ಭಾನುವಾರ, ಮೇ 9, 2021
26 °C
ಆರ್‌ಎಸ್‌ಎಸ್‌ ತೃತೀಯ ವರ್ಷ ಸಂಘ ಶಿಕ್ಷಾ ವರ್ಗದಲ್ಲಿ ಮಾಜಿ ರಾಷ್ಟ್ರಪತಿ ಭಾಷಣ

ಇಂದು ಸಂಜೆ ಆರು ಗಂಟೆಗೆ ನಾಗಪುರದಲ್ಲಿ ಪ್ರಣಬ್ ಮುಖರ್ಜಿ ಏನು ಮಾತಾಡ್ತಾರೆ?

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಇಂದು ಸಂಜೆ ಆರು ಗಂಟೆಗೆ ನಾಗಪುರದಲ್ಲಿ ಪ್ರಣಬ್ ಮುಖರ್ಜಿ ಏನು ಮಾತಾಡ್ತಾರೆ?

ನಾಗಪುರ: ನಗರದಲ್ಲಿ ಇಂದು ಸಂಜೆ ನಡೆಯಲಿರುವ ಕಾರ್ಯಕ್ರಮವೊಂದು ಇಡೀ ದೇಶದ ಗಮನ ಸೆಳೆದಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣ ಹೇಗಿರಬಹುದು ಎಂಬ ಚರ್ಚೆಗಳ ಜೊತೆಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುತ್ಸದಿಯ ನಿರ್ಧಾರದ ಪರ–ವಿರುದ್ಧ ಚರ್ಚೆಗಳೂ ಕಾವೇರಿವೆ.

ಕಾಂಗ್ರೆಸ್‌ನ ವರಿಷ್ಠ ನಾಯಕರು ಮತ್ತು ಪುತ್ರಿಯ ಟೀಕೆಯ ನಡುವೆಯೂ ಆರ್‌ಎಸ್‌ಎಸ್‌ನ ತೃತೀಯ ವರ್ಷ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಭಾಷಣ ಮಾಡಲು ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ.

ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಿರುವ ಕ್ರಮವನ್ನು ಆರ್‌ಎಸ್‌ಎಸ್‌ ಬಲವಾಗಿ ಸಮರ್ಥಿಸಿಕೊಂಡಿದೆ. ಮಹಾತ್ಮಾ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಸಹ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ನಮ್ಮ ಕೆಲಸ ಮೆಚ್ಚಿ ನೆಹರು ಅವರು 1963ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಕೊಟ್ಟಿದ್ದರು ಎಂದು ಹೇಳಿಕೊಂಡಿದೆ.

‘ಆರ್‌ಎಸ್‌ಎಸ್‌ ಸಮಾರಂಭದಲ್ಲಿ ನೀವು ಪಾಲ್ಗೊಳ್ಳುವುದರಿಂದ ದೇಶಕ್ಕೆ ತಪ್ಪು ಸಂದೇಶ ಹೋಗಬಹುದು’ ಎಂದು ಹಲವು ಕಾಂಗ್ರೆಸ್ ನಾಯಕರು ಎಚ್ಚರಿಸಿದ್ದರು. ಪ್ರಣಬ್ ಮುಖರ್ಜಿ ಅವರು ಮಗಳು ಶಮಿತಾ ಮುಖರ್ಜಿ ಅವರಿಗೂ ಅಪ್ಪನ ನಿರ್ಧಾರ ಇಷ್ಟವಾಗಿಲ್ಲ. ‘ನೀವು ನಾಗಪುರಕ್ಕೆ ಹೋಗುವ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸುಳ್ಳು ಸುದ್ದಿ ಹರಡಲು ಅನುವು ಮಾಡಿಕೊಡುತ್ತಿದ್ದೀರಿ’ ಎಂದು ಟೀಕಿಸಿದ್ದರು.

ಸೋನಿಯಾಗಾಂಧಿ ಅವರ ನಂಬಿಕಸ್ಥ ನಾಯಕ ಎಂದೇ ಕಾಂಗ್ರೆಸ್ ವಲಯವು ಗುರುತಿಸುವ ಅಹ್ಮದ್ ಪಟೇಲ್ ಅವರೂ ಬುಧವಾರ ‘ಪ್ರಣಬ್ ಮುಖರ್ಜಿ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ’ ಎಂದು  ಟ್ವೀಟ್ ಮಾಡಿ ತಮ್ಮ ಅಸಮ್ಮತಿ ಹೊರಹಾಕಿದ್ದಾರೆ. ಇದು ಕಾಂಗ್ರೆಸ್‌ ನಾಯಕರ ಅಧಿಕೃತ ಸಂದೇಶ ಎಂದೇ ಪರಿಣಿತರು ವಿಶ್ಲೇಷಿಸುತ್ತಿದ್ದಾರೆ.

ಕಾಂಗ್ರೆಸ್‌ ಕೆಲವರು ಪ್ರಣಬ್ ಅವರ ನಿರ್ಧಾರ ಸರಿಯಾದುದು ಎಂದು ಸಮರ್ಥಿಸಿಕೊಂಡಿದ್ದಾರೆ. ‘ಈ ಅವಕಾಶ ಬಳಸಿಕೊಂಡು ಆರ್‌ಎಸ್‌ಎಸ್‌ಗೆ ಅದರ ಸಿದ್ಧಾಂತದಲ್ಲಿರುವ ತಪ್ಪುಗಳನ್ನು ಅರ್ಥಮಾಡಿಸಲು ಪ್ರಯತ್ನಿಸಿ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಸಲಹೆ ಮಾಡಿದ್ದರು.  ಕಾಂಗ್ರೆಸ್‌ನ ಚಿಂತಕರಚಾವಡಿಯ ಮುಖವಾಣಿ ಎನಿಸಿರುವ ಜಯರಾಂ ರಮೇಶ್‌ ‘ದಯವಿಟ್ಟು ನಾಗಪುರಕ್ಕೆ ಹೋಗಬೇಡಿ’ ಎಂದು ವಿನಂತಿಸಿದ್ದರು.

ತಮ್ಮ ನಿರ್ಧಾರದ ವಿರುದ್ಧ ಕೇಳಿ ಬಂದ ಎಲ್ಲ ಟೀಕೆಗಳನ್ನು ಸಾವಧಾನದಿಂದ ಸ್ವೀಕರಿಸಿರುವ ಮುತ್ಸದ್ದಿ ರಾಜಕಾರಣಿ ಪ್ರಣವ್ ಮುಖರ್ಜಿ ‘ನಾನು ಏನು ಹೇಳಬೇಕೋ ಅದನ್ನು ನಾಗಪುರದಲ್ಲಿಯೇ ಹೇಳುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದರು.

ಸುಮಾರು 50 ವರ್ಷಗಳಿಂದ ಸಂಘ ಪರಿವಾರದ ಸಿದ್ಧಾಂತ ವಿರೋಧಿಸುತ್ತಿದ್ದ ಪ್ರಣಬ್ ಮುಖರ್ಜಿ ಅವರು ಇದೀಗ ತಮ್ಮ 82ರ ಇಳಿವಯಸ್ಸಿನಲ್ಲಿ ಸಂಘ ಪರಿವಾರದ ಕೇಂದ್ರ ಸ್ಥಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಒಪ್ಪಿಕೊಂಡಿರುವುದು ದೇಶವ್ಯಾಪಿ ಚರ್ಚೆ ಹುಟ್ಟುಹಾಕಿದೆ.

ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಪ್ರಣಬ್ ಸಂಜೆ 5.30ಕ್ಕೆ ತೆರಳಲಿದ್ದಾರೆ. ಆರ್‌ಎಸ್‌ಎಸ್‌ ಸರಸಂಘಚಾಲಕರಾದ ಮೋಹನ್ ಭಾಗವತ್ ಪ್ರಣಬ್ ಅವರನ್ನು ಸ್ವಾಗತಿಸಲಿದ್ದಾರೆ. ಮೋಹನ್‌ ಭಾಗವತ್ ಮತ್ತು ಸರಕಾರ್ಯವಾಹ ಭಯ್ಯಾಜಿ ಜೋಶಿ ಅವರೊಡನೆ ಚಹಾ ಸೇವಿಸಿದ ನಂತರ ಸಂಘದ ಹಿರಿಯ ನಾಯಕರನ್ನು ಮಾತನಾಡಿಸಲಿದ್ದಾರೆ.

ಆರ್‌ಎಸ್‌ಎಸ್ ಸಂಸ್ಥಾಪಕರಾದ ಕೇಶವ್ ಬಲಿರಾಂ ಹೆಡಗೆವಾರ್ ಅವರ ಸ್ಮಾರಕಕ್ಕೆ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿದ ನಂತರ ಸಮಾರಂಭ ನಡೆಯುವ ಸ್ಥಳಕ್ಕೆ 6.15ಕ್ಕೆ ಮರಳಲಿದ್ದಾರೆ. ಅಲ್ಲಿ ಸುಮಾರು 20 ನಿಮಿಷದ ಭಾಷಣ ಮಾಡಲಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.