ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದರಸದ ಹೊಸ ಚಲನೆ

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

‘ಎದ್ದೇಳು ಮಂಜುನಾಥ’, ‘ಎ’ ಸಿನಿಮಾಗಳಲ್ಲಿವೆಯಲ್ಲ, ಅಂಥ ಹಲವು ಚುರುಕು ಸಂಭಾಷಣೆಗಳು ಇಲ್ಲಿಯೂ ಇವೆ. ಪಕ್ಕಾ ಪಡ್ಡೆ ಹುಡುಗರ ಪರಿಭಾಷೆಯಲ್ಲಿ, ಪಂಚಿಂಗ್ ಡೈಲಾಗ್ ಹೊಡೆಯುವುದು ಮೊದಮೊದಲು ಮುಜುಗರ ಹುಟ್ಟಿಸುತ್ತಿತ್ತು. ಆದರೆ ಆ ಪಾತ್ರಕ್ಕೆ ಡಬ್ಬಿಂಗ್ ಮಾಡುವಾಗ ಇದು ನಾನು ಅಭಿನಯಿಸಲೇಬೇಕಿದ್ದ ಪಾತ್ರ ಅನಿಸಿತು.

ಈ ಪಾತ್ರದ ಕುರಿತು ಖುಷಿ ಎನಿಸಿತು. ಇಬ್ಬರು ಅನಾಥ ಹುಡುಗರು ಯಾರ ಪ್ರೀತಿ, ಅಕ್ಕರೆಯ ಪರಿಚಯವೂ ಇಲ್ಲದೆ ತಮ್ಮ ಬದುಕಿನ ದಾರಿಯನ್ನು ತಾವೇ ರೂಪಿಸಿಕೊಳ್ಳುವ ಎಳೆ ಈ ಚಿತ್ರದಲ್ಲಿದೆ. ವಿರಾಮದ ಸಮಯದಲ್ಲಿ ನಾವು ಪ್ರೇಕ್ಷಕರಿಗೆ ಕಾಣಿಸಿಕೊಂಡರೆ ಹೊಡೆಸಿಕೊಳ್ಳುವುದು ಖಚಿತ. ಆದರೆ ಪೂರ್ತಿ ಚಿತ್ರ ನೋಡಿದ ಮೇಲೆ ಅಭಿಪ್ರಾಯ ಬದಲಾಗುತ್ತದೆ. ಪ್ರಾರಂಭದ ಐದು ನಿಮಿಷ ಮಿಸ್ ಮಾಡಿಕೊಂಡರೂ ಚಿತ್ರ ಅರ್ಥವಾಗುವುದಿಲ್ಲ’ ಎಂದು ತಮಾಷೆ, ಭರವಸೆ ಎರಡೂ ಬೆರೆತ ಧಾಟಿಯಲ್ಲಿಯೇ ಮಾತನಾಡಿದರು ಸಂಚಾರಿ ವಿಜಯ್.

ಅದು ‘ಪಾದರಸ’ ಚಿತ್ರದ ಪತ್ರಿಕಾಗೋಷ್ಠಿ. ಇದುವರೆಗೆ ನಟಿಸಿದ ಎಲ್ಲ ಸಿನಿಮಾಗಳಿಗಿಂತ ಭಿನ್ನ ಲುಕ್‌ನಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರಂತೆ. ‘ರಾಷ್ಟ್ರಪ್ರಶಸ್ತಿ ಪಡೆದ ಮೇಲೆ ಮೊದಲು ಮುಂಗಡ ಹಣ ಪಡೆದುಕೊಂಡು ನಟಿಸಿದ ಸಿನಿಮಾ ಇದು. ಈ ಚಿತ್ರ ಗೆಲ್ಲುತ್ತದೆ ಎಂಬ ಭರವಸೆ ಇದೆ’ ಎಂದೂ ಅವರು ಹೇಳಿದರು.

ನಿರ್ದೇಶಕ ಹೃಷಿಕೇಶ್ ಜಂಬಗಿ ಅವರಿಗೆ ಇದು ಮೊದಲ ಸಿನಿಮಾ. ‘ತಂದೆ ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧದ ಹಲವು ಆಯಾಮಗಳನ್ನು ಈ ಚಿತ್ರ ಒಳಗೊಂಡಿದೆ’ ಎಂಬ ವಿವರಣೆ ಅವರದು. ವಿಜಯ್ ಚೆಂಡೂರು ಅವರೂ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿ ವೈಷ್ಣವಿ ಮೆನನ್ ಅವರಿಗೂ ಇದು ಮೊದಲ ಸಿನಿಮಾ.

‘ಸಂಚಾರಿ ವಿಜಯ್ ನಟಿಸಲಿದ್ದಾರೆ ಎಂಬುದು ತಿಳಿದ ಕೂಡಲೇ ಏನನ್ನೂ ಯೋಚಿಸದೆ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ’ ಎಂದು ಖುಷಿಯಿಂದ ಹೇಳಿಕೊಂಡರು ನಿರಂಜನ್ ದೇಶಪಾಂಡೆ. ಮನಸ್ವಿನಿ, ಶಿಲ್ಪಾ ಗೌಡ ಕೂಡ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿವೆ. ಅವುಗಳಿಗೆ ಎ.ಟಿ. ರವೀಶ್ ಸಂಗೀತ ಸಂಯೋಜಿಸಿದ್ದಾರೆ.

ಕೆಲವು ಸ್ನೇಹಿತರು ಸೇರಿಕೊಂಡು ಆರ್ಟ್‌ ಆ್ಯಂಡ್ ಸೋಷಿಯಲ್ ಮೀಡಿಯಾ ಸರ್ವೀಸಸ್ ಎಂಬ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT