ಶೀಘ್ರ 80 ಎಲೆಕ್ಟ್ರಿಕ್‌ ಬಸ್‌

7

ಶೀಘ್ರ 80 ಎಲೆಕ್ಟ್ರಿಕ್‌ ಬಸ್‌

Published:
Updated:

ಬೆಂಗಳೂರು: ಸದ್ಯದಲ್ಲೇ 80 ಎಲೆಕ್ಟ್ರಿಕ್‌ ಬಸ್‌ಗಳು ನಗರದ ರಸ್ತೆಗಳಲ್ಲಿ ಓಡಾಡಲಿವೆ. ಗುತ್ತಿಗೆ ಆಧಾರದಲ್ಲಿ ಬಸ್‌ಗಳನ್ನು ಓಡಿಸುವ ಯೋಜನೆಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿದ್ದು, ಬಿಎಂಟಿಸಿ ಮತ್ತು ಬಸ್‌ ಒದಗಿಸುವ ಖಾಸಗಿ ಕಂಪನಿ ಜಂಟಿ ಮಾಲೀಕತ್ವದಲ್ಲಿ ಬಸ್‌ಗಳನ್ನು ಖರೀದಿಸಬೇಕು ಎಂದು ಷರತ್ತು ಹಾಕಿದೆ.

‘ಕೇಂದ್ರ ಸರ್ಕಾರ 12 ಮೀ. ಉದ್ದದ ಹವಾನಿಯಂತ್ರಿತ ಬಿಎಂಟಿಸಿ ಬಸ್‌ಗೆ ₹1 ಕೋಟಿ ಹಾಗೂ ಸಾಮಾನ್ಯ ಬಸ್‌ಗೆ ₹ 75 ಲಕ್ಷ ಸಬ್ಸಿಡಿ ನೀಡಲಿದೆ. ಬಸ್‌ಗಳು ರಸ್ತೆಗೆ ಇಳಿಯುವ ಮೊದಲು ಕೆಲವು ಪ್ರಕ್ರಿಯೆಗಳು ಪೂರ್ಣವಾಗಬೇಕಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ಹೇಳಿದರು.

ಬಸ್‌ ಬೆಲೆಯ ಶೇ 60ರಷ್ಟು ಅಥವಾ ₹1 ಕೋಟಿ ಇವೆರಡರಲ್ಲಿ ಯಾವುದು ಕಡಿಮೆಯೊ ಅದನ್ನು ನೀಡುವುದಾಗಿ ಕೇಂದ್ರ  ಹೇಳಿತ್ತು. ಆದರೆ, ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್‌ಗಳ ತಂತ್ರಜ್ಞಾನ ಹೊಸದಾಗಿರುವುದರಿಂದ ಗುತ್ತಿಗೆ ಆಧಾರದಲ್ಲಿ ಬಸ್‌ಗಳನ್ನು ಪಡೆಯಲು ತೀರ್ಮಾನಿಸಿತು.

ಆನಂತರ, ಖಾಸಗಿ ಕಂಪೆನಿಗಳು ಖರೀದಿಸುವ ಬಸ್‌ಗಳು ನಿಗಮದ ಜಂಟಿ ಮಾಲೀಕತ್ವದಲ್ಲಿ ಇರಬೇಕು ಎಂಬ ಷರತ್ತಿನೊಂದಿಗೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಒಪ್ಪಿದೆ.

ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸಲು ಗುತ್ತಿಗೆ ಪಡೆದಿರುವ ಕಂಪನಿಯು ಬಿಎಂಟಿಸಿ ಬಸ್‌ಗಳ ನಿರ್ವಹಣಾ ವೆಚ್ಚಕ್ಕಿಂತಲೂ ಕಡಿಮೆ ದರಕ್ಕೆ ಓಡಿಸುವ ಭರವಸೆ ನೀಡಿದೆ. ಒಪ್ಪಂದದ ಭಾಗವಾಗಿ ಕೇಂದ್ರದ ಸಬ್ಸಿಡಿಗೆ ಬ್ಯಾಂಕ್‌ ಗ್ಯಾರಂಟಿ ನೀಡುವಂತೆ ನಿಗಮವು ಕಂಪೆನಿಗೆ ಕೇಳಿತ್ತು. ಈಗ ಜಂಟಿ ಮಾಲೀಕತ್ವದ ಷರತ್ತು ಹಾಕಿರುವುದರಿಂದ ಕಂಪೆನಿ ಹಾಗೂ ನಿಗಮದ ನಡುವೆ ಮಾತುಕತೆ ಮುಂದುವರಿಯಬೇಕಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry