ಆಸ್ಪತ್ರೆಗೆ ಭೇಟಿ; ಎಚ್ಚರಿಕೆ ವಹಿಸಲು ಸೂಚನೆ

7
ಟಂಟಂ,ಬೊಲೆರೊ ನಡುವಿನ ಅಪಘಾತ; ಗಾಯಾಳು ಮಕ್ಕಳ ಆರೋಗ್ಯ ವಿಚಾರಿಸಿದ ಸಚಿವ ಜಿಗಜಿಣಗಿ

ಆಸ್ಪತ್ರೆಗೆ ಭೇಟಿ; ಎಚ್ಚರಿಕೆ ವಹಿಸಲು ಸೂಚನೆ

Published:
Updated:
ಆಸ್ಪತ್ರೆಗೆ ಭೇಟಿ; ಎಚ್ಚರಿಕೆ ವಹಿಸಲು ಸೂಚನೆ

ಬಾಗಲಕೋಟೆ: ಟಂಟಂ,ಬೊಲೆರೊ ನಡುವಿನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಲಯನ್ಸ್ ಶಾಲೆ ಮಕ್ಕಳ ಆರೋಗ್ಯ ವಿಚಾರಿಸಲು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಬುಧವಾರ ಇಲ್ಲಿನ ಕೆರೂಡಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಈ ವೇಳೆ ಮಕ್ಕಳ ಪೋಷಕರಿಗೂ ಸಾಂತ್ವನ ಹೇಳಿದ ಸಚಿವರು, ಸೂಕ್ತ ಚಿಕಿತ್ಸೆ ಕೊಡಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಕ್ಕಳಿಗೆ ಹೀಗೆ ಆಗಿದ್ದು ದುರಾದೃಷ್ಟಕರ. ಅವರಿಗೆ ಪರಿಹಾರ ಕಲ್ಪಿಸುವ ಬಗ್ಗೆ ಈಗ ಏನೂ ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ಸಂಸದ ಪಿ.ಸಿ.ಗದ್ದಿಗೌಡರ ಹಾಜರಿದ್ದರು.

ಪೇಜಾವರ ಶ್ರೀ ಟೀಕಿಸಿಲ್ಲ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇಲ್ಲವೇ ಕೇಂದ್ರ ಸರ್ಕಾರದ ಆಡಳಿತ ವೈಖರಿಯ ಬಗ್ಗೆಯಾಗಲೀ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀ ಯಾವುದೇ ಟೀಕೆ ಮಾಡಿಲ್ಲ. ಬದಲಿಗೆ ಗಂಗಾ ಶುದ್ಧೀಕರಣ ವಿಚಾರದಲ್ಲಿ ಆಗಬೇಕಾದ ಕೆಲಸ ಆಗಿಲ್ಲ ಎಂದು ಹೇಳಿದ್ದಾರೆ. ಆ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.

ನಂತರ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡ ಕೂಡ ಆಸ್ಪತ್ರೆಗೆ ಭೇಟಿ ಮಕ್ಕಳ ಆರೋಗ್ಯ ವಿಚಾರಿಸಿದರು.

ಬ್ರಾಹ್ಮಣ ಸಮಾಜದ ದೇಣಿಗೆ ಬಾಗಲಕೋಟೆ: ಟಂಟಂ ಹಾಗೂ ಬೊಲೆರೊ ನಡುವಿನ ಅಪಘಾತದಲ್ಲಿ ಗಾಯಗೊಂಡ ಶಾಲಾ ಮಕ್ಕಳಿಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ನೆರವಿನ ಹಸ್ತ ಚಾಚಿದ್ದಾರೆ.

ಇಲ್ಲಿನ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ನೆರವಿಗೆ ನಿಂತಿರುವ ಬಾಗಲಕೋಟೆಯ ಬ್ರಾಹ್ಮಣ ಸಮಾಜದ ಯುವಕರು ವಾಟ್ಸಪ್ ಗ್ರೂಪ್ ಮೂಲಕ ಸಮಾಜದವರಿಂದ ದೇಣಿಗೆ ಸಂಗ್ರಹಿಸಿದ್ದು, ಒಂದೇ ದಿನ ₹80 ಸಾವಿರ ಸಂಗ್ರಹವಾಗಿದೆ.

‘ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಪೋಷಕರಲ್ಲಿ ಕೆಲವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಅವರ ನೆರವಿಗೆ ನಿಲ್ಲಲು ಮುಂದಾಗಿದ್ದೇವೆ’ ಎಂದು ಮುಖಂಡ ಕಿರಣ್‌ ಕುಲಕರ್ಣಿ ಹೇಳುತ್ತಾರೆ. ‘ನಮ್ಮ ಮನವಿಗೆ ಸಮಾಜದಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ಸಂಗ್ರಹವಾದ ಹಣವನ್ನು ಚಿಕಿತ್ಸೆಯ ವೆಚ್ಚದ ಆಧಾರದ ಮೇಲೆ ಮಕ್ಕಳ ಪೋಷಕರಿಗೆ ಹಂಚಿಕೆ ಮಾಡಲಾಗುವುದು’ ಎಂದು ಹೇಳುತ್ತಾರೆ.

ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ ಸಮಯದಿಂದಲೂ ಕಿರಣ್‌ ಹಾಗೂ ಗೆಳೆಯರು ನೆರವಿಗೆ ನಿಂತಿದ್ದಾರೆ. ರಕ್ತದಾನ, ಪೋಷಕರಿಗೆ ಧೈರ್ಯ ತುಂಬುವುದು ಸೇರಿದಂತೆ ಔಷಧಿಯ ಖರ್ಚು–ವೆಚ್ಚಕ್ಕೂ ತಮ್ಮ ಕೈಲಾದಷ್ಟು ನೆರವು ನೀಡಿದ್ದಾರೆ.

ಎಸ್.ಆರ್.ಪಾಟೀಲ ಸಹಾಯ ಹಸ್ತ: ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ್ದ ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ವೈಯಕ್ತಿಕವಾಗಿ ₹ 2 ಲಕ್ಷ ನೆರವು ನೀಡಿದ್ದಾರೆ. ಈ ಹಣವನ್ನು ಮಕ್ಕಳ ಚಿಕಿತ್ಸೆಯ ಗಂಭೀರತೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ₹ 55 ಸಾವಿರದಿಂದ 3,200ರವರೆಗೆ ನೆರವು ನೀಡಲಾಗಿದೆ.

ವಾರದೊಳಗೆ ವರದಿ

ಜಮಖಂಡಿ:
ಶಾಲಾ ಮಕ್ಕಳ ಸುರಕ್ಷತೆಗಾಗಿ ಶಿಕ್ಷಣ ಸಂಸ್ಥೆಗಳು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ರಾಜ್ಯ ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲನೆ ಮಾಡಿದ ಬಗ್ಗೆ ತಾಲ್ಲೂಕಿನ ಎಲ್ಲ ಶಿಕ್ಷಣ ಸಂಸ್ಥೆಗಳು ಒಂದು ವಾರದೊಳಗಾಗಿ ಪೊಲೀಸ್‌ ಇಲಾಖೆಗೆ ವರದಿ ನೀಡಬೇಕು ಎಂದು ಡಿವೈಎಸ್ಪಿ ರಾಮನಗೌಡ ಹಟ್ಟಿ ಹೇಳಿದರು.

ಪೊಲೀಸ್‌ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಹಾಗೂ ತಾಲ್ಲೂಕು ಪಂಚಾಯ್ತಿ ಆಶ್ರಯದಲ್ಲಿ ಶಾಲಾ ಮಕ್ಕಳ ಸುರಕ್ಷತೆ ಕುರಿತು ಚರ್ಚಿಸಲು ಇಲ್ಲಿನ ಬಸವ ಭವನ ಸಮುದಾಯ ಭವನದಲ್ಲಿ ಬುಧವಾರ ನಡೆದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ, ಮುಖ್ಯ ಶಿಕ್ಷಕರ ಹಾಗೂ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.

ಸೇವಾ ಮನೋಭಾವದಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸಬೇಕೆ ವಿನಹ ವ್ಯಾಪಾರ ಮನೋಭಾವದಿಂದ ಅಲ್ಲ. ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಒಬ್ಬರ ಕಡೆಗೆ ಇನ್ನೊಬ್ಬರು ಬೆರಳು ತೋರಿಸುವ ಕೆಲಸ ನಡೆಯಬಾರದು. ಸುರಕ್ಷತೆಗೆ ಬೇಕಾಗುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಕನೂರಿನ ಕಮರಿಮಠದ ಸಿದ್ಧಲಿಂಗ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳು ದೇಶದ ಸಂಪತ್ತು. ಆದ್ದರಿಂದ ಯಾವ ಶಿಕ್ಷಣ ಸಂಸ್ಥೆಗಳೂ ಕೂಡ ಮಕ್ಕಳ ಸುರಕ್ಷತೆಯ ಭಾವ ಬಿಟ್ಟು ಇನ್ನೊಂದರ ಬಗ್ಗೆ ಯೋಚನೆ ಮಾಡುವುದಿಲ್ಲ. ಮಕ್ಕಳ ಸಾಗಾಟಕ್ಕೆ ನಾಲ್ಕು ಚಕ್ರಗಳ ವಾಹನ ಹೆಚ್ಚು ಸುರಕ್ಷಿತ. ಆಟೊರಿಕ್ಷಾಗಳಿಗೆ ಬಾಗಿಲು ಇಲ್ಲದ್ದರಿಂದ ಸುರಕ್ಷತೆ ಕಡಿಮೆ ಎಂದರು.

ಟಿಪಿಇಒ ಎನ್‌.ವೈ. ಬಸರಿಗಿಡದ, ಸಿಪಿಐ ಅಶೋಕ ಸದಲಗಿ, ಬಿಇಒ ಪ್ರಮೀಳಾ ದೇಶಪಾಂಡೆ, ನಗರಸಭೆ ಸದಸ್ಯ ಶ್ರೀನಿವಾಸ ಅಪರಂಜಿ, ಪಿಎಸ್‌ಐ ಪರಶುರಾಮ ಮನಗೂಳಿ, ಎಆರ್‌ಟಿಒ ಫಿರಂಗಿ, ವಾಹನ ಪರಿವೀಕ್ಷಕ ಸದಾಶಿವ ಮರಲಿಂಗನವರ ವೇದಿಕೆಯಲ್ಲಿದ್ದರು. ಶಿಕ್ಷಕ ಗಿ.ಆರ್. ವಾಳ್ವೇಕರ ನಿರೂಪಿಸಿ, ವಂದಿಸಿದರು.

ಶಾಲೆಗೆ ಶೋಕಾಸ್ ನೊಟೀಸ್..

ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಕರೆದಿದ್ದ ಖಾಸಗಿ ಶಾಲೆ ಆಡಳಿತ ಮಂಡಳಿ ಪ್ರತಿನಿಧಿಗಳ ಸಭೆ ನಡೆಸಿದ್ದರು. ಈ ವೇಳೆ ಅಪಘಾತದ ವಿಚಾರದಲ್ಲಿ ಬೇಜವಾಬ್ದಾರಿಯಿಂದ ಮಾತನಾಡಿದ ಲಯನ್ಸ್ ಶಾಲೆಯ ಪ್ರತಿನಿಧಿಗೆ ಶೋಕಾಸ್ ನೊಟೀಸ್ ನೀಡಲಾಗಿದೆ.

ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸೂಚನೆಯ ಹಿನ್ನೆಲೆಯಲ್ಲಿ ಬುಧವಾರ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಡಿಡಿಪಿಐ ಎಂ.ಆರ್.ಕಾಮಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.

ಗಂಭೀರ ಗಾಯಗೊಂಡಿದ್ದ ನಾಲ್ವರು ಮಕ್ಕಳು ಪೈಕಿ ಅಮಿತ್ ಅಂಗಡಿ ಹಾಗೂ ಶ್ರವಣ್‌ಕುಮಾರ ಚೌಹಾಣ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ತಲೆಗೆ ಆಳವಾದ ಪೆಟ್ಟು ಬಿದ್ದಿದ್ದು, ಚೇತರಿಕೆ ಕಂಡುಬಂದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry