ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಜಿಲ್ಲೆಗೆ ಎರಡು ಸಚಿವ ಸ್ಥಾನ

ಹುಮನಾಬಾದ್‌ ಗೌಡರಿಗೆ ಕೊನೆಗೂ ದೊರಕಿದ ಸಚಿವಗಿರಿ, ಸಂಭ್ರಮಾಚರಣೆ
Last Updated 7 ಜೂನ್ 2018, 6:21 IST
ಅಕ್ಷರ ಗಾತ್ರ

ಬೀದರ್: ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಬೀದರ್‌ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ದೊರಕಿದೆ. ನಿರೀಕ್ಷೆಯಂತೆ ಹುಮನಾಬಾದ್‌ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ರಾಜಶೇಖರ ಪಾಟೀಲ ಹಾಗೂ ಬೀದರ್‌ ದಕ್ಷಿಣ ಕ್ಷೇತ್ರದಿಂದ ಎರಡು ಬಾರಿ ಚುನಾಯಿತರಾದ ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ.

ಹದಿಮೂರು ವರ್ಷಗಳ ಬಳಿಕ ಬೀದರ್‌ ಜಿಲ್ಲೆಗೆ ಒಟ್ಟಿಗೆ ಎರಡು ಸಚಿವ ಸ್ಥಾನ ಕೊಡಲಾಗಿದೆ. 2005ರಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಹುಮನಾಬಾದ್‌ನ ಮೆರಾಜುದ್ದಿನ್‌ ಪಟೇಲ್‌ ಅವರಿಗೆ ಪಶು ಸಂಗೋಪನೆ ಮತ್ತು ವಕ್ಫ್‌ ಹಾಗೂ ಔರಾದ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಅವರಿಗೆ ಅರಣ್ಯ ಹಾಗೂ ಪರಿಸರ ಖಾತೆ ಕೊಟ್ಟಿದ್ದರು.

ನಂತರ ಅಸ್ತಿತ್ವಕ್ಕೆ ಬಂದ ಜೆಡಿಎಸ್‌–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಮಾತ್ರ ಸಚಿವರಾಗಿದ್ದರು. ಪ್ರಕಾಶ ಖಂಡ್ರೆ ಭಾಲ್ಕಿಯಿಂದ ಬಿಜೆಪಿಯಿಂದ ಚುನಾಯಿತರಾಗಿದ್ದರೂ ಅವರಿಗೆ ಅವಕಾಶ ನೀಡಿರಲಿಲ್ಲ.

2008 ರಿಂದ 2016ರ ವರೆಗೆ ಬೀದರ್‌ ಜಿಲ್ಲೆಯ ಒಬ್ಬರಿಗೂ ಸಚಿವ ಸ್ಥಾನ ನೀಡಿರಲಿಲ್ಲ. 2016 ರಲ್ಲಿ ಈಶ್ವರ ಖಂಡ್ರೆ ಅವರನ್ನು ಪೌರಾಡಳಿತ ಸಚಿವರನ್ನಾಗಿ ಮಾಡಲಾಗಿತ್ತು. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯ ಇಬ್ಬರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿದ್ದು, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ.

ಭಾಲ್ಕಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಈಶ್ವರ ಖಂಡ್ರೆ ಅವರೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಬೀದರ್‌ ಕ್ಷೇತ್ರದಿಂದ ಮೂರನೇ ಬಾರಿ ಆಯ್ಕೆಯಾದ ರಹೀಂ ಖಾನ್ ಸಹ ಸಚಿವ ಸ್ಥಾನಕ್ಕೆ ಇಚ್ಛೆ ವ್ಯಕ್ತಪಡಿಸಿದ್ದರು. ಹಿರಿತನ ಪರಿಗಣಿಸಿ ಕಾಂಗ್ರೆಸ್‌ ಹೈಕಮಾಂಡ್‌ ರಾಜಶೇಖರ ಪಾಟೀಲ ಅವರಿಗೆ ಅವಕಾಶ ಕಲ್ಪಿಸಿದೆ.

ಕಳೆದ ಬಾರಿ ಬೀದರ್‌ ಶಾಸಕ ರಹೀಂ ಖಾನ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಅವರು ಬಹಿರಂಗವಾಗಿಯೇ ಈಶ್ವರ ಖಂಡ್ರೆ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರೂ ಒಲವು ತೋರಿದ್ದರಿಂದ ಖಂಡ್ರೆ ಸಚಿವರಾಗಲು ಸಾಧ್ಯವಾಗಿತ್ತು.
ನನ್ನ ರಾಜಕೀಯ ಭವಿಷ್ಯಕ್ಕೆ ಧರ್ಮಸಿಂಗ್‌ ಕಲ್ಲು ಹಾಕುತ್ತಿದ್ದಾರೆ ಎಂದು ರಾಜಶೇಖರ ಪಾಟೀಲ ಮಾಧ್ಯಮಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಈ ಬಾರಿ ಹೈದರಾಬಾದ್ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಮತ ಪಡೆದ ಹೆಗ್ಗಳಿಕೆಗೆ ಪಾತ್ರರಾದ ರಾಜಶೇಖರ ಪಾಟೀಲ ಆತ್ಮವಿಶ್ವಾಸದಿಂದಲೇ ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಿದ್ದರು.

ಐದು ಬಾರಿ ಶಾಸಕ, ಮೂರು ಬಾರಿ ವಿಧಾನ ಪರಿಷತ್ ಸದಸ್ಯ ಹಾಗೂ ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಬಸವರಾಜ ಪಾಟೀಲ ಅವರ ಪುತ್ರ ರಾಜಶೇಖರ ಪಾಟೀಲ ರಾಜಕಾರಣದಲ್ಲಿ ಪಳಗಿದ್ದಾರೆ. ಹುಮನಾಬಾದ್‌ನಲ್ಲಿ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಸಹ ಆಗಿದ್ದಾರೆ.

ಧರ್ಮಸಿಂಗ್‌ ಪುತ್ರ ಜೇವರ್ಗಿ ಶಾಸಕ ಅಜಯಸಿಂಗ್ ಹಾಗೂ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಅವರೂ ರಾಜಶೇಖರ ಪಾಟೀಲರಿಗೆ ಬೆಂಬಲ ನೀಡಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಬಹಿರಂಗವಾಗಿಯೇ ಆಡಿಕೊಳ್ಳುತ್ತಿದ್ದಾರೆ.

ವಿಧಾನಸಭೆಗೆ ಮೂರನೇ ಬಾರಿಗೆ ಆಯ್ಕೆಯಾಗಿರುವ ಬಂಡೆಪ್ಪ ಮಾಣಿಕಪ್ಪ ಕಾಶೆಂಪುರ ಅವರು ಕಾಂಗ್ರೆಸ್‌ ಮೂಲಕ ರಾಜಕೀಯ ಪ್ರವೇಶಿಸಿದರೂ ಜೆಡಿಎಸ್‌ ಸೇರಿದ ನಂತರ ಪಕ್ಷ ನಿಷ್ಠೆ ಪ್ರದರ್ಶಿಸಿದರು.

ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಬಂಡೆಪ್ಪ ಅವರಿಂದಾಗಿಯೇ ಜಿಲ್ಲೆಯಲ್ಲಿ ಜೆಡಿಎಸ್‌ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷಗಳ ಪ್ರಮುಖ ಮುಖಂಡರನ್ನು ಜೆಡಿಎಸ್‌ಗೆ ಕರೆ ತರುವಲ್ಲಿ ಬಂಡೆಪ್ಪ ಯಶಸ್ವಿಯಾಗಿದ್ದರು.

‘ಜಿಲ್ಲೆಯ ಎಲ್ಲ ರಾಜಕೀಯ ಮುಖಂಡರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದಾರೆ. ಅವರು ರಾಜಕೀಯ ಜೀವನದಲ್ಲಿ ವೈಯಕ್ತಿಕ ಟೀಕೆ ಹಾಗೂ ಆರೋಪ ಮಾಡಿದ ಉದಾಹರಣೆಗಳು ಕಾಣಸಿಗುವುದಿಲ್ಲ. ವಿವಿಧ ಸಂಘ ಸಂಸ್ಥೆಗಳು ಹಾಗೂ ರೈತರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿದ್ದಾರೆ.
ಇದೆಲ್ಲ ಅವರಿಗೆ ವರವಾಗಿ ಪರಿಣಮಿಸಿದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT