ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಮಾಲಿನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

Last Updated 6 ಜೂನ್ 2018, 19:30 IST
ಅಕ್ಷರ ಗಾತ್ರ

ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಸಾರಥ್ಯ ವಹಿಸಿದ ಭಾರತ ನೀಡಿದಂತಹ ಸಂದೇಶ ವಿಶೇಷ. ಅದೂ ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಸುವ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿರುವುದರಿಂದ ಈ ಸಂದೇಶ ಮುಖ್ಯವಾದುದು. ಈ ಬಾರಿಯ ವಿಶ್ವ ಪರಿಸರ ದಿನದ ಘೋಷವಾಕ್ಯ ‘ಪ್ಲಾಸ್ಟಿಕ್ ಮಾಲಿನ್ಯ ತಪ್ಪಿಸಿ’. ‘ಈ ಘೋಷವಾಕ್ಯ  ಖಾಲಿ ಘೋಷಣೆಯಾಗಲು ಬಿಡುವುದಿಲ್ಲ’ ಎಂದು ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ನೀಡಿದ ಆಶ್ವಾಸನೆ ಇಲ್ಲಿ ಆಶಾದಾಯಕವಾದುದು. ಜನಸಮುದಾಯಕ್ಕೆ ಈ ಸಂದೇಶ ತಲುಪಬೇಕಾದುದು ಅಗತ್ಯ. ಪ್ಲಾಸ್ಟಿಕ್ ಮಾಲಿನ್ಯ, ಕೇವಲ ಭಾರತದ ಸಮಸ್ಯೆಯಲ್ಲ. ಇದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ವಾಸ್ತವವಾಗಿ ಪ್ಲಾಸ್ಟಿಕ್ ಇಷ್ಟು ದೊಡ್ಡ ಸಮಸ್ಯೆಯಾಗಬೇಕಿರಲಿಲ್ಲ. ಪ್ಲಾಸ್ಟಿಕ್ ಅನ್ನು ನಾವು ನಿರ್ವಹಿಸುತ್ತಿರುವ ರೀತಿಯಿಂದಾಗಿ ಇದು ಇನ್ನಷ್ಟು ಬೃಹದಾಕಾರದ ಸಮಸ್ಯೆಯಾಗಿ ಬೆಳೆದಿದೆ ಎಂಬುದನ್ನು ಅರಿತುಕೊಳ್ಳಬೇಕು. ಏಕೆಂದರೆ, ಅಭಿವೃದ್ಧಿಯ ಹಾದಿಯಲ್ಲಿ ನಾವು ಸಹಜವಾಗಿ ಬದುಕುವ ಹಾದಿಯಿಂದಲೇ ವಿಮುಖವಾಗಿದ್ದೇವೆ. ದಿನನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ಮಿತಿಮೀರುತ್ತಿದೆ. ಸರಕು ಸಂಸ್ಕೃತಿಯ ವ್ಯಾಮೋಹ ಹಾಗೂ ಒಂದೇ ಬಾರಿ ಬಳಸಿ ಬಿಸಾಡುವ ಸರಕು ಸಂಸ್ಕೃತಿಯಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೇರೆ ಮೀರಿ ಸೃಷ್ಟಿಸಿ ಪರಿಸರವನ್ನು ಹಾಳುಗೆಡುವುತ್ತಿದ್ದೇವೆ. ಹೀಗೆ ಬಿಸಾಡಿದ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಿಲ್ಲ ಎಂಬುದು ನಮಗೆ ತಿಳಿದಿರಬೇಕು. ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕ್ರಮಗಳೂ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳದಿರುವುದು ಪ್ಲಾಸ್ಟಿಕ್‌ ಮಾಲಿನ್ಯದ ಸಮಸ್ಯೆಯನ್ನು ತೀವ್ರಗೊಳಿಸಿದೆ.

ಕಳೆದ ಐದು ವರ್ಷಗಳಲ್ಲಿ ರಾಷ್ಟ್ರದಲ್ಲಿ ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ನದಿಗಳ ಸಂಖ್ಯೆ 121ರಿಂದ 275ಕ್ಕೆ ಏರಿದೆ ಎಂಬುದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಅಂಕಿ ಅಂಶ. ಸಾಗರಗಳಲ್ಲಿ ಪ್ಲಾಸ್ಟಿಕ್ ಕಸ, ಜಲಚರಗಳ ವಿನಾಶಕ್ಕೆ ಕಾರಣವಾಗುತ್ತಿದೆ. ನಗರಗಳ ಚರಂಡಿಗಳಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆಗೊಂಡು ಚರಂಡಿ ನೀರಿನ ಸರಾಗ ಹರಿವಿಗೆ ಅಡ್ಡಿಯಾಗುತ್ತಿದೆ. ಇದರಿಂದ ಕೊಳಕು ನೀರು ಮಡುಗಟ್ಟಿ ಕಾಯಿಲೆಗಳ ಪಸರುಸುವಿಕೆಗೆ ಕಾರಣವಾಗುತ್ತಿದ್ದು ವಿಷವರ್ತುಲವಾಗಿ ಬೆಳೆಯುತ್ತಿದೆ. ಪ್ರತಿವರ್ಷ 50 ಕೋಟಿ ಪ್ಲಾಸ್ಟಿಕ್ ಚೀಲಗಳು ಜಗತ್ತಿನಲ್ಲಿ ಬಳಕೆಯಾಗುತ್ತಿವೆ. ಅವುಗಳಲ್ಲಿ ಅರ್ಧದಷ್ಟು, ಒಮ್ಮೆ ಮಾತ್ರ ಬಳಕೆಯಾಗುತ್ತದೆ ಎಂಬುದು ವಿಶ್ವಸಂಸ್ಥೆ ಅಂದಾಜು. ಸಹಜವಾಗಿ, ಇವೆಲ್ಲಾ ಪ್ಲಾಸ್ಟಿಕ್ ತ್ಯಾಜ್ಯಗಳಾಗಿ ಮಾರ್ಪಾಡಾಗುತ್ತವೆ.

ಭಾರತ ಒಂದರಲ್ಲೇ ಪ್ರತಿದಿನ 15,342 ಟನ್‌ನಷ್ಟು ಪ್ಲಾಸ್ಟಿಕ್ಉ ತ್ಪಾದನೆಯಾಗುತ್ತಿರುವುದು ಕಳವಳಕಾರಿ. ಈ ಎಲ್ಲಾ ಅಂಶಗಳನ್ನು ಗಮನಿಸಿದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಒಡ್ಡುತ್ತಿರುವ ಸವಾಲಿನ ಪ್ರಮಾಣ ಹಾಗೂ ವೈವಿಧ್ಯ ದೊಡ್ಡದು. ಈ ಸವಾಲಿನ ನಿರ್ವಹಣೆಗೆ ಕಾನೂನಿನ ಕೊರತೆ ಏನೇನೂ ಇಲ್ಲ. ಪ್ಲಾಸ್ಟಿಕ್ ವಿಲೇವಾರಿಗೆ ಹೊಸ ಹೊಸ ತಂತ್ರಜ್ಞಾನಗಳೂ ಉದಯವಾಗುತ್ತಿವೆ. ಹೀಗಿದ್ದೂ ಈ ನಿಟ್ಟಿನಲ್ಲಿ ಸಾಮುದಾಯಿಕ ಇಚ್ಛಾಶಕ್ತಿ ಪ್ರದರ್ಶಿತವಾಗುತ್ತಿಲ್ಲ ಎಂಬುದು ವಿಷಾದನೀಯ. ಕಾನೂನುಗಳ ಕಟ್ಟುನಿಟ್ಟಿನ ಜಾರಿಯಲ್ಲಿ ರಾಜಕೀಯ ಇಚ್ಛಾಶಕ್ತಿಯೂ ವ್ಯಕ್ತವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಶೇ 4ರಿಂದ 5ರಷ್ಟು ತೆರಿಗೆ ಹೆಚ್ಚಳ ಮಾಡಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಈಗಾಗಲೇ ಪ್ಲಾಸ್ಟಿಕ್ ಚೀಲಗಳ ಬಳಕೆಗೆ ನಿಷೇಧವಿದ್ದರೂ ಬೆಂಗಳೂರು ನಗರದಲ್ಲಿ ಆ ನಿಷೇಧದ ಉಲ್ಲಂಘನೆ ರಾಜಾರೋಷವಾಗಿಯೇ ನಡೆಯುತ್ತಿರುವುದು ದಿನನಿತ್ಯದ ವಿದ್ಯಮಾನ. ವನ್ಯಜೀವಿ, ಪರಿಸರ ಹಾಗೂ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ಪರಿಗಣಿಸಿ ಕಡಿಮೆ ದರ್ಜೆಯ ಪಾಲಿಥೀನ್ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ದೂರವಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರೂ ಕರೆ ನೀಡಿದ್ದರು. ಆದರೆ ಇವೆಲ್ಲಾ ಖಾಲಿ ಮಾತುಗಳಾಗಿಯೇ ಉಳಿದುಹೋಗಿವೆ. ಪ್ಲಾಸ್ಟಿಕ್ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಹಾಗೂ ಮರುಬಳಕೆಯ ಕುರಿತಾದ ಜಾಗೃತಿ ಜನರಲ್ಲಿ ಹೆಚ್ಚಾಗಬೇಕಿದೆ. ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವ ಬದ್ಧತೆಯನ್ನು ಆಡಳಿತಯಂತ್ರ ಪಾಲಿಸಬೇಕು. ಹಾಗೆಯೇ ಸುಸ್ಥಿರ ಅಭಿವೃದ್ಧಿಗೆ ಜನಸಮುದಾಯವೂ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT