ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮಿಶ್ರ ಸಂಪುಟ: ಭಿನ್ನಮತ ಸ್ಫೋಟ

ಹಿರಿಯ ನಾಯಕರಿಗೆ ಕೈತಪ್ಪಿದ ಮಂತ್ರಿಗಿರಿ
Last Updated 6 ಜೂನ್ 2018, 19:54 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸಂಪುಟಕ್ಕೆ 25 ಹೊಸ ಸಚಿವರು ಸೇರ್ಪಡೆಯಾದ ಬೆನ್ನಲ್ಲೇ, ಮಂತ್ರಿಗಿರಿ ಕೈತಪ್ಪಿದವರ ಆಕ್ರೋಶ ರಾಜ್ಯದಾದ್ಯಂತ ಸ್ಫೋಟಗೊಂಡಿದೆ.

ರಾಜಭವನದಲ್ಲಿ ಬುಧವಾರ ಮಧ್ಯಾಹ್ನ 2.19ಕ್ಕೆ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್‌ನ 15, ಜೆಡಿಎಸ್‌ನ 8 ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ) ತಲಾ ಒಬ್ಬರು ಶಾಸಕರಿಗೆ ರಾಜ್ಯಪಾಲ ವಜುಭಾಯಿ ವಾಲಾ ಪ್ರತಿಜ್ಞಾ ವಿಧಿ ಬೋಧಿಸಿದರು. ಎಲ್ಲರೂ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮೈತ್ರಿ ಕೂಟದ ಒಟ್ಟು 117 ಶಾಸಕರಿದ್ದಾರೆ. ಒಕ್ಕಲಿಗರು ಸಚಿವ ಸಂಪುಟದಲ್ಲಿ ಮೇಲುಗೈ ಸಾಧಿಸಿದ್ದಾರೆ. ಆದರೆ, ಕುರುಬ, ಬಿಲ್ಲವ ಸಮುದಾಯದ ತಲಾ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಿದ್ದರೆ, ಪರಿಶಿಷ್ಟ ಜಾತಿಯ ಲಂಬಾಣಿ ಹಾಗೂ ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ.

ಸಮ್ಮಿಶ್ರ ಭಿನ್ನಮತ: ಸಂಪುಟದಲ್ಲಿ ಸ್ಥಾನ ಪಡೆಯಲಿರುವ ಶಾಸಕರ ಹೆಸರು ಬಹಿರಂಗೊಂಡ ಬೆನ್ನಲ್ಲೆ, ಸಚಿವ ಸ್ಥಾನ ಕೈತಪ್ಪಿದ ಉಭಯ ಪಕ್ಷಗಳಲ್ಲಿನ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ತಮ್ಮ ಸಿಟ್ಟನ್ನು ಹೊರಹಾಕಿದರು.

ಮದ್ದೂರು ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಹೆಸರು ಇಲ್ಲವೆಂದು ಆಕ್ರೋಶಗೊಂಡ ಅವರ ಬೆಂಬಲಿಗರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರಿಂದಾಗಿ ಮೈಸೂರು–ಬೆಂಗಳೂರು ರಸ್ತೆಯಲ್ಲಿ ಎರಡು ಗಂಟೆಗೂ ಹೆಚ್ಚು ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು.

ಕಾಂಗ್ರೆಸ್‌ನ ಹಿರಿಯ ಶಾಸಕರಾದ ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಸಿ.ಎಚ್. ಶಿವಳ್ಳಿ ಅವರ ಅಭಿಮಾನಿಗಳು ಬೀದಿಗಿಳಿದರು. ವಿಧಾನಸೌಧ ಆವರಣ ಹಾಗೂ ಚಾಲುಕ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಪಕ್ಷದ ನಾಯಕರ ವಿರುದ್ಧ ಧಿಕ್ಕಾರ ಕೂಗಿದರು. ಎಂ.ಬಿ. ಪಾಟೀಲ ಬೆಂಬಲಿಗರು ವಿಷ ಕುಡಿಯುವ ಬೆದರಿಕೆಯನ್ನೂ ಒಡ್ಡಿದರು.

ಜೆಡಿಎಸ್‌ನ ಹಿರಿಯ ನಾಯಕರಾದ ಬಸವರಾಜ ಹೊರಟ್ಟಿ, ಎಚ್.ವಿಶ್ವನಾಥ್‌ಗೂ ಸಚಿವ ಸ್ಥಾನ ಸಿಕ್ಕಿಲ್ಲ.

‘ಏಳು ಬಾರಿ ವಿಧಾನಪರಿಷತ್ತಿನ ಸದಸ್ಯನಾಗಿರುವ ನನಗೆ ಮನ್ನಣೆ ನೀಡುತ್ತಾರೆ ಎಂಬ ವಿಶ್ವಾಸವಿತ್ತು. ಸಚಿವ ಸ್ಥಾನ ಕೊಡುತ್ತಾರೆ ಎಂದುಕೊಂಡಿದ್ದೆ’ ಎಂದು ಹೊರಟ್ಟಿ ಹೇಳಿದರು.

‘ನನ್ನ ಹಿರಿತನ ಗಮನಿಸಿ ಸಚಿವ ಸ್ಥಾನ ಸಿಗಬಹುದು ಎಂದು ಕೊಂಡಿದ್ದೆ. ಆದರೆ ಕೊಟ್ಟಿಲ್ಲ. ಕುಮಾರಸ್ವಾಮಿ ಎಡ–ಬಲ ನಿಂತು ಕೆಲಸ ಮಾಡುವೆ’ ಎಂದು ವಿಶ್ವನಾಥ್ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ನಲ್ಲಿ ಅತೃಪ್ತಿಯ ಕಾವು: ಎಚ್.ಕೆ. ಪಾಟೀಲ ಹಾಗೂ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದನ್ನು ಖಂಡಿಸಿ ಕ್ರಮ
ವಾಗಿ ಗದಗ ಮತ್ತು ದಾವಣಗೆರೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಎಂ.ಬಿ. ಪಾಟೀಲ, ‘ಮಂಗಳವಾರ ಮಧ್ಯರಾತ್ರಿ 1 ಗಂಟೆಯವರೆಗೂ ನನ್ನ ಹೆಸರಿತ್ತು. ಬಳಿಕ ಯಾವ ಕಾರಣಕ್ಕೆ ಕೈಬಿಡಲಾಯಿತು ಗೊತ್ತಿಲ್ಲ. ಮುಂದಿನ ಐದು ವರ್ಷ ಯಾವುದೇ ಹುದ್ದೆಯನ್ನೂ ವಹಿಸಿಕೊಳ್ಳದೇ ಕೇವಲ ಶಾಸಕನಾಗಿ ಮುಂದುವರಿಯುತ್ತೇನೆ’ ಎಂದು ಹೇಳುವ ಮೂಲಕ ಸಿಟ್ಟನ್ನು ಹೊರಹಾಕಿದರು.

ಹಿರೇಕೆರೂರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ, ‘ಬಿಜೆಪಿ ಆಹ್ವಾನ ನೀಡಿದರೂ ಅಲ್ಲಿಗೆ ಹೋಗದೇ ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದಕ್ಕೆ ಸಿಕ್ಕಿದ ಪ್ರತಿಫಲ ಇದು. ಪಕ್ಷದಲ್ಲಿ ಪ್ರಾಮಾಣಿಕತೆಗೆ ಬೆಂಬಲ ಇಲ್ಲ. ದುಡ್ಡಿದ್ದವರಿಗೆ ಮಾತ್ರ ಮಣೆ ಎಂಬುದು ಈಗ ಗೊತ್ತಾಗಿದೆ’ ಎಂದು ಕಿಡಿಕಾರಿದರು.

‘ಮತದಾರರು ಹೇಳಿದರೆ ರಾಜೀನಾಮೆ ಕೊಡುತ್ತೇನೆ. ಪಕ್ಷದ ನಿಲುವಿನಿಂದ ಬೇಸರವಾಗಿದೆ’ ಎಂದು ಸಚಿವ ಸ್ಥಾನ ಆಕಾಂಕ್ಷಿ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ ಹೇಳಿದರು. ‘ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವೆ’ ಎಂದು ಸಿ.ಎಸ್. ಶಿವಳ್ಳಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ತನ್ವೀರ್ ಸೇಠ್ ಬೆಂಬಲಿಗರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರೆ, ಕಲಬುರ್ಗಿ ಜಿಲ್ಲೆ ಜೇವರ್ಗಿ ಕ್ಷೇತ್ರದ ಶಾಸಕ ಅಜಯ ಸಿಂಗ್ ಬೆಂಬಲಿಗರು ರಸ್ತೆ ತಡೆ ನಡೆಸಿದರು.

ಯಲ್ಲಾಪುರ ಕ್ಷೇತ್ರದ ಶಿವರಾಮ ಹೆಬ್ಬಾರ್, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಬೆಂಬಲಿಗರು ಕ್ಷೇತ್ರದಲ್ಲಿ ಪ್ರತಿಭಟನೆಯ ಕಿಚ್ಚು ಹಚ್ಚಿದರು.

ಜೆಡಿಎಸ್‌ನಲ್ಲೂ ಸಿಟ್ಟು: ಶಿರಾ ಕ್ಷೇತ್ರದ ಸತ್ಯನಾರಾಯಣ, ‘ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ನನ್ನ ಸಮುದಾಯದ (ಒಕ್ಕಲಿಗರ) ಅಭಿಪ್ರಾಯ ಕೇಳುತ್ತೇನೆ. ಅವರು ರಾಜೀನಾಮೆ ಕೊಡು ಎಂದರೆ ಕೊಟ್ಟು ನಡೆಯುತ್ತೇನೆ’ ಎಂದು ಸಿಟ್ಟಿನಿಂದ ಹೇಳಿದ್ದಾರೆ.

ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, ‘40 ಸಾವಿರಕ್ಕೂ ಹೆಚ್ಚು ಲಿಂಗಾಯತರು ನನ್ನ ಬೆಂಬಲಕ್ಕೆ ನಿಂತು ಗೆಲ್ಲಿಸಿದ್ದಾರೆ. ಅವರಿಗೆ ಏನು ಹೇಳಲಿ. ಹಾಸನ ಜಿಲ್ಲೆಯ ರಾಜಕಾರಣ ಏನೆಂದು ಗೊತ್ತು. ಸಚಿವ ಸ್ಥಾನ ಕೈತಪ್ಪಿದೆ. ಅಭಿಮಾನಿಗಳ ಜತೆ ಚರ್ಚಿಸುತ್ತೇನೆ’ ಎಂದು ನೋವು ತೋಡಿಕೊಂಡಿದ್ದಾರೆ.

ಅತೃಪ್ತರ ಸಭೆ: ಸಚಿವ ಸ್ಥಾನ ಕೈತಪ್ಪಿರುವ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ, ಎನ್.ಎ. ಹ್ಯಾರಿಸ್‌, ಬಿ.ಸಿ. ಪಾಟೀಲ, ಬಿ. ನಾಗೇಂದ್ರ ಸೇರಿದಂತೆ ಕೆಲವರು ನಗರದ ಶಾಂಗ್ರಿ–ಲಾ ಹೋಟೆಲ್‌ ನಲ್ಲಿ ಸಭೆ ನಡೆಸಿ, ಮುಂದಿನ ನಡೆಯ ಕುರಿತು ಚರ್ಚಿಸಿದರು. ಆದರೆ, ತಮ್ಮ ನಿಲುವು ಪ್ರಕಟಿಸಿಲ್ಲ.

ಎಚ್.ಕೆ. ಪಾಟೀಲ ಹಾಗೂ ಎಂ.ಬಿ. ಪಾಟೀಲ ಅವರು ತಮ್ಮ ಬೆಂಬಲಿಗರ ಜತೆ ಪ್ರತ್ಯೇಕವಾಗಿ ಚರ್ಚಿಸಿದರು.

ಮತ್ತೆ ಸಂಪುಟ ವಿಸ್ತರಣೆ?: ವಿಧಾನಪರಿಷತ್ತಿನಲ್ಲಿ ಸಭಾನಾಯಕ ಸ್ಥಾನ ನಿಭಾಯಿಸಲು ಹಿರಿಯರು ಬೇಕು ಎಂಬ ಕಾರಣಕ್ಕೆ ಬಜೆಟ್ ಅಧಿವೇಶನಕ್ಕೆ ಮೊದಲೇ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ.

ಪರಿಷತ್ ಪ್ರತಿನಿಧಿಸುವ ಜಯಮಾಲಾ ಸಚಿವರಾಗಿದ್ದಾರೆ. ಆದರೆ, ವಿರೋಧ ಪಕ್ಷಗಳ ಟೀಕೆ, ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಲು ಅನುಭವಿ ಸದಸ್ಯರೊಬ್ಬರನ್ನು ಸಚಿವರಾಗಿ ಮಾಡಬೇಕಿದೆ. ಹೀಗಾದಲ್ಲಿ ಮಾತ್ರ ಅವರು ಸಭಾನಾಯಕರಾಗಿ ಕಾರ್ಯನಿರ್ವಹಿಸಲು ಸಾಧ್ಯ. ಇದರ ಜತೆಗೆ, ಭುಗಿಲೆದ್ದ ಅಸಮಾಧಾನ ತಣಿಸಲು ಪಕ್ಷಕ್ಕೆ ಹಂಚಿಕೆಯಾಗಿರುವ ಸ್ಥಾನಗಳ ಪೈಕಿ ಖಾಲಿರುವ 6  ಸ್ಥಾನಗಳಲ್ಲಿ ಮೂರನ್ನು ಭರ್ತಿ ಮಾಡಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಸಂಪುಟದಲ್ಲಿ ಏಕೈಕ ಮಹಿಳೆ ಜಯಮಾಲಾ

ವಿಧಾನ ಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್‌ನ 7 ಹಾಗೂ ವಿರೋಧ ಪಕ್ಷ ಬಿಜೆಪಿಯ 5 ಸದಸ್ಯೆಯರಿದ್ದಾರೆ. ಉಭಯ ಸದನಗಳಲ್ಲಿ ಜೆಡಿಎಸ್‌ನ ಮಹಿಳಾ ಪ್ರತಿನಿಧಿ ಇಲ್ಲ. ಪರಿಷತ್‌ನ ಕಾಂಗ್ರೆಸ್ ಸದಸ್ಯೆ ಜಯಮಾಲಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಶಾಸಕಿಯರಿದ್ದಾರೆ. ಎಲ್ಲರೂ ಮೊದಲ ಬಾರಿ ಸದನ ಪ್ರವೇಶಿಸಿದವರು. ಹೀಗಿದ್ದರೂ ಪರಿಷತ್ತಿನ ನಾಮಕರಣ ಸದಸ್ಯೆಯಾಗಿರುವ ಜಯಮಾಲಾ ಅವರಿಗೆ ಕಾಂಗ್ರೆಸ್ ಸಚಿವ ಸ್ಥಾನ ದಯಪಾಲಿಸಿದೆ. ಮಹಿಳಾ ಪ್ರಾತಿನಿಧ್ಯ ಎಂಬ ಕಾರಣಕ್ಕೆ ಅವರಿಗೆ ನೀಡಿದ್ದಲ್ಲ, ಬಿಲ್ಲವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಆಶಯದಿಂದ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.

ಕಾದುನೋಡುವ ತಂತ್ರಕ್ಕೆ ಬಿಜೆಪಿ ಮೊರೆ

ಸಚಿವ ಸ್ಥಾನ ಸಿಗದಿರುವ ಅತೃಪ್ತರನ್ನು ಸೆಳೆಯುವ ಬದಲು, ಕಾದು ನೋಡುವ ತಂತ್ರಕ್ಕೆ ಬಿಜೆಪಿ ಮೊರೆ ಹೋಗಿದೆ.

‘ಒಮ್ಮೆ ಯತ್ನ ನಡೆಸಿ ವಿಫಲವಾಗಿದ್ದರಿಂದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಹಂತದಲ್ಲಿ ಆಪರೇಷನ್ ಕಮಲಕ್ಕೆ ಕೈ ಹಾಕಿದರೆ ರಾಷ್ಟ್ರಮಟ್ಟದಲ್ಲಿ ಅಪಕೀರ್ತಿಗೆ ಪಾತ್ರರಾಗಬೇಕಾಗುತ್ತದೆ. ಹೀಗಾಗಿ, ನೀವಾಗಿಯೇ ಯಾವುದೇ ಯತ್ನ ನಡೆಸುವುದು ಬೇಡ ಎಂದು ಬಿಜೆಪಿ ವರಿಷ್ಠರು, ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ 10ಕ್ಕಿಂತ ಹೆಚ್ಚು ಅತೃಪ್ತರು ರಾಜೀನಾಮೆ ಕೊಟ್ಟು ಹೊರಬಂದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು. ಸರ್ಕಾರ ಅಲ್ಪಮತಕ್ಕೆ ಸಿಲುಕಿದೆ, ನೈತಿಕ ಹೊಣೆ ಹೊತ್ತು ಸರ್ಕಾರ ವಿಸರ್ಜಿಸಬೇಕು ಎಂಬ ಜನಾಂದೋಲನ ನಡೆಸುವುದು ಪಕ್ಷದ ಮುಂದಿರುವ ಆಯ್ಕೆ ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT