ಪರಿಸರ ದಿನಕ್ಕೆ ‘ವೃಕ್ಷಂ’ ಕೊಡುಗೆ

7

ಪರಿಸರ ದಿನಕ್ಕೆ ‘ವೃಕ್ಷಂ’ ಕೊಡುಗೆ

Published:
Updated:
ಪರಿಸರ ದಿನಕ್ಕೆ ‘ವೃಕ್ಷಂ’ ಕೊಡುಗೆ

ಎಟಿಎಂ ಯಂತ್ರದ ಕಳ್ಳತನದ ಸುತ್ತ ಕಥೆಯೊಂದನ್ನು ಹೆಣೆದು, ಅದನ್ನು ‘ಡೇಸ್ ಆಫ್ ಬೋರಾಪುರ’ ಎನ್ನುವ ಹೆಸರಿನ ಸಿನಿಮಾ ಮೂಲಕ ವೀಕ್ಷಕರ ಮುಂದೆ ಇರಿಸಿದ್ದ ನಿರ್ದೇಶಕ ಆದಿತ್ಯ ಕುಣಿಗಲ್ ಈಗ ಪರಿಸರದ ಕುರಿತು ಒಂದು ಸಿನಿಮಾ ಸಿದ್ಧಪಡಿಸಿದ್ದಾರೆ. ಈ ಚಿತ್ರಕ್ಕೆ ‘ವೃಕ್ಷಂ’ ಎಂದು ಹೆಸರಿಟ್ಟಿರುವ ಆದಿತ್ಯ, ಇದರ ಹಾಡುಗಳನ್ನು ವಿಶ್ವ ಪರಿಸರ ದಿನಾಚರಣೆಯಂದು ಬಿಡುಗಡೆ ಮಾಡಿದ್ದಾರೆ.

ಹಾಡುಗಳ ಬಿಡುಗಡೆಗೆ ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳನ್ನು ಕರೆಸುವ ಗೋಜಿಗೆ ಹೋಗದೆ, ಸಾಲುಮರದ ತಿಮ್ಮಕ್ಕ, ಪರಿಸರ ತಜ್ಞ ಅ.ನ. ಯಲ್ಲಪ್ಪ ರೆಡ್ಡಿ ಮತ್ತು ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರನ್ನು ಕರೆಸಿದ್ದರು.

‘ಪರಿಸರದ ಬಗ್ಗೆ ಸಿನಿಮಾ ಬರುತ್ತಿದೆ ಎಂಬುದೇ ಆಕರ್ಷಣೆಯ ವಿಚಾರ. ಇಂತಹ ಸದಭಿರುಚಿಯ ಚಿತ್ರ ಮಾಡಲು ಆದಿತ್ಯ ಮನಸ್ಸು ಮಾಡಿರುವುದು ಸಂತಸದ ಸಂಗತಿ. ಸಿನಿಮಾ ಮಾಡಲು ಇರುವ ಕೆಲವು ಸಿದ್ಧ ಸೂತ್ರಗಳನ್ನು ಬದಿಗಿಟ್ಟು ಸಮಾಜಕ್ಕೆ ಅಗತ್ಯವಿರುವ ವಿಷಯವೊಂದನ್ನು ಇವರು ಸಿನಿಮಾ ರೂಪದಲ್ಲಿ ಕಟ್ಟಿದ್ದಾರೆ. ಇದು ಖುಷಿ ತರುತ್ತದೆ’ ಎಂದರು ಎಚ್‌ಎಸ್‌ವಿ.

‘ವೃಕ್ಷಗಳಿಲ್ಲದಿದ್ದರೆ ನಾವು ಎಲ್ಲಿ ಇರುತ್ತೇವೆ ಎಂಬುದನ್ನು ಅರೆಕ್ಷಣ ಆಲೋಚಿಸಿ ನೋಡೋಣ? ಆದಿತ್ಯ ಅವರು ಈಗ ಮಾಡಿರುವುದು ಅದ್ಭುತವಾದ ಕೆಲಸ’ ಎಂದು ಮೆಚ್ಚುಗೆ ಸೂಚಿಸಿದರು ರೆಡ್ಡಿ.

ನಿರ್ದೇಶಕ ನಿಖಿಲ್ ಮಂಜು ಅವರೂ ಕಾರ್ಯಕ್ರಮಕ್ಕೆ ಬಂದಿದ್ದರು. ‘ಆದಿತ್ಯ ಅವರು ಮಾಮೂಲಿ ಕಮರ್ಷಿಯಲ್ ಸಿನಿಮಾ ಮಾಡಬಹುದಿತ್ತು. ಆದರೆ ಅವರು ಇಂಥದ್ದೊಂದು ಸಿನಿಮಾ ಆಯ್ಕೆ ಮಾಡಿಕೊಂಡರು’ ಎಂದು ಮೆಚ್ಚುಗೆ ಸೂಚಿಸಿದರು ನಿಖಿಲ್.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಆದಿತ್ಯ ಸಿನಿಮಾ ಕಥೆಯ ಎಳೆಯನ್ನು ಬಿಟ್ಟುಕೊಟ್ಟರು. ‘ಮೂರು ಹಾಗೂ ನಾಲ್ಕನೆಯ ತರಗತಿಯ ಮಕ್ಕಳಿಗಾಗಿ ಮಾಡಿರುವ ಸಿನಿಮಾ ಇದು. ಮರಗಳಿಗೆ ಜೀವ ಇರುತ್ತದೆ ಎಂಬುದನ್ನು ಅರಿತ ಮಗುವೊಂದು ಅದನ್ನು ಇತರರಿಗೆ ವಿವರಿಸುತ್ತದೆ. ಮರ ಕಡಿಯುವವನನ್ನು ಹಾಗೆ ಮಾಡದಂತೆ ಮಕ್ಕಳು ತಡೆಯುತ್ತಾರೆ. ಇದು ಕಥೆಯ ಎಳೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry