ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಗಾರರ ಸಮಗ್ರ ಮಾಹಿತಿ ಸಂಗ್ರಹಿಸಲು ಆರ್‌ಬಿಐ ಕ್ರಮ

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಮುಂಬೈ: ಸಾಲ ಮರುಪಾವತಿಸದ ಸುಸ್ತಿದಾರರ ಪ್ರವೃತ್ತಿಗೆ ಕಡಿವಾಣ ವಿಧಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌, ಪ್ರತ್ಯೇಕ ಸಾಲ ದಾಖಲೆ ವ್ಯವಸ್ಥೆ ಸ್ಥಾಪಿಸಲು ಮುಂದಾಗಿದೆ.

ಎಲ್ಲ ಸಾಲಗಾರರ ಮಾಹಿತಿಯು ಒಂದೆಡೆಯೇ ಲಭ್ಯವಾಗುವುದರಿಂದ ಹಣಕಾಸು ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಯಶವಂತ ಎಂ. ದೇವಸ್ಥಲಿ ನೇತೃತ್ವದಲ್ಲಿನ  ಉನ್ನತ ಮಟ್ಟದ ಕಾರ್ಯಪಡೆಯ ಶಿಫಾರಸುಗಳ ಮೇರೆಗೆ, ಹಂತ ಹಂತವಾಗಿ ಪಬ್ಲಿಕ್‌ ಕ್ರೆಡಿಟ್‌ ರೆಜಿಸ್ಟ್ರಿ (ಪಿಸಿಆರ್‌) ಅಸ್ತಿತ್ವಕ್ಕೆ ತರಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

‘ಪಿಸಿಆರ್‌’ ಸ್ಥಾಪಿಸುವುದಕ್ಕೆ ಪೂರಕವಾಗಿ ಜಾರಿ ಕಾರ್ಯಪಡೆ ರಚಿಸಲಾಗುವುದು. ಸಾಲದ ಕುರಿತು ಸದ್ಯಕ್ಕೆ ಲಭ್ಯ ಇರುವ ಮಾಹಿತಿಯ ಅಸಮತೋಲನ ನಿವಾರಿಸಿ, ಆರ್ಥಿಕತೆಯಲ್ಲಿ ಸಾಲ ಸಂಸ್ಕೃತಿ ಬಲಪಡಿಸಲು ಇಂತಹ ಸಮಗ್ರ ಮಾಹಿತಿಯು ಒಂದೆಡೆಯೇ ಲಭ್ಯ ಇರುವಂತೆ ನೋಡಿಕೊಳ್ಳುವ ಅಗತ್ಯ ಇದೆ ಎಂದು ದೇವಸ್ಥಲಿ ಸಮಿತಿಯು ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು.

ಈ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ, ಸಾಲದ ಎಲ್ಲ ವಿವರಗಳಿಗೆ ಇದು ದಾಖಲೆಗಳ ಆಧಾರವಾಗಿ ಪರಿಣಮಿಸಲಿದೆ.

ಸದ್ಯಕ್ಕೆ ದೇಶದಲ್ಲಿ ಒಂದಕ್ಕಿಂತ ಹೆಚ್ಚು ಸಾಲ ಮಾಹಿತಿ ನೀಡುವ ಸಂಸ್ಥೆಗಳು ಇವೆ. ಇವೆಲ್ಲವುಗಳ ಕಾರ್ಯವೈಖರಿ ಭಿನ್ನವಾಗಿದೆ. ಆರ್‌ಬಿಐ ವ್ಯಾಪ್ತಿಯಲ್ಲಿ ಬರುವ ‘ಸಿಆರ್‌ಐಎಲ್‌ಸಿ’ ಮತ್ತು ಖಾಸಗಿ ವಲಯದ ಸಾಲ ಮಾಹಿತಿ ಸಂಸ್ಥೆಗಳು ಪ್ರತ್ಯೇಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. 

ಸಾಲಗಾರರು ಬ್ಯಾಂಕ್‌, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಪಡೆಯುವ ಸಾಲಗಳ ಬಗ್ಗೆ ಒಂದೆಡೆಯೇ ಸಮಗ್ರ ಮಾಹಿತಿ ದೊರೆಯುವುದಿಲ್ಲ. ಇದರಿಂದ ವ್ಯಕ್ತಿಯೊಬ್ಬನ ಒಟ್ಟಾರೆ ಸಾಲದ ಹೊಣೆಗಾರಿಕೆಯ ಸ್ಪಷ್ಟ ಚಿತ್ರಣವೂ ಸಿಗುವುದಿಲ್ಲ. ‘ಪಿಸಿಆರ್‌’ ಕಾರ್ಯರೂಪಕ್ಕೆ ಬರುವುದರಿಂದ ಈ ಸಮಸ್ಯೆ ದೂರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT