ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಕಳ್ಳ ಸಾಗಾಣಿಕೆ; ಪ್ರಮುಖ ಆರೋಪಿ ಬಂಧನ

Last Updated 1 ಅಕ್ಟೋಬರ್ 2018, 19:25 IST
ಅಕ್ಷರ ಗಾತ್ರ

ಮೈಸೂರು: ಮಾನವ ಕಳ್ಳ ಸಾಗಾಣಿಕೆ ಹಾಗೂ ವೇಶ್ಯಾವಾಟಿಕೆ ಪ್ರಕರಣಗಳ ಪ್ರಮುಖ ಆರೋಪಿ ಮಹೇಶ್ (38) ಎಂಬಾತನನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈತ ವೇಶ್ಯಾವಾಟಿಕೆ ಸಂಬಂಧ ದಾಖಲಾಗಿದ್ದ ಸಾಕಷ್ಟು ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಆಗಿದ್ದ. ಒಂದು ವರ್ಷದಿಂದ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಗ್ರಾಮಾಂತರ ಬಸ್‌ನಿಲ್ದಾಣದ ಬಳಿಯ ಮಾಲ್‌ವೊಂದರಲ್ಲಿ ಈತ ಭಾನುವಾರ ಖರೀದಿಯಲ್ಲಿ ತೊಡಗಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಯಾರೀತ?

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಮಹೇಶ್ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಗಳ ಅಡ್ಡೆಗಳಿಗೆ ಯುವತಿಯರನ್ನು ಪೂರೈಸುತ್ತಿದ್ದ ಆರೋಪ ಈತನ ಮೇಲಿದೆ. ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯಮಟ್ಟದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಮಾನವ ಕಳ್ಳಸಾಗಾಣಿಕೆಯಲ್ಲಿ ಈತನ ಪಾತ್ರ ದೊಡ್ಡದು ಎಂದು ಪೊಲೀಸರು ಹೇಳಿದ್ದಾರೆ. ಈತ ಬೆಂಗಳೂರಿನಿಂದ ಯುವತಿಯರನ್ನು ಇಲ್ಲಿಗೆ ಕರೆಸಿ ವಿವಿಧ ಅಡ್ಡಗಳಲ್ಲಿನ ದಲ್ಲಾಳಿಗಳಿಗೆ ವಾರಕ್ಕೆ ₹ 40 ಸಾವಿರದಿಂದ ₹ 60 ಸಾವಿರ ಪಡೆದು ಸರಬರಾಜು ಮಾಡುತ್ತಿದ್ದ. ಯುವತಿಯರ ಎತ್ತರ, ದೇಹಾಕೃತಿಗೆ ಅನುಗುಣವಾಗಿ ದರ ಇರುತ್ತಿತ್ತು. ಒಂದು ವಾರದ ನಂತರ ಈ ಯುವತಿಯರನ್ನು ಬೇರೊಂದು ಅಡ್ಡಕ್ಕೆ ಹಣ ಪಡೆದು ಬಿಡುತ್ತಿದ್ದ. ಜತೆಗೆ, ಅಡ್ಡೆಗಳಲ್ಲಿರುವ ದಲ್ಲಾಳಿಗೆ ಹಣದ ಕೊರತೆ ಎದುರಾದರೆ ಅವರಿಗೆ ಸಾಲ ನೀಡುವ ವ್ಯಕ್ತಿಗಳನ್ನು ಪರಿಚಯಿಸಿ ಅವರಿಗೆ ಸಾಲ ಸಿಗುವಂತೆ ನೋಡಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಇಲ್ಲಿಯವರೆಗೆ ಈತ ಯಾವುದೇ ಯುವತಿಯನ್ನು ಬಲವಂತವಾಗಿ ಜಾಲಕ್ಕೆ ತಳ್ಳುತ್ತಿರಲಿಲ್ಲ. ಅಥವಾ ಮೋಸ ಮಾಡಿಯೂ ತರುತ್ತಿರಲಿಲ್ಲ. ವೇಶ್ಯಾವಾಟಿಕೆಗೆ ಒಪ್ಪದ ಯುವತಿಯರನ್ನು ಈತ ವಾಪಸ್ ಕಳುಹಿಸುತ್ತಿದ್ದ. ಸಾಕಷ್ಟು ಬಾರಿ ಕೌನ್ಸಿಲಿಂಗ್ ಮಾಡಿ ಈತ ಯುವತಿಯರನ್ನು ಒಪ್ಪಿಸಿ ಸೆಳೆಯುತ್ತಿದ್ದ. ಈತನಿಗೆ ಬೆಂಗಳೂರಿನಿಂದ ವ್ಯವಸ್ಥಿತ ಜಾಲದ ಮೂಲಕ ಯುವತಿಯರು ಲಭ್ಯವಾಗುತ್ತಿದ್ದರು. ಇವರನ್ನು ಇಲ್ಲಿನ ಅಡ್ಡೆಗಳಿಗೆ ಸರಬರಾಜು ಮಾಡುವ ಮೂಲಕ ವೇಶ್ಯಾವಾಟಿಕೆಗೆ ಕುಮ್ಮಕ್ಕು ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಉದಯಗಿರಿ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT