ ಇಡೀ ದೇಶ ಅಸಹಿಷ್ಣುವಾಗುತ್ತಿದೆ. ಪರಸ್ಪರ ಅಪನಂಬಿಕೆ ಹೆಚ್ಚುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ, ಗ್ರಾಮಗಳು ಬಡವಾಗುತ್ತಿವೆ. ಬಡವರು ಬಡವಾಗುತ್ತಿದ್ದಾರೆ.

‘ರಾಮರಾಜ್ಯ’ ಮೋದೀಜಿಯವರ ಲಕ್ಷ್ಯ ಎಂದು ಕೇಳಿದ್ದೇನೆ ನಾನು. ಗ್ರಾಮಸ್ವರಾಜ್ಯವಿಲ್ಲದ ರಾಮರಾಜ್ಯವು ಸೀತೆಯಿಲ್ಲದ ರಾಮನಿದ್ದಂತೆ. ಅಥವಾ ಪ್ರಕೃತಿಯಿಲ್ಲದ ಸಭ್ಯತೆಯಿದ್ದಂತೆ. ಬರೇ ಪೌರುಷ, ಬರೇ ಹೂಂಕಾರವು ರಾಮರಾಜ್ಯವನ್ನು ನಿರ್ಮಿಸಲಾರದು. ಹಾಗಾಗಿ, ಗೌರವಪೂರ್ವಕವಾಗಿಯೇ ಮೋದಿವಾದವನ್ನು ತಿರಸ್ಕರಿಸಬಯಸುತ್ತೇನೆ ನಾನು. ಹಾಗೆ ಮಾಡದೆ ಬರಿದೆ ಚರಕ, ದೇಸಿ, ಸ್ವದೇಶಿ ಇತ್ಯಾದಿ ಮಾತುಗಳನ್ನಾಡುವುದು ಹಾಸ್ಯಾಸ್ಪದವಾಗುತ್ತದೆ. ಹಾಗಾಗಿ ಮೋದಿವಾದ ತಿರಸ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ ನಾವು ಕೆಲವರು ರಚನಾತ್ಮಕ ಕೆಲಸಗಾರರು.

ನನಗೆ ತಿಳಿದ ಮಟ್ಟಿಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರತಿಪಾದಿಸುವ ಭಾರತೀಯ ಪರಂಪರೆ ಮೋದೀಜಿ ಮಾದರಿಯದ್ದಲ್ಲ. ಸ್ವದೇಶಿಯಂತೂ ಅಲ್ಲವೇ ಅಲ್ಲ. ಇತ್ತ, ವಿವೇಕಾನಂದ, ಭಗತ್‍ ಸಿಂಗ್ ಆದಿಯಾಗಿ ಭಾರತದ ವಿಚಾರವಾದಿ ಪರಂಪರೆಯಾಗಲೀ, ಭಾರತದ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಿದ್ಧಾಂತಗಳಾಗಲೀ ನಂಬುವ ಭಾರತ ಕೂಡ ಮೋದಿ ಮಾದರಿಯದ್ದಲ್ಲ. ಹಾಗಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷವೂ ಸೇರಿದಂತೆ ನಾವೆಲ್ಲರೂ ಮೋದಿವಾದವನ್ನು ತಿರಸ್ಕರಿಸಬೇಕಿದೆ.

ಆದರೆ ಹಾಗೆ ಮಾಡುವ ಮೊದಲು, ಮೋದಿವಾದ ಮೇಲೆದ್ದು ಬರಲಿಕ್ಕೆ ನಮ್ಮೆಲ್ಲರ ಸಹಕಾರವೂ ಇದೆ ಎಂದು ಒಪ್ಪಿಕೊಳ್ಳಬೇಕು ನಾವು. ಸ್ವಾತಂತ್ರ್ಯಾನಂತರದ ಭಾರತೀಯರೆಲ್ಲರೂ ತಪ್ಪು ಮಾಡಿದ್ದೇವೆ. ನಮ್ಮ ನಮ್ಮ ಸಣ್ಣ ಪುಟ್ಟ ವಾದ ವಾಗ್ವಾದಗಳಿಗೆ ಬಲಿಯಾಗಿ ಸತ್ಯವನ್ನು ಕಡೆಗಣಿಸಿದ್ದೇವೆ. ನಮ್ಮ ತಪ್ಪುಗಳು ಹಲವು ರೀತಿಯವು. ಆಧುನಿಕತೆಯನ್ನು ರೂಢಿಸಿಕೊಳ್ಳುವ ಬದಲು ಯಂತ್ರನಾಗರಿಕತೆಯನ್ನು ರೂಢಿಸಿಕೊಂಡಿದ್ದೇವೆ ನಾವು. ಪರಂಪರೆಯನ್ನು ರೂಢಿಸಿಕೊಳ್ಳುವ ಬದಲು ದ್ವೇಷವನ್ನು ರೂಢಿಸಿಕೊಂಡಿದ್ದೇವೆ. ಕೇವಲ ಕಾನೂನಿನ ಮೂಲಕ ಸಭ್ಯತೆಯೊಂದನ್ನು ನಿರ್ಮಾಣ ಮಾಡಬಹುದು ಎಂಬ ಮೂರ್ಖವಿಚಾರ ನಮ್ಮದಾಗಿದೆ. ಬಾಯಲ್ಲಿ ಬಡವರ ಪರ ಮಾತನಾಡುತ್ತೇವೆ, ಕೈಗಳಲ್ಲಿ ಸ್ವಯಂಚಾಲಿತ ಯಂತ್ರ ಹಿಡಿದು ಬಡವರ ಉದ್ಯೋಗ ನಾಶ ಮಾಡುತ್ತೇವೆ ಇತ್ಯಾದಿ.

ನೀವೇ ನೋಡಿ! ಕಳೆದ ಎಪ್ಪತ್ತು ವರ್ಷಗಳಲ್ಲಿ ಎಪ್ಪತ್ತು ಪ್ರತಿಶತ ಕೈಉತ್ಪಾದಕರನ್ನು ಉದ್ಯೋಗರಹಿತರನ್ನಾಗಿ ಮಾಡಿದ್ದೇವೆ ನಾವು. ಹಣದ ಆಮಿಷ ತೋರಿಸಿ, ಅವರನ್ನು ಪೇಟೆಗೆ ತರುಬಿದ್ದೇವೆ. ಬೆರಳೆಣಿಕೆಯ ಅತಿ ಶ್ರೀಮಂತರು ಹಾಗೂ ಬಹುಸಂಖ್ಯಾತ ಗುಲಾಮರನ್ನು ಬಲವಂತದಿಂದ ಬಿಗಿದುಕಟ್ಟಿ ಈ ದೇಶವನ್ನು ಒಂದು ಆಟಂಬಾಂಬು ಮಾಡಿದ್ದೇವೆ. ಆಟಂಬಾಂಬು ರಾಮರಾಜ್ಯವಲ್ಲ.

ರಾಮರಾಜ್ಯವೆಂದರೆ ಹಸಿರಿನ ರಾಜ್ಯ, ಕಾಡಿನೊಳಗೆ ಅದ್ದಿ ತೆಗೆದ ರಾಜ್ಯ. ಸೀತೆ ಪ್ರಕೃತಿಗೆ ಸಂಕೇತಳು. ರಾಮಸೀತೆಯರ ದಾಂಪತ್ಯವು ಗಂಡು ಹಾಗೂ ಹೆಣ್ಣಿನ ದಾಂಪತ್ಯವೂ ಹೌದು, ಸಭ್ಯತೆ ಹಾಗೂ ಪ್ರಕೃತಿಗಳ ದಾಂಪತ್ಯವೂ ಹೌದು. ಗಂಡುಹೆಣ್ಣಾಗಿ ಹೇಗೆ ರಾಮಸೀತೆಯರು ಪರಸ್ಪರರನ್ನು ಪ್ರೀತಿಸುತ್ತಾರೆಯೋ

ಅಷ್ಟೇ ಅನ್ಯೋನ್ಯತೆಯಿಂದ ಸಭ್ಯತೆ ಹಾಗೂ ಪ್ರಕೃತಿಗಳು ಬಾಳುವೆ ಮಾಡಬೇಕು ಎಂದು ಬಯಸುತ್ತದೆ ರಾಮಾಯಣ.

ಪ್ರಕೃತಿ ನಮ್ಮಿಂದ ಹೊರಗಿದೆ ಎಂದು ಭಾವಿಸುವುದೇ ಇಲ್ಲ ರಾಮಾಯಣ. ನಮ್ಮೊಳಗೂ ಇದೆ ಅದು ಎನ್ನುತ್ತದೆ ರಾಮಾಯಣ. ಒಳಗಿನ ಪ್ರಕೃತಿ ಹೊರಗಿನ ಪ್ರಕೃತಿಯನ್ನೂ, ಹೊರಗಿನದ್ದು ಒಳಗಿನದ್ದನ್ನೂ ಪ್ರಭಾವಿಸುತ್ತಿರುತ್ತದೆ ಎನ್ನುತ್ತದೆ ರಾಮಾಯಣ. ಒಳಗಿನ ಪ್ರಕೃತಿ, ಹೊರಗಿನ ಪ್ರಕೃತಿ ಎರಡನ್ನೂ ರೂಢಿಸಿದ ಕ್ಷೇತ್ರವೇ ರಾಮಾಯಣದ ಆಶ್ರಮಗಳು. ರಾಮರಾಜ್ಯವನ್ನು ರೂಪಿಸುವಲ್ಲಿ ಆಶ್ರಮಗಳು, ಆಶ್ರಮವಾಸಿಗಳು ಹಾಗೂ ಅವರ ಸರಳ ಜೀವನಶೈಲಿಯನ್ನು ಎಷ್ಟು ಒತ್ತಿ ಹೇಳಿದರೂ ಸಾಲದು. ರಾಮಸೀತೆಯರು ರಾಮಾಯಣದ ನಾಯಕ ನಾಯಕಿಯರಾದರೆ, ರಾವಣ ಖಳನಾಯಕನಾದರೆ, ಆಶ್ರಮಗಳು ರಾಮಾಯಣ ನಡೆಯುವ ರಂಗಭೂಮಿ.

ಆಶ್ರಮಗಳು, ಕಾಡಿನ ಅಂಚಿನಲ್ಲಿ ಹಾಗೂ ಗ್ರಾಮಗಳ ಅಂಚಿನಲ್ಲಿ ಸ್ಥಾಪಿತವಾಗಿರುವ ಗ್ರಾಮಸೇವಾ ಕೇಂದ್ರಗಳು. ರಾಮಾಯಣದಲ್ಲಿ ಕೃಷಿ ಹಾಗೂ ಕುಶಲಕರ್ಮಗಳ ನೇರ ಪ್ರಸ್ತಾಪವಿಲ್ಲ. ಆದರೆ ಅವು ಇವೆ. ಗಿಡಮರಗಳ ನಡುವೆ ಅಡಗಿ ಕುಳಿತಿವೆ ಅವು. ಅಥವಾ ರಾಮಾಯಣದ ಮುನಿಜನರು ಜಾತಿ ಬ್ರಾಹ್ಮಣರಲ್ಲ. ಮೂರೂಹೊತ್ತು ಮಣಮಣ ಮಂತ್ರ ಹೇಳುತ್ತಿರುವವರಲ್ಲ ಅವರು. ವ್ಯರ್ಥವಾಗಿ ಬೆಂಕಿಗೆ ತುಪ್ಪ ಸುರಿಯುತ್ತಿರುವವರೂ ಅಲ್ಲ ಅವರು. ಶೂದ್ರವರ್ಣವನ್ನು ಸಲಹಲಿಕ್ಕೆಂದು, ನಗರ ಆಸ್ತಿ ಅಹಂಕಾರಗಳನ್ನು ತೊರೆದು ಬಂದ ಉಳ್ಳವರು ಅವರು. ಸನ್ಯಾಸ ಸ್ವೀಕರಿಸಿದವರು. ವಾಲ್ಮೀಕಿ, ವಿಶ್ವಾಮಿತ್ರ, ವಶಿಷ್ಠರಂತಹವರು ಅವರು!

ರಾಮ, ಆಶ್ರಮಗಳಿಂದ ಹಾಗೂ ಆಶ್ರಮವಾಸಿಗಳಿಂದ ಪ್ರಭಾವಿತನಾಗುತ್ತಾನೆ. ಅವರ ಶಿಷ್ಯತ್ವ ಸ್ವೀಕರಿಸುತ್ತಾನೆ. ರಾಮನ ಗುರುಗಳು ವಿಶ್ವಾಮಿತ್ರರು. ಇನ್ನೂ ಹುಡುಗರಾದ ರಾಮಲಕ್ಷ್ಮಣರನ್ನು ಕರೆದೊಯ್ದು ವಿವಿಧ ಆಶ್ರಮಗಳ ಪರಿಚಯ ಮಾಡಿಸುತ್ತಾರೆ ಅವರು. ಜೊತೆಗೆ ರಾಕ್ಷಸರ ಪರಿಚಯವನ್ನೂ ಮಾಡಿಸುತ್ತಾರೆ. ಒಂದಿಬ್ಬರು ರಾಕ್ಷಸರ ಸಂಹಾರ ಕೂಡ ಮಾಡಿಸುತ್ತಾರೆ.

ರಾಮನ ಮೂಲವಂಶಜನಾದ ಸಗರನ ಕತೆಯನ್ನು ವಿಶ್ವಾಮಿತ್ರರು ಹೇಳುತ್ತಾರೆ. ಸಗರ ಆರಂಭಿಸಿದ್ದು ಕೃಷಿಯಜ್ಞವನ್ನು. ಸಗರನಿಗೆ ಇಬ್ಬರು ಹೆಂಡಿರು. ಮೊದಲ ಹೆಂಡತಿಯ ಮಗ, ರಾಜನಾಗಬೇಕಾದವನು, ದುಷ್ಟ. ಅವನನ್ನು ತಿರಸ್ಕರಿಸುತ್ತಾನೆ ಸಗರ. ಎರಡನೆಯ ಹೆಂಡತಿಯಲ್ಲಿ ಒಂದು ಸಾವಿರ ದುಡಿಯುವ ಮಕ್ಕಳು ಹುಟ್ಟುತ್ತಾರೆ ಅವನಿಗೆ. ಸಗರನ ದುಡಿಯುವ ಮಕ್ಕಳು, ಅಪ್ಪನ ಮಾತಿನಂತೆ ಇಡೀ ಆರ್ಯಾವರ್ತವನ್ನು ಅಗೆಯುತ್ತಾರೆ. ಅಗೆದು ಅಗೆದು ಫಲ ಸಿಗದೆ ಸಾಯುತ್ತಾರೆ. ಆರ್ಯಾವರ್ತದಲ್ಲಿ ನೀರಿಲ್ಲ. ಸಗರ, ಮೊಮ್ಮಗ ಅಂಶುಮಂತನಿಗೆ ಪಟ್ಟಾಭಿಷೇಕ ಮಾಡಿ, ಆರ್ಯಾವರ್ತಕ್ಕೆ ನೀರು ತರಿಸು ಎಂದು ಆಣತಿ ಮಾಡಿ ಸಾಯುತ್ತಾನೆ. ಮೊಮ್ಮಗ ಅಂಶುಮಂತನಾಗಲೀ ಅವನ ಮಗ ದಿಲೀಪನಾಗಲೀ ನೀರನ್ನು ತರಿಸುವುದು ಸಾಧ್ಯವಾಗುವುದಿಲ್ಲ. ಕೊನೆಗೆ ದಿಲೀಪನ ಮಗನಾದ ಭಗೀರಥನಿಂದ ಸಾಧ್ಯವಾಗುತ್ತದೆ ಅದು. ಭಗೀರಥ ಗಂಗೆಯನ್ನು ಆಕಾಶದಿಂದಿಳಿಸಿ ತಂದು ಆರ್ಯಾವರ್ತವನ್ನು ತಣಿಸುತ್ತಾನೆ. ಕೃಷಿಗೆ ಚಾಲನೆ ನೀಡುತ್ತಾನೆ. ದುಡಿದು ಸತ್ತ ವಂಶಜರಿಗೆ ಗತಿಯನ್ನು ಕಾಣಿಸುತ್ತಾನೆ. ರಾಮಾಯಣವನ್ನು ಹೀಗೂ ಓದಲು ಸಾಧ್ಯ. ಮೋದೀಜಿ ಹೀಗೆ ಓದುತ್ತಿಲ್ಲ ರಾಮಾಯಣವನ್ನು.

ರಾಕ್ಷಸರೆಂದರೆ ಒಳಪ್ರಕೃತಿ ಹಾಗೂ ಹೊರಪ್ರಕೃತಿಗಳ ಸಂಬಂಧ ಹರಿದವರು. ಲಂಕೆಯು ಸಭ್ಯತೆ ಹಾಗೂ ನಿಸರ್ಗಗಳನ್ನು ಬೇರ್ಪಡಿಸಿ ಕಟ್ಟಿದ ನಗರ. ಉಪ್ಪುನೀರಿನಿಂದ ಅವೃತವಾಗಿದೆ ಅದು. ಬೃಹತ್‍ಕೋಟೆಯಿಂದ ಆವೃತವಾಗಿದೆ. ಸುಲಭಜೀವಿ ರಾಕ್ಷಸರಿಂದ ಆವೃತವಾಗಿದೆ, ಆಮೋದ ಪ್ರಮೋದಗಳಿಂದ ತುಂಬಿಕೊಂಡಿದೆ. ಸರಳವಾಗಿ ಹೇಳುವುದಾದರೆ ಇಂದಿನ ಬುರ್ಜ್ ಖಲೀಫಾ ತರಹ ಇದೆ ರಾವಣನ ಲಂಕೆ.

ರಾಕ್ಷಸರು ಯಂತ್ರಚಾಲಿತರು. ಪುಷ್ಪಕ ವಿಮಾನವಿದೆ ಅವರಲ್ಲಿ. ಕದ್ದು ತಂದದ್ದು ಅದು. ಅಮೆರಿಕೆಯಲ್ಲಿ ಈಗ ಇರುವಂತೆ ಮಾಯಾವಿ ಅಸ್ತ್ರಗಳಿವೆ. ಬಡಿದು ತಂದದ್ದು ಅವು. ಲಂಕೆಯ ಆಹಾರ, ಹಾಲು, ಮೊಸರು, ಮದ್ಯ, ಮಾಂಸ, ಸಂಪತ್ತು ಇತ್ಯಾದಿ ಎಲ್ಲವನ್ನೂ ದೂರದ ಗ್ರಾಮಗಳ ಶೂದ್ರರನ್ನು ಬಡಿದು ತರಲಾಗುತ್ತದೆ. ಆಶ್ರಮವಾಸಿಗಳು ಅಡ್ಡಬರುತ್ತಾರೆ ಎಂದೇ ಅವರ ಮೇಲೆ ಸಿಟ್ಟು ರಾಕ್ಷಸರಿಗೆ. ರಾಮಾಯಣವನ್ನು ಹೀಗೂ ಓದಬಹುದು. ಮೋದೀಜಿ ಹೀಗೆ ಓದುತ್ತಿಲ್ಲ ರಾಮಾಯಣವನ್ನು.

ಕಾಡನ್ನು ಉಳಿಸಬೇಕೆ, ಮೊದಲು ಗ್ರಾಮ ಉಳಿಸು ಎನ್ನುತ್ತದೆ ರಾಮಾಯಣ. ಸೀತೆಯನ್ನು ರಾವಣ ಬಲವಂತದಿಂದ ಕೊಂಡೊಯ್ಯುವುದು ಒಂದು ಸಂಕೇತ. ಪ್ರಕೃತಿ ರೂಪಕಳಾದ ಸೀತೆಯನ್ನು ಬೇರು ಕಿತ್ತು ಹೊತ್ತೊಯ್ಯುತ್ತಾನೆ ರಾವಣ. ಹೌದು! ಬೇರು ಕಿತ್ತ ಪ್ರಕೃತಿ ಸೀತೆ! ರಾವಣನನ್ನು ಸೋಲಿಸಿದ ರಾಮ ಎಲ್ಲಿ ನೆಡಬೇಕು ಹೇಳಿ ಬೇರು ಕಿತ್ತ ಪ್ರಕೃತಿಯನ್ನು? ಅರ್ಥಾತ್, ಬಾಡಿದ ಹಸಿರನ್ನು? ರಾಮಾಯಣವು ಸೀತೆಯ ಮೂಲಕ, ಇತ್ತ ಒಂದು ಹೆಣ್ಣಿನ ದುರಂತವನ್ನೂ ಸೂಚಿಸುತ್ತಿದೆ, ಅತ್ತ ಹಸಿರಿನ ದುರಂತವನ್ನೂ ಸೂಚಿಸುತ್ತಿದೆ.

ಕಡೆಯದಾಗಿ ಯುದ್ಧ! ಮಹಾಕಾವ್ಯಗಳಲ್ಲಿ ಬರುವ ಯುದ್ಧಗಳು ವಾಸ್ತವಿಕ ಯುದ್ಧಗಳಲ್ಲ. ಅವು ರೂಪಕಗಳು. ರಾಮಾಯಣದ ಯುದ್ಧದಲ್ಲಿ ಸಭ್ಯತೆಯ ಪರವಾಗಿ ಹೋರಾಡುವುದು ಕಪಿಗಳು ಹಾಗೂ ಕರಡಿಗಳು, ಅಳಿಲುಗಳು, ಹದ್ದುಗಳು ಇತ್ಯಾದಿ. ಅವುಗಳು ಬಳಸುವ ಆಯುಧ ಆಯುಧವಲ್ಲ, ಅವು ಮರಗಿಡಗಳು. ಆದರೆ ರಾಕ್ಷಸರ ಕಡೆಗೆ ಯೋಧರಿದ್ದಾರೆ, ಅಸ್ತ್ರಗಳಿವೆ, ಆಸ್ತಿ– ಅಂತಸ್ತು, ಮಾಯಾವಿತನ ಎಲ್ಲವೂ ಇವೆ. ಇದಾವುದೂ ಇರದ ಕಪಿಗಳನ್ನು ಗೆಲ್ಲಿಸುತ್ತದೆ ರಾಮಾಯಣ.

ನಿಸರ್ಗ, ಗ್ರಾಮ, ಗ್ರಾಮಸ್ವರಾಜ್ಯ ಒಂದು ಬದಿಯಾದರೆ, ಬುರ್ಜ್ ಖಲೀಫಾ ಇನ್ನೊಂದು ಬದಿ. ಮೋದೀವಾದವು ಆರ್ಯಾವರ್ತದ ಕೃಷಿಭೂಮಿಯ ಮೇಲೆ ಬುರ್ಜ್ ಖಲೀಫಾ ಕಟ್ಟಲು ಹೊರಟಿದೆ. ನಾವೆಲ್ಲರೂ ಬುರ್ಜ್ ಖಲೀಫಾದಲ್ಲಿ ಬಂಡವಾಳ ಹೊಡಿದ್ದೇವೆ. ನಮ್ಮ ನಮ್ಮ ಫ್ಲ್ಯಾಟುಗಳನ್ನು ಕಾದಿರಿಸಿದ್ದೇವೆ. ಮೋದೀವಾದವನ್ನು, ಮೊದಲು ನಮ್ಮೊಳಗಿನಿಂದ ತಿರಸ್ಕರಿಸಬೇಕಿದೆ. ನಂತರ ರಾಜಕೀಯವಾಗಿ ತಿರಸ್ಕರಿಸಬೇಕಿದೆ.

ಇತ್ತ, ಕಾಂಗ್ರೆಸ್ಸಿನತ್ತ ಕೊಂಚ ಗಮನಿಸಿ! ಅದು ರಾಮರಾಜ್ಯವನ್ನು ಕಡೆಗಣಿಸಿ ದಶಕಗಳೇ ಕಳೆಯಿತು. ಅಧಿಕಾರ ಹಿಡಿಯುವುದೇ ಪಕ್ಷವೊಂದರ ಗುರಿ, ಮಂತ್ರಿಗಿರಿ ಮಾತ್ರವೇ ಜನಸೇವೆಯ ಹಾದಿ ಎಂದು ತಿಳಿದಿದೆ ಕಾಂಗ್ರೆಸ್ ಪಕ್ಷ. ಉದಾಹರಣೆಗೆ ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರು, ಜೆಡಿಎಸ್ ಪಕ್ಷದ ಜೊತೆಗೆ ತಾವು ಮಾಡಿಕೊಂಡ ಮೈತ್ರಿಯ ಬಗ್ಗೆ, ಮೈತಿ ಮಾಡಿಕೊಂಡ ಒಂದೇ ವಾರದೊಳಗೆ, ಅತೃಪ್ತಿ ವ್ಯಕ್ತಪಡಿಸಿದ್ದಾರೆ. ‘ನಾನೇನೂ ಮೈತ್ರಿಯನ್ನು ಬೆಂಬಲಿಸುತ್ತಿಲ್ಲ. ಬಿಜೆಪಿಯನ್ನು ದೂರ ಇಡಲಿಕ್ಕಾಗಿ ಕೈಜೋಡಿಸಬೇಕಾಯಿತು’ ಎಂದು ಗೋಳಾಡಿದ್ದಾರೆ. ಹಾಗಿದ್ದರೆ ಬಾಜಪವನ್ನು ಹೊರಗಿಡಬೇಕಾದದ್ದು ಕೇವಲ ಮಂತ್ರಿಗಿರಿಗಾಗಿಯೇ?

ಮಾನ್ಯ ಅಧ್ಯಕ್ಷರು ಮೈತ್ರಿ ಸರ್ಕಾರದ ಉಪಮುಖ್ಯಮಂತ್ರಿಯೂ ಹೌದು. ಪೂರ್ಣ ಪ್ರಮಾಣದ ಮುಖ್ಯಮಂತ್ರಿಯೇ ಆಗಬೇಕಿತ್ತು ತಾನು ಎಂಬ ನಿರಾಸೆ ಅವರಿಂದ ಈ ಮಾತನ್ನಾಡಿಸಿರುವುದು ಸ್ಪಷ್ಟವಿದೆ. ಮೈತ್ರಿಯನ್ನೇ ಬೆಂಬಲಿಸದೆ ಮೈತ್ರಿ ಸರ್ಕಾರದ ಉಪಮುಖ್ಯಮಂತ್ರಿಯಾಗುವುದು ಅನೈತಿಕವಲ್ಲವೇ? 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಮೈತ್ರಿಯಿಲ್ಲದೆ ಗೆಲ್ಲಬಲ್ಲೆವು ಎಂಬ ಗಟ್ಟಿನಂಬಿಕೆ ಅವರಿಗೆ ಇದ್ದರೆ, ಸರ್ಕಾರದಿಂದ ದೂರ ಉಳಿದು ಜನರ ನಡುವೆ ಕೆಲಸ ಮಾಡಬೇಕಿತ್ತಲ್ಲವೇ?

ಬಾಜಪ ಗೆಲ್ಲುತ್ತಿಲ್ಲ. ದಿನೇದಿನೇ ಅದು ನಿಚ್ಚಳವಾಗಿ ಕಾಣುತ್ತಿದೆ. ಕಾಂಗ್ರೆಸ್ಸಿನ ಎಡಬಿಡಂಗಿತನ ಗೆಲ್ಲಿಸುತ್ತಿದೆ ಬಾಜಪವನ್ನು. ಅತ್ತ ಮೋದಿವಾದ, ಇತ್ತ ಅಧಿಕಾರದಾಹ. ಅತ್ತ ಬಾಣಲೆ, ಇತ್ತ ಬೆಂಕಿ. ನಡುವೆ ಬೆವರುತ್ತ, ನಿಂತಿದೆ ಭಾರತದ ಜನತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry