ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾಪೆಟ್ಟಿಗೆಯ ಮಾಯೆಗೆ ಮರುಳಾಗಿ...

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಡಿಡಿ1ರಲ್ಲಿ ಬರುತ್ತಿದ್ದ ಸಿನಿಮಾಗಳಿಗಾಗಿ ಕಾದು ಕೂತಿರುತ್ತಿದ್ದ ಆ ಹುಡುಗ. ಮನೆಯಲ್ಲಿ ಟಿ.ವಿ ಇಲ್ಲದ್ದರಿಂದ ಬೇರೆಯವರ ಮನೆಗೆ ಹೋಗಿ ಮಧ್ಯರಾತ್ರಿಯವರೆಗೆ ಸಿನಿಮಾ ನೋಡಿ ಅದೇ ಗುಂಗಿನಲ್ಲಿ ಬಂದು ಮಲಗಿದರೆ ಕನಸಲ್ಲೂ ಶಾರುಖ್ ಖಾನ್‌, ಸಲ್ಮಾನ್‌ ಖಾನ್‌ಗಳು ನಟಿಸಿಹೋಗುತ್ತಿದ್ದರು.

ಸಾಮಾನ್ಯವಾಗಿ ಸಿನಿಮಾ ನೋಡುವ ಎಳೆಯರೆಲ್ಲ ತಾವೂ ಮುಂದೊಂದು ದಿನ ಸೂಪರ್‌ಸ್ಟಾರ್ ಆಗಬೇಕು ಎಂದು ಕನಸು ಕಂಡರೆ ಈ ಹುಡುಗ ಮಾತ್ರ ಸಿನಿಮಾ ತಯಾರಿಸುವುದು ಹೇಗೆ ಎಂದು ತಲೆಕೆಡಿಸಿಕೊಂಡು ಕೂಡುತ್ತಿದ್ದ. ಅದರಲ್ಲಿಯೂ ಎಂದೋ ಎಲ್ಲೋ ಯಾರೋ ನಟಿಸಿದ ದೃಶ್ಯಗಳನ್ನು ಯಥಾವತ್ತಾಗಿ ಸೆರೆಹಿಡಿದು ತೋರಿಸುವ ಕ್ಯಾಮೆರಾ ಅವನಿಗೆ ಅದ್ಭುತ ಮಾಯಾಪೆಟ್ಟಿಗೆಯಂತೆ ಕಾಣುತ್ತಿತ್ತು.

ಮದ್ದೂರಿನ ನೆಗರಿಕೆರೆ ಎಂಬ ಊರಲ್ಲಿ ಹುಟ್ಟಿದ ಆ ಹುಡುಗನ ಹೆಸರು ಲವಿತ್. ಇವರ ಸರೀ ಗುರ್ತು ಹತ್ತಬೇಕು ಎಂದರೆ ಡಿ. ಸತ್ಯಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ...’ ಚಿತ್ರದ ಹೆಸರು ಹೇಳಬೇಕು. ಆ ಸಿನಿಮಾಕ್ಕೆ ಸಿನಿಮಾಟೋಗ್ರಫಿ ಮಾಡಿದ್ದು ಲವಿತ್ ಅವರೇ.

ಲವಿತ್ 18ನೇ ವರ್ಷದಲ್ಲಿದ್ದಾಗ ತಂದೆ ತೀರಿಕೊಂಡರು. ಬಾಲ್ಯದಿಂದಲೇ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಅವರಿಗೆ ಕುಟುಂಬದ ಜವಾಬ್ದಾರಿ ಹೆಗಲೇರಿದಾಗ ಬಣ್ಣದ ಲೋಕದ ಕನಸು ಕೊಂಚ ಹಿನ್ನೆಲೆಗೆ ಸರಿಯಿತು.

ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದ ಅವರು ಬಿ.ಇ.ಎಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಆಗಲೂ ಅವರೊಳಗೆ ಸಿನಿಮಾಟೋಗ್ರಫಿಯ ತುಡಿತ ಹಾಗೆಯೇ ಇತ್ತು. ಅವರ ಆಸಕ್ತಿಯನ್ನು ಕಂಡ ಸ್ನೇಹಿತರೊಬ್ಬರು  ಹಿರಿಯ ಛಾಯಾಗ್ರಾಹಕ ಅನಂತ್ ಅರಸ್ ಅವರ ಬಳಿ ಸಹಾಯಕರಾಗಿ ಸೇರಿಸಿದರು. ಅಲ್ಲಿಂದ ಲವಿತ್ ಛಾಯಾಪಯಣ ಆರಂಭವಾಯ್ತು.

‘ಅನಂತ್ ಸರ್ ಅವರ ಬಳಿ ಕೆಲಸ ಮಾಡಿದ್ದು ನನಗೆ ಸಿನಿಮಾಟೋಗ್ರಫಿ ಕುರಿತು ಹಲವು ಸಂಗತಿಗಳನ್ನು ಕಲಿತುಕೊಳ್ಳಲು ಸಾಧ್ಯವಾಯ್ತು. ಅವರು ಕ್ಯಾಮೆರಾ ಚಲನೆ, ಬೆಳಕಿನ ವಿನ್ಯಾಸ, ಸನ್ನಿವೇಶಗಳ ಅಗತ್ಯಕ್ಕೆ ತಕ್ಕಂತೆ ಫ್ರೇಮ್‌ ರೂಪಿಸುವುದು ಹೀಗೆ ಹಲವು ಸೂಕ್ಷ್ಮ ಸಂಗತಿಗಳನ್ನು ಹೇಳಿಕೊಟ್ಟರು. ಅವರ ಜತೆ ‘ಪುನೀತ್’, ‘ಜುಗಾರಿ’, ‘ನಾನು ನನ್ನ ಕನಸು’, ‘ವೀರಬಾಹು’, ‘ಬೆಟ್ಟದ ಜೀವ’, ‘ಸರಸಮ್ಮನ ಸಮಾಧಿ’, ‘ಜನ್ಮ’ ಹೀಗೆ ಹಲವು ಸಿನಿಮಾಗಳಿಗೆ ಸಹಾಯಕನಾಗಿ ಕೆಲಸ ಮಾಡಿದೆ.

ಜತೆಗೆ ಗಿರಿಧರ ದಿವಾನ್ ಅವರೂ ಹಲವು ಫೋಟೊಶೂಟ್‌ಗಳಿಗೆ ನನ್ನನ್ನು ಕರೆಯುತ್ತಿದ್ದರು. ಅಲ್ಲಿ ಛಾಯಾಗ್ರಹಣದ ಸೂಕ್ಷ್ಮಗಳನ್ನು ಚೆನ್ನಾಗಿ ಹೇಳಿಕೊಟ್ಟರು’ ಎಂದು ತಾವು ಸಿನಿಮಾಟೋಗ್ರಫಿಯ ಪ್ರಾಥಮಿಕ ಪಟ್ಟುಗಳನ್ನು ಕಲಿತ ಬಗೆಯನ್ನು ವಿವರಿಸುತ್ತಾರೆ.

‘ರಾಮಾ ರಾಮಾ ರೇ’ ನಿರ್ದೇಶಕ ಸತ್ಯಪ್ರಕಾಶ್ ಮತ್ತು ಲವಿತ್ ಇಬ್ಬರೂ ಭೇಟಿಯಾಗಿದ್ದು ನಾಗಾಭರಣ ನಿರ್ದೇಶನದ ‘ಕಂಸಾಳೆ ಕೈಸಾಳೆ’ ಸಿನಿಮಾ ಸಂದರ್ಭದಲ್ಲಿ. ಸತ್ಯ ಅವರು ಸಹಾಯಕ ನಿರ್ದೇಶಕರಾಗಿದ್ದರು. ಲವಿತ್ ಸಹಾಯಕ ಸಿನಿಮಾಟೋಗ್ರಾಫರ್ ಆಗಿದ್ದರು. ‘ನಾವಿಬ್ಬರೂ ಒಂದೇ ಸಿನಿಮಾಗೆ ಕೆಲಸ ಮಾಡಿದ್ದರೂ ಸಿನಿಮಾ ಮುಗಿಯುವವರೆಗೂ ಪರಸ್ಪರ ಪರಿಚಯ ಇರಲಿಲ್ಲ.

ಮಾತೂ ಆಡಿರಲಿಲ್ಲ. ನಮ್ಮ ಕೆಲಸದ ಒತ್ತಡವೇ ಹಾಗಿರುತ್ತಿತ್ತು. ನಾನು ಕೆಲಸ ಮಾಡುವ ರೀತಿಯನ್ನು ನೋಡಿದ ಸತ್ಯಪ್ರಕಾಶ್‌, ಯಾರ ಬಳಿಯೋ ನನ್ನ ನಂಬರ್ ತೆಗೆದುಕೊಂಡು ಫೋನ್ ಮಾಡಿ ಬಂದು ಭೇಟಿಯಾಗಲು ಹೇಳಿದರು. ಒಟ್ಟಿಗೆ ಸಿನಿಮಾ ಮಾಡುವ ಕನಸಿನ ಬಗ್ಗೆ ಹೇಳಿದರು. ನಾನೂ ಖುಷಿಯಿಂದ ಒಪ್ಪಿಕೊಂಡೆ’ ಎಂದು ಸ್ವತಂತ್ರ ಸಿನಿಮಾಟೋಗ್ರಾಫರ್ ಆಗುವ ಕನಸು ನನಸಾಗುವ ದಾರಿಯಲ್ಲಿ ಪಯಣಿಸಿದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ.

ಸಿನಿಮಾಕ್ಕೂ ಮೊದಲು ತಮ್ಮ ಪ್ರತಿಭೆಯನ್ನು ತಾವೇ ಪರೀಕ್ಷಿಸಿಕೊಳ್ಳಲು ಅವರು ‘ಜಯನಗರ ಪೋರ್ಥ್ ಬ್ಲಾಕ್‌’ ಎಂಬ ಕಿರುಚಿತ್ರವನ್ನು ಚಿತ್ರೀಕರಿಸಿದರು. ಆ ಕಿರುಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಯೂ ಬಂತು.

ಇದಾದ ನಂತರ ಕೆಲವು ಧಾರಾವಾಹಿಗಳನ್ನು ಚಿತ್ರೀಕರಿಸಿದರು. ಕಿರುತೆರೆ ಫ್ರೋಮೊಗಳನ್ನು ಚಿತ್ರೀಕರಿಸಿದರು. ಅಷ್ಟರಲ್ಲಿಯೇ ರಾಮಾ ರಾಮಾ ರೇ ಚಿತ್ರೀಕರಣ ಆರಂಭವಾಯ್ತು.

‘ನಾನು ಮತ್ತು ಸತ್ಯ ಇಬ್ಬರ ಮನಸ್ಥಿತಿಗೂ ಚೆನ್ನಾಗಿ ಹೊಂದಾಣಿಯಾಗುತ್ತಿತ್ತು. ಇಬ್ಬರೂ ಒಟ್ಟಿಗೇ ಲೋಕೆಶನ್ ನೋಡಲು ಹೋಗುತ್ತಿದ್ದೆವು. ಕಥೆಯ ಬಗ್ಗೆ ಚರ್ಚಿಸುತ್ತಿದ್ದೆವು. ಇಬ್ಬರಿಗೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಸಿನಿಮಾ ಮಾಡುವ ಯೋಚನೆಯೂ ಇರಲಿಲ್ಲ. ‘ರಾಮಾ ರಾಮಾ ರೇ...’ ಸಿನಿಮಾಕ್ಕೆ ನಾನು ಛಾಯಾಗ್ರಾಹಕನಾಗಿದ್ದು ಹೀಗೆ’ ಎಂದು ಸ್ಮರಿಸಿಕೊಳ್ಳುತ್ತಾರೆ.

ನಂತರ ಅವರು ‘ಬಡ್ಡಿಮಗನ್ ಲೈಫ್’ ಸಿನಿಮಾಕ್ಕೂ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದರು. ಆ ಚಿತ್ರ ಜುಲೈನಲ್ಲಿ ಬಿಡುಗಡೆಯಾಗಲಿದೆ. ‘ರಾಮಾ ರಾಮಾ ರೇ’ ತೆಲುಗು ಅವತರಣಿಕೆಗೂ ಲವಿತ್ ಅವರೇ ಕ್ಯಾಮೆರಾ ಹಿಡಿದಿದ್ದಾರೆ. ಸತ್ಯ ಅವರ ಎರಡನೇ ಸಿನಿಮಾ ‘ಒಂದಲ್ಲಾ ಎರಡಲ್ಲಾ’ಕ್ಕೆ ಕೂಡ ಲವಿತ್ ಅವರೇ ಸಿನಿಮಾಟೋಗ್ರಾಫರ್. ವಿನಯ್ ರಾಜಕುಮಾರ್ ಅವರ ಹೊಸ ಸಿನಿಮಾವನ್ನೂ ಅವರು ಒಪ್ಪಿಕೊಂಡಿದ್ದಾರೆ.

ಹೀಗೆ ಕನಸಿನ ಹಕ್ಕಿಯ ಬೆನ್ನತ್ತಿದ ಲವಿತ್ ಹೊಸ ಹೊಸ ನಿಲ್ದಾಣಗಳನ್ನು ದಾಟಿಕೊಂಡು ಮುಂದೆ ಸಾಗುತ್ತಿದ್ದಾರೆ. ಸಿನಿಮಾಟೋಗ್ರಫಿ ಎನ್ನುವುದು ಅವರಿಗೆ ಬರೀ ಚಂದಗೊಳಿಸುವ ಸಾಧನ ಅಲ್ಲ. ‘ಎಲ್ಲವನ್ನೂ ರಿಚ್ ಆಗಿ ತೋರಿಸುವ ಜನಪ್ರಿಯ ಮಾದರಿಯೊಂದು ನಮ್ಮಲ್ಲಿದೆ. ಇದು ಸರಿಯಲ್ಲ. ಹಲವು ವಿದೇಶಿ ಸಿನಿಮಾಗಳನ್ನು ರೆಫರೆನ್ಸ್‌ ಇಟ್ಟುಕೊಂಡು ಕನ್ನಡದಲ್ಲಿ ಸಿನಿಮಾ ಮಾಡಹೊರಟರೆ ಹೀಗಾಗುತ್ತದೆ.

ನಾವು ನಮ್ಮ ಪರಿಸರ, ಇಲ್ಲಿನ ಪ್ರೇಕ್ಷಕವರ್ಗವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿದಾಗಲೇ ಅದು ಸಹಜವಾಗಿರುತ್ತದೆ’ ಎನ್ನುವ ಲವಿತ್ ‘ಮುಂಗಾರು ಮಳೆ ಸಿನಿಮಾದ ದೃಶ್ಯ ಶ್ರೀಮಂತಿಕೆಯೇ ಬೇರೆ. ಅದೇ ಸಮಯದಲ್ಲಿ ಬಂದ ದುನಿಯಾ ಸಿನಿಮಾದಲ್ಲಿ ಬಿಚ್ಚಿಕೊಳ್ಳುವ ಜಗತ್ತೇ ಬೇರೆ. ಅವೆರಡನ್ನೂ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಯಾಕೆಂದರೆ ಆ ಸಿನಿಮಾಗಳ ಕಥೆಯೇ ಹಾಗಿದೆ. ಅದರ ಬದಲು ಅವೆರಡನ್ನೂ ಒಂದೇ ಬಗೆಯಲ್ಲಿ ಚಿತ್ರೀಕರಿಸಲು ಹೋದಾಗ ಆಭಾಸವಾಗುತ್ತದೆ’ ಎಂದು ತಮ್ಮ ಕ್ಯಾಮೆರಾ ಮೀಮಾಂಸೆಯನ್ನು ಮುಂದಿಡುವ ಲವಿತ್ ಅವರಿಗೆ ನಮ್ಮ ನೆಲದ ಕಥೆಗೆ ಕ್ಯಾಮೆರಾ ಕನ್ನಡಿ ಹಿಡಿಯುವ ಆಸೆ.

‘ಕನ್ನಡದಲ್ಲಿ ಪ್ರತಿಭಾವಂತರಿಗೇನೂ ಕೊರತೆಯಿಲ್ಲ. ಎಚ್‌.ಎಂ. ರಾಮಚಂದ್ರ, ಜಿ.ಎಸ್. ಭಾಸ್ಕರ್, ಅನಂತ್ ಅರಸ್, ಸತ್ಯ ಹೆಗಡೆ, ಸುಜ್ಞಾನ್ ಅವರಂಥ ಹಲವು ಪ್ರತಿಭಾವಂತರ ದಂಡೇ ಇಲ್ಲಿದೆ. ಆದರೆ ಅವನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೆ’ ಎನ್ನುವ ಲವಿತ್, ಆ ಶ್ರೀಮಂತ ಪರಂಪರೆಯನ್ನು ಅಷ್ಟೇ ಗಟ್ಟಿಯಾಗಿ ಮುಂದುವರಿಸಿಕೊಂಡು ಹೋಗುವ ಮುಂದಿನ ಕೊಂಡಿಯಾಗಿ ಕಾಣಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT