ಅನು‍ಪಮ ಸಿನಿಘಮ

7

ಅನು‍ಪಮ ಸಿನಿಘಮ

Published:
Updated:
ಅನು‍ಪಮ ಸಿನಿಘಮ

‘ಅಕ್ಕ’ ಧಾರಾವಾಹಿಯುದ್ದಕ್ಕೂ ನೋಡುಗರ ಮನಸ್ಸು ಆವರಿಸಿಕೊಂಡಿದ್ದ ನಟಿ ಅನುಪಮಾ ಗೌಡ. ಅಕ್ಕ ಮತ್ತು ತಂಗಿಯಾಗಿ ದ್ವಿಪಾತ್ರದಲ್ಲಿ ನಟಿಸಿ ಜನರಿಗೆ ಮೋಡಿ ಮಾಡಿದ್ದರು. ಈ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದ ಅವರು ಈಗ ‘ಆ ಕರಾಳ ರಾತ್ರಿ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲೂ ಹೆಜ್ಜೆಗುರುತು ಮೂಡಿಸುವ ಉತ್ಸಾಹದಲ್ಲಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಇಲ್ಲಿಯೇ ಬೆಳೆದು ಫ್ಯಾಷನ್‌ ಡಿಸೈನಿಂಗ್‌ ವಿಷಯದಲ್ಲಿ ಪದವಿ ಪೂರೈಸಿರುವ ಈ ಹುಡುಗಿಯ ಮೊದಲ ಸಿನಿಮಾ ‘ನಗಾರಿ’. ಇದರಲ್ಲಿ ಅವರದು ಹಳ್ಳಿಯ ಬಜಾರಿ ಹುಡುಗಿಯ ಪಾತ್ರ. ಹಿರಿತೆರೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದಾಗ ಮತ್ತೆ ಅನುಪಮಾ ಅವರ ಕೈಹಿಡಿದಿದ್ದು ಕಿರುತೆರೆ. ಕೊನೆಗೆ, ಅವರು ಧಾರಾವಾಹಿಗಳಲ್ಲಿ ಸಕ್ರಿಯರಾದರು. ಅಲ್ಲಿಂದ ಅವರ ಪಯಣ ಬಿಗ್‌ಬಾಸ್‌ ಮನೆಗೆ ಸಾಗಿತು. ಬಳಿಕ ನಿರ್ದೇಶಕ ದಯಾಳ್‌ ಪದ್ಮನಾಭನ್‌ ನಿರ್ದೇಶನದ ‘ಆ ಕರಾಳ ರಾತ್ರಿ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು.

ಅನುಪಮಾ ಅವರ ತಂದೆ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಮಗಳು ಅಭಿನಯಕ್ಕೆ ಮುಂದಾದಾಗ ಅಪ್ಪ ಬೇಸರಿಸಿದ್ದು ಉಂಟು. ಉನ್ನತ ಶಿಕ್ಷಣ ಪಡೆಯಲು ಸಲಹೆಯಿತ್ತರು. ಆದರೆ, ಮಗಳ ಕನಸಿಗೆ ಅಮ್ಮ ಊರುಗೋಲಾಗಿ ನಿಂತರು. ಸಿಕ್ಕಿದ ಅವಕಾಶ ಬಳಸಿಕೊಂಡು ಒಂದೊಂದೇ ಮೆಟ್ಟಿಲು ಏರಿದ ಮಗಳ ಸಾಧನೆ ಬಗ್ಗೆ ಅಮ್ಮ, ಅಪ್ಪನಿಗೆ ಈಗ ಬೆಟ್ಟದಷ್ಟು ಹೆಮ್ಮೆಯಿದೆ.

ಅನುಪಮಾ ನಟನೆ ಅರಸಿ ಈ ಕ್ಷೇತ್ರಕ್ಕೆ ಕಾಲಿಟ್ಟವರಲ್ಲ. ‘ಕಿರುತೆರೆಗೆ ಪ್ರವೇಶಿಸುವ ಮೊದಲು ‘ಹಳ್ಳಿ ದುನಿಯಾ’ ಎಂಬ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದೆ. ನಂತರ ನನ್ನ ಸ್ನೇಹಿತರೊಬ್ಬರು ಕರೆ ಮಾಡಿ ಬರಹೇಳಿದರು. ಎರಡು ದಿನ ಬಿಟ್ಟು ಹೋದೆ. ಯಾವುದೇ ಆಡಿಶನ್‌ ಇಲ್ಲದೆ ‘ಅಣ್ಣತಂಗಿ’ ಧಾರಾವಾಹಿಗೆ ಆಯ್ಕೆಯಾದೆ.

ಆ ನಂತರ ‘ಚಿ.ಸೌ. ಸಾವಿತ್ರಿ’, ‘ದೀಪವೂ ನಿನ್ನದೇ ಗಾಳಿಯೂ ನಿನ್ನದೆ’ ಹಾಗೂ ‘ಅಕ್ಕ’ ಧಾರಾವಾಹಿಯಲ್ಲಿ ನಟಿಸಿದೆ’ ಎನ್ನುತ್ತಾರೆ. ‘ಅಕ್ಕ ನನ್ನ ವೃತ್ತಿಬದುಕಿಗೆ ಹೊಸ ತಿರುವು ನೀಡಿತು. ದ್ವಿಪಾತ್ರದಲ್ಲಿ ನಟಿಸುವುದು ನನಗೆ ಸವಾಲಾಗಿತ್ತು. ಬಿಗ್‌ಬಾಸ್‌ ಜರ್ನಿಯ ಬಳಿಕ ದಯಾಳ್‌ ಸರ್‌ ನಿರ್ದೇಶನದ ಚಿತ್ರದಲ್ಲಿ ನಟನೆಗೆ ಅವಕಾಶ ಸಿಕ್ಕಿತು’ ಎಂದು ಹಿರಿತೆರೆಯಲ್ಲಿ ಮತ್ತೆ ಅದೃಷ್ಟ ಹುಡುಕಾಟಕ್ಕೆ ಮುಂದಾಗಿರುವ ಬಗೆಯನ್ನು ವಿವರಿಸುತ್ತಾರೆ.

ಮೊದಲ ಚಿತ್ರ ಅವರಿಗೆ ಅದೃಷ್ಟದ ಬಾಗಿಲು ತೆರೆಯಲಿಲ್ಲ. ಆದರೆ, ಎಂಬತ್ತರ ದಶಕದ ಕಥೆ ಹೊಂದಿರುವ ‘ಆ ಕರಾಳ ರಾತ್ರಿ’ ಸಿನಿಮಾ ತನ್ನ ವೃತ್ತಿಜೀವನಕ್ಕೆ ಹೊಸದಿಕ್ಕು ನೀಡಲಿದೆ ಎಂಬ ವಿಶ್ವಾಸ ಅವರದು. ‘ಹೆಚ್ಚಾಗಿ ರಾತ್ರಿವೇಳೆಯೇ ಚಿತ್ರೀಕರಣ ನಡೆಯಿತು. ಮೂರು ದಶಕದ ಹಿಂದಿನ ಕಥೆ ಇದು. ನನ್ನದು ಇಪ್ಪತ್ತ ಮೂರು ವರ್ಷದ ಹುಡುಗಿ ಪಾತ್ರ. ಆಕೆಗೆ ಮದುವೆಯಾಗಿರುವುದಿಲ್ಲ. ಅವಳ ತಳಮಳದ ಸುತ್ತವೇ ಕಥೆ ಹೆಣೆಯಾಗಿದೆ. ಬಬ್ಲಿ ಹುಡುಗಿಯಾಗಿಯೂ ಕಾಣಿಸಿಕೊಂಡಿದ್ದೇನೆ’ ಎಂದು ತಮ್ಮ ಪಾತ್ರದ ಕುರಿತು ಹೇಳುತ್ತಾರೆ.

ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟನೆ ನಡುವೆ ಅಂತಹ ವ್ಯತ್ಯಾಸವಿಲ್ಲ ಎಂಬುದು ಅವರ ಅನುಭವದ ಮಾತು. ‘ಕಿರುತೆರೆಯ ಪ್ರೇಕ್ಷಕ ಸಮೂಹವೇ ಭಿನ್ನ. ಆ ವರ್ಗಕ್ಕೆ ಅನುಗುಣವಾಗಿ ಕಥೆ ಹೆಣೆದಿರಲಾಗಿರುತ್ತದೆ. ಅಲ್ಲೊಂದು ಸಿದ್ಧಸೂತ್ರವಿದೆ. ಆ ಚೌಕಟ್ಟು ಮುರಿಯಲು ಸಾಧ್ಯವಿಲ್ಲ. ರೊಮ್ಯಾಂಟಿಕ್, ಕೆಲವು ಪದಗಳ ಬಳಕೆ ಅಲ್ಲಿ ಸಂಪೂರ್ಣ ನಿಷಿ‌ದ್ಧ. ಆದರೆ, ಸಿನಿಮಾದಲ್ಲಿ ಯಾವುದೇ ಬ್ಯಾರಿಕೇಡ್‌ ಇರುವುದಿಲ್ಲ. ಕಿರುತೆರೆಯ ಸಿದ್ಧಮಾದರಿಯನ್ನು ಇಲ್ಲಿ ಮುರಿದು ಕಟ್ಟಬಹುದು. ಧಾರಾವಾಹಿಗಳಲ್ಲಿನ ಸಂಭಾಷಣೆಗೆ ಒಗ್ಗಿಕೊಂಡಿದ್ದೆ. ಹಾಗಾಗಿ, ಸಿನಿಮಾಗಳಲ್ಲಿ ದೀರ್ಘವಾದ ಸಂಭಾಷಣೆ ಹೇಳುವಾಗ ಮೊದಲು ಭಯಪಟ್ಟಿದ್ದೆ. ಸಿನಿಮಾಕ್ಕೆ ಇದರ ಅವಶ್ಯಕತೆ ಇದೆಯಂದು ಮನದಟ್ಟು ಮಾಡಿದಾಗ ನಟಿಸಲು ಸುಲಭವಾಯಿತು’ ಎನ್ನುತ್ತಾರೆ.

‘ಬಿಗ್‌ಬಾಸ್‌ ಮನೆಯಲ್ಲಿ ನಮ್ಮನ್ನು ನಾವು ಅರಿತುಕೊಂಡೆವು. ಇದೇ ನಾವು ಅಲ್ಲಿ ಕಲಿತ ದೊಡ್ಡ ಪಾಠ. ಜೀವನದಲ್ಲಿ ಯಾವುದಕ್ಕೆ ಎಷ್ಟು ಸಮಯ ಕೊಡಬೇಕು ಎನ್ನುವುದನ್ನು ಕಲಿತೆ’ ಎನ್ನುತ್ತಾರೆ ಅವರು. ಕರಾಳ ರಾತ್ರಿಯಲ್ಲಿ ವೃತ್ತಿಬದುಕಿನ ಪುಟ ತೆರೆದಿರುವ ಅವರಿಗೆ ಭಿನ್ನವಾದ ಪಾತ್ರದಲ್ಲಿ ನಟಿಸಿರುವುದು ಖುಷಿ ಕೊಟ್ಟಿದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry