ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಮುದ್ದೆ ತಯಾರಿಸುವ ಯಂತ್ರಗಳಿಗೆ ಬೇಡಿಕೆ

Last Updated 1 ಅಕ್ಟೋಬರ್ 2018, 19:26 IST
ಅಕ್ಷರ ಗಾತ್ರ

ಮೈಸೂರು: ರಾಗಿ ಮುದ್ದೆ ತಯಾರಿಸುವ ಯಂತ್ರಗಳಿಗೆ ರಾಜ್ಯ ಸರ್ಕಾರದಿಂದ ಬೇಡಿಕೆ ಬಂದಿದೆ ಎಂದು ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ನಿರ್ದೇಶಕ ಡಾ.ಜಿತೇಂದ್ರ ಜೆ.ಜಾಧವ್ ಇಲ್ಲಿ ಸೋಮವಾರ ತಿಳಿಸಿದರು.

‘ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ರಾಗಿ ಮುದ್ದೆ ತಯಾರಿಸಲು ಈ ಹಿಂದೆ ಬಿಬಿಎಂಪಿಗೆ ಕೆಲ ಯಂತ್ರ ನೀಡಿದ್ದೆವು. ಗಂಟೆಗೆ 250 ಮುದ್ದೆ ತಯಾರಿಸುವ ಸಾಮರ್ಥ್ಯ ಹೊಂದಿದ್ದವು. ಆದರೆ, ಗಂಟೆಗೆ 1,500ರಿಂದ 2,000 ಮುದ್ದೆ ತಯಾರಿಸುವ ಯಂತ್ರ ಬೇಕೆಂದು ಕೋರಿದ್ದಾರೆ. ಸುಮಾರು 35ರಿಂದ 40 ಯಂತ್ರಗಳಿಗೆ ಬೇಡಿಕೆ ಇಟ್ಟಿದ್ದಾರೆ. ಇಂಥ ಯಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಚಪಾತಿ, ಇಡ್ಲಿ ತಯಾರಿಸುವ ಯಂತ್ರಗಳನ್ನು ಕೂಡ ಅಭಿವೃದ್ಧಿಪಡಿಸಿದ್ದೇವೆ ಎಂದರು.

ಬಾಹ್ಯಾಕಾಶಕ್ಕೆ ಆಹಾರ: ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿರುವ ಮಾನವನಿಗೆ ಅಗತ್ಯ ಆಹಾರ ತಯಾರಿಸಲು ಸಿದ್ಧತೆ ನಡೆದಿದೆ ಎಂದು ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ (ಡಿಎಫ್‌ಆರ್‌ಎಲ್‌) ನೂತನ ನಿರ್ದೇಶಕ ಡಾ.ಅನಿಲ್‌ ಡಿ.ಸೆಮ್ವಾಲ್‌ ಹೇಳಿದರು.‌

‘ಈ ಸಂಬಂಧ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ’ ಎಂದರು.

ಮಕ್ಕಳ ಆರೋಗ್ಯ ಸುಧಾರಣೆ: ‘ರಕ್ತ ಹೀನತೆಯಿಂದ ಬಳಲುತ್ತಿದ್ದ ನಂಜನಗೂಡು ತಾಲ್ಲೂಕಿನ ಅಂಗನವಾಡಿಗಳ ಸುಮಾರು 250 ಮಕ್ಕಳಿಗೆ ಆರು ತಿಂಗಳು ಸಿಎಫ್‌ಟಿಆರ್‌ಐನಲ್ಲಿ ತಯಾರಿಸಿದ ಏಳು ಬಗೆಯ ಪೌಷ್ಟಿಕಾಂಶ ಆಹಾರ ನೀಡಿದ್ದೆವು. ಈಗ ಆ ಮಕ್ಕಳ ಆರೋಗ್ಯ ಸುಧಾರಿಸಿದೆ. ಇದನ್ನು ಬೇರೆ ಕಡೆಗೂ ವಿಸ್ತರಿಸುವ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವರದಿ ನೀಡಲಾಗಿದೆ’ ಎಂದು ಸಂಸ್ಥೆ ವಿಜ್ಞಾನಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್‌ ಹೇಳಿದರು.

ಸಮ್ಮೇಳನ: ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘ, ಸಿಎಫ್‌ಟಿಆರ್‌ಐ ಹಾಗೂ ಡಿಎಫ್‌ಆರ್‌ಎಲ್‌ ಆಶ್ರಯದಲ್ಲಿ ಡಿ.12ರಿಂದ 15ರ ವರೆಗೆ ಮೈಸೂರಿನಲ್ಲಿ 8ನೇ ಅಂತರರಾಷ್ಟ್ರೀಯ ಆಹಾರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಡಾ.ಜಿತೇಂದ್ರ ಜೆ.ಜಾಧವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT