ದಟ್ಟಣೆಯಲ್ಲಿ ಸಿಲುಕಿ ಪರದಾಡಿದ ಸ್ಪೀಕರ್‌ !

7

ದಟ್ಟಣೆಯಲ್ಲಿ ಸಿಲುಕಿ ಪರದಾಡಿದ ಸ್ಪೀಕರ್‌ !

Published:
Updated:
ದಟ್ಟಣೆಯಲ್ಲಿ ಸಿಲುಕಿ ಪರದಾಡಿದ ಸ್ಪೀಕರ್‌ !

ಬೆಂಗಳೂರು: ರಾಜಭವನ ಸುತ್ತಮುತ್ತಲ ರಸ್ತೆಗಳಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಸಚಿವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಾಗದೆ ವಾಪಸ್ ಹೋದ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್, ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ರಮೇಶ್‌ ಕುಮಾರ್, ‘ನಿಮ್ಮ (ಮುಖ್ಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳು) ಈ ಅಕ್ಷಮ್ಯ ಅಪರಾಧಕ್ಕೆ ಪ್ರತಿಭಟನೆ ವ್ಯಕ್ತಪಡಿಸುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಧಿಕೃತ ಆಹ್ವಾನದ ಮೇರೆಗೆ ಸಮಾರಂಭದಲ್ಲಿ ಭಾಗವಹಿಸಲು ಬರುತ್ತಿದ್ದೆ. ರಾಜಭವನದ ಮುಂದೆಯೇ ಅರ್ಧ ಗಂಟೆ ಕಾದು, ಅಸಹಾಯಕನಾಗಿ ಹಿಂದಿರುಗಿದ್ದೇನೆ. ಈ ಪರಿಸ್ಥಿತಿಗೆ ಯಾರು ಕಾರಣ ಎಂಬುದು ನನಗೆ ಗೊತ್ತಿಲ್ಲ’ ಎಂದಿದ್ದಾರೆ.

‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸಭಾಪತಿಗಳ ಹೊರತಾಗಿ ಮತ್ತೊಂದು ಸಾಂವಿಧಾನಿಕ ಸ್ಥಾನ ವಿಧಾನಸಭಾಧ್ಯಕ್ಷರಿಗೆ ಇದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅನಿವಾರ್ಯವಾಗಿ ಹಾಜರಿರಲೇಬೇಕು. ಸಭಾಧ್ಯಕ್ಷ ಹಾಗೂ ಸಭಾಪತಿಗೆ ಗೌರವಯುತವಾದ ವ್ಯವಸ್ಥೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ನಿಮ್ಮ ಅಧಿಕಾರಿಗಳ ದುರಹಂಕಾರ, ಅಜ್ಞಾನ ಹಾಗೂ ರಾಜಭವನದ ಒಳಗಿರುವ ಅಧಿಕಾರಿಗಳ ದುರಹಂಕಾರ ಇದಕ್ಕೆ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜಭವನದ ಒಳಗೂ ಹಾಗೂ ಹೊರಗೂ ತುಂಬಿದ್ದ ವಾಹನಗಳು ಯಾರವು? ಯಾರು ಅವರಿಗೆ ಅಲ್ಲಿಗೆ ಬರಲು ಅನುಮತಿ ನೀಡಿದವರು? ಸಾರ್ವಜನಿಕರ ಜೀವನದಲ್ಲಿ ಅವರ ಸ್ಥಾನಮಾನವೇನು ಎಂಬುದನ್ನು ತಿಳಿದುಕೊಳ್ಳಲು ಉತ್ಸುಹಕನಾಗಿದ್ದೇನೆ’  ಎಂದು ಪತ್ರದಲ್ಲಿ ರಮೇಶ್‌ಕುಮಾರ್‌ ಹೇಳಿದ್ದಾರೆ.

ಆಗಿದ್ದೇನು: ಸಮಾರಂಭ ನಿಮಿತ್ತ ಮಧ್ಯಾಹ್ನ 1 ಗಂಟೆಯಿಂದಲೇ ರಾಜಭವನ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಮುಖಂಡರೆಂದು ಹೇಳಿಕೊಂಡ ಹಲವರು, ರಸ್ತೆಯಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿ ರಾಜಭವನದೊಳಗೆ ಹೋಗಿದ್ದರು. ಇದರಿಂದಾಗಿ ಪ್ರವೇಶ ಪತ್ರವಿದ್ದವರ ವಾಹನಗಳಿಗೂ ರಾಜಭವನದ ಒಳಗೆ ಹೋಗಲು ಸಾಧ್ಯವಾಗಲಿಲ್ಲ.

ರಾಜಭವನ ಮಾರ್ಗದ ಮೂಲಕ ಹೋಗಬೇಕಿದ್ದ ವಾಹನಗಳನ್ನು ಪರ್ಯಾಯ ಮಾರ್ಗದಲ್ಲಿ ಕಳುಹಿಸಲಾಯಿತು. ಕೆಲ ಚಾಲಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದರು. ಅದರಿಂದಾಗಿ ಕಬ್ಬನ್‌ ರಸ್ತೆ, ಡಾ. ಅಂಬೇಡ್ಕರ್ ವೀದಿ, ಕ್ವೀನ್ಸ್ ರಸ್ತೆ, ಇನ್‌ಫಂಟ್ರಿ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ, ಚಾಲುಕ್ಯ ವೃತ್ತ, ಬಳ್ಳಾರಿ ರಸ್ತೆ, ಅರಮನೆ ರಸ್ತೆಗಳಲ್ಲಿ ದಟ್ಟಣೆ ಉಂಟಾಯಿತು.

ನಿಗದಿತ ಸಮಯಕ್ಕೆ ರಾಜಭವನದತ್ತ ಹೊರಟಿದ್ದ ರಮೇಶ್‌ಕುಮಾರ್‌ ಅವರ ಕಾರು, ದಟ್ಟಣೆಯಲ್ಲಿ ಸಿಲುಕಿಕೊಂಡಿತು. ಕಾರಿನ ಬಾಗಿಲು ತೆರೆದು, ಅದರಿಂದ ಇಳಿದು ನಡೆದುಕೊಂಡು ಹೋಗಲೂ ಜಾಗವಿರಲಿಲ್ಲ. ರಾಜಭವನಕ್ಕೆ ನೇರವಾಗಿ ಹೋಗಲು ಪರ್ಯಾಯ ದಾರಿಯೂ ಇರಲಿಲ್ಲ. ಸಂಚಾರ ಪೊಲೀಸರು, ಎಷ್ಟೇ ಪ್ರಯತ್ನಿಸಿ

ದರೂ ದಟ್ಟಣೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ದಟ್ಟಣೆಯಲ್ಲೇ ಅರ್ಧ ಗಂಟೆ ಸಿಲುಕಿ ಸುಸ್ತಾದ ರಮೇಶ್‌ ಕುಮಾರ್‌ ಸಮಾರಂಭಕ್ಕೆ ಹೋಗಲಾಗದೆ ವಾಪಸ್‌ ಹೊರಟು ಹೋದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry