‘ಗೆಲುವಿನ ಸರದಾರ’ನಿಗೆ ಒಲಿದ ಮಂತ್ರಿಗಿರಿ

2
ಎರಡು ದಶಕಗಳಲ್ಲಿ ಗೌರಿಬಿದನೂರು ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದ ಚತುರ ರಾಜಕಾರಣಿ

‘ಗೆಲುವಿನ ಸರದಾರ’ನಿಗೆ ಒಲಿದ ಮಂತ್ರಿಗಿರಿ

Published:
Updated:
‘ಗೆಲುವಿನ ಸರದಾರ’ನಿಗೆ ಒಲಿದ ಮಂತ್ರಿಗಿರಿ

ಚಿಕ್ಕಬಳ್ಳಾಪುರ: ಮೈತ್ರಿ ಸರ್ಕಾರದಲ್ಲಿ ಬುಧವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್‌.ಎಚ್.ಶಿವಶಂಕರರೆಡ್ಡಿ ಅವರು ಕಳೆದ ಎರಡು ದಶಕಗಳಿಂದ ಸತತ ಐದು ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ‘ಗೆಲುವಿನ ಸರದಾರ’ ಎಂದೇ ಖ್ಯಾತಿ ಗಳಿಸಿದ್ದಾರೆ.

ಗೌರಿಬಿದನೂರು ತಾಲ್ಲೂಕಿನ ನಾಗಸಂದ್ರದ ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ ಎನ್‌.ಎಸ್.ಹನುಮಂತರೆಡ್ಡಿ ಅವರ ಪುತ್ರರಾದ ಶಿವಶಂಕರರೆಡ್ಡಿ ಅವರು 1974ರಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ (ಬಿಎಸ್ಸಿ, ಎಜಿ) ಮುಗಿಸಿ ತಮ್ಮ ಹಳ್ಳಿಯಲ್ಲೇ ವ್ಯವಸಾಯ ಮಾಡಿಕೊಂಡಿದ್ದವರು.

1976ರಲ್ಲಿ ಒಂದು ದಿನ ನಾಗಸಂದ್ರದಲ್ಲಿ ಇದ್ದಕ್ಕಿಂತೆ ಒಂದು ಅಚಾತುರ್ಯ ಘಟನೆ ನಡೆಯಿತು. ಅದಕ್ಕೆ ಇವರೇ ಕಾರಣ ಎಂದು ತಪ್ಪಿತಸ್ಥರನ್ನಾಗಿ ಮಾಡಿ ಕೆಲವರು ಇವರ ವಿರುದ್ಧ ಸುಳ್ಳು ದೂರು ಕೊಟ್ಟರು. ಪೊಲೀಸರು ಕೂಡ ಇವರ ವಿರುದ್ಧ 302ನೇ ಕಲಂ ಅಡಿ ಪ್ರಕರಣ (ಕೊಲೆ) ದಾಖಲಿಸಿದರು.

‘ನನ್ನ ಜೀವನದ ಮೇಲೆ ಬಹುದೊಡ್ಡ ಪರಿಣಾಮ ಬೀರಿದ ಘಟನೆಯದು. ಅದರಿಂದಾಗಿ ನಮ್ಮ ಬದುಕಿಗೆ ಧಕ್ಕೆ ಬರುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಸತ್ಯ ಅರಿತಿದ್ದ ಜನರೇ ಆಕ್ರೋಶಗೊಂಡು ನನ್ನನ್ನು ಬೆಂಬಲಿಸಲು ಆರಂಭಿಸಿದರು. ಆಗ ಅನಿವಾರ್ಯವಾಗಿ ನಾನು ರಾಜಕೀಯಕ್ಕೆ ಬರುವ ಪರಿಸ್ಥಿತಿ ಉದ್ಭವವಾಯಿತು’ ಎನ್ನುತ್ತಾರೆ ಶಿವಶಂಕರರೆಡ್ಡಿ.

ಜನರ ಒತ್ತಾಸೆಯಂತೆ ಗ್ರಾಮ ಪಂಚಾಯಿತಿ ಚುನಾವಣೆ ಸ್ಪರ್ಧಿಸುವ ಇವರು, ಸಹೋದರ ಸಂಬಂಧಿ ಎನ್‌.ಟಿ.ಮದನಗೋಪಾಲ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಕೊಳಕ್ಕೆ ಇಳಿದು ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತ ಪ್ರವರ್ಧಮಾನಕ್ಕೆ ಬಂದವರು.

ವಿವಿಧ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಕೆಲಸ ಮಾಡುತ್ತ 1988ರಲ್ಲಿ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. ಎಸ್‌.ವಿ.ಅಶ್ವತ್ಥನಾರಾಯಣರೆಡ್ಡಿ ಅವರು ಶಾಸಕರಾಗಿದ್ದ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಈ ಸಮಯದಲ್ಲೇ ಅವರು ಜನನಾಯಕರಾಗಿ ಬೆಳೆದದ್ದು.

ತಮ್ಮದೇಯಾದ ರಾಜಕೀಯ ತಂತ್ರಗಾರಿಕೆ ರೂಪಿಸಿಕೊಂಡು ಬಂದಿರುವ ಶಿವಶಂಕರರೆಡ್ಡಿ, ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿಕೊಂಡಿಕೊಂಡಿದ್ದಾರೆ. ಆ ಕೋಟೆಯನ್ನು ಭೇದಿಸುವ ಪ್ರಯತ್ನಗಳು ಎರಡು ದಶಕಗಳಲ್ಲಿ ನಾಲ್ಕು ಬಾರಿ ನಡೆದರು ಯಾರಿಗೂ ಯಶ ದೊರೆತಿಲ್ಲ.

ಜಿಲ್ಲೆಯ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಶಿವಶಂಕರರೆಡ್ಡಿ, ಹಲವು ವರ್ಷಗಳಿಂದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಈ ಹಿಂದೆ ಸಂಪುಟ ರಚನೆ, ಪುನಾರಚನೆ ಸಂದರ್ಭದಲ್ಲೂ ಅವರ ಬೆಂಬಲಿಗರು ಅವಕಾಶ ಸಿಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯ್ದಿದ್ದರು. ಆದರೆ ಸಿಗದಿದ್ದಾಗ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ಆಗಾಗ ಪಕ್ಷದ ಹೈಕಮಾಂಡ್‌ ನೊಂದಿಗೆ ಮುನಿಸು ತೋರಿಸುತ್ತಲೇ ಬಂದಿದ್ದ ಶಿವಶಂಕರರೆಡ್ಡಿ ಅವರನ್ನು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2013ರ ಜುಲೈನಲ್ಲಿ ವಿಧಾನಸಭೆ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು. ಬಹುಕಾಲದ ನಿರೀಕ್ಷೆಯ ನಂತರ ಸಚಿವ ಸ್ಥಾನ ಒಲಿದದ್ದು ಅವರ ಬೆಂಬಲಿಗರದಲ್ಲಿ ಸಂತಸ ಇಮ್ಮಡಿಸಿದೆ.

ಮೊದಲ ಯತ್ನದಲ್ಲೇ ಗೆಲುವು

1999ರಲ್ಲಿ ಮೊದಲ ಬಾರಿಗೆ ಜನರ ಒತ್ತಾಯದ ಮೆರೆಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿ ಇವರು ಕಾಂಗ್ರೆಸ್ ಟಿಕೆಟ್ ಕೇಳಿದರು. ಆದರೆ ಆಗ ಕಾಂಗ್ರೆಸ್ ಅಶ್ವತ್ಥನಾರಾಯಣರೆಡ್ಡಿ ಅವರಿಗೆ ಟಿಕೆಟ್ ನೀಡಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪುತ್ತಿದ್ದಂತೆ ಪಕ್ಷೇತರರಾಗಿ ಕಣಕ್ಕೆ ಧುಮುಕಿದ ಶಿವಶಂಕರರೆಡ್ಡಿ, ತಮ್ಮ ರಾಜಕೀಯ ಗುರುವಾದ ಅಶ್ವತ್ಥನಾರಾಯಣರೆಡ್ಡಿ ಅವರ ಎದುರು ಸೆಡ್ಡು ಹೊಡೆದರು.

ಮೊದಲ ಪ್ರಯತ್ನದಲ್ಲೇ 34,541 ಮತ ಪಡೆಯುವ ಮೂಲಕ ಅಶ್ವತ್ಥನಾರಾಯಣರೆಡ್ಡಿ ಅವರನ್ನು 862 ಸ್ವಲ್ಪ ಮತಗಳ ಅಂತರದಿಂದ ಪರಾಭವಗೊಳಿಸಿ ವಿಧಾನಸಭೆ ಪ್ರವೇಶಿಸಿದರು. ಪರಿಣಾಮ, ಮರು ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಟಿಕೆಟ್ ಶಿವಶಂಕರರೆಡ್ಡಿ ಅವರನ್ನು ಅರಸಿಕೊಂಡು ಬಂತು. ಅಲ್ಲಿಂದ ಈವರೆಗೆ ರಾಜಕಾರಣದಲ್ಲಿ ಹಿಂತಿರುಗಿ ನೋಡಿಲ್ಲ. ಶಾಸಕ ಸ್ಥಾನ ಕಾಯ್ದುಕೊಂಡಿದ್ದಾರೆ.

2004ರಲ್ಲಿ ಜೆಡಿಎಸ್‌ ಅಭ್ಯರ್ಥಿ ಎನ್‌.ಜ್ಯೋತಿರೆಡ್ಡಿ, 2008ರಲ್ಲಿ ಬಿಜೆಪಿ ಅಭ್ಯರ್ಥಿ ಎನ್.ಎಂ.ರವಿನಾರಾಯಣರೆಡ್ಡಿ ಅವರನ್ನು ಸೋಲಿಸಿದ್ದ ಶಿವಶಂಕರೆಡ್ಡಿ, 2013ರಲ್ಲಿ ಪಕ್ಷೇತರ ಅಭ್ಯರ್ಥಿ, ಉದ್ಯಮಿ ಕೆ.ಜೈಪಾಲ್ ರೆಡ್ಡಿ ಅವರನ್ನು ಮತ್ತು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜೈಪಾಲ್‌ ರೆಡ್ಡಿ ಅವರನ್ನು ಎರಡನೇ ಬಾರಿ ಪರಾಭವಗೊಳಿಸಿ ಗೆಲುವಿನ ನಗೆ ಬೀರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry